ಪೌರತ್ವ ಕಾಯಿದೆ ತಿದ್ದುಪಡಿ ವಿರೋಧಿಸಿ ಉತ್ತರ ಪ್ರದೇಶದಲ್ಲಿ ಪ್ರತಿಭಟನೆಗಳು ನಡೆದಾಗ ಉಂಟಾದ ಹಿಂಸಾಚಾರವನ್ನು ರಾಜಕೀಯ ಪಕ್ಷಗಳೇ ಸೃಷ್ಟಿಸಿದ್ದವು ಎಂಬ ಆರೋಪ ಕೇಳಿ ಬಂದಿದೆ. ಹಿಂಸಾಚಾರಕ್ಕೆ ಕಾರಣವಾದ ವ್ಯಕ್ತಿಗಳು ನಿಜಕ್ಕೂ ಪ್ರತಿಭಟನಕಾರರೇ ಅಲ್ಲ, ವ್ಯವಸ್ಥಿತವಾದ ಷಡ್ಯಂತ್ರವನ್ನು ರಚಿಸಿ ಕೆಲವು ಗೂಂಡಾಗಳು ಪ್ರತಿಭಟನಾಕಾರರ ಸೋಗಿನಲ್ಲಿ ನಡೆಸಿದ ಹಿಂಸಾಚಾರವಿದು, ಎಂದು ಸದಾಫ್ ಜಾಫರ್ ಎಂಬ ಮಾನವ ಹಕ್ಕು ಹೋರಾಟಗಾರ್ತಿ ಆರೋಪಿಸಿದ್ದಾರೆ.
ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ ಪೊಲೀಸರಿಂದ ಲಾಠೀಯೆಟು ತಿಂದು ಹದಿನೈದು ದಿನಗಳಿಗೂ ಅಧಿಕ ಕಾಲ ವಿನಾಕಾರಣ ಜೈಲು ಪಾಲಾಗಿದ್ದ ಸದಾಫ್ ಅವರ ಪ್ರಕಾರ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಉಗ್ರ ರೂಪಕ್ಕೆ ತಿರುಗಿಸಿದವರು ಗೂಂಡಾಗಳೇ ಹೊರತು ಅವರು ನಿಜವಾದ ಪ್ರತಿಭಟನಾಕಾರರಲ್ಲ. ಡಿಸೆಂಬರ್ 19ರಂದು ಉತ್ತರ ಪ್ರದೇಶದ ಪರಿವರ್ತನ್ ಚೌಕ್‌ನಲ್ಲಿ ನಡೆದ ಪ್ರತಿಭಟನೆ ಶಾಂತಿಯುತವಾಗಿಯೇ ನಡೆದಿತ್ತು. ಪ್ರತಿಭಟನೆ ಆರಂಭವಾದ ಕೆಲ ಸಮಯದ ನಂತರ ಪ್ರತಿಭಟನಾಕಾರರ ಸೋಗಿನಲ್ಲಿ ಒಂದು ಗುಂಪು ಘೋಷಣೆ ಕೂಗಲಾರಂಭಿಸಿತು. ಕಲ್ಲು ತೂರಾಟ ನಡೆಸಿದ್ದು, ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದು ಹಾಗೂ ಪ್ರತಿಭಟನಾ ಸ್ಥಳದಲ್ಲಿ ಸಂದಿಗ್ದ ವಾತಾವರಣ ನಿರ್ಮಾಣವಾಗಲು ಆ ಗುಂಪು ಕಾರಣ ಎಂದು ಸದಾಫ್ ಅವರು ಹೇಳಿದ್ದಾರೆ.
“ಪ್ರತಿಭಟನೆ ನಡೆದ ಸ್ಥಳ ಮುಸ್ಲಿಂ ಸಮುದಾಯ ಪ್ರಬಲವಾಗಿರುವ ಪ್ರದೇಶವಾಗಿರಲಿಲ್ಲ. ಅಷ್ಟು ಕಡಿಮೆ ಸಮಯದಲ್ಲಿ ನೂರಕ್ಕೂ ಹೆಚ್ಚು ಮುಸ್ಲಿಂ ಸಮುದಾಯದವರು ಸೇರಿ ಗಲಾಟೆ ಮಾಡಲು ಸಾಧ್ಯವಿರಲಿಲ್ಲ. ಆದರೂ, ಈ ಗೂಂಡಾಗಳ ಗುಂಪು ಸಮವಸ್ತ್ರದಂತೆ ತಲೆಯ ಮೇಲೆ ಟೋಪಿ ಹಾಗೂ ಕುರ್ತಾ ಧರಿಸಿ ಬೆನ್ನಿನ ಮೇಲೆ ಶಾಳು ಹೊದ್ದಿದ್ದರು. ಪೊಲೀಸರು ಲಾಠೀ ಚಾರ್ಜ್ ಮಾಡುತ್ತಿದ್ದರೂ, ಸುತ್ತಮುತ್ತಲಿನ ಜನ ಭಯದಿಂದ ಓಡುತ್ತಿದ್ದರೂ, ಈ ವ್ಯಕ್ತಿಗಳು ರಸ್ತೆಯ ಮಧ್ಯದಲ್ಲಿ ನಮಾಜ್ ಮಾಡಲು ಆರಂಭಿಸಿದರು. ಆದರೆ, ಅದು ನಮಾಜ್‌ನ ಸಮಯವೇ ಆಗಿರಲಿಲ್ಲ. ಇವೆಲ್ಲಾ ನೋಡಿದರೆ, ಉದ್ದೇಶ ಪೂರ್ವಕವಾಗಿಯೇ ಪ್ರತಿಭಟನೆಯನ್ನು ಚದುರಿಸಲು ಹಿಂಸೆಯನ್ನು ಸೃಷ್ಟಿಸಲಾಗಿತ್ತು ಹಾಗೂ ಹಿಂಸೆಗೆ ಮುಸ್ಲಿಮರೇ ಕಾರಣ ಎಂಬ ರೀತಿ ಬಿಂಬಿಸಲು ಪ್ರಯತ್ನವನ್ನೂ ನಡೆಸಲಾಗಿತ್ತು,” ಎನ್ನುತ್ತಾರೆ ಸದಾಫ್ ಜಾಫರ್.
ಪೊಲೀಸರು ಕೂಡ ಗಲಭೆ ಹುಟ್ಟುಹಾಕುತ್ತಿದ್ದ ವ್ಯಕ್ತಿಗಳನ್ನು ಬಂಧೀಸದೇ, ಅಮಾಯಕರ ಮೇಲೆ ಲಾಠೀ ಪ್ರಹಾರ ನಡೆಸಿದ್ದರು. ಈ ಕುರಿತಾಗಿ ಪೊಲೀಸರ ಬಳಿ ಸದಾಫ್ ಹೇಳಿದರೂ, ಅವರ ಮಾತಿಗೆ ಪೊಲೀಸರು ಸೊಪ್ಪು ಹಾಕಲಿಲ್ಲ. ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರಲ್ಲಿ ಕೆಲವರು, ನಕಲಿ ಪ್ರತಿಭಟನಾಕಾರರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರೂ, ಅವರ ವಿರುದ್ದ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿರಲಿಲ್ಲ. ಬದಲಾಗಿ, ಅಮಾಯಕರನ್ನು ಹಿಡಿದು ಬಂದು ನಮಗೆ ಒಪ್ಪಿಸುತ್ತಿದ್ದೀರಿ ಎಂದು ಆರೋಪಿಸಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠೀ ಚಾರ್ಜ್ ನಡೆಸಿದ ಅಮಾನವೀಯ ಘಟನೆಯೂ ಅಂದು ನಡೆದಿತ್ತು. ಇಲ್ಲಿ ಸ್ಪಷ್ಟವಾಗುವುದೇನೆಂದರೆ, ಗಲಭೆಯನ್ನು ಸೃಷ್ಟಿಸುವ ಷಡ್ಯಂತ್ರದಲ್ಲಿ ಪೊಲೀಸರ ಪಾತ್ರ ಕೂಡಾ ಮಹತ್ವದ್ದಾಗಿತ್ತು.
ಅದೇ ದಿನ, ಹಲವು ಹಿಂದೂ ಮೂಲಭೂತವಾದಿಗಳನ್ನು ಹಿಂಸೆ ಸೃಷ್ಟಿಸಿದ ಕಾರಣಕ್ಕಾಗಿ ಬಂಧಿಸಲಾಗಿತ್ತು ಆದರೆ, ಅವರ ವಿರುದ್ದ FIR ಕೂಡಾ ದಾಖಲಿಸದೇ, ಮರುದಿನವೇ ಬಿಡುಗಡೆ ಮಾಡಲಾಗಿತ್ತು ಎಂದು ಎಂದು ಉತ್ತರ ಪ್ರದೇಶ ಪೊಲೀಸ್‌ನ ನಿವೃತ್ತ ಪೊಲೀಸ್ ಮಹಾ ನಿರ್ದೇಶಕರಾದ ಎಸ್ ಆರ್ ದರಾಪುರಿ ಹೇಳಿದ್ದಾರೆ.
ಇವನ್ನೆಲ್ಲಾ ನೋಡುತ್ತಿದ್ದರೆ, CAA ವಿರುದ್ದದ ಪ್ರತಿಭಟನೆಗಳನ್ನು ಹತ್ತಿಕ್ಕಲು ಹಿಂಸೆಯನ್ನು ಸೃಷ್ಟಿಸಿ, ಪ್ರತಿಭಟನಾಕಾರರನ್ನು ಹಿಂಸೆಗೆ ಕಾರಣಕರ್ತರನ್ನಾಗಿಸುವ ದುರುದ್ದೇಶವನ್ನು ಉತ್ತರ ಪ್ರದೇಶ ಸರ್ಕಾರ ಹೊಂದಿತ್ತು ಎಂಬುದು ಸ್ಪಷ್ಟವಾಗುತ್ತದೆ. ಇನ್ನು ಪೊಲೀಸ್ ಇಲಾಖೆ ಕೂಡಾ ಬಿಜೆಪಿ ಸರ್ಕಾರದ ಅಜೆಂಡಾವನ್ನು ಜಾರಿಗೆ ತರಲು ಬೆಂಬಲ ನೀಡುತ್ತಿದೆ. ಪ್ರತಿಭಟನಾಕಾರರ ಮನವೊಲಿಸಲು ಸಾಧ್ಯವಾಗದಿರುವ ಸಂಧರ್ಭದಲ್ಲಿ ಇಂತಹ ಹೇಯ ಕೃತ್ಯಗಳಿಂದ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸಿರುವುದು ನಿಜಕ್ಕೂ ನಾಚಿಕೆಗೇಡಿನ ವಿಚಾರ.