ಬೆಂಗಳೂರು: ರಾಜ್ಯದಲ್ಲಿ ನವೆಂಬರ್ ಕ್ರಾಂತಿಯ ಕಾವು ಜೋರಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಕಾಂಗ್ರೆಸ್‌ನಲ್ಲಿ ಅಧೀಕೃತವಾಗಿ ಜಾತಿ ರಾಜಕೀಯ ಆರಂಭವಾಗಿದ್ದು, ಕರ್ನಾಟಕ ರಾಜಕೀಯದಲ್ಲಿ ಒಂದು ಮಹತ್ವದ ಬದಲಾವಣೆಯಾಗಲಿದೆ ಎನ್ನುವುದರ ಸುಳಿವು ಸಿಗುತ್ತಿದೆ.

ಅತ್ತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್‌ಅನ್ನು ಆಗ್ರಹಿಸಲು ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಚಿವರು ಹಾಗೂ ಶಾಸಕರು ದೆಹಲಿ ಯಾತ್ರೆ ಕೈಗೊಂಡಿದ್ದರೆ, ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಚಿವರು ಹಾಗೂ ಶಾಸಕರು ಮುಖ್ಯಮಂತ್ರಿಗಳ ನಿವಾಸಕ್ಕೆ ದೌಡಾಯಿಸುತ್ತಿದ್ದಾರೆ. ಒಕ್ಕಲಿಗ ನಾಯಕರು ಡಿ.ಕೆ.ಶಿವಕುಮಾರ್ ಪರ ಬ್ಯಾಟ್ ಬೀಸಿದರೆ, ಇತ್ತ ಅಹಿಂದ ನಾಯಕರು ಸಿದ್ದರಾಮಯ್ಯ ಪರ ಅಖಾಡಕ್ಕಿಳಿದಿದ್ದಾರೆ.

ಇನ್ನು ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಸತೀಶ್ ನಿವಾಸದಲ್ಲಿ ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್, ಹೆಚ್. ಸಿ.ಮಹದೇವಪ್ಪ, ಕೆ.ಎನ್. ರಾಜಣ್ಣ, ಕೆ.ಹೆಚ್.ಮುನಿಯಪ್ಪ ಸೇರಿದಂತೆ ಹಲವರು ನಿನ್ನೆ ಡಿನ್ನರ್ ನೆಪದಲ್ಲಿ ಸಭೆ ನಡೆಸಿದ್ದಾರೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಬಹುಮತದಿಂದ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಯಶಸ್ವಿಯಾಗಿ ಪೂರೈಸಿರುವ ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಮುಖ್ಯಮಂತ್ರಿ ಖುರ್ಚಿಗಾಗಿ ಆರಂಭವಾದ ಅಸಮಾಧಾನ ತಾರಕಕ್ಕೇರಿದೆ. ಹೀಗಾಗಿ ಈಗಾಗಲೇ ಅನೇಕ ರಾಜ್ಯದಲ್ಲಿ ಅಧಿಕಾರವಿಲ್ಲದೇ ಕೈಸುಟ್ಟುಕೊಂಡಿರುವ ಕಾಂಗ್ರೆಸ್ ಹೈಮಾಂಡ್ ಕರ್ನಾಟಕದಲ್ಲಿ ಸೂಕ್ಷ್ಮವಾದ ಜಾಣ ನಿರ್ಧಾರ ತೆಗೆದುಕೊಳ್ಳಬೇಕಾದ ಒತ್ತಡದಲ್ಲಿದೆ.












