ಬೆಂಗಳೂರು : ಕಾವೇರಿ ನೀರಿನ ಮೇಲೆ ಅವಲಂಬಿತರಾಗಿರುವ ಜಾನುವಾರು ಹಾಗೂ ಮಾನವರ ಹಿತಾಸಕ್ತಿಯನ್ನು ಸಂಕಷ್ಟಕ್ಕೆ ದೂಡಿ ಕಾವೇರಿ ನೀರು ನಿಯಂತ್ರಣ ಸಮಿತಿಯ ತೀರ್ಪನ್ನು ಅನುಷ್ಠಾನ ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಕಾವೇರಿ ನೀರು ನಿಯಂತ್ರಣ ಸಮಿತಿ ನಿರ್ಧರಿಸಿರುವಂತೆ 15 ದಿನಗಳ ಕಾಲ ಕೆಆರ್‌ಎಸ್ ಹಾಗೂ ಕಬಿನಿಯಿಂದ 5000 ಕ್ಯೂಸೆಕ್ಸ್ ನೀರನ್ನು ಬಿಳಿಗುಂಡ್ಲುವಿನಿಂದ ಹರಿಸುವುದು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಕರ್ನಾಟಕದ ಮನವಿಯನ್ನು ಪರಿಗಣಿಸಿ ಕಾವೇರಿ ನೀರು ನಿಯಂತ್ರಣ ಸಮಿತಿಯ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸಿಎಂ ಕೋರಿದ್ದಲ್ಲದೆ, ಬರಪೀಡಿತವಾಗಿರುವ ರಾಜ್ಯದ ಜನತೆ ಹಾಗೂ ಜಾನುವಾರುಗಳ ಹಿತಾಸಕ್ತಿಯನ್ನು ಕಾಪಾಡಲು ಮನವಿ ಮಾಡಿದ್ದಾರೆ.