ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಬಸವರಾಜ ಬೊಮ್ಮಾಯಿ ಅವರು ಮೊದಲ ಸಭೆ ನಡೆಸಿ ತಮ್ಮ ಸರ್ಕಾರದ ನಿರ್ಣಯಗಳನ್ನು ಪ್ರಕಟಿಸಿದ್ದಾರೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ರೈತರ ಮಕ್ಕಳಿಗೆ ಉನ್ನತ ಶಿಕ್ಷಣ ಪ್ರೋತ್ಸಾಹ ನೀಡಲು ಹೊಸ ಶಿಷ್ಯ ವೇತನ ಯೋಜನೆ ಜಾರಿಗೊಳಿಸುತ್ತಿರುವುದಾಗಿ ತಿಳಿಸಿದ ಅವರು ಇದಕ್ಕಾಗಿ ಸರ್ಕಾರ 1 ಸಾವಿರ ಕೋಟಿ ಹಣ ಮೀಸಲಿಟ್ಟಿದೆ ಎಂದು ಹೇಳಿದ್ದಾರೆ.

ಈಗಾಗಲೇ ಜಾರಿಯಲ್ಲಿರುವ ಸಂಧ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿಯನ್ನು ತಿಂಗಳಿಗೆ 1,200 ರೂಪಾಯಿಗಳಿಗೆ ಏರಿಕೆ ಮಾಡಲಾಗುತ್ತಿದ್ದು, 35 ಲಕ್ಷ ಫಲಾನುಭವಿಗಳು ಇದರ ಲಾಭ ಪಡೆಯಲಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ. ಇದರಿಂದ ಸರ್ಕಾರಕ್ಕೆ ಹೆಚ್ಚುವರಿ 863 ಕೋಟಿ ರೂಪಾಯಿ ಖರ್ಚಾಗಲಿದೆ ಎಂದು ಅವರು ಹೇಳಿದ್ದಾರೆ.
ವಿಧವಾ ವೇತನವನ್ನೂ 600 ರಿಂದ 800 ರೂಪಾಯಿಗಳಿಗೆ ಏರಿಕೆ ಮಾಡಲಾಗಿದ್ದು, 17.25 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ ಹಾಗೂ ಸರ್ಕಾರಕ್ಕೆ 414 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ. ಶೇ.40-70 ಅಂಗವೈಕಲ್ಯವಿರುವವರಿಗೆ ಮಾಸಿಕವಾಗಿ ಈಗ ನೀಡಲಾಗುತ್ತಿರುವ 600 ರೂಪಾಯಿಗಳ ವೇತನವನ್ನು 800 ರೂಗೆ ಏರಿಕೆ ಮಾಡಲಾಗಿದ್ದು, 3.66 ಸಾವಿರ ಫಲಾನುಭವಿಗಳು ಪ್ರಯೋಜನವಾಗಲಿದೆ, ಇದರಿಂದ ಸರ್ಕಾರಕ್ಕೆ 90 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
‘ದಕ್ಷ, ಜನ ಪರ ಆಡಳಿತ ನನ್ನ ಸರ್ಕಾರದ ಗುರಿ. ಸಮಾಜದ ಕಟ್ಟ ಕಡೆಯ ದೀನ ದಲಿತ, ಹಿಂದುಳಿದ, ಕೂಲಿಕಾರರ ಪರವಾಗಿ ಸರ್ಕಾರ ಕೆಲಸ ಮಾಡುತ್ತದೆ. ನಾನು ರಬ್ಬರ್ ಸ್ಟಾಂಪ್ ಅಲ್ಲ, ನನ್ನ ಆಡಳಿತ ಜನ ಆಡಳಿತದ ಸ್ಟಾಂಪ್ ಆಗಿರುತ್ತದೆ’ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ಭೇಟಿ ಬಳಿಕ ಸಚಿವ ಸಂಪುಟ ವಿಸ್ತರಣೆ
ಸಂಪುಟ ವಿಸ್ತರಣೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.
15 ದಿನಗಳಲ್ಲಿ ಎಲ್ಲ ಇಲಾಖೆಗಳ ಬಾಕಿ ಉಳಿದ ಕಡತಗಳ ವಿಲೇವಾರಿ ಮಾಡುವ ‘ಕಡತ ಯಜ್ಞ’ ನಡೆಸಲಾಗುವುದು. ಆದೇಶ ಮಾಡುವುದು ಮಾತ್ರವಲ್ಲ, ಆದೇಶದ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುತ್ತದೆ. ಇಲಾಖೆಗಳ ಮಧ್ಯೆ ಸಮನ್ವಯಕ್ಕೆ ಒತ್ತು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.