ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ, ದೇಶಾದ್ಯಂತ ಪ್ರತಿಭಟನೆಗಳು ಮತ್ತು ಹಿಂಸಾಚಾರಗಳು ನಡೆದ ನಂತರ ವಿವಾದಿತ ಪೌರತ್ವ ತಿದ್ದುಪಡಿ ಕಾನೂನಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ. ಆಡಳಿತಾರೂಢ ಬಿಜೆಪಿ ಮನೆ ಮನೆಗೆ ಹೋಗಿ ಸಿಎಎ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದು, ಇದು ಯಾವುದೇ ಸಮುದಾಯದ ವಿರುದ್ಧದ ಕಾನೂನಲ್ಲ ಎಂಬುದನ್ನು ಮನವರಿಕೆ ಮಾಡುವ ಪ್ರಯತ್ನ ನಡೆಸುತ್ತಿದೆ.
ಅಲ್ಲದೇ, ದೇಶಾದ್ಯಂತ ಪ್ರಮುಖ ನಗರಗಳು ಮತ್ತು ಪಟ್ಟಣಗಳಲ್ಲಿ ಸಿಎಎ ಪರವಾದ ಸಮಾವೇಶಗಳನ್ನು ನಡೆಸುತ್ತಿದೆ. ಆದರೆ, ಇದರಲ್ಲಿ ಪಾಲ್ಗೊಳ್ಳುವ ಬಹುತೇಕ ಬಿಜೆಪಿ ನಾಯಕರು ಸಿಎಎ ವಿಚಾರವನ್ನು ಮನವರಿಕೆ ಮಾಡಿಕೊಡುವುದನ್ನು ಬಿಟ್ಟು ಮುಸ್ಲಿಂರನ್ನು ಅವಹೇಳನ ಮಾಡುವಲ್ಲಿ ಕಾಲ ಹರಣ ಮಾಡುತ್ತಿದ್ದಾರೆ. ಅಷ್ಟೇ ಏಕೆ, ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ತಾವು ಪಾಲ್ಗೊಳ್ಳುತ್ತಿರುವುದು ಎಂತಹ ಸಮಾರಂಭ ಎಂಬುದನ್ನೇ ಮರೆತು ಅಲ್ಲಿಯೂ ಸಿಎಎ ಜಪ ಮಾಡುತ್ತಿದ್ದಾರೆ. ಮೊನ್ನೆ ರಾಮಕೃಷ್ಣ ಮಿಷನ್ ಕಾರ್ಯಕ್ರಮದಲ್ಲೂ ಮೋದಿ ಸಿಎಎ ಬಗ್ಗೆ ಪ್ರಸ್ತಾಪ ಮಾಡಿ, ಇದನ್ನು ವಿರೋಧಿಸುತ್ತಿರುವವರ ವಿರುದ್ಧ ಹರಿಹಾಯ್ದು ತೀವ್ರ ಟೀಕೆಗೂ ಗುರಿಯಾದರು.
ಬಿಜೆಪಿ ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಿಎಎ ವಿರುದ್ಧದ ಧ್ವನಿಗಳನ್ನು ಅಡಗಿಸುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದು ಕರ್ನಾಟಕವಿರಲಿ, ಉತ್ತರಪ್ರದೇಶವಿರಲಿ ಹೀಗೆ ಹಲವಾರು ರಾಜ್ಯಗಳಲ್ಲಿ ಒತ್ತಾಯಪೂರ್ವಕವಾಗಿ ಸಿಎಎಯನ್ನು ಜಾರಿಗೊಳಿಸಲು ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದೆ.
ಆದರೆ, ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸಿಎಎ ಜಾರಿಗೊಳಿಸುವುದಿರಲಿ ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದೇ ಬಿಜೆಪಿಗೆ ಕಷ್ಟವಾಗುತ್ತಿದೆ. ಏನೇ ಆಗಲಿ ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಮತ್ತು ಮುಸ್ಲಿಂರನ್ನು ತುಚ್ಛವಾಗಿ ಕಾಣುವಂತಹ ಈ ಜನವಿರೋಧಿ ಕಾನೂನನ್ನು ತಮ್ಮ ರಾಜ್ಯಗಳಲ್ಲಿ ಜಾರಿಗೆ ಅವಕಾಶವನ್ನೇ ನೀಡುವುದಿಲ್ಲ ಎಂದು ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು ಕಠೋರ ನಿಲುವನ್ನು ತೆಗೆದುಕೊಂಡಿವೆ.

ಕೇರಳದಲ್ಲಿ ಮನೆಗಳ ಮುಂದೆ ಸಿಎಎ ಪರವಾದ ನಿಲುವು ಇರುವವರಿಗೆ ನಮ್ಮ ಮನೆಗೆ ಪ್ರವೇಶವಿಲ್ಲ ಎಂಬ ಬೋರ್ಡುಗಳನ್ನೇ ಹಾಕುವ ಮೂಲಕ ಸಿಎಎ ವಿರುದ್ಧ ದೊಡ್ಡ ಅಭಿಯಾನವೇ ನಡೆಯುತ್ತಿದೆ. ಮಹಾರಾಷ್ಟ್ರ ಸರ್ಕಾರವೂ ಸಹ ಸಿಎಎ ಜಾರಿ ಸಾಧ್ಯವಿಲ್ಲ ಎಂದು ಹೇಳಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಸಿಎಎ ವಿರುದ್ಧದ ಪ್ರತಿಭಟನೆಗಳಿಗೆ ಪೋಷಕ ಸ್ಥಾನದಲ್ಲಿ ನಿಂತು ಬೆಂಬಲ ನೀಡುತ್ತಿದೆ.
ವಿದ್ಯಾರ್ಥಿಗಳು, ನಾಗರಿಕರು ಆಯೋಜಿಸುತ್ತಿರುವ ಪ್ರತಿಭಟನೆಗಳಲ್ಲಿ ಸ್ವತಃ ಮಮತಾ ಬ್ಯಾನರ್ಜಿಯವರೇ ನಿಂತು ಭಾಷಣೆ ಮಾಡುತ್ತಿದ್ದಾರೆ. ಇದು ಇಡೀ ಪಶ್ಚಿಮ ಬಂಗಾಳವೇ ಪ್ರತಿಭಟನೆ ಮಾಡಲು ಪ್ರೇರಣೆಯಾದಂತಾಗಿದೆ. ಈ ಕಾರಣದಿದಂದಲೇ ಬಿಜೆಪಿ ಅಲ್ಲಿ ಸಿಎಎ ಪರವಾದ ಧ್ವನಿ ಎತ್ತಲು ಸಾಧ್ಯವಾಗುತ್ತಿಲ್ಲ.
ಆದಾಗ್ಯೂ, ಅಲ್ಲಿ ಮನೆ ಮನೆಗೆ ಹೋಗಿ, ಸಮಾವೇಶ-ರ್ಯಾಲಿಗಳನ್ನು ನಡೆಸುವ ಮೂಲಕ ಸಿಎಎ ಬಗ್ಗೆ ಮನವರಿಕೆ ಮಾಡಿಕೊಡಲೇ ಬೇಕಾದ ಅನಿವಾರ್ಯತೆ ಸ್ಥಳೀಯ ಮುಖಂಡರಲ್ಲಿದೆ. ಆದರೆ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಎಡರಂಗದ ಪಕ್ಷಗಳ ಪ್ರತಿಭಟನೆಗಳ ಮುಂದೆ ಈ ಜಾಗೃತಿ ಅಭಿಯಾನಕ್ಕೆ ಮಂಕು ಕವಿದಿದೆ. ಆದರೆ, ಬಿಜೆಪಿಯ ಹೈಕಮಾಂಡ್ ಒತ್ತಡ ಹೇರುತ್ತಿರುವುದರಿಂದ ಸ್ಥಳೀಯ ಬಿಜೆಪಿ ನಾಯಕರು ವಿಫಲ ಯತ್ನ ಮಾಡುತ್ತಿದ್ದಾರೆ.
ಹೀಗೆ, ಭಾನುವಾರ ಬಿಜೆಪಿ ಒಂದರ ಹಿಂದೆ ಒಂದರಂತೆ ಎರಡು ರ್ಯಾಲಿಗಳನ್ನು ನಡೆಸಿದ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ರಾಜ್ಯಾದ್ಯಂತ 144 ನೇ ಸೆಕ್ಷನ್ ಜಾರಿಗೊಳಿಸುವ ಮೂಲಕ ನಿಷೇಧಾಜ್ಞೆಯನ್ನು ತಂದಿದ್ದಾರೆ. ಈ ಮೂಲಕ ಬಿಜೆಪಿ ರ್ಯಾಲಿಯನ್ನು ತಡೆಯುವ ಧೈರ್ಯ ಮಾಡಿದ್ದಾರೆ.

ನಿಷೇಧಾಜ್ಞೆ ಉಲ್ಲಂಘಿಸಿ ರ್ಯಾಲಿ ನಡೆಸಿದ ಆರೋಪದಲ್ಲಿ ಬಿಜೆಪಿ ನಾಯಕರ ವಿರುದ್ಧ ಕೇಸುಗಳನ್ನೂ ಹಾಕಿಸಿರುವ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ಸೇಡನ್ನು ತೀರಿಸಿಕೊಳ್ಳಲಾರಂಭಿಸಿದ್ದಾರೆ.
ನಿಷೇಧಾಜ್ಞೆ ಉಲ್ಲಂಘಿಸಿ ರ್ಯಾಲಿ ಮಾಡುತ್ತಿದ್ದ ಬಿಜೆಪಿ ಮುಖಂಡರಾದ ಸಯಾಂತನ್ ಬಸು ಮತ್ತು ಮಾಲತಿ ರಾವಾ ರೇ ನೇತೃತ್ವದ ತಂಡವನ್ನು ತಡೆದು ನಿಲ್ಲಿಸಿರುವ ಪೊಲೀಸರು ಅವರು ವಿರುದ್ಧ ಮೊಕದ್ದಮೆಗಳನ್ನು ದಾಖಲು ಮಾಡಿದ್ದಾರೆ.
ಇಡೀ ದೇಶದಲ್ಲಿ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು ಕೇಂದ್ರ ಸರ್ಕಾರದ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಲು ಮೀನಾಮೇಷ ಎಣಿಸುತ್ತಿವೆ. ನಾಮಕೇವಾಸ್ಥೆಗೆಂಬಂತೆ ತಮ್ಮ ರಾಜ್ಯಗಳಲ್ಲಿ ಸಿಎಎಯನ್ನು ಜಾರಿಗೆ ತರಲು ಅವಕಾಶ ನೀಡುವುದಿಲ್ಲ ಎಂದು ಹೇಳಿಕೆಗಳನ್ನು ನೀಡುತ್ತಿವೆ. ಆದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಂತಹ ಗಟ್ಟಿ ನಿರ್ಣಯಗಳನ್ನು ಕೈಗೊಳ್ಳುವಷ್ಟು ಧೈರ್ಯವನ್ನು ಮಾತ್ರ ತೋರುತ್ತಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ಗಟ್ಟಿಯಾಗಿ ನಿಂತುಕೊಂಡರೆ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಬಹುದು ಎಂಬ ಭೀತಿ ಅವರನ್ನು ಕಾಡುತ್ತಿದೆ. ಈ ಕಾರಣದಿಂದಲೇ ರಾಜ್ಯ ಸರ್ಕಾರಗಳು ಹಿಂದೆ ಮುಂದೆ ನೋಡುವಂತಾಗಿದೆ. ಏಕೆಂದರೆ, ಅಸಹಕಾರ ಧೋರಣೆ ತಳೆಯುವ ರಾಜ್ಯ ಸರ್ಕಾರಗಳನ್ನು ವಜಾ ಮಾಡುವ ಅಸ್ತ್ರವೊಂದು ಕೇಂದ್ರ ಸರ್ಕಾರದ ಕೈಲಿರುತ್ತದೆ. ಅಲ್ಲದೇ, ರಾಜ್ಯದ ಪರಿಸ್ಥಿತಿಗಳ ಬಗ್ಗೆ ವರದಿ ನೀಡಲೆಂದೇ ಕೇಂದ್ರ ಸರ್ಕಾರ ಅಧಿಕಾರದಲ್ಲಿರುವ ಪಕ್ಷವೊಂದರ ಹಿರಿಯ ಕಾರ್ಯಕರ್ತರು ರಾಜ್ಯಪಾಲರಾಗಿರುತ್ತಾರೆ. ಒಂದು ವೇಳೆ ಇಂತಹ ಸಾಂವಿಧಾನಿಕ ಬಿಕ್ಕಟ್ಟು ಎದುರಾದಾಗ ರಾಜ್ಯಪಾಲರು ರಾಜ್ಯ ಸರ್ಕಾರವೊಂದನ್ನು ವಜಾ ಮಾಡಲು ಬೇಕಾದ ರೀತಿಯಲ್ಲಿ ವರದಿಯನ್ನೂ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುತ್ತಾರೆ. ಇಂತಹ ವರದಿಗಳ ಆಧಾರದಲ್ಲಿಯೇ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳನ್ನು ವಜಾ ಮಾಡಿದ ನಿದರ್ಶನಗಳು ಸಾಕಷ್ಟಿವೆ.