CAA ವಿರುದ್ದದ ಪ್ರತಿಭಟನೆಗಳು ದೇಶದಾದ್ಯಂತ ತಾರಕಕ್ಕೇರುತ್ತಿದ್ದಂತೇ, ಬಿಜೆಪಿಗರು ಭಯ ಹುಟ್ಟಿಸಿ ಪ್ರತಿಭಟನೆಯನ್ನು ಹತ್ತಿಕ್ಕುವ ಹಾದಿ ಹಿಡಿದಿದ್ದಾರೆ. ಅದರಲ್ಲೂ, ಕೆಲವು ರಾಜ್ಯಗಳ ಬಿಜೆಪಿ ನಾಯಕರು ಅಶ್ಲೀಲ ರೀತಿಯಲ್ಲಿ ಪ್ರತಿಭಟನಾಕಾರರನ್ನು ಹೀಯಾಳಿಸುವ ಪದ್ದತಿಯನ್ನು ಶುರು ಹಚ್ಚಿಕೊಂಡಿದ್ದಾರೆ. ಇತ್ತೀಚಿಗೆ ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ದಿಲೀಪ್ ಘೋಷ್ ಅವರು, ಓರ್ವ ಪ್ರತಿಭಟನೆ ನಡೆಸುತ್ತಿದ್ದ ಹೆಣ್ಣನ್ನು ಬೆದರಿಸಿ ಅವಳು ಹಿಡಿದಿದ್ದ ಬೋರ್ಡ್‌ಅನ್ನು ಹರಿದು ಹಾಕಿದ್ದಾರೆ. ನಂತರ ನೀಡಿರುವ ಹೇಳಿಕೆಯಲ್ಲಿ, ಅವಳ ಹಣೆಬರಹ ಚೆನ್ನಾಗಿತ್ತು ಅದಕ್ಕೆ ಕೇವಲ ಬೋರ್ಡ್ ಮಾತ್ರ ಹರಿದು ಹಾಕಿದ್ದೇವೆಂದು, ಹೇಳಿದ್ದಾರೆ.
ಇದೇನು ಮೊದಲ ಬಾರಿ ದಿಲೀಪ್ ಘೋಷ್ ಅವರು ಈ ರೀತಿಯ ಹೇಳಿಕೆಗಳನ್ನು ನೀಡಿರುವುದಲ್ಲ. ಇದಕ್ಕೂ ಹಿಂದೆ ಕೂಡಾ CAA ವಿರುದ್ದ ಪ್ರತಿಭಟಿಸಿದವರ ವಿರುದ್ದ ತುಚ್ಚವಾದ ಪದಗಳನ್ನು ಬಳಸಿ ಅಪಮಾನಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಇರುವ ಕಾರಣ ಶತಾಯಗತಾಯ ಬಿಜೆಪಿಯನ್ನು ಗೆಲ್ಲಿಸಿಕೊಡಬೇಕೆಂಬ ಇವರ ಉದ್ದೇಶ, CAA ಪ್ರತಿಭಟನೆಯಿಂದ ಈಡೇರುವ ರೀತಿ ಕಾಣುತ್ತಿಲ್ಲ. ಬಿಜೆಪಿ ರ‌್ಯಾಲಿ ನಡೆಸಿದ ಪ್ರತಿ ಜಾಗದಲ್ಲಿ CAA ವಿರುದ್ದ ಪ್ರತಿಭಟನೆಯನ್ನು ಪಶ್ಚಿಮ ಬಂಗಾಳದಲ್ಲಿ ನಡೆಸಲಾಗಿತ್ತು. ಇದರಿಂದ ಹತಾಶರಾಗಿರುವ ಪ.ಬಂ. ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಈಗ ತಮ್ಮ ಬೆಂಬಲಿಗರ ಸಹಾಯದಿಂದ ಬಲ ಪ್ರಯೋಗ ಮಾಡಿ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದ್ದಾರೆ.
ಇವರ ವಿರುದ್ದ ಎಫ್‌ಐಆರ್ ಏನೋ ದಾಖಲಾಗಿದೆ, ಆದರೂ ಪ್ರತೀ ಬಾರಿ ಈ ರೀತಿಯ ಹೇಳಿಕೆಗಳನ್ನು ಸಹಿಸುವುದು ಎಷ್ಟರ ಮಟ್ಟಿಗೆ ಸರಿ? ಪ್ರತಿಭಟನೆ ಮಾಡುತ್ತಿರುವುದು ಒಂದು ಹೆಣ್ಣು ಎಂಬ ಪರಿಜ್ಞಾನವೂ ಇಲ್ಲದೇ, ತಮ್ಮ ಬೆಂಬಲಿಗರ ಪಡೆಯನ್ನು ಕಟ್ಟಿಕೊಂಡು ಆ ಹುಡುಗಿಯ ಮೇಲೆ ದಬ್ಬಾಳಿಕೆ ನಡೆಸಿ ಏನು ಬಂತು ಪ್ರಯೋಜನ? ಇದರಿಂದಾಗಿ ದಿಲೀಪ್ ಘೊಷ್ ಕುರಿತಾಗಿ ಜನರಲ್ಲಿ ನಕಾರಾತ್ಮಕ ಭಾವನೆ ಮೂಡುತ್ತದೆಯೇ ಹೊರತು, ಚುನಾವಣೆ ಗೆಲ್ಲಲು ಇದು ಸಹಾಯವಾಗದು ಎಂಬುದು ಸತ್ಯ. ದಬ್ಬಾಳಿಕೆ ನಡೆಸುವುದಲ್ಲದೇ, ಆ ಹುಡುಗಿಯ ಅದೃಷ್ಟ ನೆಟ್ಟಗಿದ್ದ ಕಾರಣಕ್ಕೆ ಕೇವಲ ಬೋರ್ಡ್ ಹರಿದು ಹಾಕಿದ್ದೇವೆ ಎಂಬ ಹೇಳಿಕೆ ನೀಡುವುದು ಎಷ್ಟು ಸಮಂಜಸ?
ಇನ್ನು ಒಂದು ಹೆಜ್ಜೆ ಮುಂದುವರಿದು “ಇನ್ನು ಮುಂದೆ ಯಾರಾದರೂ ಬಿಜೆಪಿ ರ‌್ಯಾಲಿ ನಡೆಯುವ ದಾರಿಯಲ್ಲಿ ಪ್ರತಿಭಟನೆ ನಡೆಸಿದರೆ, ಅದನ್ನು ಸಹಿಸಲು ಸಾಧ್ಯವಿಲ್ಲ,” ಎಂದು ದಿಲೀಪ್ ಘೋಷ್ ಹೇಳಿದ್ದಾರೆ. ಹಾಗಾದರೆ, ನಿಜವಾಗಿಯೂ ಅಸಹಿಷ್ಣುಗಳಾಗಿರುವುದು ಯಾರು? ಈ ಹಿಂದೆ, ದೇಶದಲ್ಲಿ ಅಸಹಿಷ್ಣತತೆ ಇದೆ ಎಂದವರಿಗೆ ಪಾಕಿಸ್ತಾನದ ಟಿಕೆಟ್ ಕೊಡಿಸಿದವರು, ದಿಲೀಪ್ ಘೋಷ್‌ಗೆ ಯಾವ ದೇಶದ ಟಿಕೆಟ್ ಕೊಡಿಸುತ್ತಾರೆ? ಹಾಗಾದರೆ ಬಿಜೆಪಿಯ ನಾಯಕರಲ್ಲಿ ಪ್ರತಿಭಟನೆಯನ್ನು ಸಹಿಸಿಕೊಳ್ಳುವ ಶಕ್ತಿಯೇ ಇಲ್ಲವೇ? ಒಂದು ವೇಳೆ ಇಲ್ಲವಾದಲ್ಲಿ ಆ ಕಾರಣಕ್ಕಾಗಿಯೇ ದೇಶದೆಲ್ಲೆಡೆ ನಡೆಯುತ್ತಿರುವ ಪ್ರತಿಭಟನೆಗಳನ್ನು ಬಲವಂತವಾಗಿ ಹತ್ತಿಕ್ಕುತ್ತಿದ್ದಾರೆ ಎಂದಾಯಿತು. ಈ ಮಾತಿಗೆ ಪುಷ್ಟಿ ಕೊಡುವ ರೀತಿಯಲ್ಲಿ ಕೆಲವು ದಿನಗಳ ಹಿಂದೆ ದಿಲೀಪ್ ಘೋಷ್ ಅವರು ನೀಡಿರುವ ಹೇಳಿಕೆ ಏನೆಂದರೆ, “BJP ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ CAA ವಿರುದ್ದ ಪ್ರತಿಭಟನೆ ನಡೆಸಿದವರನ್ನು ನಾಯಿಗಳ ರೀತಿಯಲ್ಲಿ ಕೊಲ್ಲಲಾಗಿದೆ.”
ಇವೆಲ್ಲಾ ಹೇಳಿಕೆಗಳು ಕೇಂದ್ರ ಸರ್ಕಾರದ ವಿರುದ್ದ ದೇಶದ ಜನರಲ್ಲಿ ಇರುವ ಆಕ್ರೋಶವನ್ನು ಮತ್ತಷ್ಟು ಹೆಚ್ಚಾಗಿಸುತ್ತಿವೆ. ಪ್ರತಿಭಟನಾಕಾರರು ಬೆದರಿಸಿದಷ್ಟು ಬಲಿಷ್ಟರಾಗುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ 25ಕ್ಕೂ ಹೆಚ್ಚು ಜನರ ಸಾವು ಸಂಭವಿಸಿದರೂ, ಕರ್ನಾಟಕದ ಮಂಗಳೂರಿನಲ್ಲಿ ಇಬ್ಬರು ಮೃತಪಟ್ಟರೂ, ಪ್ರತಿಭಟನೆಗಳ ಕಾವು ಇನ್ನೂ ಇಳಿದಿಲ್ಲ. ಅದರ ಮೇಲೆ, ಬೆಂಕಿಗೆ ತುಪ್ಪ ಸುರಿದಂತೆ ಬಿಜೆಪಿ ನಾಯಕರ ಹೇಳಿಕೆಗಳು ಬರುತ್ತಿವೆ. ಪ್ರತಿಭಟಿಸುವ ಹಕ್ಕನ್ನು ಕಸಿಯುವ ಷಡ್ಯಂತ್ರ ಮತ್ತಷ್ಟು ಪ್ರಬಲವಾಗುತ್ತಿವೆ.