ಸೋಮವಾರದಿಂದ ವಿಧಾನಸಭಾ ಅಧಿವೇಶನ ಆರಂಭ ಆಗುತ್ತಿದ್ದು, ಆಡಳಿತ ಪಕ್ಷ ವರ್ಸಸ್ ವಿಪಕ್ಷ ನಡುವೆ ಮಾತಿನ ಯುದ್ಧ ನಡೆಯುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ವಾಲ್ಮೀಕಿ ನಿಗಮದಲ್ಲಿ ಮಾಜಿ ಸಚಿವ ನಾಗೇಂದ್ರ ಬಂಧನ ಆಗಿದ್ದು, ಸರ್ಕಾರವನ್ನು ಅಣಿಯಲು ವಿರೋಧ ಪಕ್ಷಗಳು ಸಿದ್ಧತೆ ಮಾಡಿಕೊಂಡಿವೆ. ಇನ್ನು ಮುಡಾ ಹಗರಣದಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಪತ್ನಿಯೇ ಅಕ್ರಮವಾಗಿ ಸೈಟ್ ಪಡೆದಿರುವ ಆರೋಪ ಎದುರಾಗಿದ್ದು, ಸರ್ಕಾರ ಈಗಾಗಲೇ ತನಿಖೆಗೂ ಆದೇಶ ಮಾಡಿದೆ. ಈ ಎಲ್ಲಾ ವಿಚಾರಗಳನ್ನು ಸದನದಲ್ಲಿ ಚರ್ಚೆ ನಡೆಸುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಕ್ಕೆ ಯೋಜನೆ ರೂಪಿಸಲಾಗಿದೆ.
ಇನ್ನು ಸೋಮವಾರದಿಂದ ಆರಂಭವಾಗುವ ಮಳೆಗಾಲದ ಅಧಿವೇಶನದಲ್ಲಿ ಶಾಸಕರ ಹಾಜರಾತಿ ಕುರಿತು ಕ್ಯಾಮೆರಾ ಕಣ್ಗಾವಲು ಇಡುವುದಕ್ಕೆ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ವಿನೂತನ ಪ್ರಯತ್ನ ಮಾಡುತ್ತಿದ್ದಾರೆ. ಸದನಕ್ಕೆ ಹಾಜರಾಗದೆ ದೂರ ಉಳಿಯುವುದು, ನಿಗದಿತ ಸಮಯಕ್ಕೆ ಸದನಕ್ಕೆ ಬಾರದೆ, ಬೇಕಾಬಿಟ್ಟಿಯಾಗಿ ಹಾಜರಾಗುವುದು. ಸದನದಲ್ಲಿ ಗಂಭೀರ ವಿಷಯಗಳ ಮೇಲೆ ಬಗ್ಗೆ ಚರ್ಚೆ ನಡೆಯುವಾಗ ಎದ್ದು ಹೊರಕ್ಕೆ ನಡೆಯುವುದು. ಹೀಗೆ ಶಾಸಕರ ನಿರ್ಲಕ್ಷ್ಯ, ಕಡ್ಡಾಯ ಹಾಜರಾತಿ ಕುರಿತಂತೆ ಆಧುನಿಕ ತಂತ್ರಜ್ಞಾನವುಳ್ಳ ಕ್ಯಾಮೆರಾಗಳ ಅಳವಡಿಕೆಗೆ ಸ್ಪೀಕರ್ ನಿರ್ಧಾರ ಮಾಡಿದ್ದಾರೆ.
ರಾಜ್ಯ ಸರ್ಕಾರದ ವಿರುದ್ದ ಸದನದ ಒಳಗೆ ಹಾಗು ಹೊರಗೆ ಜಂಟಿಯಾಗಿ ಹೋರಾಟ ಮಾಡಲು ಬಿಜೆಪಿ – ಜೆಡಿಎಸ್ ಸಮನ್ವಯ ಸಭೆ ಮಾಡಲಾಗಿದೆ. ಶುಕ್ರವಾರ ರಾತ್ರಿ ಖಾಸಗಿ ಹೊಟೇಲ್ನಲ್ಲಿ ಬಿಜೆಪಿ – ಜೆಡಿಎಸ್ ಸಮನ್ವಯ ಸಮಿತಿ ಸಭೆ ನಡೆದಿದ್ದು, ಸಭೆಯಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹಾಗು ಜೆಡಿಎಸ್ ಶಾಸಕರು ಸೇರಿ ಹಲವರು ಮಂದಿ ಭಾಗಿಯಾಗಿದ್ದರು. ಸರ್ಕಾರವನ್ನು ಇಕ್ಕಟ್ಟಿಗೆ ಹೇಗೆಲ್ಲಾ ಸಿಲುಕಿಸಬೇಕು ಅನ್ನೋ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯ್ತು.