ಬೆಂಗಳೂರು: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟ ಸಂಬಂಧ ಸಿಎಂ ಸಿದ್ದರಾಮಯ್ಯ ಇಂದು ಮಹತ್ವದ ಸುದ್ದಿಗೋಷ್ಟಿ ನಡೆಸಿದ್ದಾರೆ. ಸಚಿವ ಸಂಪುಟ ಸಭೆ ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ಮಾತಮಾಡಿದ ಸಿದ್ದರಾಮಯ್ಯ, FRP ನಿಗದಿ ಮಾಡುವವರು ಕೇಂದ್ರ ಸರ್ಕಾರದವರು. ಇದನ್ನ ಪ್ರತಿ ವರ್ಷ ಕೇಂದ್ರ ಸರ್ಕಾರ ನಿಗದಿ ಮಾಡುತ್ತದೆ ಎಂದು ಹೇಳಿದರು.
ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಬಗ್ಗೆ ಮುಂಚಿತವಾಗಿ ಸಚಿವ ಎಂಬಿ ಪಾಟೀಲ್ ಜೊತೆಗೆ ಚರ್ಚೆ ಮಾಡಿದ್ದೆ. ಇಂದು ಸಚಿವ ಸಂಪುಟದಲ್ಲೂ ಬಹಳ ಸುದೀರ್ಘವಾದ ಚರ್ಚೆ ಮಾಡಿದ್ದೇವೆ. ಪ್ರತಿಭಟನೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದರು.
ಇನ್ನು ಪ್ರತಿ ವರ್ಷ ಕೇಂದ್ರ ಸರ್ಕಾರ ಎಫ್ಆರ್ಪಿ ನಿಗದಿ ಮಾಡುತ್ತದೆ. ಪ್ರತಿ ಟನ್ಗೆ 10.25 ರಿಕವರಿಗೆ 3,550 ರೂ ನಿಗದಿ ಮಾಡಿದ್ದಾರೆ. ಇದರಲ್ಲಿ ಹಾರ್ವೆಸ್ಟಿಂಗ್, ಸಾರಿಗೆ ವೆಚ್ಚವೂ ಸೇರಿರುತ್ತದೆ. ಈ ಎಫ್ಆರ್ಪಿ ತೀರ್ಮಾನ ಮಾಡಬೇಕಾಗಿರುವುದು ಕೇಂದ್ರ ಸರ್ಕಾರವೇ ಹೊರತು ರಾಜ್ಯ ಸರ್ಕಾರ ಅಲ್ಲ. ಇದನ್ನು ಜಾರಿಗೆ ತರುವುದು ಮಾತ್ರ ರಾಜ್ಯ ಸರ್ಕಾರದ ಕೆಲಸ. ಕಬ್ಬು ನಿಯಂತ್ರಣ ಕಾಯ್ದೆಯಲ್ಲಿ ಇದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ತೂಕ ಸರಿ ಇದೆಯಾ, ನಿಗದಿತ ಸಮಯದಲ್ಲಿ ಫ್ಯಾಕ್ಟರಿಯವರು ಹಣ ಕೊಡುತ್ತಿದ್ದಾರಾ ಎಂಬುದನ್ನಷ್ಟೇ ರಾಜ್ಯ ಸರ್ಕಾರ ನೋಡುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ನಾಳೆಯೇ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅವಕಾಶ ಕೋರಿ ಪತ್ರ ಬರೆಯುತ್ತೇನೆ. ತಕ್ಷಣ ಸಮಯ ಕೊಟ್ಟರೆ ಭೇಟಿ ಆಗುತ್ತೇನೆ. ರೈತರ ಪ್ರತಿಭಟನೆ ಮತ್ತು ಅವರ ಸಮಸ್ಯೆ ಬಗ್ಗೆ ಪ್ರಧಾನಿ ಮೋದಿ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.






