ನಿರೀಕ್ಷೆಯಂತೆಯೇ ಸುಪ್ರೀಂಕೋರ್ಟ್ ವಿವಾದಿತ ಸಿಎಎ ಜಾರಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಆದರೆ, ಈ ಬಗ್ಗೆ ಸಂಪೂರ್ಣವಾದ ವಿವರಗಳನ್ನು ನಾಲ್ಕು ವಾರಗಳಲ್ಲಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಲ್ಲಿ ಇಂಡಿಯನ್ ಮುಸ್ಲಿಂ ಲೀಗ್ (ಜೆಯುಎಂಎಲ್) ಮತ್ತು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಸೇರಿದಂತೆ 140 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು.
ಈ ಅರ್ಜಿಗಳ ಆರಂಭಿಕ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ, ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ರಾಜ್ಯಗಳ ಹೈಕೋರ್ಟ್ ಗಳು ಸೇರಿದಂತೆ ಸರ್ಕಾರಕ್ಕೆ ಹಲವು ನಿರ್ದೇಶನಗಳನ್ನು ನೀಡಿರುವುದು ಗಮನಾರ್ಹವೆನಿಸಿದೆ.
ಈ ಸಿಎಎ ಬಗ್ಗೆ ಸಲ್ಲಿಕೆಯಾಗಿರುವ ಅಗಾಧ ಪ್ರಮಾಣದ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವು ಏನೆಂಬುದನ್ನು ತಿಳಿದುಕೊಳ್ಳದೇ ವಿಚಾರಣೆಯನ್ನು ಮುಂದುವರಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಈ ವಿಚಾರಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ನಾಲ್ಕು ವಾರಗಳ ಕಾಲಾವಕಾಶವನ್ನು ಕೇಂದ್ರ ಸರ್ಕಾರಕ್ಕೆ ನೀಡಿ ನೊಟೀಸ್ ಜಾರಿಗೊಳಿಸಿದೆ.
ಸಿಎಎ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವುದು ಮತ್ತು ಹಲವಾರು ಸಂಘಸಂಸ್ಥೆಗಳು, ವ್ಯಕ್ತಿಗಳು ಇದನ್ನು ಪ್ರಶ್ನಿಸಿ ನ್ಯಾಯಾಲಯದ ಕಟಕಟೆ ಏರುತ್ತಿರುವುದನ್ನು ಗಮನಿಸಿರುವ ಸುಪ್ರೀಂಕೋರ್ಟ್, ಈ ಕಾನೂನಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ವ್ಯಾಖ್ಯಾನಗಳನ್ನಾಗಲೀ ಅಥವಾ ತೀರ್ಪುಗಳನ್ನಾಗಲೀ ನೀಡಬಾರದು ಎಂದು ಎಲ್ಲಾ ರಾಜ್ಯಗಳ ಹೈಕೋರ್ಟುಗಳಿಗೆ ಆದೇಶ ನೀಡಿದೆ. ಈ ಮೂಲಕ ಸಿಎಎಗೆ ಸಂಬಂಧಿಸಿದ ತಂಟೆ ತಕರಾರುಗಳು ಏನೇ ಇದ್ದರೂ ಸುಪ್ರೀಂಕೋರ್ಟಿನಲ್ಲಿಯೇ ಇತ್ಯರ್ಥವಾಗಬೇಕೆಂಬುದನ್ನು ಸೂಚ್ಯವಾಗಿ ತಿಳಿಸಿದೆ.
ಇನ್ನೊಂದು ಮಹತ್ವದ ಅಂಶವೆಂದರೆ ಸಿಎಎಗೆ ಸಂಬಂಧಿಸಿದ ವಿಚಾರಗಳನ್ನು ವಿಚಾರಣೆ ನಡೆಸಲು ಐವರು ನ್ಯಾಯಾಧೀಶರ ಪೀಠವನ್ನು ರಚಿಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ತಡೆಯಾಜ್ಞೆ ನೀಡುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ತಿಳಿಸಿದೆ.
ಅಸ್ಸಾಂ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಸಿಎಎಗೆ ಸಂಬಂಧಿಸಿದ ವಿಚಾರ ಇಡೀ ದೇಶಕ್ಕಿಂತ ಭಿನ್ನವಾಗಿದೆ. ಈ ಹಿನ್ನೆಲೆಯಲ್ಲಿ ಈ ಎರಡೂ ರಾಜ್ಯಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಪ್ರತ್ಯೇಕವಾಗಿ ನಡೆಸಲಾಗುತ್ತದೆ. ಇನ್ನು ಯಾವುದೇ ನಿಯಮಾವಳಿಗಳನ್ನು ರೂಪಿಸದೇ ಸಿಎಎಯನ್ನು ಜಾರಿಗೆ ತರಲು ಮುಂದಾಗಿರುವ ಉತ್ತರ ಪ್ರದೇಶಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನೂ ಪ್ರತ್ಯೇಕವಾಗಿ ನಡೆಸಲಾಗುತ್ತದೆ ಎಂದು ತಿಳಿಸಿದೆ.
ಸಿಎಎಗೆ ಸಂಬಂಧಿಸಿದ 143 ಅರ್ಜಿಗಳ ಪೈಕಿ 60 ಕ್ಕೆ ಪ್ರತಿಕ್ರಿಯೆಯನ್ನು ನೀಡಲಾಗಿದೆ. ಇನ್ನುಳಿದವುಗಳಿಗೆ ಉತ್ತರ ನೀಡಲು ಕಾಲಾವಕಾಶ ಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ನ್ಯಾಯಪೀಠದ ಎದುರು ಮನವಿ ಮಾಡಿಕೊಂಡರು.
ಇದಕ್ಕೆ ಪ್ರತಿಯಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಸಿಎಎ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಬೇಕು ಮತ್ತು ರಾಷ್ಟ್ರೀಯ ಜನಸಂಖ್ಯೆ ನೋಂದಣಿ(ಎನ್ ಪಿಆರ್) ಪ್ರಕ್ರಿಯೆಯನ್ನು ಮುಂದೂಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದರು.
ಆದರೆ, ಕಪಿಲ್ ಸಿಬಲ್ ಅವರ ಮನವಿಯನ್ನು ತಿರಸ್ಕರಿಸಿದ ನ್ಯಾಯಪೀಠವು ಸಿಎಎ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ತಡೆಯಾಜ್ಞೆ ನೀಡುವುದಿಲ್ಲ ಎಂದು ತಿಳಿಸಿತು.
ಕೇಂದ್ರ ಸರ್ಕಾರವು ಅಫ್ಘಾನಿಸ್ಥಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದಿರುವ ಕೇವಲ ಹಿಂದೂ, ಪಾರ್ಸಿಗಳು, ಜೈನರು, ಸಿಖ್ಖರು, ಬೌದ್ಧರು ಮತ್ತು ಕ್ರೈಸ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಈ ಕಾನೂನನ್ನು ರೂಪಿಸಿದೆ. ಆದರೆ ಮುಸ್ಲಿಂರನ್ನು ಹೊರಗಿಟ್ಟಿದೆ. ಈ ಮೂಲಕ ಮುಸ್ಲಿಂರನ್ನು ಕಡೆಗಣಿಸಿದ್ದು, ಕೇವಲ ಕೆಲವೇ ಕೆಲವು ಧರ್ಮಗಳನ್ನು ಓಲೈಸಲು ಮತ್ತು ಮುಸ್ಲಿಂರನ್ನು ತುಚ್ಛೀಕರಿಸಲೆಂದೇ ಈ ಕಾನೂನನ್ನು ತರುತ್ತಿದೆ. ಇದು ಸಂವಿಧಾನ ವಿರೋಧಿ ನೀತಿಯಾಗಿದೆ. ಇದರಿಂದ ತಾರತಮ್ಯವಾಗಲಿದೆ ಎಂದು ಜೆಯುಎಂಎಲ್ ತನ್ನ ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದೆ.
ದೇಶಾದ್ಯಂತ ಸಿಎಎಯನ್ನು ಜಾರಿಗೆ ತರುವ ಕುರಿತಂತೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ ದಿನದಿಂದ ಕಳೆದ ಎರಡು ತಿಂಗಳಿಂದ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ. ಅಲ್ಲಲ್ಲಿ ಹಿಂಸಾಚಾರಗಳೂ ನಡೆದು ಹಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಜನಾಭಿಪ್ರಾಯವನ್ನು ಸಂಗ್ರಹಿಸದೇ ಆಯ್ದ ಧರ್ಮಗಳ ಅಕ್ರಮ ವಲಸಿಗರಿಗೆ ಅನುಕೂಲ ಮಾಡಿಕೊಡುವ ಮತ್ತು ಮುಸ್ಲಿಂರನ್ನು ಕಡೆಗಣಿಸುವ ಈ ಕಾನೂನನ್ನು ಜಾರಿಗೆ ತರಲಾಗುತ್ತಿದೆ. ಇದರಿಂದ ಮುಸ್ಲಿಂರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ನೋಡುವ ಹಾಗೂ ಧರ್ಮದ ಆಧಾರದಲ್ಲಿ ದೇಶವನ್ನು ವಿಭಜನೆ ಮಾಡಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ ಎಂಬ ಆರೋಪಗಳು ಕೇಳಿ ಬರುತ್ತಲೇ ಇವೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಯಾವುದೇ ಕಾರಣಕ್ಕೂ ಈ ಕಾನೂನನ್ನು ಜಾರಿಗೆ ತರುವ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳುವ ಮೂಲಕ ಪ್ರತಿಭಟನಾಕಾರರನ್ನು ಮತ್ತಷ್ಟು ಕೆರಳಿಸಿದೆ.
ಈ ಮಧ್ಯೆ, ಸಿಎಎಗೆ ತಡೆಯಾಜ್ಞೆ ನೀಡಲು ನಿರಾಕರಿಸಿರುವ ಸುಪ್ರೀಂಕೋರ್ಟ್, ಈ ಬಗ್ಗೆ ವಿವರಣೆ ನೀಡಲು ಕೇಂದ್ರ ಸರ್ಕಾರಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಸಿಎಎ ನೀತಿ ನಿರೂಪಣೆಗಳನ್ನು ರೂಪಿಸಿಕೊಳ್ಳಲು ಮತ್ತು ಅದನ್ನು ಜಾರಿಗೆ ತರುವ ನಿರ್ಧಾರಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಿದಂತಾಗಿದೆ.