
ಹಾಸನ ; ಲಕ್ಷಾಂತರ ಬೆಳೆಗಾರರು, ಕಾರ್ಮಿಕರು, ಉದ್ಯಮಿಗಳ ಪಾಲಿನ ಜೀವನಾಡಿ ಯಂತಿರುವ ಕಾಫಿ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು ಬದ್ದವಾಗಿದೆ ಎಂದು ಕೇಂದ್ರದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದರು.


ಪಟ್ಟಣದ ಎಪಿಎಂಸಿ ಆವರಣದಲ್ಲಿ ಸೋಮವಾರ ಕರ್ನಾಟಕ ಬೆಳೆಗಾರರ ಒಕ್ಕೂಟದಿಂದ ಆಯೋಜಿಸಲಾಗಿದ್ದ ಕಾಫಿ ಬೆಳೆಗಾರರ ಸಮಾವೇಶ ಹಾಗೂ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಭಾರತದ ಕಾಫಿ ಇಂದು ಎಲ್ಲೆಡೆ ಖ್ಯಾತಿ ಗಳಿಸುತ್ತಿದೆ. ವಿದೇಶಗಳಲ್ಲಿ ಎಲ್ಲ ಕಡೆ ಭಾರತೀಯ ಕಾಫಿ ಪರಿಚಯ ಆಗಬೇಕು ಹಾಗೂ ದೇಶದ ಎಲ್ಲೆಡೆ ಮಾರುಕಟ್ಟೆ ಸೃಷ್ಟಿಸಬೇಕು.ಪ್ರಧಾನಿ ಮೋದಿ ಅವರು ವಿದೇಶಕ್ಕೆ ಹೋದಾಗ, ವಿದೇಶ ಗಣ್ಯರು ಬಂದಾಗ ಕಾಫಿಗೆ ಹೆಚ್ಚು ಪ್ರಚಾರ ಕೊಡುವಲ್ಲಿ ಗಮನ ಹರಿಸುತ್ತಾರೆ. ಕಾಫಿ ಬೆಳೆಗಾರರಿಗೆ ವಿವಿಧ ಸಬ್ಸಿಡಿಗಾಗಿ 100 ಕೋಟಿ ರೂ. ಅನುದಾನದ ಬೇಡಿಕೆಯಿದ್ದು, ಹಣಕಾಸು ಸಚಿವರ ಜತೆ ಚರ್ಚಿಸಿ ಅನುದಾನ ಬಿಡುಗಡೆಗೊಳಿಸಲಿದ್ದೇನೆ ಎಂದರು.

ಮಲೆನಾಡು ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರಿನ ಸಂಶೋಧಕ ಡಾ. ಸುರೇಂದ್ರ ವರ್ಮಾ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗುತ್ತದೆಯಲ್ಲದೇ, ಕಾಡಾನೆಗಳ ಕಾರಿಡಾರ್ ಕಂಡುಹಿಡಿಯುವ ನಿಟ್ಟಿನಲ್ಲಿ ಉಪಗ್ರಹ ಆಧಾರಿತ ಸಂಶೋಧನೆಗೆ ಮುಂದಾಗುವುದಾಗಿ ಕೇಂದ್ರದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದರು.ಕರ್ನಾಟಕ ಬೆಳೆಗಾರರ ಒಕ್ಕೂಟದ ವತಿಯಿಂದ ಆಯೋಜಿತ ಕಾಫಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಪಿಯೂಷ್ ಗೋಯಲ್, ಭಾರತೀಯ ಕಾಫಿಯನ್ನು ವಿಶ್ವದ ಕಾಫಿಯಾಗಿ ಪ್ರಖ್ಯಾತಿಗೊಳಿಸಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಭರವಸೆ ನೀಡಿದರು.
2011ರಿಂದ ಸ್ಥಗಿತಗೊಂಡಿದ್ದ ಸಮಗ್ರ ಕಾಫಿ ಅಭಿವೃದ್ಧಿ ಯೋಜನೆ ಮರು ಅನುಷ್ಠಾನಗೊಳಿಸಲಾಗುವುದು. ಇದು ಕಾಫಿ ಗುಣಮಟ್ಟ ಹಾಗೂ ಯಾಂತ್ರೀಕರಣಕ್ಕೆ ಒತ್ತು ನೀಡಲಿದೆ.ಜತೆಗೆ, ರೈತ ಉತ್ಪಾದಕ ಕಂಪನಿಗಳ ಮೂಲಕ ಅಗತ್ಯ ಪರಿಕರಗಳನ್ನು ಒದಗಿಸಲು ಅನುಕೂಲವಾಗಲಿದೆ.ಇದರಿಂದ ಕಾಫಿಯ ಮೌಲ್ಯವರ್ಧನೆಯಾಗಲಿದೆ ಎಂದು ಗೋಯಲ್ ಹೇಳಿದ್ದಾರೆ.
ಕಾಫಿ ಅಭಿವೃದ್ಧಿಗಾಗಿ ಸ್ಟಾರ್ಟಪ್‌ಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಲಾಗಿದೆ. ಬಾಳೆಹೊನ್ನೂರಿನಲ್ಲಿ ಕಾಫಿ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಅಗತ್ಯ ಅನುದಾನ ನೀಡಲು ಕೇಂದ್ರ ಬದ್ಧವಾಗಿದೆ ಎಂದು ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್ಡಿ ಕುಮಾರಸ್ವಾಮಿ ಮಾತನಾಡಿದರು.