ಕಳೆದ ವಾದ ಆಗಸ್ಟ್ 5ರಂದು ಮೇಕೆದಾಟು ಯೋಜನೆ ವಿರೋಧಿಸಿ ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಮತ್ತು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಉಪವಾಸ ಸತ್ಯಾಗ್ರಹ ಮಾಡಿದಾಗ, ಅವರ ಹೋರಾಟವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದ ರಾಜ್ಯ ಬಿಜೆಪಿ ನಾಯಕ ಸಿ ಟಿ ರವಿ, ಈ ಬಾರಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಈ ವಿವಾದದ ವಿಷಯದಲ್ಲಿ ತಾವು ‘ಭಾರತದ ಪರ’ ಎನ್ನುವ ಮೂಲಕ ಕನ್ನಡ ನಾಡು ಮತ್ತು ನುಡಿಯ ಪರ ಇಲ್ಲ ಎಂಬುದನ್ನು ಪರೋಕ್ಷವಾಗಿ ಸಾರಿ ಹೇಳಿದ್ದಾರೆ.
”ಮೇಕೆದಾಟು ಯೋಜನೆಯನ್ನು ವಾಸ್ತವಿಕ ನೆಲೆಯಲ್ಲಿ ನೋಡಬೇಕು. ರಾಜಕೀಯ ಲಾಭಕ್ಕಾಗಿ ಈ ಯೋಜನೆಯನ್ನು ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು. ಎರಡು ದೇಶಗಳ ನಡುವಿನ ನೀರಿನ ಹಂಚಿಕೆಯೇ ಸುಗಮವಾಗಿ ನಡೆಯುವಾಗ ಎರಡು ರಾಜ್ಯಗಳ ನಡುವಿನ ನೀರಿನ ಹಂಚಿಕೆ ಬಗೆಹರಿಸಿಕೊಳ್ಳುವುದು ಕಷ್ಟವಲ್ಲ. ಅದರಲ್ಲೂ ಕುಡಿಯುವ ನೀರಿನ ಹಂಚಿಕೆಯ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬಹುದು. ಹಾಗಾಗಿ ಕುಡಿಯುವ ನೀರಿನ ವಿಚಾರವನ್ನು ಎರಡು ರಾಜ್ಯಗಳ ನಡುವಿನ ಸಂಘರ್ಷವೆಂಬಂತೆ ಭಾವನಾತ್ಮಕವಾಗಿ ನೋಡಬಾರದು. ಕುಡಿಯುವ ನೀರು ಎಲ್ಲರಿಗೂ ಅವಶ್ಯಕ. ಇದರಲ್ಲಿ ರಾಜಕಾರಣ ಸಲ್ಲದು.
ಕುಡಿಯುವ ನೀರಿನ ವಿಚಾರದಲ್ಲಿ ಬೆಂಕಿ ಹಚ್ಚುವ ರಾಜಕಾರಣಕ್ಕೆ ಆಸ್ಪದವಿಲ್ಲ. ಇದನ್ನು ಸೌಹಾರ್ದವಾಗಿ ಬಗೆಹರಿಸಿಕೊಳ್ಳಬೇಕಿದೆ. ಹಾಗಾಗಿ ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರದಲ್ಲಿ ನಾನು ಭಾರತದ ಪರ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿಯಾಗಿ ತಮಿಳುನಾಡು ರಾಜ್ಯದ ಉಸ್ತುವಾರಿ ಹೊಣೆ ಹೊತ್ತಿರುವ ಸಿ ಟಿ ರವಿ ಹೇಳಿದ್ದರು.
ಒಂದು ಕಡೆ ಅವರದೇ ಬಿಜೆಪಿ ರಾಜ್ಯ ಸರ್ಕಾರ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಉದ್ದೇಶದ ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಿಯೇ ಸಿದ್ಧ. ಅಣೆಕಟ್ಟು ನಿರ್ಮಾಣ ಮಾಡಿಯೇ ಸಿದ್ಧ ಎನ್ನುತ್ತಿದೆ. ಅದರಲ್ಲೂ ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಪ್ರಕಾರ ರಾಜ್ಯದ ಪಾಲಿನ ನೀರನ್ನು ಮಾತ್ರ ಬಳಸಿಕೊಳ್ಳಲಾಗುವುದೇ ವಿನಃ ತಮಿಳುನಾಡು ಸೇರಿದಂತೆ ಇತರೆ ಪಾಲುದಾರರ ನೀರಿನ ಪಾಲನ್ನು ಬಳಸುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದಾಗ್ಯೂ ರಾಜಕೀಯ ಲಾಭದ ಉದ್ದೇಶದಿಂದ ತಮಿಳುನಾಡಿನ ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ಈ ವಿಷಯವನ್ನು ವಿವಾದವಾಗಿ ಪರಿವರ್ತಿಸಿವೆ ಮತ್ತು ಪೈಪೋಟಿಯ ಮೇಲೆ ಹೋರಾಟ, ಧರಣಿ, ಸತ್ಯಾಗ್ರಹ, ದೆಹಲಿ ಭೇಟಿಯನ್ನು ನಡೆಸುತ್ತಿವೆ.
ಇಂತಹ ಹೊತ್ತಲ್ಲಿ ರಾಜ್ಯದ ನಾಯಕರಾಗಿ, ಆಡಳಿತ ಪಕ್ಷದ ಮುಖಂಡರಾಗಿ ಸಿ ಟಿ ರವಿ ಆಡಬೇಕಾದ ಮಾತು, ಈ ವಿಷಯದಲ್ಲಿ ರಾಜಕಾರಣ ಮಾಡಬೇಡಿ ಎಂಬುದೇ ನಿಜ. ಆದರೆ, ಅದನ್ನು ನೇರವಾಗಿ ತಮ್ಮದೇ ಪಕ್ಷದ ತಮಿಳುನಾಡು ಘಟಕದ ಮುಖ್ಯಸ್ಥ ಮತ್ತು ಕರ್ನಾಟಕದಲ್ಲೇ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ತೆಗೆದುಕೊಂಡು ತಮ್ಮ ಪಕ್ಷಕ್ಕೆ ಸೇರಿರುವ ಅಣ್ಣಾಮಲೈ ಅವರಿಗೆ ಹೇಳಬೇಕಿತ್ತು. ಅದು ಬಿಟ್ಟು ಕನ್ನಡಿಗರಿಗೇ ಬುದ್ಧಿಹೇಳುವ ದಾಟಿಯಲ್ಲಿ, ನಾನು ಭಾರತದ ಪರ. ಕನ್ನಡಿಗರು, ಕರ್ನಾಟಕದ ಜನರ ಪರವಾಗಿಲ್ಲ ಎಂಬರ್ಥದ ಮಾತುಗಳ ಮೂಲಕ ಕನ್ನಡಿಗರನ್ನು ಕೆರಳಿಸಿದ್ದಾರೆ.
ಸಹಜವಾಗೇ ಸಿ ಟಿ ರವಿ ಯವರ ಈ ಹೇಳಿಕೆಗೆ ಕನ್ನಡ ಸಂಘಟನೆಗಳು, ರಾಜಕೀಯ ಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಕೇವಲ ಪ್ರತಿಪಕ್ಷ ನಾಯಕರು ಮಾತ್ರವಲ್ಲ; ಸಿ ಟಿ ರವಿ ಅವರದೇ ಪಕ್ಷದ ನಾಯಕರು ಕೂಡ ಪ್ರತಿಕ್ರಿಯಿಸಿದ್ದು, ಸಚಿವ ಸಿ ಎಸ್ ಅಶ್ವಥನಾರಾಯಣ ಅವರೇ ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಿಯೇ ಸಿದ್ಧ. ಅಣೆಕಟ್ಟು ನಿರ್ಮಾಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳುವ ಮೂಲಕ ಸಿಟಿ ರವಿ ಹೇಳಿಕೆಗೆ ಮೂರು ಕಾಸಿನ ಬೆಲೆಯಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.
ಜೊತೆಗೆ, ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಂತೂ, ಸಿ ಟಿ ರವಿಗೆ ದೇಶ ಮತ್ತು ರಾಜ್ಯದ ಪರಿಕಲ್ಪನೆಯ ಮತ್ತು ಹಿತಾಸಕ್ತಿಯ ಕುರಿತು ಪಾಠವನ್ನೇ ಮಾಡಿದ್ದಾರೆ. “ಅವರು ಭಾರತದ ಪರವಾದರೆ, ನಾವೇನು ಪಾಕಿಸ್ತಾನ, ಚೀನಾ, ಅಮೆರಿಕದಲ್ಲಿಲ್ಲ. ಭಾರತೀಯರು ಎಂಬುದಕ್ಕಿಂತ ಮೊದಲು ನಾವು ಕನ್ನಡಿಗರು. ನನ್ನ ತಾಯಿ ಕನ್ನಡವನ್ನು ಉಳಿಸಿಕೊಂಡರೆ ಮಾತ್ರ ಭಾರತೀಯ ತಾಯಿಯನ್ನು ಉಳಿಸಿಕೊಳ್ಳಲು ಸಾಧ್ಯ. ಮೊದಲು ನಾವು ನಮ್ಮ ನಾಡು-ನುಡಿಯನ್ನು ಉಳಿಸಿಕೊಳ್ಳೋಣ. ಆ ನಂತರ ಭಾರತದ ಪ್ರಶ್ನೆ. ನಮ್ಮ ನಾಡೇ ಇಲ್ಲದಿದ್ದರೆ, ದೇಶ ಹೇಗಿರಲು ಸಾಧ್ಯ? ಮೇಕೆದಾಟು ನಮ್ಮ ಹಕ್ಕು. ಆ ವಿಷಯದಲ್ಲಿ ಯಾವುದೇ ರಾಜೀ ಇಲ್ಲ” ಎನ್ನುವ ಮೂಲಕ ಕುಮಾರಸ್ವಾಮಿ ಬಿಜೆಪಿ ತಮಿಳುನಾಡು ಉಸ್ತುವಾರಿ ಸಿಟಿ ರವಿಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ, ಖಾರವಾಗಿ ಪ್ರತಿಕ್ರಿಯಿಸಿದ್ದು, “ಮೇಕೆದಾಟು ಯೋಜನೆ ನಮ್ಮ ಹಕ್ಕು, ಅದನ್ನ ತಪ್ಪಿಸಲು ತಮಿಳುನಾಡಿಗೆ ಹಕ್ಕಿಲ್ಲ. ಸಿ ಟಿ ರವಿ ಕನ್ನಡಿಗರ ಪರ ಇಲ್ಲ. ಹುಟ್ಟಿಬೆಳೆದ ರಾಜ್ಯದ ಬಗ್ಗೆ ಸಿ ಟಿ ರವಿಗೆ ಕನಿಷ್ಟ ಅಭಿಮಾನಿ, ಈ ನೆಲದ ಋಣ ಇದ್ದರೆ, ತಮ್ಮ ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಅನುಮತಿ ಕೊಡಿಸಲಿ, ಅವರದೇ ಪಕ್ಷದ 25 ಸಂಸದರು ಇದ್ದಾರೆ. ಮೇಕೆದಾಟು ಯೋಜನೆ ಮತ್ತು ರಾಜ್ಯಕ್ಕೆ ಬರಬೇಕಾದ ಜಿಎಸ್ ಟಿ ಮತ್ತು ನೆರೆ ಪರಿಹಾರದ ಬಗ್ಗೆ ಅವರಾರರೂ ಮಾತನಾಡಿಲ್ಲ. ಸಂಸತ್ತಿನಲ್ಲಿ ರಾಜ್ಯದ ಪರ ಒಂದೇ ಒಂದು ದಿನ ಸಂಸದರು ತುಟಿ ಬಿಚ್ಚಿಲ್ಲ. ಬಿಜೆಪಿಯವರಿಗೆ ನಾಚಿಕೆ ಆಗಬೇಕು. ಸಿ ಟಿ ರವಿಯಂಥವರಿಂದಲೇ ತುಂಬಿರುವ ಬಿಜೆಪಿಯಿಂದ ರಾಜ್ಯದ ಹಿತ ರಕ್ಷಣೆ ಆಗುತ್ತಾ” ಎಂದು ಪ್ರಶ್ನಿಸಿದ್ದಾರೆ.
ವಾಸ್ತವವಾಗಿ ರಾಜ್ಯದ ನಾಯಕರಾಗಿ ಸಿ ಟಿ ರವಿ ಮಾತನಾಡಬೇಕಿದ್ದುದು ರಾಜ್ಯದ ಪರ. ಅದರಲ್ಲೂ ಯಾವುದೇ ರಾಜ್ಯದ ಪಾಲಿನ ಕಾವೇರಿಯ ಒಂದು ಹನಿಯನ್ನೂ ಪಡೆಯುವುದಿಲ್ಲ. ಯಾರಿಗೂ ಯಾವ ಕೊರತೆಯೂ ಆಗುವುದಿಲ್ಲ. ಕೇವಲ ರಾಜ್ಯದ ನ್ಯಾಯಯುತ ಪಾಲನ್ನಷ್ಟೇ ಬಳಸಿಕೊಂಡು ಈ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಸ್ವತಃ ಬಿಜೆಪಿಯ ಸರ್ಕಾರವೇ ಹೇಳುತ್ತಿರುವಾಗ, ರಾಜ್ಯದ ಪರ ಕನಿಷ್ಟ ಕಾಳಜಿ ಇದ್ದಿದ್ದರೆ ಸಿ ಟಿ ರವಿ ರಾಜ್ಯದ ಪರ ಕೇಂದ್ರದ ಮಟ್ಟದಲ್ಲಿ ಲಾಬಿ ಮಾಡಬೇಕಿತ್ತು. ವಕಾಲತು ವಹಿಸಬೇಕಿತ್ತು. ಆದರೆ, ಅವರು ಇದೀಗ ತಮಿಳುನಾಡಿನಲ್ಲಿ ತಮ್ಮ ಪಕ್ಷವನ್ನು ಬಲವರ್ಧನೆಗೊಳಿಸುವ ಉದ್ದೇಶದಿಂದ ಕರ್ನಾಟಕದ ಹಿತ ಬಲಿಕೊಡಲು ಹೊರಟಿದ್ದಾರೆ ಎಂಬ ಮಾತುಗಳು ಕನ್ನಡ ಸಂಘಟನೆಗಳಿಂದ ಕೇಳಿಬಂದಿದೆ.
ಹಾಗೆ ನೋಡಿದರೆ ಕನ್ನಡ, ಕನ್ನಡಿಗರು ಮತ್ತು ನಾಡು-ನುಡಿಯ ವಿಷಯದಲ್ಲಿ ಸಿ ಟಿ ರವಿ ಹೀಗೆ ಉದ್ಧಟತನದ ಹೇಳಿಕೆಗಳನ್ನು ಕೊಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ಬಾರಿ ಇಂತಹ ಕನ್ನಡಿಗರನ್ನು ಕೆರಳಿಸುವ, ಕನ್ನಡ ನಾಡುನುಡಿಗೆ ಅವಮಾನಿಸುವ ಹೇಳಿಕೆಗಳನ್ನು ನೀಡಿದ್ದರು. ಸ್ವತಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದಾಗಲೇ ಕನ್ನಡ ಧ್ವಜದ ವಿಷಯದಲ್ಲಿ ಅವಮಾನಕಾರಿ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದರು. ರಾಜ್ಯಕ್ಕೆ ಪ್ರತ್ಯೇಕ ಕನ್ನಡ ಧ್ವಜ ಬೇಕು ಎಂಬ ಕೂಗಿನ ಹಿನ್ನೆಲೆಯಲ್ಲಿ ನಾಡ ಧ್ವಜ ವಿನ್ಯಾಸಕ್ಕೆ ಹಿಂದಿನ ಸರ್ಕಾರ ಸಮಿತಿಯೊಂದನ್ನು ನೇಮಕ ಮಾಡಿತ್ತು. ಆ ಬಗ್ಗೆ 2019ರ ಆಗಸ್ಟ್ ನಲ್ಲಿ ಪ್ರತಿಕ್ರಿಯಿಸಿದ್ದ ಅಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಸಿ ಟಿ ರವಿ, “ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕಿಲ್ಲ” ಎಂದು ಹೇಳುವ ಮೂಲಕ ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು ಮತ್ತು ತಮ್ಮ ನಿಷ್ಠೆ ಎಂದೂ ಕನ್ನಡ ನಾಡು-ನುಡಿಯ ಪರವಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದರು.
ಅದಾಗ ಬಳಿಕ, ಶ್ರೀಲಂಕಾ ಪಾಸ್ ಪೋರ್ಟ್ ನಲ್ಲಿ ಇಂಗ್ಲಿಷ್, ಹಿಂದಿ, ತಮಿಳು ಸೇರಿದಂತೆ ಐದಾರು ಭಾಷೆಯಲ್ಲಿ ಮಾಹಿತಿ ಇರುವಾಗ, ಕನ್ನಡ ಭಾಷೆಯಲ್ಲಿ ಯಾಕೆ ಮಾಹಿತಿ ಇಲ್ಲ ಎಂದು ಕನ್ನಡಪರ ಹೋರಾಟಗಾರರು ಪ್ರಶ್ನಿಸಿದಾಗಲೂ, “ಲೋಕಲ್ ಭಾಷೆಯಲ್ಲಿ ಪ್ರಿಂಟ್ ಮಾಡಲು ಇದೇನು ರೇಷನ್ ಕಾರ್ಡಲ್ಲ” ಎನ್ನುವ ಮೂಲಕ ಕನ್ನಡ ಭಾಷೆಯನ್ನು ಅವಮಾನಿಸಿದ್ದರು.
ಹೀಗೆ ಸದಾ ನಾಡು-ನುಡಿಯ ವಿಷಯದಲ್ಲಿ ಅವಮಾನಕರ ನಡವಳಿಕೆಗೇ ಹೆಸರಾಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಇದೀಗ ಮೇಕೆದಾಟು ವಿಷಯದಲ್ಲಿ ಕೂಡ ತಾವು ಕರ್ನಾಟಕ, ಕನ್ನಡಿಗರ ಪರ ಇಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ಧಾರೆ. ತಮಿಳುನಾಡು ಮತ್ತು ಅಲ್ಲಿನ ತಮ್ಮ ಪಕ್ಷದ ಮೇಕೆದಾಟು ವಿರೋಧಿ ಹೋರಾಟದ ಪರ ಬೆಂಬಲ ವ್ಯಕ್ತಪಡಿಸಿದ್ದಾರೆ. ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಧರ್ಮದ ಆಧಾರದ ಮೇಲೆ ದೇಶ ಕಟ್ಟುವ ಬಿಜೆಪಿಯ ಅಜೆಂಡಾವನ್ನು ಸಿಟಿ ರವಿಯ ಇಂತಹ ಹೇಳಿಕೆಗಳು ಸಾರಿ ಹೇಳುತ್ತಿವೆ. ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಅನುಸರಿಸುತ್ತಿರುವ ಕನ್ನಡ ಮತ್ತು ಕರ್ನಾಟಕ ವಿರೋಧಿ ಧೋರಣೆಗೂ ಅದರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯ ಈ ಮಾತುಗಳು ನಿದರ್ಶನ.