ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರು ಬೇಳೂರು ರಾಘವೇಂದ್ರ ಶೆಟ್ಟಿ ಕಚೇರಿಯಲ್ಲಿದ್ದ ಸಿಸಿಟಿವಿ ಮತ್ತು ಡಿವಿಆರ್ ಅನ್ನು ವಿರೂಪಗೊಳಿಸಿದ್ದಾರೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಮೌದ್ಗಿಲ್ ಸರಕಾರಕ್ಕೆ ಬರೆದಿದ್ದಾರೆ.
ಕೈಗಾರಿಕಾ ಇಲಾಖೆ ಕಾರ್ಯದರ್ಶಿಗಳು ಮತ್ತು ಎಂಎಸ್ ಎಂಇ ನಿರ್ದೇಶಕರು ಮುಂತಾದವರಿಗೆ ಪತ್ರ ಬರೆದಿರುವ ರೂಪಾ ಮೌದ್ಗಿಲ್, ಮೇ 27ರಂದು ಬೆಳಿಗ್ಗೆ 8.30ಕ್ಕೆ ನಿಗಮದ ಕೇಂದ್ರ ಕಚೇರಿಯ ಬಾಗಿಲುಗಳ ಕೀ ಜವಾಬ್ದಾರಿ ಹೊಂದಿರುವ ಎನ್.ಎಚ್.ಮೂರ್ತಿ ಅವರನ್ನು ದೂರವಾಣಿ ಕರೆ ಮಾಡಿ ಕರೆಸಿಕೊಂಡಿದ್ದಾರೆ.
ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಜೊತೆಗಿದ್ದ ಅಪರಿಚಿತ ವ್ಯಕ್ತಿಯೊಬ್ಬ ಕಚೇರಿಯನ್ನು ಪ್ರವೇಶಿಸಿದ್ದು, ಡಿವಿಆರ್ ಮತ್ತು ಸಿಸಿಟಿವಿ ಬಳಿ ಹೋದಾಗ ಮುಖ್ಯಸ್ಥರ ಅನುಮತಿ ಇಲ್ಲದೇ ಇವುಗಳನ್ನು ಮುಟ್ಟುವಂತಿಲ್ಲ ಎಂದು ಮೂರ್ತಿ ಎಚ್ಚರಿಕೆ ನೀಡಿದ ಹೊರತಾಗಿಯೂ ಇವುಗಳನ್ನು ತಿರುಚಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಅಪರಿಚಿತ ವ್ಯಕ್ತಿ ಡಿವಿಆರ್ ಮತ್ತು ಸಿಸಿಟಿವಿಗಳನ್ನು ವಿರೂಪಗೊಳಿಸಿದ್ದು, ಡಿವಿಆರ್ ಗಳಲ್ಲಿ ಯಾವುದೇ ಡಿಸ್ ಪ್ಲೇ ಬರುತ್ತಿಲ್ಲ. ಡಿವಿಆರ್ ಉಪಕರಣ ತಿರುಚುವುದು ಮಾಹಿತಿ ತಂತ್ರಜ್ಞಾನ ನಿಯಮದ ಪ್ರಕಾರ ಅಪರಾಧವಾಗಿರುತ್ತದೆ. ವೈಯಕ್ತಿಕ ಅಥವಾ ಸ್ವಂತ ಬಳಕೆಗೆ ಈ ರೀತಿ ತಿರುಚಲಾಗಿದೆ ಎಂದು ತಿಳಿದು ಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಹಿರಿಯ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.