ಯುದ್ಧಪೀಡಿತ ಉಕ್ರೇನ್ನಿಂದ ಸ್ಥಳಾಂತರಿಸಲ್ಪಟ್ಟ ವೈದ್ಯಕೀಯ ವಿದ್ಯಾರ್ಥಿಗಳಿಗೆ ಭಾರತೀಯ ಕಾಲೇಜುಗಳಲ್ಲಿ ವಿದ್ಯಾರ್ಜನೆ ಮುಂದುವರಿಸಲು ಅವಕಾಶ ನೀಡಲಾಗುವುದಿಲ್ಲ . ಏಕೆಂದರೆ ಅಂತಹ ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಯಾವುದೇ ನಿಯಮಗಳಿಲ್ಲ. ಅಲ್ಲದೆ ಕಳಪೆ ಅಂಕಗಳ ಕಾರಣದಿಂದ ಇಲ್ಲಿನ ಕಾಲೇಜುಗಳಲ್ಲಿ ಪ್ರವೇಶ ಗಿಟ್ಟಿಸಲಾರದೆ ಉಕ್ರೇನ್ಗೆ ತೆರಳಿದ ವಿದ್ಯಾರ್ಥಿಗಳನ್ನು ಈಗ ಭಾರತೀಯ ಕಾಲೇಜುಗಳಿಗೆ ವರ್ಗಾವಣೆ ಮಾಡಿದರೆ ಸ್ಥಳೀಯ ಅಭ್ಯರ್ಥಿಗಳಿಗೆ ಅನ್ಯಾಯವಾಗಬಹುದು ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿತ್ತು. ಆದರೆ ರಾಷ್ಟ್ರೀಯ ವೈದ್ಯಕೀಯ ಆಯೋಗವು ಅನುಮೋದಿಸಿದ ‘academic mobility programme’ ಪ್ರಕಾರ ಉಕ್ರೇನ್ನಿಂದ ಹಿಂದಿರುಗಿದ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಕೋರ್ಸ್ಗಳನ್ನು ಪೂರ್ಣಗೊಳಿಸಬಹುದಾದ ವಿದೇಶಿ ವಿಶ್ವವಿದ್ಯಾಲಯಗಳ ವಿವರಗಳನ್ನು ಒಳಗೊಂಡಿರುವ ವೆಬ್ ಪೋರ್ಟಲ್ ಅನ್ನು ಕೇಂದ್ರ ಸರ್ಕಾರ ರಚಿಸಬೇಕು ಎಂದು ಇಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ಈ ಪ್ರಕ್ರಿಯೆಯಲ್ಲಿ ಪಾರದರ್ಶಕ ವ್ಯವಸ್ಥೆ ಇರಬೇಕು ಮತ್ತು ವೆಬ್ ಪೋರ್ಟಲ್ ಪರ್ಯಾಯ ವಿದೇಶಿ ವಿಶ್ವವಿದ್ಯಾಲಯಗಳಲ್ಲಿನ ಶುಲ್ಕಗಳು ಮತ್ತು ಹೊಂದಾಣಿಕೆಯ ಸೀಟುಗಳ ವಿವರಗಳನ್ನು ನೀಡಬೇಕು ಎಂದು ಹೇಳಿದೆ.
ವಿದ್ಯಾರ್ಥಿಗಳು ಇತರ ವಿದೇಶಿ ವಿಶ್ವವಿದ್ಯಾನಿಲಯಗಳನ್ನು ಆಯ್ಕೆ ಮಾಡುವ ಕಾರ್ಯ ವಿಧಾನವನ್ನು ಭಾರತ ಅಭಿವೃದ್ಧಿಪಡಿಸಬಹುದು ಎಂದು ಪೀಠವು ಸರ್ಕಾರಕ್ಕೆ ಸಲಹೆ ನೀಡಿದೆ. “ಪಾರದರ್ಶಕ ವ್ಯವಸ್ಥೆಯನ್ನು ರೂಪಿಸಬೇಕು. ಯಾವ ದೇಶಗಳಲ್ಲಿ ಹೆಚ್ಚು ಸ್ಥಾನಗಳು ಇವೆ ಎಂಬುದನ್ನು ಕಂಡುಹಿಡಿಯುವ ಸಂಪನ್ಮೂಲಗಳು ಭಾರತದ ಬಳಿ ಇದೆ. ವಿದ್ಯಾರ್ಥಿಗಳಿಗೆ ಆಯ್ಕೆಗಳನ್ನು ನೀಡಿ, ಪಾರದರ್ಶಕ ಆಯ್ಕೆಗಳನ್ನು ನೀಡಿ. ನೀವು ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿ. ಪಾರದರ್ಶಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ” ಎಂದು ನ್ಯಾಯಮೂರ್ತಿ ಗುಪ್ತಾ ಹೇಳಿದ್ದಾರೆ.
ರಷ್ಯಾದ ಆಕ್ರಮಣದಿಂದಾಗಿ ಉಕ್ರೇನ್ನಿಂದ ಹಿಂದಿರುಗಿದ ಸುಮಾರು ಇಪ್ಪತ್ತು ಸಾವಿರದಷ್ಟು ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಭಾರತೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಬಯಸಿದ್ದರು. ಆದರೆ ಗುರುವಾರ ಈ ಬಗ್ಗೆ ಅಫಿಡವಿಟ್ ಸಲ್ಲಿಸಿದ್ದ ಕೇಂದ್ರ ಸರ್ಕಾರ “ಇಲ್ಲಿಯವರೆಗೆ, ಯಾವುದೇ ಭಾರತೀಯ ವೈದ್ಯಕೀಯ ಸಂಸ್ಥೆ ಅಥವಾ ವಿಶ್ವವಿದ್ಯಾಲಯಕ್ಕೆ ವಿದೇಶಿ ವೈದ್ಯಕೀಯ ವಿದ್ಯಾರ್ಥಿಗಳನ್ನು ವರ್ಗಾಯಿಸಲು ಅಥವಾ ವಿದ್ಯಾಭ್ಯಾಸ ಮುಂದುವರಿಸಲು NMC (ರಾಷ್ಟ್ರೀಯ ವೈದ್ಯಕೀಯ ಆಯೋಗ) ಯಾವುದೇ ಅನುಮತಿಯನ್ನು ನೀಡಿಲ್ಲ ” ಎಂದಿದೆ.
NMCಯು ತನ್ನ ಸೆಪ್ಟೆಂಬರ್ 6 ರ ಸುತ್ತೋಲೆಯ ಮೂಲಕ ಅನುಮೋದಿಸಿದ “ಶೈಕ್ಷಣಿಕ ಚಲನಶೀಲತಾ ಕಾರ್ಯಕ್ರಮ” (academic mobility programme)ವು ಭಾರತೀಯ ವಿಶ್ವವಿದ್ಯಾನಿಲಯಗಳನ್ನು ಒಳಗೊಂಡಿಲ್ಲ ಮತ್ತು ಯುದ್ಧದಿಂದ ಹಾನಿಗೊಳಗಾದ ಉಕ್ರೇನ್ನ ವಿದ್ಯಾರ್ಥಿಗಳಿಗೆ ಇತರ ದೇಶಗಳಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಅವಕಾಶ ನೀಡುವುದಕ್ಕೆ ಮಾತ್ರ ಸೀಮಿತವಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು.
“ಸೆಪ್ಟೆಂಬರ್ 6, 2022 ರ ಸಾರ್ವಜನಿಕ ಪ್ರಕಟಣೆಯಲ್ಲಿ, ‘global mobility’ ಎಂಬ ಪದವನ್ನು ಭಾರತೀಯ ಕಾಲೇಜುಗಳು/ವಿಶ್ವವಿದ್ಯಾಲಯಗಳಲ್ಲಿ ಈ ವಿದ್ಯಾರ್ಥಿಗಳ ಕಲಿಕೆ ಮುಂದುವರಿಸಲಿರುವ ಅನುಮತಿ ಎಂದು ಅರ್ಥೈಸಲು ಸಾಧ್ಯವಿಲ್ಲ. ಏಕೆಂದರೆ ಭಾರತದಲ್ಲಿ ಅಸ್ತಿತ್ವದಲ್ಲಿರುವ ನಿಯಮಗಳು ವಿದೇಶಿ ವಿಶ್ವವಿದ್ಯಾಲಯಗಳಿಂದ ಭಾರತಕ್ಕೆ ವಿದ್ಯಾರ್ಥಿಗಳ ವಲಸೆಯನ್ನು ಅನುಮತಿಸುವುದಿಲ್ಲ. UG (ಪದವಿಪೂರ್ವ) ಕೋರ್ಸ್ಗಳನ್ನು ನೀಡುವ ಭಾರತೀಯ ಕಾಲೇಜುಗಳಿಗೆ ಅಥವಾ ವಿಶ್ವವಿದ್ಯಾನಿಲಯಗಳಿಗೆ ಹಿಂದಿನ ಬಾಗಿಲಿನ ಪ್ರವೇಶವಾಗಿ ಮೇಲಿನ ಸಾರ್ವಜನಿಕ ಸೂಚನೆಯನ್ನು ಬಳಸಲಾಗುವುದಿಲ್ಲ”ಎಂದು ಅಫಿಡವಿಟ್ ಹೇಳಿದೆ.
ಈ ಬಗ್ಗೆ ಕೋರ್ಟ್ಗೆ ಹೆಚ್ಚಿನ ಮಾಹಿತಿ ನೀಡಿರುವ ಸರ್ಕಾರ, ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) ಪರೀಕ್ಷೆಯಲ್ಲಿ ಕಳಪೆ ಅಂಕಗಳಿರುವುದರಿಂದ ಅಥವಾ ಉಕ್ರೇನ್ನಲ್ಲಿ ಕಡಿಮೆ ವೆಚ್ಚದ ವೈದ್ಯಕೀಯ ಶಿಕ್ಷಣದ ಕಾರಣದಿಂದಾಗಿ ಹೆಚ್ಚಿನ ವಿದ್ಯಾರ್ಥಿಗಳು ಉಕ್ರೇನ್ಗೆ ಹೋಗಿದ್ದಾರೆ ಎಂದೂ ಹೇಳಿರುವ ಸರ್ಕಾರ ಕಡಿಮೆ ಅಂಕ ಹೊಂದಿರುವ ಈ ವಿದ್ಯಾರ್ಥಿಗಳು ಭಾರತದಲ್ಲಿನ ಪ್ರೀಮಿಯರ್ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶವನ್ನು ಅನುಮತಿಸಿದರೆ, ಈಗಾಗಲೇ ಇಂತಹ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗದೆ ಬೇರೆ ಕಾಲೇಜುಗಳಲ್ಲಿ ದಾಖಲಾದ ಅಥವಾ ವೈದ್ಯಕೀಯ ಶಿಕ್ಷಣದ ಆಸೆಯನ್ನೇ ಕೈ ಬಿಟ್ಟ ಹಲವಾರು ವಿದ್ಯಾರ್ಥಿಗಳು ಕೋರ್ಟಿಗೆ ದಾವೆ ಸಲ್ಲಿಸಬಹುದು. ಅಥವಾ ಇಂತಹ ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜುಗಳಲ್ಲಿ ಸೀಟು ಕೊಡಿಸಿದರೆ ಶುಲ್ಕದ ಸಮಸ್ಯೆ ಮತ್ತೆ ತಲೆದೋರಬಹುದು ಎಂದೂ ಸರ್ಕಾರ ಹೇಳಿತ್ತು.
‘Academic mobility programme’ಗೆ ಅನುಮತಿಸುವ ಮೂಲಕ ಸರ್ಕಾರ ಮತ್ತು NMC ಈಗಾಗಲೇ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಜೂನ್ 30, 2022 ರ ಮೊದಲು ತಮ್ಮ ಕೋರ್ಸ್ ಅನ್ನು ಪೂರ್ಣಗೊಳಿಸಿದ ಆದರೆ ತಮ್ಮ ಇಂಟರ್ನ್ಶಿಪ್ ಪೂರ್ಣಗೊಳಿಸಲು ಸಾಧ್ಯವಾಗದ ಉಕ್ರೇನ್ ಮತ್ತು ಚೀನಾದ ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿದೇಶಿ ವೈದ್ಯಕೀಯ ಪದವೀಧರ ಪರೀಕ್ಷೆ (FMGE)ಗೆಹಾಜರಾಗಲು ಅನುಕೂಲವಾಗುವಂತೆ ಇಂಟರ್ನ್ಶಿಪ್ಗೆ ಅವಕಾಶ ಮಾಡಿಕೊಟ್ಟಿದೆ ಎಂದು ಅಫಿಡವಿಟ್ ಒತ್ತಿಹೇಳಿದೆ.
ಉಕ್ರೇನಿನಿಂದ ವಾಪಾಸಾದ ವಿದ್ಯಾರ್ಥಿಗಳನ್ನು ಭಾರತದಲ್ಲಿನ ವೈದ್ಯಕೀಯ ಕಾಲೇಜುಗಳಿಗೆ ವರ್ಗಾಯಿಸುವ ಅಥವಾ ಇತರ ಯಾವುದೇ ಹೆಚ್ಚಿನ ಸಡಿಲಿಕೆಯು ಭಾರತೀಯ ವೈದ್ಯಕೀಯ ಮಂಡಳಿಯ ಕಾಯಿದೆ, 1956 ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯಿದೆ, 2019 ಮತ್ತು ಅದರ ಅಡಿಯಲ್ಲಿ ಮಾಡಲಾದ ನಿಬಂಧನೆಗಳನ್ನು ಉಲ್ಲಂಘಿಸುವುದಿಲ್ಲ. ಆದರೆ ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಗಂಭೀರವಾಗಿ ಕಡಿಮೆ ಮಾಡಬಹುದು ಎಂಬ ಆತಂಕವನ್ನೂ ಕೇಂದ್ರ ಸರ್ಕಾರ ವ್ಯಕ್ತಪಡಿಸಿತ್ತು.