BJP ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಕೂಡಲೇ ವಿಜಯೇಂದ್ರ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಬಿ.ಎಸ್ ಯಡಿಯೂರಪ್ಪ ಪುತ್ರ ಅನ್ನೋ ಕಾರಣಕ್ಕೆ ವಿಜಯೇಂದ್ರಗೆ ಮಣೆ ಹಾಕಿರುವುದು ಸೂಕ್ತ ಅನ್ನೋ ರೀತಿಯಲ್ಲಿ ಬಿಜೆಪಿ ಒಳಗೇ ನಾಯಕರು ಮಾತನಾಡಿಕೊಳ್ತಿದ್ದಾರೆ. ಬಿ.ವೈ ವಿಜಯೇಂದ್ರ ಅಧ್ಯಕ್ಷರಾಗಿ ನಿಯೋಜನೆಗೊಂಡರೂ ಸಾಕಷ್ಟು ನಾಯಕರು ಒಂದು ಶುಭಾಶಯ ತಿಳಿಸುವ ಗೋಜಿಗೆ ಹೊಗಿಲ್ಲ. ಮೌನಕ್ಕೆ ಶರಣಾಗಿದ್ದಾರೆ. ಅದರಲ್ಲೂ ಕುಟುಂಬ ರಾಜಕಾರಣದ ಬಗ್ಗೆ ಚರ್ಚೆ ಮಾಡುತ್ತಿದ್ದ ಸಿ.ಟಿ ರವಿ ಅವರನ್ನು ಪ್ರಶ್ನೆ ಮಾಡಿದಾಗ, ಈಗೇನಾದ್ರೂ ಮಾತಾಡಿದ್ರೆ ಸಮರ್ಪಕ ಅಲ್ಲ, ನಿಮಗೆ ಕಾಡುತ್ತಿರೋ ಪ್ರಶ್ನೆ ನನಗೂ ಕಾಡುತ್ತಿದೆ. ಈ ಸಂದರ್ಭದಲ್ಲಿ ಹೆಚ್ಚು ಮಾತಾಡಲಾರೆ ಎಂದು ಬಿಜೆಪಿ ನಾಯಕ ಸಿ.ಟಿ ರವಿ ಉತ್ತರಿಸಿದ್ದರು.
ಬಿಜೆಪಿಯಲ್ಲಿ ಹಲ್ಲು ಕಡಿಯುತ್ತಿದ್ದಾರೆ ಲೀಡರ್ಸ್..
ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಬಣ ಹಾಗು ಬಿ.ಎಲ್ ಸಂತೋಷ್ ಅವರ ಎರಡು ತಂಡಗಳಿವೆ. ಬಸವನಗೌಡ ಪಾಟೀಲ್ ಯತ್ನಾಳ್, ಸಿ.ಟಿ ರವಿ, ವಿ. ಸೋಮಣ್ಣ ಸೇರಿದಂತೆ ಸಾಕಷ್ಟು ನಾಯಕರು ಮುನಿಸಿಕೊಂಡಿದ್ದಾರೆ. ಇದೀಗ ಎಲ್ಲಾ ನಾಯಕರನ್ನು ಭೇಟಿ ಮಾಡುವ ಮೂಲಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ನಿನ್ನೆ ರಾತ್ರಿ ಬೆಂಗಳೂರಿನ ಸಿ.ಟಿ ರವಿ ನಿವಾಸಕ್ಕೆ ಭೇಟಿ ನೀಡಿದ್ದ ಬಿ.ವೈ ವಿಜಯೇಂದ್ರ, ಮುಂದಿನ ದಿನಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಸಮಾಧಾನ ಇದ್ದರೂ ಬಹಿರಂಗ ಮಾಡದೆ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನ ಮಾಡಿದ್ದಾರೆ.
ಭಿನ್ನಮತ ತಣಿಸ್ತಾನಾ ಕುರುಡುಮಲೆ ವಿನಾಯಕ..?
ಬಸನಗೌಡ ಪಾಟೀಲ್ ಯತ್ನಾಳ್ ಹಾಗು ವಿ ಸೋಮಣ್ಣ ಅವರನ್ನು ಬಿ.ವೈ ವಿಜಯೇಂದ್ರ ಭೇಟಿ ಮಾಡಲಿದ್ದಾರೆ ಎನ್ನಲಾಗ್ತಿದೆ. ಇಂದು ಬೆಳಗ್ಗೆ ಕೋಲಾರದ ಕುರುಡುಮಲೆಗೆ ಭೇಟಿ ನೀಡಲಿದ್ದು, ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಿದ್ದಾರೆ. ದೇಗುಲಕ್ಕೆ ಭೇಟಿ ನೀಡಿದ ನಂತರ ಮಲ್ಲಸಂದ್ರ ಗ್ರಾಮದ ಬೂತ್ ನಂ 105 ರ ಅಧ್ಯಕ್ಷರ ಮನೆಗೆ ಭೇಟಿ, ಕಾರ್ಯಕರ್ತರ ಭೇಟಿ ಮಾಡಲಿದ್ದಾರೆ. ಬಿವೈ ವಿಜಯೇಂದ್ರಗೆ ಸಂಸದ ಮುನಿಸ್ವಾಮಿ ಹಾಗು ಜಿಲ್ಲಾ ನಾಯಕರು ಸಾಥ್ ಕೊಡಲಿದ್ದಾರೆ. ನವೆಂಬರ್ 15 ರಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡುವ ಹಿನ್ನಲೆಯಲ್ಲಿ ಇಂದು ಕೋಲಾರದ ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುರುಡುಮಲೆ ಪುಣ್ಯಕ್ಷೇತ್ರದಿಂದ ಯಾವುದೇ ಕೆಲಸ ಆರಂಭ ಮಾಡಿದರೂ ಒಳ್ಳೇದಾಗುತ್ತೆ ಅನ್ನೋದು ರಾಜಕಾರಣಿಗಳ ನಂಬಿಕೆ.
ಲೋಕಸಭಾ ಚುನಾವಣೆಗಾಗಿಯೇ ‘ವಿಜಯ’ ಶಿಕಾರಿ..
ಶಿಕಾರಿಪುರ ಕ್ಷೇತ್ರದ ಶಾಸಕ ಆಗಿರುವ ವಿಜಯೇಂದ್ರ ಲೋಕಸಭಾ ಚುನಾವಣೆಯಲ್ಲಿ ಕೇಸರಿ ಕೋಟೆ ನಿರ್ಮಿಸಲು ವಿಜಯೇಂದ್ರ ಅವರನ್ನು ನೇಮಕ ಮಾಡಲಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೇ ಮಾತನ್ನು ಹೈಕಮಾಂಡ್ ನಾಯಕರು ಅಸಮಾಧಾನಿತ ನಾಯಕರಿಗೆ ಮುಟ್ಟಿಸಲಿದ್ದು, ಆ ಬಳಿಕ ಅಸಮಾಧಾನ ಬಗೆಹರಿಯುವ ಎಲ್ಲಾ ಸಾಧ್ಯತೆಗಳೂ ಇವೆ. ಈ ನಡುವೆ ಎಲ್ಲಾ ನಾಯಕರ ಜೊತೆಗೂ ಯಡಿಯೂರಪ್ಪ ಮಾತನಾಡುವ ಪ್ರಯತ್ನ ಮಾಡುತ್ತಿದ್ದು, ಶೀಘ್ರದಲ್ಲೇ ಎಲ್ಲಾ ಗೊಂದಲಗಳಿಗೂ ತೆರೆ ಬೀಳುವ ಸಾಧ್ಯತೆಯಿದೆ. ವಿಜಯೇಂದ್ರ ಕೇಸರಿ ಪಕ್ಷದ ರಥವನ್ನು ಒಬ್ಬರೇ ಎಳೆಯುವುದಕ್ಕೆ ಸಾಧ್ಯವಿಲ್ಲ ಅನ್ನೊ ಗುಟ್ಟು ಗೊತ್ತಿರುವ ಕಾರಣಕ್ಕಾಗಿಯೇ ಎಲ್ಲರನ್ನೂ ಜೊತೆಗೆ ಸೇರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆ ಪ್ರಯತ್ನಕ್ಕೆ ಹೈಕಮಾಂಡ್ ಸಾಥ್ ಕೊಟ್ಟರೆ ಉತ್ತಮ ಎನ್ನಲಾಗ್ತಿದೆ.