ನಾಳೆಯಿಂದ (ನವೆಂಬರ್ 29) ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ ತೆಗೆದುಕೊಳ್ಳುವ ವಿಧೇಯಕಗಳು ಹಾಗೂ ದೇಶದಲ್ಲಿ ಇತ್ತೀಚೆಗೆ ವ್ಯಾಪಕವಾಗಿ ಚರ್ಚೆ ಆಗುತ್ತಿರುವ ಕ್ರಿಪ್ಟೋ ಕರೆನ್ಸಿ ಕುರಿತಾದ ಮಸೂದೆ ಸೇರಿದಂತೆ ಒಟ್ಟು 26 ಹೊಸ ಮಸೂದೆಗಳನ್ನು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಮಂಡಿಸಲಿದೆ. ದೆಹಲಿ ಗಡಿಗಳಲ್ಲಿ ಕೊರೆಯುವ ಚಳಿ ಮತ್ತು ಉರಿದುಹೋಗುವಂತಹ ಬಿಸಿಲಿನ ನಡುವೆಯೂ ರೈತರು ಒಂದು ವರ್ಷದಿಂದ ಪ್ರತಿಭಟನೆ ಮಾಡಿ ದೇಶಾದ್ಯಂತ 700ಕ್ಕೂ ಹೆಚ್ಚು ರೈತರು ಪ್ರಾಣ ತೆತ್ತರೂ ಕನಿಷ್ಠ ಕಾಳಜಿ ತೋರದ ಕೇಂದ್ರ ಸರ್ಕಾರ ಈಗ ಅಧಿವೇಶನದ ಮೊದಲ ದಿನವೇ ಕೃಷಿ ಮಸೂದೆ ಮಂಡಿಸಿ ‘ತಾನು ರೈತ ಪರ’ ಎಂದು ಬಿಂಬಿಸಿಕೊಳ್ಳಲೊರಟಿದೆ.
ಇಲ್ಲಿ ಉಲ್ಲೇಖಿಸಲಾಗಿರುವ ಕೃಷಿ ಹಾಗೂ ಕ್ರಿಪ್ಟೋ ಕರೆನ್ಸಿ, ಈ ಎರಡೂ ವಿಚಾರಗಳ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡಿದ್ದಾರೆ. ರೈತ ವಿರೋಧಿ ಕೃಷಿ ಕಾಯಿದೆಗಳನ್ನು ಜಾರಿಗೆ ತಂದು ತಪ್ಪೆಸಗಿದೆ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಕ್ರಿಪ್ಟೋ ಕರೆನ್ಸಿ ದೇಶದ ಯುವಕರನ್ನು ಹಾಳು ಮಾಡುತ್ತಿದೆ ಎನ್ನುವ ಅರ್ಥದಲ್ಲಿ ಮಾತನ್ನಾಡಿದ್ದಾರೆ. ಈ ಮೂಲಕ ಜ್ವಲಂತ ಸಮಸ್ಯೆಗಳು ತಮ್ಮ ಸರ್ಕಾರಕ್ಕೆ ತಡವಾಗಿ ಅರ್ಥವಾಗುತ್ತಿವೆ ಎಂಬುದನ್ನೂ ಒಪ್ಪಿಕೊಂಡಿದ್ದಾರೆ. ‘ಹಿಂದೆ ತೋರಿದ ಬೇಜವಾಬ್ದಾರಿತನ ಮತ್ತು ಈಗ ತೋರುತ್ತಿರುವ ಆತುರ’ವನ್ನು ಪ್ರತಿಪಕ್ಷಗಳು ಪ್ರಶ್ನೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ನೆರವು) ಕಾಯಿದೆ, ದರ ಭರವಸೆ ಮತ್ತು ಕೃಷಿ ಸೇವೆಗಳಿಗೆ ರೈತರ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಿಗೆ ಕಾಯಿದೆ ಮತ್ತು ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯಿದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಈಗಾಗಲೇ ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ. ಸಂಸತ್ತಿನಲ್ಲಿ ಮಸೂದೆಗಳನ್ನು ಮಂಡಿಸಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ. ಸಂಸತ್ ಅಧಿವೇಶನದ ಮೊದಲ ದಿನನೇ ಕೃಷಿ ಮಸೂದೆಗಳನ್ನು ಮಂಡಿಸಲಾಗುವುದು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಹೇಳಿದ್ದಾರೆ. ಮಸೂದೆ ಮಂಡನೆ ವೇಳೆ ಎಲ್ಲಾ ಸದಸ್ಯರು ಕಡ್ಡಾಯವಾಗಿ ಹಾಜರಿರಬೇಕೆಂದು ಬಿಜೆಪಿ ಎರಡೂ ಸದನದ ಸದಸ್ಯರಿಗೆ ವಿಪ್ ಜಾರಿ ಮಾಡಿದೆ. ಹಾಗಾಗಿ ಮೊದಲ ಅಥವಾ ಎರಡನೇ ದಿನವೇ ಅಂಗೀಕಾರ ಆಗಬಹುದು. ಆದರೆ ಈ ಆತುರವನ್ನು ಪ್ರತಿಪಕ್ಷಗಳು ಪ್ರಶ್ನೆ ಮಾಡುವುದಂತು ಗ್ಯಾರಂಟಿಯಾಗಿದೆ.

ಮಂಡನೆಗೆ ಸಿದ್ದವಾಗಿರುವ ಮಸೂದೆಗಳ ಮಾಹಿತಿ ಈ ರೀತಿ ಇದೆ.
1. ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಅನುಕೂಲ) ಕಾಯಿದೆ, 2020, ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ, ಕೃಷಿ ಸೇವೆಗಳ ಕಾಯಿದೆ, 2020; ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ, 2020- ಈ ಕಾಯ್ದೆಗಳನ್ನು ರದ್ದುಪಡಿಸುವ ಮಸೂದೆ 2021
2.ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ 2021 – (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಅಧಿಕೃತವಾಗಿ ಡಿಜಿಟಲ್ ಕರೆನ್ಸಿಯ ರಚನೆಗೆ ಅನುಕೂಲಕರ ಚೌಕಟ್ಟು ರಚಿಸುವುದು ಮತ್ತು ಕ್ರಿಪ್ಟೋಕರೆನ್ಸಿಯ ಆಧಾರವಾಗಿರುವ ತಂತ್ರಜ್ಞಾನ ಮತ್ತು ಅದರ ಬಳಕೆಗಳನ್ನು ಉತ್ತೇಜಿಸಲು ಕೆಲವು ವಿನಾಯಿತಿಗಳನ್ನು ನೀಡುವುದು ಮುಖ್ಯ ಉದ್ದೇಶ)
3. ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಮಸೂದೆ 2021 – (1970 ಮತ್ತು 1980ರ ಬ್ಯಾಂಕಿಂಗ್ ಕಂಪನಿಗಳ (ಸ್ವಾಧೀನ ಮತ್ತು ಉದ್ಯಮಗಳ ವರ್ಗಾವಣೆ) ಕಾಯಿದೆಗಳಲ್ಲಿ ತಿದ್ದುಪಡಿಗಳನ್ನು ತರುವುದು, ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949ಗೆ ತಿದ್ದುಪಡಿಗಳನ್ನು ತರುವುದು ಮುಖ್ಯ ಉದ್ದೇಶ)
4. ದಿವಾಳಿ ಮತ್ತು ದಿವಾಳಿತನ ನೀತಿ (ಎರಡನೇ ತಿದ್ದುಪಡಿ) ಮಸೂದೆ
5. ವ್ಯಾಜ್ಯಪೂರ್ವ ಮಧ್ಯಸ್ಥಿಕೆ, ತುರ್ತು ಪರಿಹಾರ ಕೋರಿದರೆ ಸಮರ್ಥ ನ್ಯಾಯಾಧಿಕರಣ ವೇದಿಕೆಗಳು/ನ್ಯಾಯಾಲಯಗಳನ್ನು ಸಂಪರ್ಕಿಸಲು ದಾವೆದಾರರ ಹಿತಾಸಕ್ತಿ ಕಾಪಾಡುವ ಮಧ್ಯಸ್ಥಿಕೆ ಮಸೂದೆ, 2021
6.ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ, 2021
7. ಪ್ಯಾರಿಸ್ ಒಪ್ಪಂದವನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಹಣಕಾಸು, ತಾಂತ್ರಿಕ ಮತ್ತು ಸಾಮರ್ಥ್ಯ ನಿರ್ಮಿಸುವ ಇಂಧನ ಸಂರಕ್ಷಣೆ (ತಿದ್ದುಪಡಿ) ಮಸೂದೆ, 2021
8.ಚಾರ್ಟರ್ಡ್ ಅಕೌಂಟೆಂಟ್ಸ್, ಕಾಸ್ಟ್ ಅಂಡ್ ವರ್ಕ್ಸ್ ಅಕೌಂಟೆಂಟ್ಸ್ ಮತ್ತು ಕಂಪನಿ ಸೆಕ್ರೆಟರಿಗಳ (ತಿದ್ದುಪಡಿ) ಮಸೂದೆ
9. ವಿದ್ಯುಚ್ಛಕ್ತಿ ವಿತರಣಾ ವ್ಯವಹಾರಗಳಿಗೆ ಪರವಾನಗಿ ನೀಡುವುದು, ವಿದ್ಯುತ್ ದಂಡಕ್ಕಾಗಿ ಮೇಲ್ಮನವಿ ನ್ಯಾಯಾಧಿಕರಣ ಬಲಪಡಿಸುವ ವಿದ್ಯುಚ್ಛಕ್ತಿ (ತಿದ್ದುಪಡಿ) ಮಸೂದೆ, 2021
10. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟಿಕ್ ಸಬ್ಸ್ಟೆನ್ಸ್ (ತಿದ್ದುಪಡಿ) ಮಸೂದೆ
11. ಕೇಂದ್ರ ಜಾಗೃತ ಆಯೋಗ (ತಿದ್ದುಪಡಿ) ಮಸೂದೆ
12. ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ತಿದ್ದುಪಡಿ) ಮಸೂದೆ
13. ಕಂಟೋನ್ಮೆಂಟ್ ಮಸೂದೆ
14. ಅಂತರ-ಸೇವೆಗಳ ಸಂಸ್ಥೆಗಳು (ಕಮಾಂಡ್, ನಿಯಂತ್ರಣ ಮತ್ತು ಶಿಸ್ತು) ಮಸೂದೆ
15. ಭಾರತೀಯ ಅಂಟಾರ್ಟಿಕಾ ಮಸೂದೆ
16. ಎಮಿಗ್ರೇಷನ್ ಮಸೂದೆ
17. ಭಾರತೀಯ ಸಮುದ್ರ ಮೀನುಗಾರಿಕೆ ಮಸೂದೆ
18. ರಾಷ್ಟ್ರೀಯ ದಂತ ಆಯೋಗದ ಮಸೂದೆ
19. ರಾಷ್ಟ್ರೀಯ ನರ್ಸಿಂಗ್ ಮಿಡ್‌ವೈಫರಿ ಕಮಿಷನ್ ಬಿಲ್
20. ಮೆಟ್ರೋ ರೈಲು (ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆ) ಮಸೂದೆ
21. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರು (ಸಂಬಳ ಮತ್ತು ಸೇವಾ ಷರತ್ತುಗಳು) ತಿದ್ದುಪಡಿ ಮಸೂದೆ
22. ರಾಷ್ಟ್ರೀಯ ಸಾರಿಗೆ ವಿಶ್ವವಿದ್ಯಾಲಯದ ಮಸೂದೆ
23. ಸಂವಿಧಾನ (ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು) ಆದೇಶ (ತಿದ್ದುಪಡಿ) ಮಸೂದೆ
24. ಸಂವಿಧಾನ (ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು) ಆದೇಶ (ತಿದ್ದುಪಡಿ) ಮಸೂದೆ
25. ಮಾನವ ಕಳ್ಳಸಾಗಣೆ (ತಡೆಗಟ್ಟುವಿಕೆ, ರಕ್ಷಣೆ ಮತ್ತು ಪುನರ್ವಸತಿ) ಮಸೂದೆ
26. ರಾಷ್ಟ್ರೀಯ ಡೋಪಿಂಗ್ ವಿರೋಧಿ ಮಸೂದೆ.
ಇಂದು ಸರ್ವಪಕ್ಷ, ನಾಳೆ ಪ್ರತಿಪಕ್ಷಗಳ ಸಭೆ
ಸಂಸತ್ ಅಧಿವೇಶನದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ಮಾಡಲು ಇಂದು (ನವೆಂಬರ್ 28) ಸರ್ವಪಕ್ಷಗಳ ಸಭೆ ಕರೆಯಲಾಗಿದೆ. ಇದಲ್ಲದೆ ಬಿಜೆಪಿ ಸಂಸದೀಯ ಪಕ್ಷದ ಹಾಗೂ ಎನ್ ಡಿಎ ಮೈತ್ರಿ ಕೂಟದ ಸಭೆಗಳು ನಡೆಯಲಿವೆ. ಎರಡೂ ಸಭೆಯಲ್ಲಿ ಖುದ್ದು ಪ್ರಧಾನಿ ಮೋದಿ ಅವರೇ ಹಾಜರಿದ್ದು ಕೃಷಿ ಮಸೂದೆ ವಾಪಸಾತಿ ಬಗ್ಗೆ ತಿಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ನಾಳೆ (ನವೆಂಬರ್ 29) ರಾಜ್ಯಸಭಾ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಪ್ರತಿಪಕ್ಷಗಳು ಸಭೆ ಸೇರಿ ಸದನದಲ್ಲಿ ಸರ್ಕಾರದ ವಿರುದ್ಧ ಹೋರಾಡುವ ಬಗ್ಗೆ ಚರ್ಚೆ ನಡೆಸಲಿವೆ.