ಮೈಸೂರು: ಎಸಿಬಿ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ಒಟ್ಟು 16 ರಾಜ್ಯಗಳಲ್ಲಿ ಇದೆ. ಎಸಿಬಿ ರಚನೆ ಮಾಡಿ ಲೋಕಾಯುಕ್ತದ ಅಧಿಕಾರ ಕಸಿಯಲಾಗಿದೆ ಎಂದು ಹೇಳುವುದು ಸರಿಯಲ್ಲ. ಅಡ್ವೊಕೇಟ್ ಜನರಲ್ ಅವರು ಎಸಿಬಿ ರಚನೆ ಸರಿ ಎಂದು ಕೋರ್ಟ್’ನಲ್ಲಿ ಹೇಳಿದ್ದಾರೆ, ಇದಕ್ಕೆ ವಿರುದ್ಧವಾಗಿ ಸರಕಾರ ಹೇಳಿಕೆ ನೀಡುತ್ತಿದ್ದು, ಕೋರ್ಟ್’ನಲ್ಲಿ ಒಂದು ಹೊರಗಡೆ ಒಂದು ಭಿನ್ನ ನಿಲುವು ಯಾಕೆ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ಬಜೆಟ್ ಕುರಿತಾಗಿ ಇಂದಿನ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತಮ್ಮ ಮೇಲಿನ ಆರೋಪಗಳಿಂದ ರಕ್ಷಣೆ ಪಡೆಯಲು ಉದ್ದೇಶಪೂರ್ವಕವಾಗಿ ಎಸಿಬಿ ರಚನೆ ಮಾಡಿ ಲೋಕಾಯುಕ್ತದ ಅಧಿಕಾರವನ್ನು ಕಿತ್ತುಕೊಂಡರು ಎಂದು ಜನರಿಗೆ ತಪ್ಪು ಮಾಹಿತಿ ನೀಡುವುದು ಯಾಕೆ? ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಯಾಕೆ ಇನ್ನು ಎಸಿಬಿಯನ್ನು ರದ್ದು ಮಾಡಿಲ್ಲ? ಎಂದು ಪ್ರಶ್ನಿಸಿದರು.
ನನ್ನ ವಿರುದ್ಧ ಲೋಕಾಯುಕ್ತಕ್ಕೆ ನೀಡಿದ್ದ ಅನೇಕ ದೂರುಗಳು ಆಧಾರ ರಹಿತವಾದವು ಎಂದು ಲೋಕಾಯುಕ್ತದವರೇ ರದ್ದು ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ಈಗಲಾದರೂ ಸುಪ್ರೀಂ ಕೋರ್ಟ್’ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಒಂದು ತನಿಖಾ ಸಮಿತಿ ರಚನೆ ಮಾಡಿ ನಮ್ಮ ವಿರುದ್ಧ ಮತ್ತು ಈಗಿನ ಸರ್ಕಾರದ ವಿರುದ್ಧ ಇರುವ ಎಲ್ಲಾ ಆರೋಪಗಳನ್ನು ತನಿಖೆ ಮಾಡಿಸಲಿ. ಸುಮ್ಮನೆ ಆರೋಪ ಮಾಡುವುದರಿಂದ ಸತ್ಯ ಹೊರಬರುವುದಿಲ್ಲ ಎಂದು ಹೇಳಿದ್ದಾರೆ.
ಭಾವನಾತ್ಮಕ ವಿಚಾರ ಬಿಟ್ಟುಬಿಡಿ, ಅಭಿವೃದ್ಧಿ ಚರ್ಚೆಯಾಗಲಿ
ಅಬ್ಬಕ್ಕ ವರ್ಸಸ್ ಟಿಪ್ಪು ಸುಲ್ತಾನ್, ಗಾಂಧಿ ವರ್ಸಸ್ ಗೋಡ್ಸೆ ಇಂಥ ಭಾವನಾತ್ಮಕ ವಿಚಾರಗಳನ್ನು ಬಿಟ್ಟುಬಿಡಿ, ಅಭಿವೃದ್ಧಿ ವಿಚಾರಗಳ ಮೇಲೆ ಚರ್ಚೆ ಮಾಡೋಣ ಬನ್ನಿ. ಸಾರ್ವಜನಿಕವಾಗಿ ಅಭಿವೃದ್ಧಿ ವಿಷಯ ಚರ್ಚೆಯಾಗಲಿ ಎಂದರು.

ಧಮ್, ತಾಕತ್ ಇದ್ದರೆ ಹೊಡೆದುಹಾಕಲಿ ನೋಡೋಣ
ಸಚಿವರೊಬ್ಬರು ಟಿಪ್ಪು ಮುಗಿಸಿದಂತೆ ಸಿದ್ದರಾಮಯ್ಯ ಅವರನ್ನು ಮುಗಿಸಿ ಎಂದರೆ ಕೊಲೆ ಮಾಡು ಎಂದು ಯಾವುದಾದರೂ ಧರ್ಮ ಹೇಳುತ್ತದಾ? ಇದು ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ಇಂಥಾ ಬೆದರಿಕೆಗಳಿಗೆ ಹೆದರಿಕೊಂಡು ನನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುವವನು ನಾನಲ್ಲ. ನಾನು ನನ್ನ ಜೀವನದ ಕೊನೆಯವರೆಗೆ ಸಮಾಜದ ದುರ್ಬಲರು, ಅವಕಾಶ ವಂಚಿತರು, ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ಸಮುದಾಯದ ಜನರ ಪರವಾಗಿಯೇ ಇರುತ್ತೇನೆ. ಧಮ್, ತಾಕತ್ ಇದ್ದರೆ ಹೊಡೆದುಹಾಕಲಿ ನೋಡೋಣ ಎಂದು ಸವಾಲು ಹಾಕಿದರು.
ಅತ್ಯಂತ ದುರ್ಬಲ ಸರ್ಕಾರ ಎನ್ನದೆ ಏನನ್ನಬೇಕು?
ಹಣಕಾಸಿನ ಪರಿಸ್ಥಿತಿ ಬಹಳಾ ಸದೃಢವಾಗಿದೆ ಎಂದು ಬಜೆಟ್ ನಲ್ಲಿ ಹೇಳಿದ್ದಾರೆ. ಆದರೆ ಆರ್ಥಿಕ ಇಲಾಖೆಯವರು, ನಾವು ಈಗಾಗಲೇ ವಿತ್ತೀಯ ಕೊರತೆ ಎದುರಿಸುತ್ತಿದ್ದೇವೆ. ಕೊರೊನಾ, ಪ್ರವಾಹ ಬಂದ ಕಾರಣಕ್ಕೆ ನಮ್ಮ ಆರ್ಥಿಕ ಪರಿಸ್ಥಿತಿ ಹಾಳಾಗಿದೆ ಎಂದು ಕಾರಣ ಕೊಟ್ಟಿದ್ದಾರೆ. ಇಡೀ ಕೊರೊನಾ ನಿರ್ವಹಣೆಗೆ ಖರ್ಚು ಮಾಡಿರುವುದು 15 ರಿಂದ 16 ಸಾವಿರ ಕೋಟಿ ರೂ. ಪ್ರವಾಹಕ್ಕೆ ಖರ್ಚು ಮಾಡಿರುವುದು 6000 ಕೋಟಿ. ಪ್ರವಾಹದಿಂದ ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ, ಸುಮಾರು 3 ಲಕ್ಷ ಮನೆಗಳು ಹಾನಿಗೊಳಗಾಗಿತ್ತು, ಇದಕ್ಕೆ ಒಂದು ಕಂತು ಪರಿಹಾರ ಕೊಟ್ಟರು, ನಂತರದ ಕಂತು ಕೊಟ್ಟೆ ಇಲ್ಲ. 2022ರಲ್ಲಿ ಪ್ರವಾಹ ಬಂದಾಗ 1944 ಕೋಟಿ ಪರಿಹಾರ ಕೇಳಿ ಕೇಂದ್ರ ಸರ್ಕಾರಕ್ಕೆ ಮನವಿ ಕೊಟ್ಟಿದ್ದಾರೆ, ಇವತ್ತಿನವರೆಗೆ ಒಂದು ರೂಪಾಯಿ ಪರಿಹಾರ ಬಂದಿಲ್ಲ. ಈ ಸರ್ಕಾರವನ್ನು ಅತ್ಯಂತ ದುರ್ಬಲ ಸರ್ಕಾರ ಎನ್ನದೆ ಏನನ್ನಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿದ್ದು ಮನಮೋಹನ್ ಸಿಂಗ್
ಈ ಅನ್ನಭಾಗ್ಯ ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದರೆ ಗುಜರಾತ್, ಮಧ್ಯಪ್ರದೇಶ, ಅಸ್ಸಾಂನಲ್ಲಿ ಯಾಕಿಲ್ಲ? 3 ರೂ. ಗೆ ಅಕ್ಕಿ ನೀಡುವಂತೆ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿದ್ದು ಮನಮೋಹನ್ ಸಿಂಗ್ ಅವರ ಸರ್ಕಾರ. ಮೋದಿ ಅಥವಾ ವಾಜಪೇಯಿ ಅವರಲ್ಲ. ಎಂದು ಕಿಡಿಕಾರಿದರು.
1 ಲಕ್ಷ ಮನೆಗಳನ್ನು ಕಟ್ಟಲು ಸರ್ಕಾರದಿಂದಾಗಿಲ್ಲ
ನಮ್ಮ ಸರ್ಕಾರದ 5 ವರ್ಷಗಳ ಅವಧಿಯಲ್ಲಿ 15 ಲಕ್ಷದ 54 ಸಾವಿರ ಮನೆಗಳನ್ನು ನಿರ್ಮಾಣ ಮಾಡಿ, ಅನುದಾನ ನೀಡಿದ್ದೆವು. ನಮ್ಮ ಸರ್ಕಾರದ ಕೊನೆಯ ಬಜೆಟ್’ನಲ್ಲಿ 15 ಲಕ್ಷ ಮನೆಗಳ ಘೋಷಣೆ ಮಾಡಿ, ದುಡ್ಡು ಕೊಟ್ಟಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಈ ಸರ್ಕಾರ 4 ಲಕ್ಷದ 93 ಸಾವಿರ ಮನೆಗಳನ್ನು ಕಟ್ಟಿದ್ದರೆ ಅದು ನಮ್ಮ ಸರ್ಕಾರ ಮಂಜೂರು ಮಾಡಿದ ಮನೆಗಳು. ಈ ಸರ್ಕಾರ ಹೊಸದಾಗಿ ಮನೆಗಳನ್ನು ಮಂಜೂರು ಮಾಡಿಲ್ಲ. ಬೆಂಗಳೂರು ನಗರದಲ್ಲಿ ಒಂದು ಲಕ್ಷ ಮನೆಗಳನ್ನು ಕಟ್ಟಲು ಈ ಸರ್ಕಾರದಿಂದ ಆಗಿಲ್ಲ ಎಂದು ಹರಿಹಾಯ್ದರು.
ಸುಲಿಗೆಯ ಬಜೆಟ್
ಸುನಿಲ್ ಕುಮಾರ್ ಅವರು ಈ ಬಜೆಟ್ ಅನ್ನು ತೆರಿಗೆ ಸಂಗ್ರಹದ ಅಮೃತ ಕಾಲದ ಬಜೆಟ್ ಎಂದು ಕರೆದಿದ್ದಾರೆ. ನನ್ನ ಪ್ರಕಾರ ಇದು ತೆರಿಗೆ ಸುಲಿಗೆಯ ಕತ್ತಲ ಕಾಲದ ಬಜೆಟ್. ಈ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲೆ ಸೆಸ್ ಜಾಸ್ತಿಮಾಡಿದೆ. ಅಕ್ಕಿ, ರಾಗಿ, ಗೋಧಿ, ಪೆನ್ನು, ಪೆನ್ಸಿಲ್, ಮಂಡಕ್ಕಿ, ಹಾಲು, ಮೊಸರು, ಹಸುಗಳು ತಿನ್ನುವ ಹಿಂಡಿ, ಬೂಸಾಗಳ ಮೇಲೆ 5 ರಿಂದ ಶೇ.18 ತೆರಿಗೆ ವಿಧಿಸಿದ್ದಾರೆ. ಶೇ.80 ತೆರಿಗೆಯನ್ನು ರಾಜ್ಯದ ಬಡವರು, ಕಾರ್ಮಿಕರು ಕಟ್ಟುತ್ತಿದ್ದಾರೆ. ಬೆಲೆಯೇರಿಕೆ, ಕೆಟ್ಟ ಕೃಷಿ ನೀತಿಯಿಂದಾಗಿ ರಾಜ್ಯದ ರೈತರನ್ನು ಸಾಲಗಾರನನ್ನಾಗಿ ಮಾಡಿದೆ ಎಂದರು.