ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಹಿರಿಯ ಸಹೋದರ ಅಗ್ರಸೇನ್ ಗೆಹ್ಲೋಟ್ ಅವರ ಫಾರ್ಮ್ ಹೌಸ್ ಮೇಲೆ ಶುಕ್ರವಾರ ಬೆಳಗ್ಗೆ ಆರಂಭವಾದ ಸಿಬಿಐ ದಾಳಿ ತಡರಾತ್ರಿಯವರೆಗೂ ನಡೆದಿದೆ. ಸರ್ಕಾರದ ಖಜಾನೆಗೆ ₹52.8 ಕೋಟಿ ನಷ್ಟವುಂಟು ಮಾಡಿದ್ದಾರೆ ಎಂದು ಅಗ್ರಸೇನ್ ಮತ್ತು ಇತರೆ 15 ಆರೋಪಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದ್ದು, ಗುಜರಾತ್, ರಾಜಸ್ಥಾನ, ಪಶ್ಚಿಮ ಬಂಗಾಳದಲ್ಲಿರುವ ಕಂಪನಿಗಳು, ಅದರ ನಿರ್ದೇಶಕರು, ಮಾಲೀಕರು, ಪಾಲುದಾರರು ಮತ್ತು ಇತರ ಅಪರಿಚಿತರ ವಿರುದ್ಧ ಸಿಬಿಐ ಕೇಸು ದಾಖಲಿಸಿದೆ.
ಅಗ್ರಸೇನ ರಸಗೊಬ್ಬರ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ‘ಮ್ಯೂರಿಯೇಟ್ ಆಫ್ ಪೊಟ್ಯಾಶ್ (ಎಂಒಪಿ)’ ರಾಸಾಯಾನಿಕದ ವಿತರಣೆಯಲ್ಲಿ ಅಕ್ರಮ ನಡೆದಿದೆ ಎನ್ನಲಾಗಿದೆ. ಅದನ್ನು ಮುಚ್ಚಿಹಾಕಲು ರಾಜಸ್ಥಾನ, ಕೋಲ್ಕತ್ತದಲ್ಲಿ ತಪ್ಪು ಲೆಕ್ಕ ಸೃಷ್ಟಿ ಮಾಡಲಾಗಿತ್ತು. ಇದರಿಂದ ಸರ್ಕಾರಕ್ಕೆ ₹52.8 ಕೋಟಿ ನಷ್ಟವುಂಟಾಗಿದೆ ಎಂದು ಆರೋಪ ಕೇಳಿಬಂದಿದೆ.
ಅವರನ್ನು ಸಿಬಿಐ ತಂಡ ಸುಮಾರು 12 ಗಂಟೆಗಳ ಕಾಲ ವಿಚಾರಣೆ ನಡೆಸಿತು. ಅದೇ ಸಮಯದಲ್ಲಿ, ಈ ದಾಳಿಯನ್ನು ವಿರೋಧಿಸಿ, ಕಾಂಗ್ರೆಸ್ ಕಾರ್ಯಕರ್ತರು ಅಗ್ರಸೇನ್ ತೋಟದ ಮನೆಯ ಮುಖ್ಯ ಗೇಟ್ ಹೊರಗೆ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಿಬಿಐ ವಾಹನಗಳ ದಾರಿ ತಡೆದ ಕಾರ್ಯಕರ್ತರನ್ನು ನಿಭಾಯಿಸಿದ ಪೊಲೀಸರು ಹೇಗೋ ಸಿಬಿಐ ತಂಡವನ್ನು ಸುರಕ್ಷಿತವಾಗಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
ಸಿಬಿಐ ದಾಳಿ ಕುರಿತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರಶ್ನೆಗಳನ್ನು ಎತ್ತಿದ್ದಾರೆ. ಜೂನ್ 13 ರಂದು ಸಿಬಿಐ ನಿರ್ದೇಶಕರು, ಇಡಿ ಮತ್ತು ಆದಾಯ ತೆರಿಗೆ ಅಧ್ಯಕ್ಷರಲ್ಲಿ ಸಮಯ ಕೇಳಿದ್ದೆ, ಆದರೆ ಜೂನ್ 15 ರಂದು ಪ್ರಕರಣ ದಾಖಲಿಸಿ ಜೂನ್ 17 ರಂದು ದಾಳಿ ನಡೆಸಲಾಯಿತು ಎಂದು ಅವರು ಹೇಳಿದ್ದಾರೆ. ಈ ಹಿಂದೆ ರಾಜಕೀಯ ಬಿಕ್ಕಟ್ಟು ಬಂದಾಗ ಜೋಧಪುರದಲ್ಲಿ ಇಡಿ ದಾಳಿ ನಡೆದಿತ್ತು ಎಂದೂ ಅವರು ಹೇಳಿದ್ದಾರೆ.