ನವದೆಹಲಿ: ಕುಮಾರಸ್ವಾಮಿ ಮಂಡ್ಯಕ್ಕೆ ಏನು ಕೊಟ್ಟಿದ್ದಾರೆ ಎಂದು ಕೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರಿಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ(HD Kumaraswamy )ತಿರುಗೇಟು ನೀಡಿದ್ದು, ನಾನು ಕೊಟ್ಟಿದ್ದನ್ನು ಪಟ್ಟಿ ಮಾಡಿ ಹೇಳುತ್ತೇನೆ. ಮೊದಲು ಐದು ವರ್ಷ ಮುಖ್ಯಮಂತ್ರಿ ಆಗಿದ್ದಾಗ, ನೀವು ಏನೇನು ಕೊಟ್ಟಿದ್ದೀರಿ ಎಂಬುದನ್ನು ಹೇಳಿ ಎಂದಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೊಟ್ಟಿದ್ದನ್ನು ಹೇಳುತ್ತೇನೆ. ಸಿದ್ದರಾಮಯ್ಯ ಅವರೇ.. ನೀವು ರೈತರಿಗೆ ಏನು ಕೊಡುಗೆ ಕೊಟ್ಟಿದ್ದೀರಿ ಎಂಬುದನ್ನು ಹೇಳಿ. ಮಂಡ್ಯಕ್ಕೆ ನಿಮ್ಮ ಕೊಡುಗೆ ಏನು? ಹಿಂದಿನ ಐದು ವರ್ಷ ಆಡಳಿತದಲ್ಲಿ 200ಕ್ಕೂ ಹೆಚ್ಚು ರೈತರು ಮಂಡ್ಯದಲ್ಲಿ ಸರಣಿ ಆತ್ಮಹತ್ಯೆ ಮಾಡಿಕೊಂಡಿದ್ದೇ ನಿಮ್ಮ ಕೊಡುಗೆ. ಅಂಥ ಕಷ್ಟಕಾಲದಲ್ಲಿ ನಾನು ಅಧಿಕಾರಕ್ಕೆ ಬಂದ ಮೇಲೆ ಅದೇ ಜಿಲ್ಲೆಯ ರೈತರ 900 ಕೋಟಿ ಸಾಲ ಮನ್ನಾ ಮಾಡಿದೆ. ಇದಕ್ಕಿಂತ ಕೊಡುಗೆ ಬೇಕಾ? ನಿಮ್ಮ ಕಾಲದಲ್ಲಿ ರೈತರ ಜೀವ ಹೋಯಿತು, ನನ್ನ ಕಾಲದಲ್ಲಿ ಜೀವ ಉಳಿಯಿತು. ಇದು ನಿಮಗೆ ಗೊತ್ತಿರಲಿ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ರೈತರ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂಬುದನ್ನು ನೋಡಿ. ಪ್ರವಾಹ, ಮಳೆಯಲ್ಲಿ ಜನ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದರೆ ನೀವು ಮೋಜು ಮಸ್ತಿ ಮಾಡುತ್ತಿದ್ದೀರಿ. ಕಲ್ಯಾಣ ಕರ್ನಾಟಕದಲ್ಲಿ ತೊಗರಿ ಬೆಳೆಗಾರರ ಪರಿಸ್ಥಿತಿ ಏನಾಗಿದೆ? ತೊಗರಿ ದರ ಕುಸಿದಿದೆ. ಅದಕ್ಕೆ ಏನು ಮಾಡಿದ್ದೀರಿ? ಈವರೆಗೆ ತೊಗರಿ ಖರೀದಿ ಕೇಂದ್ರಗಳನ್ನು ತೆರೆದಿಲ್ಲ. ಸರಿಯಾದ ಸಮಯದಲ್ಲಿ ರಾಜ್ಯ ಸರಕಾರ ಮಧ್ಯಪ್ರವೇಶ ಮಾಡಿ ರೈತರ ನೆರವಿಗೆ ಬರಬೇಕಿತ್ತು, ಬಂದಿಲ್ಲ ಯಾಕೆ? ಕೇಂದ್ರ ಸರಕಾರ ರಾಜ್ಯಕ್ಕೆ ಪರಿಶೀಲನಾ ತಂಡ ಕಳುಹಿಸಿ ಎನ್ನುತ್ತಾರೆ. ನಾಲ್ಕು ತಿಂಗಳ ಬಳಿಕ ಇವರಿಗೆ ಜ್ಞಾನೋದಯ ಆಗಿದೆ. ಈಗ ಕೇಂದ್ರ ತಂಡ ರಾಜ್ಯಕ್ಕೆ ಬಂದರೆ ಏನು ವರದಿ ಕೊಡುತ್ತಾರೆ? ಎಂದು ಪ್ರಶ್ನಿಸಿದರು.












