ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಬರೋಬ್ಬರಿ ಒಂದೂವರೆ ತಿಂಗಳು ಕಳೆದಿದೆ. ಆದರೂ ಕೂಡ ಅವರ ಅಭಿಮಾನಿಗಳ ಮನದಲ್ಲಿ ನೋವು ಕಡಿಮೆಯಾಗಿಲ್ಲ. ಪ್ರತಿದಿನ, ಪ್ರತಿಕ್ಷಣ ಅಪ್ಪು ಅಪ್ಪು ಅಂತ ಕನವರಿಸುತ್ತಿದ್ದಾರೆ. ಈ ನಡುವೆ ಶುಗರ್ ಸ್ಕಲ್ಪ್ಟ್ ಸಂಸ್ಥೆ ಯುವರತ್ನ ಅಪ್ಪುಗೆ ಸಿಹಿಯಾದ ಚಾಕಲೇಟ್ ಮೂಲಕ ನೆನಪಿನ ನಮನ ಸಲ್ಲಿಸಿದೆ.
ಕರುನಾಡು ಕಂಡ ಅದ್ಭುತ ಕಲೆಗಾರನಿಗೆ ಮಿಡಿದಿದ್ದು ಒಂದೆರಡು ಮನಗಳಲ್ಲ. ಕೋಟಿ ಕೋಟಿ ಕನ್ನಡಿಗರು ಪುನೀತ್ ರಾಜ್ ಕುಮಾರ್ ಅಗಲಿಕೆಯಿಂದ ಮರುಗಿ ಕಣ್ಣೀರಾಗಿ ಹೋಗಿದ್ದರು. ಹೆಚ್ಚು ಕಮ್ಮಿಒಂದೂವರೆ ತಿಂಗಳುಗಳೇ ಕಳೆದಿದೆ. ಆದರೂ ಶೋಕ ಭಾವ ಇನ್ನೂ ಹಾಗೆಯೇ ಇದೆ. ಎತ್ತ ನೋಡಿದರೂ ಅಪ್ಪು ಅಗಲಿಕೆಯ ಭಾವ ಚಿತ್ರಗಳು. ನಿಜಕ್ಕೂ ಆ ನಗುಮುಖ ನೋಡಿದರೆ ಕಣ್ಣೀರು ಬಾರದೆ ಇರದು. ವರನಟ ರಾಜ್ ಕುಮಾರ್ ಕೊನೆಯ ಪುತ್ರ ಪುನೀತ್ ರಾಜ್ ಕುಮಾರ್, ಅಭಿಮಾನಿಗಳ ಅಪ್ಪು ಒಟ್ಟು ಜೀವನದ ಸಂಪಾದನೆಯಿದು. ಅಂಥಾ ಅಪ್ಪುಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಕೇಕ್ ಶೋನಲ್ಲಿ ನಮನ ಸಲ್ಲಿಸಲಾಗಿದೆ.
ಬಂಗಾರದ ಮನುಷ್ಯನಿಗೆ ಬಂಗಾರದ ಬಣ್ಣ, ತೋಳ ಮೇಲೆ ಪಾರಿವಾಳ
ಯುವ ರತ್ನ ಪುನೀತ್ ರಾಜ್ ಕುಮಾರ್ ಗೆ ಕೇಕ್ ನಮನ ಸಲ್ಲಿಸಲಾಗಿದೆ. ಕೇಕ್ ಆರ್ಟಿಸ್ಟ್ ಶೆಫ್ ಸ್ಯಾಮಿ ರಾಮಚಂದ್ರನ್ ನೇತೃತ್ವದ ತಂಡವೊಂದು ಅಪ್ಪು ಕೇಕ್ ಪ್ರತಿಮೆಯನ್ನು ನಿರ್ಮಿಸಿದೆ. ಇದು ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಸುಮಾರು 200kg ತೂಕದ ಅಪ್ಪು ಕೇಕ್ ಪ್ರತಿಮೆ ಇದಾಗಿದ್ದು, ಸುಮಾರು 15 ದಿನಗಳಲ್ಲಿ ಪ್ರತಿಮೆ ಕೆಲಸ ಪೂರ್ಣಗೊಳಿಸಲಾಗಿದೆ. ಬಂಗಾದರ ಮನುಷ್ಯನಿಗೆ ಬಂಗಾರದ ಬಣ್ಣವನ್ನೇ ಬಳಿದು ಕಸ್ತೂರಿ ನಿವಾಸದ ಪರಿವಾಳವನ್ನು ಅಪ್ಪು ತೋಳ ಮೇಲೆ ಕೂರಿಸಲಾಗಿದೆ. ಈ ಬಗ್ಗೆ ಒಂದೇ ಮಾತಿನಲ್ಲಿ ಈ ಬಗ್ಗೆ ಮಾತನಾಡಿದ ಈ ಕೇಕ್ ಪ್ರತಿಮೆಯ ನಿರ್ಮಾತೃ ಸ್ಯಾಮಿ ರಾಮಚಂದ್ರನ್, ದೊಡ್ಡ ಮನುಷ್ಯನಿಗೆ ಸಣ್ಣ ಕಾಣಿಕೆಯೆಂದಿದ್ದಾರೆ.

1500 ಕೆಜಿ ಮೋಗ್ಲಿ ಮರುಸೃಷ್ಟಿ.. ದಂಗಾದ ಕೇಕ್ ಪ್ರಿಯರು
ಬರ್ತಡೇ ಕೇಕ್.. ನ್ಯೂ ಇಯರ್ ಕೇಕ್, ಆನಿವರ್ಸರಿ ಕೇಕ್ ಗಳನ್ನಷ್ಟೇ ನೋಡಿ ಗೊತ್ತಿರುವ ಜನರಿಗೆ ಇದು ನಿಜಕ್ಕೂ ಅಚ್ಚರಿಯ ಲೋಕವೇ ಸರಿ. ಬಣ್ಣ ಬಣ್ಣದ, ಬಗೆ ಬಗೆಯ, ಕಲಾತ್ಮಕ ಕೇಕ್ಗಳನ್ನು ನೋಡಲು ಜನ ದೌಡಾಯಿಸುತ್ತಿದ್ದಾರೆ. ನಗರದ ಸೈಂಟ್ ಜಾಸೆಫ್ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಶುಗರ್ ಸ್ಕಲ್ಪ್ಟ್ ಎಂಬ ಕೇಕ್ ಡ್ರಾ ಆಕಾಡೆಮಿ ಆಯೋಜಿಸಿರುವ ಕೇಕ್ ಉತ್ಸವದ ಹೈಲೇಟ್ಗಳಿವು. ಕಳೆದ 47ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ಕೇಕ್ ಶೋ ಅನ್ನು ಪ್ರತಿ ವರ್ಷದ ಕ್ರಿಸ್ಮಸ್ ಹಾಗೂ ನ್ಯೂ ಇಯರ್ ಹೊತ್ತಿನಲ್ಲಿ ಆಯೋಜಿಸಲಾಗುತ್ತೆ. ಈ ಬಾರಿಯೂ ಕೇಕ್ ಶೋ ಡಿಸೆಂಬರ್ 17ರಿಂದ ಆರಂಭಗೊಂಡಿದ್ದು ಜನವರಿ 2ರ ವರೆಗೆ ನಡೆಯಲಿದೆ.
ಈ ಬಾರಿಯ ಸೆಂಟರ್ ಆಫ್ ಅಟ್ಯ್ರಾಕ್ಷನ್ ಮೋಗ್ಲಿ & ಲಿಬರ್ಟಿ ಪ್ರತಿಮೆ
ಹೌದು, ಎಂದಿನಂತೆ ಈ ಬಾರಿಯೂ ಕೇಕ್ ಶೋಗೆ ಆಗಮಿಸುವ ಮಂದಿಯ ಗಮನ ಸೆಳೆಯುತ್ತಿರುವುದು ಕ್ಲಾಸಿಕ್ ಜಂಗಲ್ ಬುಕ್ನ ಮೋಗ್ಲಿ ಎಂಬ ಪಾತ್ರ ಹಾಗೂ ಅಮೆರಿಕಾದ ಸ್ವಾತಂತ್ರ್ಯದ ಪ್ರತೀಕವಾಗಿರುವ ಸ್ಟಾಚ್ಯೂ ಆಫ್ ಲಿಬರ್ಟಿ ಪ್ರತಿಮೆಗಳು. ಬರೋಬ್ಬರಿ 1500 ಕೆಜಿ ತೂಕ ಇರುವ ಈ ಎರಡು ಕೇಕ್ ಕಲೆಗಳು ಜನರ ಮನಸೂರೆಗೊಳ್ಳುತ್ತಿದೆ. ಈ 1500 ಕೆಜಿ ತೂಕವುಳ್ಳ ಕೇಕ್ಗಳ ನಿರ್ಮಾಣಕ್ಕೆ ಸುಮಾರು 4 ತಿಂಗಳ ಸಮಯ ಹಾಗೂ 20 ಮಂದಿಯ ಶ್ರಮ ನೀಡಲಾಗಿದೆ. ಪರಿಣಾಮ ಆರೇಳು ಅಡಿ ಎತ್ತರದ ಸ್ಟಾಚ್ಯೂ ಆಫ್ ಲಿಬರ್ಟಿ ಹಾಗೂ ನೆಲದ ಮೇಲೆ ನಿಜವೆಂಬಂತೆ ಅರಳಿರುವ ಮೋಗ್ಲಿ ಅವತಾರಗಳು ಕೇಕ್ಗಳಲ್ಲಿ ಸೃಷ್ಟಿಗೊಂಡಿದೆ. ಕಣ್ಣಿಗೂ ನಿಲುಕದ, ಊಹೆಗೂ ಧಕ್ಕದ ಕೇಕ್ಗಳನ್ನು ನೋಡಿದ ಪುಟಾಣಿಗಳು ಸಂಭ್ರಮದಲ್ಲಿ ಹುಚ್ಚೆದ್ದು ಕುಣಿದರು. ಜೊತೆಗೆ ಈವರೆಗೂ ಕಂಡು ಕೇಳರಿಯದ ಪ್ರಮಾಣದ ಕೇಕ್ಗಳನ್ನು ನೋಡಿದ ಯುವತಿಯರು ಕಣ್ಣರಳಿಸಿ ಕೇಕ್ ಕಲೆಗಳ ಸವಿ ಸವಿದರು.
ಅಪ್ಪುವಿನಿಂದ ಕೇಕ್ ಶೋಗೆ ಹೆಚ್ಚಿದ ಮೆರುಗು
ಇನ್ನು ಈ ಕೇಕ್ ಉತ್ಸವದಲ್ಲಿ ಒಟ್ಟು 21 ಬಗೆಯ ಕೇಕ್ ಕಲೆಗಳು ಸೃಷ್ಟಿಸಲಾಗಿದೆ. ಮಾಸ್ಟರ್ ಶೆಫ್ ಸ್ಯಾಮಿ ರಾಮಚಂದ್ರನ್ ಎಂಬ ಬೆಂಗಳೂರು ಮೂಲದ ಅಂತರರಾಷ್ಟ್ರೀಯ ಕೇಕ್ ಮೇಕರ್ ಮಾರ್ಗದರ್ಶನದಲ್ಲಿ ಈ ಕೇಕ್ಗಳನ್ನು ನಿರ್ಮಿಸಲಾಗಿದೆ. ಮುಖ್ಯವಾಗಿ ಆಮೆರಿಕಾದ ಸ್ಟಾಚ್ಯೂ ಆಫ್ ಲಿಬರ್ಟಿ ಹಾಗೂ ಜಂಗಲ್ ಬುಕ್ ನ ಮೋಗ್ಲಿಯ ರೂಪಕ್ಕೆ ಕೇಕ್ ರೂಪ ಕೊಡಲಾಗಿದೆ. ಜನವರಿ 2ರ ವರೆಗೆ ಈ ಕೇಕ್ ಶೋ ನಡೆಯಲಿದ್ದು ಜನ ಸಾಗರವೇ ಅಪ್ಪು ಸೇರಿದಂತೆ ಪ್ರಸಿದ್ಧ ಕಲೆಗಳ ಕೇಕ್ ರೂಪ ನೋಡಲು ಮುಗಿಬೀಳುತ್ತಿದ್ದಾರೆ. ಆದರೂ ಅಪ್ಪುವಿನ ಕೇಕ್ ಪ್ರತಿಮೆ ನೋಡಿದ ಜನರ ಭಾವುಕರಾಗುತ್ತಿದ್ದಾರೆ. ಇದುವೇ ಅಪ್ಪು ಎಂಬ ಮಹಾ ವ್ಯಕ್ತಿಯ ಮಹಾ ಸಾಧನೆ.