ಬೆಂಗಳೂರು : ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ರಾಜ್ಯಕ್ಕೆ ಮತ್ತೆ ಆಘಾತ ಉಂಟಾಗಿದ್ದು, ತಮಿಳುನಾಡಿಗೆ ಮತ್ತೆ ನೀರು ಹರಿಸಲು ಆದೇಶ ನೀಡಿದೆ. ನವದೆಹಲಿಯಲ್ಲಿಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡಿಗೆ ಪ್ರತಿ ನಿತ್ಯ 3,500 ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿದೆ.

ಈ ಹಿಂದೆ ಕಾವೇರಿ ನೀರು ನಿಯಂತ್ರಣ ಮಂಡಳಿ ನೀಡಿದ್ದ ಆದೇಶದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿಯಲ್ಲಿ ಆದೇಶ ನೀಡಿರುವ ಸಿಡಬ್ಯೂಎಂಎ ಕರ್ನಾಟಕಕ್ಕೆ ಶಾಕ್ ನೀಡಿದೆ.
ಈ ಹಿಂದೆ ಕಾವೇರಿ ನೀರು ನಿಯಂತ್ರಣ ಮಂಡಳಿ 15 ದಿನಗಳ ಕಾಲ ತಮಿಳುನಾಡಿಗೆ ನೀರು ಬಿಡಲು ತಿಳಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA ) ಮೇಲ್ಮನವಿ ಸಲ್ಲಿಸಿತ್ತು. ಆದರೆ ಈ ಪ್ರಾಧಿಕಾರವೂ ಕೂಡ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದು, ಮಂಡಳಿಯ ಆದೇಶದಂತೆ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿನಿತ್ಯ 3,500 ಕ್ಯೂಸೆಕ್ ನೀರು ಹರಿಸುವಂತೆ ನಿರ್ದೇಶನ ನೀಡಿದೆ. ಈ ಆದೇಶ ಹೊರಬೀಳುತ್ತಿದ್ದಂತೆಯೇ ಕಾವೇರಿ ಕೊಳ್ಳದ ಜಿಲ್ಲೆಗಳೂ ಸೇರಿದಂತೆ ರಾಜ್ಯಾದ್ಯಂತ ರೈತರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ.






