
ಉಡುಪಿ: ಮುಡಾ ಹಗರಣ ದೇಶದೆಲ್ಲೆಡೆ ಚರ್ಚೆಯಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿರುವ ಕಾರಣ ಅವರು ತಕ್ಷಣ ರಾಜೀನಾಮೆ ನೀಡಬೇಕೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ, ಶೇ40 ಸರ್ಕಾರ, ಪೇಸಿಎಂ ಮೊದಲಾದ ಅಭಿಯಾನಗಳನ್ನು ಕಾಂಗ್ರೆಸ್ ನವರು ಮಾಡಿದ್ದಾರೆ.ಈಗ ಮುಡಾ ಹಗರಣದ ಬಗ್ಗೆ ಸಿದ್ದರಾಮಯ್ಯ ಅವರು ಮೌನವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದಿದ್ದಾರೆ.ಸಿದ್ದರಾಮಯ್ಯ ಅವರ ಮೂಗಿನ ಕೆಳಗೆ ಈ ಹಗರಣ ನಡೆದಿದ್ದು ಅವರು ಅಧಿಕಾರ ತ್ಯಾಗ ಮಾಡಲೇಬೇಕು ಎಂದು ಒತ್ತಾಯಿಸಿದರು.ಈ ಪ್ರಕರಣದ ತನಿಖೆಯನ್ನು ಕೂಡಲೇ ಸಿಬಿಐಗೆ ಒಪ್ಪಿಸಬೇಕು ಎಂದೂ ಆಗ್ರಹಿಸಿದರು.ಗ್ಯಾರೆಂಟಿಗಳಿಗೆ ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಿರಿಸಿದ ಹಣವನ್ನು ಬಳಕೆ ಮಾಡಲಾಗಿದೆ. ಆ ಹಣವನ್ನು ಕೂಡಲೇ ಸಂಬಂಧಿತ ಇಲಾಖೆಗೆ ಮರಳಿಸಬೇಕು ಎಂದು ಹೇಳಿದರು.