ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಪೌರತ್ವ ಕಾಯ್ದೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಯ ಕಾವು ತಾರಕಕ್ಕೇರುತ್ತಿದೆ. ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ಮತ್ತಿತರೆ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ಹಿಂಸಾಸ್ವರೂಪ ಪಡೆದುಕೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ನೀವು ಎಷ್ಟೇ ಪ್ರತಿಭಟನೆ ಮಾಡಿ, ನಾವು ಮಾಡುವುದನ್ನೇ ಮಾಡುವುದು ಎಂಬ ಧೋರಣೆಯಲ್ಲಿರುವ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಉದ್ದೇಶಿತ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ ಮತ್ತು ಹಿಂಸಾಚಾರಗಳು ನಡೆಯುತ್ತಿದ್ದರೂ ಸಂಬಂಧಪಟ್ಟ ರಾಜ್ಯಗಳ ಜತೆಗೆ ಅಥವಾ ಪ್ರತಿಭಟನೆ ನಡೆಸುತ್ತಿರುವ ಸಂಘ ಸಂಸ್ಥೆಗಳ ಜತೆಗೆ ಮಾತುಕತೆ ನಡೆಸುವ ಗೋಜಿಗೇ ಹೋಗುತ್ತಿಲ್ಲ.
ಪೌರತ್ವ ತಿದ್ದುಪಡಿ ಕಾಯ್ದೆ 2019 ನ್ನು ವಿರೋಧಿಸಿ ಪಶ್ಚಿಮಬಂಗಾಳದಲ್ಲಿ ಪ್ರತಿಭಟನೆಯು ಇಡೀ ರಾಜ್ಯವನ್ನು ಆವರಿಸುತ್ತಿದೆ. ಎಷ್ಟೇ ಬಿಗಿ ಭದ್ರತೆ ಒದಗಿಸಿದ್ದರೂ ಪ್ರತಿಭಟನೆ ಹಿಂಸಾರೂಪ ಪಡೆಯುತ್ತಿದೆ ಮತ್ತು ಹೆಚ್ಚಾಗುತ್ತಲೇ ಇದೆ. ಮುಂಜಾಗ್ರತಾ ಕ್ರಮವಾಗಿ ಹಲವು ಜಿಲ್ಲೆಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ.
ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪ್ರತಿಭಟನೆಗಳು ವ್ಯಾಪಕವಾಗುತ್ತಿವೆ. ಈ ಪ್ರತಿಭಟನೆಗಳಿಗೆ ಆಡಳಿತಾರೂಢ ಪಕ್ಷಗಳೇ ಪರೋಕ್ಷವಾಗಿ ಬೆಂಬಲ ನೀಡುತ್ತಿವೆ. ಈ ಮೂಲಕ ಕಾಯ್ದೆಯನ್ನು ವಾಪಸ್ ಪಡೆಯಬೇಕು ಅಥವಾ ಇತರೆ ಅಲ್ಪಸಂಖ್ಯಾತ ನಿರಾಶ್ರಿತರಿಗೂ ವಿಸ್ತರಣೆ ಮಾಡಬೇಕೆಂಬ ಒತ್ತಡವನ್ನು ಕೇಂದ್ರ ಸರ್ಕಾರದ ಮೇಲೆ ಹಾಕುವ ಪ್ರಯತ್ನಗಳನ್ನು ಈ ರಾಜ್ಯ ಸರ್ಕಾರಗಳು ಮಾಡುತ್ತಿವೆ.
ಕೇಂದ್ರ ಸರ್ಕಾರ ಧರ್ಮದ ಆಧಾರದಲ್ಲಿ ಪೌರತ್ವ ನೀಡಲೆಂದೇ ಈ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದಿದೆ. ಈ ಮೂಲಕ ಮುಸ್ಲಿಂರನ್ನು ಕಡೆಗಣಿಡುತ್ತಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿವೆ. ಈ ಕಾರಣದಿಂದಲೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹಿಡನ್ ಅಜೆಂಡಾದ ವಿರುದ್ಧ ಸೆಡ್ಡು ಹೊಡೆದು ನಿಂತಿರುವ ರಾಜ್ಯಗಳು ಒಂದು ವೇಳೆ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಕಾನೂನಾಗಿ ಜಾರಿಗೆ ತಂದಲ್ಲಿ ತಮ್ಮ ರಾಜ್ಯಗಳಲ್ಲಿ ಮಾತ್ರ ಇದನ್ನು ಜಾರಿಗೆ ತರಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸುತ್ತಾ ಬಂದಿವೆ.
ಈಶಾನ್ಯ ರಾಜ್ಯಗಳಾದ ಅಸ್ಸಾಂ, ತ್ರಿಪುರಾ, ಮೇಘಾಲಯದಲ್ಲಿ ಜನರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ, ಇಲ್ಲಿ ಕೇಂದ್ರ ಸರ್ಕಾರ ಭದ್ರತೆಗಾಗಿ ಅರೆಸೇನಾ ಪಡೆಗಳನ್ನು ಕಳುಹಿಸಿಕೊಟ್ಟಿದೆ. ಆದರೆ, ಜನರ ಆಕ್ರೋಶ ಮಾತ್ರ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ.
ಇನ್ನು ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರಾಜ್ಯದ ಮಾಲ್ಡಾ, ಮುರ್ಶಿದಾಬಾದ್, ಉತ್ತರ ದೀನಜ್ ಪುರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಎಷ್ಟೇ ಬಿಗಿ ಬಂದೋಬಸ್ತ್ ಮಾಡಿದ್ದರೂ ಪ್ರತಿಭಟನಾಕಾರರು ಮಣಿಯುತ್ತಿಲ್ಲ. ಮೊದಲು ಉದ್ದೇಶಿತ ಕಾಯ್ದೆಯ ನಿರ್ಧಾರದಿಂದ ಕೇಂದ್ರ ಸರ್ಕಾರ ಹೊರಬರಬೇಕು. ಎಲ್ಲರನ್ನೂ ಸರಿ ಸಮಾನರಂತೆ ಕಾಣಬೇಕು. ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ರೀತಿಯಲ್ಲಿರುವ ಈ ಕಾಯ್ದೆ ಬೇಡವೇ ಬೇಡ ಎಂದು ಪಟ್ಟು ಹಿಡಿದು ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಅಲ್ಲಲ್ಲಿ ಕಲ್ಲುತೂರಾಟ ನಡೆದಿದ್ದು, ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ. ಇದರ ಪರಿಣಾಮ ಹಲವಾರು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.
ಮತ್ತೊಂದೆಡೆ, ದೇಶದ ರಾಜಧಾನಿ ದೆಹಲಿಗೂ ಪ್ರತಿಭಟನೆ ವಿಸ್ತಾರಗೊಂಡಿದೆ. ದಕ್ಷಿಣ ದೆಹಲಿಯಲ್ಲಿರುವ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿರುವ ವಿದ್ಯಾರ್ಥಿ ಸಂಘಟನೆಗಳು ಬಸ್ಸುಗಳಿಗೆ ಬೆಂಕಿ ಹಚ್ಚಿದ್ದರಿಂದ ವಿವಿಯಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಈ ಎಲ್ಲಾ ಪ್ರತಿಭಟನೆಗಳು, ಪರ-ವಿರೋಧಗಳ ಹೋರಾಟಗಳ ನಡೆಯುತ್ತಿರುವ ಈ ಸಂದರ್ಭದಲ್ಲಿ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಜನಾಂದೋಲನ ನಡೆಸುವ ನಿಟ್ಟಿನಲ್ಲಿ `ಭಾರತ ಉಳಿಸಿ’ ಆಂದೋಲನಕ್ಕೆ ಚಾಲನೆ ನೀಡಿದೆ. ಇದೇ ವೇಳೆ ಪ್ರಗತಿಪರ ಸಂಘಟನೆಗಳು ದೇಶಾದ್ಯಂತ ಈ ವಿವಾದಿತ ಕಾಯ್ದೆ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸಲೆಂದು ದೇಶಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ.
ಕೇಂದ್ರ ಸರ್ಕಾರದ ಹಠಮಾರಿ ಧೋರಣೆ
ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದರೂ, ಇದೊಂದು ವಿವಾದವಾಗುತ್ತದೆ ಎಂಬ ಅರಿವಿದ್ದರೂ ಕೇಂದ್ರ ಸರ್ಕಾರ ಹಠಕ್ಕೆ ಬಿದ್ದು ಈ ಕಾಯ್ದೆಯನ್ನು ಜಾರಿಗೆ ತರಲು ಹೊರಟಿದೆ. ಯಾರು ಎಷ್ಟೇ ಪ್ರತಿಭಟನೆಗಳನ್ನು ನಡೆಸಿದರೂ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರ ಕಾಯ್ದೆ ಜಾರಿಗೆ ಮುನ್ನಡಿ ಇಡುತ್ತಿದೆ. ಇದಕ್ಕೆ ಬೇಕಾದ ಅಂದರೆ, ತಿದ್ದುಪಡಿ ಕಾಯ್ದೆಯಲ್ಲಿ ಪ್ರಸ್ತಾಪ ಮಾಡಿರುವ ಆರು ಧರ್ಮಗಳ ನಿರಾಶ್ರಿತರಿಗೆ ಪೌರತ್ವ ನೀಡಲು ಬೇಕಾದ ಎಲ್ಲಾ ಪ್ರಕ್ರಿಯೆಗಳನ್ನು ಆರಂಭಿಸಲು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಈ ಕಾಯ್ದೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರಮುಖ ರೂವಾರಿಯಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ `ನಿರಾಶ್ರಿತರಿಗೆ ಪೌರತ್ವವನ್ನು ನೀಡುವ ಕಾಯ್ದೆ ಇದಾಗಿದೆಯೇ ಹೊರತು, ವಾಪಸ್ ಪಡೆಯಲು ಮಂಡಿಸಿರುವ ಕಾಯ್ದೆಯಲ್ಲ’ ಎಂದು ಹೇಳುವ ಮೂಲಕ ಪ್ರತಿಭಟನೆಯ ಕಿಚ್ಚು ಹೆಚ್ಚು ಹೊತ್ತಿ ಉರಿಯುವಂತೆ ಮಾಡಿದ್ದಾರೆ.
ಒಂದು ವೇಳೆ ಈ ಕಾಯ್ದೆ ಕಾನೂನಾಗಿ ತಕ್ಷಣಕ್ಕೆ ಜಾರಿಗೆ ಬಂದರೆ ಸದ್ಯಕ್ಕೆ 35 ಸಾವಿರ ಅಕ್ರಮ ವಲಸಿಗರಿಗೆ ಭಾರತೀಯ ಪೌರತ್ವ ಸಿಗಲಿದೆ. ಇವರಲ್ಲಿ 25 ಸಾವಿರ ಹಿಂದೂಗಳು, 5.5 ಸಾವಿರ ಸಿಖ್ಖರು ಮತ್ತು ಉಳಿದಂತೆ ಕ್ರಿಶ್ಚಿಯನ್ನರು, ಪಾರ್ಸಿಗಳು ಹಾಗೂ ಬೌದ್ಧರಿಗೆ ಪೌರತ್ವ ಸಿಗಲಿದೆ. ಈ ಎಲ್ಲಾ 35 ಸಾವಿರ ವಲಸಿಗರ ಮಾಹಿತಿಯನ್ನು ಕೇಂದ್ರ ಸರ್ಕಾರ ತರಿಸಿಕೊಂಡಿದ್ದು, ಪೌರತ್ವ ನೀಡುವ ಪ್ರಕ್ರಿಯೆಯನ್ನು ಸದ್ಯದಲ್ಲೇ ಆರಂಭಿಸುವ ಸಾಧ್ಯತೆಗಳಿವೆ.