ಜಗತ್ತು ಈ ವಾರ ಒಂದು ವಿಚತ್ರ ವಿಡಂಬನೆಗೆ ಸಾಕ್ಷಿಯಾಯಿತು. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆ ನಡೆಯುತ್ತಿರುವಾಗಲೇ , ಭದ್ರತಾ ಮಂಡಳಿಯ ಪ್ರಸ್ತುತ ಅಧ್ಯಕ್ಷ ರಷ್ಯಾ, (Russian) ಉಕ್ರೇನ್ ಮೇಲೆ ಆಕ್ರಮಣವನ್ನು ಪ್ರಾರಂಭಿಸಿತು. ಇದರಿಂದಾಗಿ ಈಗ, ಅಂತರರಾಷ್ಟ್ರೀಯ ಕಾನೂನಿಗೆ ಏನಾದರೂ ಅರ್ಥವಿದೆಯೇ? ಮತ್ತು ಸದಸ್ಯ ದೇಶಗಳ ನಡವಳಿಕೆಯನ್ನು ನಿಯಂತ್ರಿಸಲು ವಿಶ್ವ ಸಂಸ್ಥೆ ಶಕ್ತಿಹೀನವಾಗಿದೆಯೇ? ಎಂಬ ಪ್ರಶ್ನೆಗಳು ಮೂಡಿವೆ.
ರಷ್ಯಾ ಅಂತಾರಾಷ್ಟ್ರೀಯ ಕಾನೂನಿನ (international law) ನಿಯಮಗಳನ್ನು ಉಲ್ಲಂಘಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಉಕ್ರೇನ್ (Ukraine) ಪ್ರಾದೇಶಿಕ ಸಮಗ್ರತೆ ಮತ್ತು ರಾಜಕೀಯ ಸ್ವಾತಂತ್ರ್ಯವಿರುವ ಸ್ವತಂತ್ರ ದೇಶ. ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ಗೆ ಸ್ವಾತಂತ್ರ್ಯ ದೊರಕಿದೆ ಎಂದು ರಷ್ಯಾ ನೀಡಿರುವ ‘ಮನ್ನಣೆ’ ಉಕ್ರೇನಿನ ಪ್ರಾದೇಶಿಕ ಸಮಗ್ರತೆಯನ್ನಾಗಲೀ ಅಥವಾ ರಾಜಕೀಯ ಸ್ವಾತಂತ್ರ್ಯವನ್ನಾಗಲೀ ಬದಲಾಯಿಸುವುದಿಲ್ಲ. ಉಕ್ರೇನ್ ವಿರುದ್ಧ ರಷ್ಯಾ ಎಸಗಿದ್ದು ಆಕ್ರಮಣಕಾರಿ ಕೃತ್ಯ . ವಿಶ್ವ ಸಂಸ್ಥೆಯ ಸ್ಥಾಪನೆಯಾಗುವುದಕ್ಕಿಂತ ಮುನ್ನ ಒಂದು ದೇಶ ಇನ್ನೊಂದು ದೇಶವನ್ನು ಆಕ್ರಮಿಸುವುದು ಸಾಮಾನ್ಯ ಸಂಗತಿಯಾಗಿತ್ತು.
ಆದರೆ 1928 ರ ಕೆಲ್ಲಾಗ್-ಬ್ರಿಯಾಂಡ್ ಒಪ್ಪಂದದ ನಂತರ ಯುದ್ಧವು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. 1945 ರಲ್ಲಿ ನ್ಯೂರೆಂಬರ್ಗ್ನಲ್ಲಿ ಇಂಟರ್ನ್ಯಾಷನಲ್ ಮಿಲಿಟರಿ ಟ್ರಿಬ್ಯೂನಲ್ ಅನ್ನು ಸ್ಥಾಪಿಸಿದ ಚಾರ್ಟರ್ ಸಹ “ಆಕ್ರಮಣಶೀಲತೆಯ ಯುದ್ಧದ ಯೋಜನೆ, ಸಿದ್ಧತೆ, ಪ್ರಾರಂಭ ಅಥವಾ ಯುದ್ಧವನ್ನು ನಡೆಸುವುದು” ಶಾಂತಿಯ ವಿರುದ್ಧದ ಅಪರಾಧಗಳು ಎಂದು ಘೋಷಿಸಿದೆ.
ಹಾಗಾಗಿ ರಷ್ಯಾ ಅಂತಾರಾಷ್ಟ್ರೀಯ ಕಾನೂನಿನ ನಿಯಮಗಳನ್ನು ಉಲ್ಲಂಘಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅಲ್ಲದೆ, ರಷ್ಯಾದ ಕಾರ್ಯಗಳು “ಎಲ್ಲಾ ಸದಸ್ಯರು ತಮ್ಮ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಬೆದರಿಕೆ ಅಥವಾ ಯಾವುದೇ ರಾಜ್ಯದ ಪ್ರಾದೇಶಿಕ ಸಮಗ್ರತೆ ಅಥವಾ ರಾಜಕೀಯ ಸ್ವಾತಂತ್ರ್ಯದ ವಿರುದ್ಧ ಬಲದ ಬಳಕೆಯಿಂದ ದೂರವಿರುತ್ತದೆ” ಎಂಬ ಯುಎನ್ ಚಾರ್ಟರ್ನ ನಿಯಮದ ಗಂಭೀರ ಉಲ್ಲಂಘನೆಯಾಗಿದೆ.
ಭದ್ರತಾ ಮಂಡಳಿಯ ಅಧಿಕಾರಗಳು
ಆದರೆ ಇಷ್ಟೆಲ್ಲಾ ನೀತಿ ನಿಯಮಗಳಿದ್ದೂ ರಷ್ಯಾಕ್ಕೆ ಉಕ್ರೇನ್ ಅನ್ನು ಆಕ್ರಮಿಸಲು ಸಾಧ್ಯವಾದರೆ ಈ ಎಲ್ಲಾ ಅಂತರರಾಷ್ಟ್ರೀಯ ಕಾನೂನಿನ ಅರ್ಥವೇನು? ಮತ್ತು ಅಂತರರಾಷ್ಟ್ರೀಯ ನಿಯಮಗಳ ಜಾರಿ ಯಾಕೆ ಸಾಧ್ಯವಾಗುತ್ತಿಲ್ಲ? ಎಂಬ ಪ್ರಶ್ನೆಗಳು ಕೇಳಿ ಬರಲಾರಂಭಿಸಿವೆ.
ಯುಎನ್ ಚಾರ್ಟರ್ ನ ಆರ್ಟಿಕಲ್ 24 “ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ನಿರ್ವಹಣೆ” ಗಾಗಿ ಭದ್ರತಾ ಮಂಡಳಿಗೆ ಪ್ರಾಥಮಿಕ ಜವಾಬ್ದಾರಿಯನ್ನು ನೀಡುತ್ತದೆ. ಇದು ಶಾಂತಿಯ ಬೆದರಿಕೆಗಳನ್ನು ತಡೆಗಟ್ಟಲು ಮತ್ತು ಎದುರಿಸಲು ಸಾಮೂಹಿಕ ಕ್ರಮಗಳನ್ನು ತೆಗೆದುಕೊಳ್ಳುವುದು ಮತ್ತು ಆಕ್ರಮಣಕಾರಿ ಕೃತ್ಯಗಳನ್ನು ನಿಗ್ರಹಿಸುವುದನ್ನು ಒಳಗೊಂಡಿರುತ್ತದೆ.
ಎರಡನೇ ಮಹಾ ಯುದ್ಧದ ನಂತರ ಮಹಾನ್ ಶಕ್ತಿಗಳ ನಡುವಿನ ಜಾಗತಿಕ ಯುದ್ಧವು ಮತ್ತೆ ಸಂಭವಿಸದಂತೆ ತಡೆಯಲು ಯುಎನ್ ಅನ್ನು ನಿರ್ದಿಷ್ಟವಾಗಿ ಸ್ಥಾಪಿಸಲಾಯಿತು. ಮತ್ತು ಕಳೆದ 75 ವರ್ಷಗಳಲ್ಲಿ ನಾವು ಈ ರೀತಿಯ ಘಟನೆಯನ್ನು ನೋಡಿಲ್ಲವಾದ್ದರಿಂದ, ಯುಎನ್ ಈ ಪ್ರಾಥಮಿಕ ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬಹುದು.
ಆದರೆ ಯುಎನ್ ಸೆಕ್ಯುರಿಟಿ ಕೌನ್ಸಿಲ್ನ್ನು ಎರಡನೇ ಮಹಾ ಯುದ್ಧವನ್ನು (2nd world war) ಗೆದ್ದ ಮಿತ್ರರಾಷ್ಟ್ರಗಳಿಂದ ಸ್ಥಾಪಿಸಲಾಯಿತು. ಅಂದರೆ ಚೀನಾ, (china) ಫ್ರಾನ್ಸ್, ಯುಕೆ, ಯುಎಸ್ ಮತ್ತು ಸೋವಿಯತ್ ಒಕ್ಕೂಟವನ್ನು ಭದ್ರತಾ ಮಂಡಳಿಯ ಖಾಯಂ ಸದಸ್ಯರನ್ನಾಗಿ ಮಾಡಲಾಯಿತು ಮತ್ತು ಒಇ ಐದು ದೇಶಗಳಿಗೆ ವೀಟೋ ಅಧಿಕಾರವನ್ನು ನೀಡಲಾಯಿತು.
ಯುಎನ್ಗೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗದಂತೆ ಮತ್ತು ಪರಸ್ಪರರ ಮಹತ್ವಾಕಾಂಕ್ಷೆಗಳಿಗೆ ಸಮತೋಲನವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲು ಇದನ್ನು ಮಾಡಲಾಗಿದೆ. ಆದಾಗ್ಯೂ, ಶಾಶ್ವತ ಐದು ಸದಸ್ಯರು ನಿಯಮಗಳಿಗೆ ಬದ್ಧವಾಗಿರಲು ಒಪ್ಪಿಕೊಂಡಾಗ ಮಾತ್ರ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತದೆ.
1990 ರ ದಶಕದಲ್ಲಿ, ಯುಎಸ್ (US) ಮತ್ತು ಯುಕೆ (UK) ತಮ್ಮ ಮಿಲಿಟರಿ (military) ಚಟುವಟಿಕೆಯನ್ನು ವಿಸ್ತರಿಸಲು ರಬ್ಬರ್-ಸ್ಟಾಂಪ್ ಆಗಿ ಭದ್ರತಾ ಮಂಡಳಿಯನ್ನು ಬಳಸಿಕೊಂಡವು. ನಂತರ, 2003 ರಲ್ಲಿ ಇರಾಕ್ ಆಕ್ರಮಣದ ಸಮಯದಲ್ಲಿ ರಷ್ಯಾ ಮತ್ತು ಚೀನಾ ತಮ್ಮ ವೀಟೋ ಅಧಿಕಾರವನ್ನು ಬಳಸಲು ಸಾಕಷ್ಟು ಅವಕಾಶವಿದ್ದರೂ US ಮತ್ತು UK ಏಕಪಕ್ಷೀಯವಾಗಿ ವರ್ತಿಸಿದವು. ಭದ್ರತಾ ಮಂಡಳಿಯು ಅಮೆರಿಕಾ ಮತ್ತು ಇಂಗ್ಲೆಂಡನ್ನು ತಡೆಯಲು ವಿಫಲವಾಯಿತು. ಈಗ ಅವರೆಡೂ ದೇಶಗಳನ್ನು ಕಡೆಗಣಿಸಿ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದೆ.
ಇತರ ಪ್ರತಿಕ್ರಿಯೆಗಳು
ಉಕ್ರೇನ್ ಅನ್ನು ರಕ್ಷಿಸಲು ಅಥವಾ ಆರ್ಥಿಕ ನಿರ್ಬಂಧಗಳ ಹೊರತಾಗಿಯೂ ರಷ್ಯಾವನ್ನು ಶಿಕ್ಷಿಸಲು ಅಂತರರಾಷ್ಟ್ರೀಯ ಕಾನೂನನ್ನು ಬಳಸಬಹುದಾದ ಇತರ ಮಾರ್ಗಗಳಿವೆ.
ಯುಎನ್ ಚಾರ್ಟರ್ನ ಆರ್ಟಿಕಲ್ 51 ನ್ನು ಬಳಸಿಕೊಳ್ಳುವುದು ಒಂದು ಆಯ್ಕೆಯಾಗಿದೆ. ಇದು ಸದಸ್ಯ ರಾಷ್ಟ್ರಗಳಿಗೆ ವೈಯಕ್ತಿಕ ಮತ್ತು ಸಾಮೂಹಿಕ ಆತ್ಮರಕ್ಷಣೆಯ ಹಕ್ಕನ್ನು ನೀಡುತ್ತದೆ. ದಾಳಿಯಿಂದ ರಕ್ಷಿಸಿಕೊಳ್ಳಲು ಉಕ್ರೇನ್ ಕಾನೂನುಬದ್ಧವಾಗಿ ತನ್ನ ಸೈನಿಕ ಬಲವನ್ನು ಬಳಸಬಹುದು ಮತ್ತು ಮೇಲಾಗಿ ಇತರ ದೇಶಗಳಿಂದ ಮಿಲಿಟರಿ ಸಹಾಯವನ್ನೂ ಕೋರಬಹುದು. 1990 ರಲ್ಲಿ ಇರಾಕ್ ಕುವೈಟ್ ಅನ್ನು ಆಕ್ರಮಿಸಿದಾಗ, ಕುವೈತ್ ತನ್ನನ್ನು ರಕ್ಷಿಸಿಕೊಳ್ಳಲು ಇತರರಿಂದ ಮಿಲಿಟರಿ ಸಹಾಯವನ್ನು ಕೋರಿತ್ತು.
ಈ ಮಧ್ಯೆ ಭದ್ರತಾ ಮಂಡಳಿಯಲ್ಲಿ ರಷ್ಯಾವನ್ನು ಶಾಶ್ವತ ಸದಸ್ಯತ್ವದಿಂದ ತೆಗೆದುಹಾಕಬಹುದೇ ಎಂಬ ಪ್ರಶ್ನೆಗಳನ್ನು ಸಹ ಕೇಳಲಾಗಿದೆ. ಇದಕ್ಕೆ ಸರಳ ಉತ್ತರ ‘ಇಲ್ಲ’ ಎಂಬುವುದೇ ಆಗಿದೆ. ಕೌನ್ಸಿಲ್ನಲ್ಲಿ ಸೋವಿಯತ್ ಒಕ್ಕೂಟದ ಸ್ಥಾನವನ್ನು ರಷ್ಯಾ ಪಡೆಯಬಾರದು ಎಂಬ ವಾದಗಳನ್ನು ಈಗ ಮಾಡಲಾಗುತ್ತಿದೆ. ಆದರೆ ಸೋವಿಯತ್ ಒಕ್ಕೂಟದ (ಉಕ್ರೇನ್ ಸೇರಿದಂತೆ) ಪತನದಿಂದ ಉದ್ಭವಿಸಿದ ಎಲ್ಲಾ ರಾಜ್ಯಗಳು 1991 ರಲ್ಲಿ ಇದನ್ನು ಒಪ್ಪಿಕೊಂಡಿದ್ದವು.
ರಷ್ಯಾವನ್ನು ತೆಗೆದುಹಾಕಲು ಯುಎನ್ ಚಾರ್ಟರ್ನ ನಿಯಮಾವಳಿಗಳಲ್ಲಿ ಬದಲಾವಣೆ ತರಬಹುದಲ್ಲಾ ಎಂಬ ಪ್ರಶ್ನೆಗೂ ಸದ್ಯದ ಉತ್ತರ ‘ಇಲ್ಲ’ ಎಂಬುವುದೇ ಆಗಿದೆ.
ಯಾಕೆಂದರೆ UN ಚಾರ್ಟರ್ನ ಆರ್ಟಿಕಲ್ 108 ತಿದ್ದುಪಡಿಗಳನ್ನು ಅನುಮತಿಸಿದರೂ, ಆ ತಿದ್ದುಪಡಿಗೆ ಎಲ್ಲಾ ಶಾಶ್ವತ ಐದು ಸದಸ್ಯರು ಒಪ್ಪಿಕೊಳ್ಳುವ ಅಗತ್ಯವಿದೆ. ಆದ್ದರಿಂದ, ರಷ್ಯಾವನ್ನು ಭದ್ರತಾ ಮಂಡಳಿಯಿಂದ ತೆಗೆದುಹಾಕಲು, ರಷ್ಯಾ ಒಪ್ಪಿಕೊಳ್ಳಬೇಕು ಮತ್ತು ಅದು ಎಂದಿಗೂ ಸಾಧ್ಯವಾಗುವಿದಿಲ್ಲ.
ಪುಟಿನ್ ಯುದ್ಧಾಪರಾಧ
ಪುಟಿನ್ ಅಕ್ರಮ ಯುದ್ಧವನ್ನು ಪ್ರಾರಂಭಿಸುವ ಮೂಲಕ ಆಕ್ರಮಣಕಾರಿ ಅಪರಾಧವನ್ನು (crime of agression) ಮಾಡಿದ್ದಾರೆ ಮತ್ತು ಉಕ್ರೇನಿನ ಮೇಲಿನ ರಷ್ಯಾದ ಯುದ್ಧ ಅಪರಾಧಗಳು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುತ್ತವೆ. ಆದರೆ ನ್ಯಾಯಾಲಯದ ನ್ಯಾಯವ್ಯಾಪ್ತಿಯಲ್ಲಿನ ಮಿತಿಯಿಂದಾಗಿ ಪುಟಿನ್ ಆಕ್ರಮಣಕ್ಕಾಗಿ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಮುಂದೆ ವಿಚಾರಣೆಗೆ ನಿಲ್ಲುವುದಿಲ್ಲ. ಯಾಕೆಂದರೆ ಆಕ್ರಮಣಕಾರಿ ರಾಜ್ಯ ಮತ್ತು ಸಂತ್ರಸ್ತ ದೇಶ ಇಬ್ಬರೂ ನ್ಯಾಯಾಲಯವನ್ನು ಸ್ಥಾಪಿಸಿದ ಒಪ್ಪಂದವಾದ ‘ರೋಮ್ ಶಾಸನ’ಕ್ಕೆ ಒಳಪಟ್ಟಿರಬೇಕು. ಆದರೆ ಉಕ್ರೇನ್ ರೋಮ್ ಶಾಸನಕ್ಕೆ ಒಳಪಟ್ಟ ಪಕ್ಷವಾಗಿದೆ, ರಷ್ಯಾ ಅಲ್ಲ.
ಆದ್ದರಿಂದ, ಭದ್ರತಾ ಮಂಡಳಿಯು ರಷ್ಯಾವನ್ನು ನಾನ್-ಪಾರ್ಟಿ ಎಂದು ನ್ಯಾಯಾಲಯಕ್ಕೆ ಉಲ್ಲೇಖಿಸದೆ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ರಷ್ಯಾದ ಆಕ್ರಮಣದ ಮೇಲೆ ಯಾವುದೇ ನ್ಯಾಯವ್ಯಾಪ್ತಿಯನ್ನು ಹೊಂದಿಲ್ಲ. ಮತ್ತು ಭದ್ರತಾ ಮಂಡಳಿಯು ಹಾಗೊಂದು ವೇಳೆ ಉಲ್ಲೇಖಿಸಿದರೂ ಕೌನ್ಸಿಲ್ನ ಶಾಶ್ವತ ಸದಸ್ಯರಾಗಿ ರಷ್ಯಾ ಈ ಕ್ರಮವನ್ನು ವೀಟೋ ಮಾಡಬಹುದು.
ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ಯುದ್ಧಾಪರಾಧಗಳ ಮೇಲೆ ಅಧಿಕಾರವನ್ನು ಹೊಂದಿದ್ದರೂ, ಸದಸ್ಯ ರಾಷ್ಟ್ರಗಳ ಪರವಾಗಿ ಅಧ್ಯಕ್ಷರನ್ನು ಬಂಧಿಸುವುದು ಕಾರ್ಯ ಸಾಧ್ಯವಲ್ಲ ಮತ್ತು ನ್ಯಾಯಾಲಯವು ಇದುವರೆಗೂ ಹಾಗೆ ಮಾಡುವಲ್ಲಿ ಯಶಸ್ವಿಯೂ ಆಗಿಲ್ಲ.
ಆದರೆ ವಿಶ್ವದ ಯಾವುದೇ ನ್ಯಾಯಾಲಯವು ದೇಶವೊಂದರ ನಾಗರಿಕರ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡುವಂತಹ ಗಂಭೀರ ಯುದ್ಧ ಅಪರಾಧಗಳನ್ನು ವಿಚಾರಣೆಗೆ ಒಳಪಡಿಸಬಹುದು. ಮತ್ತು ನ್ಯಾಯಾಲಯಗಳು ಇತರ ದೇಶಗಳ ಪ್ರಜೆಗಳ ಮೇಲೆ ಆಕ್ರಮಣ ನಡಸಿದ್ದಕ್ಕಾಗಿ ಕಾನೂನು ಕ್ರಮ ಜರುಗಿಸಬಹುದು. ಜರ್ಮನಿ, ನೆದರ್ಲ್ಯಾಂಡ್ಸ್, ಉಕ್ರೇನ್ ಮತ್ತು ರಷ್ಯಾ ಕೂಡ ಆಕ್ರಮಣಕಾರಿ ಕೃತ್ಯಗಳಿಗೆ ಅನ್ವಯಿಸುವ “ಸಾರ್ವತ್ರಿಕ ನ್ಯಾಯವ್ಯಾಪ್ತಿ” ಕಾನೂನುಗಳನ್ನು ಹೊಂದಿವೆ.
ಆದರೆ, ಸಾರ್ವತ್ರಿಕ ನ್ಯಾಯವ್ಯಾಪ್ತಿಯಲ್ಲಿನ ತೊಂದರೆಯು ಶಂಕಿತರನ್ನು ಕಸ್ಟಡಿಗೆ ತರುವಲ್ಲಿದೆ. ರಾಷ್ಟ್ರದ ಮುಖ್ಯಸ್ಥರು, ವಿದೇಶಿ ನ್ಯಾಯಾಲಯಗಳಲ್ಲಿ ಅಪರಾಧಗಳಿಗೆ ಮೊಕದ್ದಮೆ ಹೂಡುವುದರಿಂದ ಸಾಮಾನ್ಯವಾಗಿ ವಿನಾಯಿತಿ ಹೊಂದಿರುತ್ತಾರೆ.ಅಷ್ಟೇ ಅಲ್ಲ, ಅಂತಹ ಕಾನೂನು ಕ್ರಮಗಳು ಸಂಭವಿಸಬೇಕಾದರೆ, ರಷ್ಯಾದ ರಾಜಕೀಯ ಮತ್ತು ಮಿಲಿಟರಿ ನಾಯಕರನ್ನು ಅವರ ಹುದ್ದೆಗಳಿಂದ ತೆಗೆದುಹಾಕಬೇಕು, ಬಂಧಿಸಿ ನಂತರ ವಿಚಾರಣೆಯನ್ನು ಎದುರಿಸಲು ಹಸ್ತಾಂತರಿಸಬೇಕಾಗುತ್ತದೆ. ಆದ್ದರಿಂದ, ಅಲ್ಪಾವಧಿಯಲ್ಲಿ ಯಾರನ್ನೂ ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಸಾಧ್ಯವಿಲ್ಲ. ಆದರೆ ದೀರ್ಘಾವಧಿಯಲ್ಲಿ? ಇರಬಹುದು.
ಮೂಲ: ಜೂಲಿಯೆಟ್ ಮೆಕ್ಇಂಟೈರ್, ಡೌಗ್ಲಾಸ್ ಗಿಲ್ಫೋಯ್ಲ್, ತಮ್ಸಿನ್ ಫಿಲಿಪಾ
(ಜೂಲಿಯೆಟ್ ಮೆಕ್ಇಂಟೈರ್ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದಲ್ಲಿ ಕಾನೂನು ಉಪನ್ಯಾಸಕರಾಗಿದ್ದಾರೆ. ಡೌಗ್ಲಾಸ್ ಗಿಲ್ಫೋಯ್ಲ್ ಅವರು ನ್ಯೂ ಸೌತ್ ವೇಲ್ಸ್ ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಕಾನೂನು ಮತ್ತು ಭದ್ರತೆಯ ಪ್ರಾಧ್ಯಾಪಕರಾಗಿದ್ದಾರೆ. ತಮ್ಸಿನ್ ಫಿಲಿಪಾ ಪೈಗೆ ಡೀಕಿನ್ ವಿಶ್ವವಿದ್ಯಾಲಯದಲ್ಲಿ ಹಿರಿಯ ಉಪನ್ಯಾಸಕರಾಗಿದ್ದಾರೆ)
ಈ ಲೇಖನವು ಮೊದಲು ‘the conversation’ನಲ್ಲಿ ಕಾಣಿಸಿಕೊಂಡಿತ್ತು.