ಭಾರತದಲ್ಲಿ ಹುಲಿ ಸಂತತಿಯ ಸಂರಕ್ಷಣೆಯ ಬಗ್ಗೆ ಅಹರ್ನಿಶಿ ದುಡಿದ ಧೀಮಂತ ಮಹಿಳೆ ಅನ್ನಿ ರೈಟ್ – ನಾ ದಿವಾಕರ
{ತನಗೆ ಒಳಿತಾಗುವುದಾದರೆ ಇತರ ಯಾವುದೇ ಪ್ರಾಣಿಯನ್ನು ಕೊಲ್ಲಲು ಹಿಂಜರಿಯದಿರುವುದು ಮನುಷ್ಯ ಪ್ರಾಣಿಯ ಒಂದು ಹುಟ್ಟುಗುಣ. ಆದರೂ ಅನುಕಂಪ-ಸಹಾನುಭೂತಿಯನ್ನು ನಾವು ಮಾನವೀಯತೆ ಎಂದೂ, ಆಕ್ರೋಶ-ಕ್ರೋಧವನ್ನು ಮೃಗೀಯ ಎಂದೂ ಬಣ್ಣಿಸುತ್ತೇವೆ. ಮನುಷ್ಯ ಕುಲ ತನ್ನ ಬದುಕಿಗೆ ಅವಶ್ಯವಿಲ್ಲದ ವಸ್ತುಗಳಿಗಾಗಿಯೂ ಪ್ರಾಣಿ ಸಂಕುಲಗಳ ಬಲಿ ತೆಗೆದುಕೊಳ್ಳುವುದು ಶತಮಾನಗಳಿಂದ ಕಾಣಲಾಗುತ್ತಿರುವ ವಿದ್ಯಮಾನ. ಈ ನಡುವೆಯೇ ವನ್ಯಜೀವಿ ಸಂರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಹಲವರು ನಮ್ಮ ನಡುವೆ ಆಗಿ ಹೋಗಿದ್ದಾರೆ. ಅಂತಹ ಒಬ್ಬ ಅಪೂರ್ವ ವ್ಯಕ್ತಿಯ ಪರಿಚಯ ಇಲ್ಲಿದೆ. }
ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸುದ್ದಿ ಮಾಡಿದ್ದು ಹುಲಿ ಉಗುರಿನ ಪ್ರಸಂಗಗಳು. ಖ್ಯಾತ ಸಿನಿಮಾ ನಟರು, ರಾಜಕಾರಣಿಗಳು, ಸ್ವಾಮೀಜಿಗಳೂ ಸಹ ಕಾನೂನಿನ ಹದ್ದಿನ ಕಣ್ಣಿಗೆ ಬೀಳುವಂತಾಗಿದ್ದು, ಹುಲಿ ಉಗುರು ಬಳಕೆಯಿಂದಾಗಿದೆ. ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನ್ವಯ ಯಾವುದೇ ವನ್ಯಜೀವಿ ಪ್ರಾಣಿಗಳ ಅವಯವಗಳನ್ನು ಅಕ್ರಮವಾಗಿ ಬಳಸುವಂತಿಲ್ಲ, ಸಂಗ್ರಹಿಸುವಂತೆಯೂ ಇಲ್ಲ. ಹುಲಿ ಉಗುರು, ಆನೆಯ ದಂತ, ಜಿಂಕೆ ಚರ್ಮ, ಚಿರತೆಯ ಚರ್ಮ ಮುಂತಾದ ವನ್ಯಜೀವಿ ಪ್ರಾಣಿಗಳ ಅಂಗಗಳು ನಮ್ಮ ಸಮಾಜದಲ್ಲಿ ವ್ಯಾಪಕ ಬಳಕೆಯಲ್ಲಿರುವುದು ಕಾಣುತ್ತದೆ. ಹುಲಿ ಉಗುರು ಧರಿಸಿದರೆ ಒಳ್ಳೆಯದಾಗುತ್ತದೆ ಎಂಬ ಮೂಢ ನಂಬಿಕೆ ಹಾಗೂ ಇಂತಹ ಮೌಢ್ಯವನ್ನು ಪೋಷಿಸಿ ಬೆಳೆಸುವ ಜೋತಿಷಿಗಳ ಪ್ರಸಾರದಿಂದ ಈ ಬಳಕೆಯೂ ಅನಿಯಂತ್ರಿತವಾಗಿರುವುದು ವಾಸ್ತವ.
ಭಾರತದಲ್ಲಿ ಹುಲಿ ಸಂತತಿಯ ರಕ್ಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿವೆ. ದೇಶದ 53 ಹುಲಿ ಮೀಸಲು ಅಭಯಾರಣ್ಯಗಳಲ್ಲಿ ಒಟ್ಟು 2967 ಹುಲಿಗಳು ಇರುವುದನ್ನು 2020-21ರ ಸಮೀಕ್ಷೆಯಲ್ಲಿ ಖಚಿತಪಡಿಸಲಾಗಿದೆ. ಜಗತ್ತಿನ ಒಟ್ಟು ಹುಲಿ ಸಂಖ್ಯೆಯಲ್ಲಿ ಮುಕ್ಕಾಲು ಪಾಲು ಭಾರತದಲ್ಲೇ ಇರುವುದು ಹೆಮ್ಮೆಯ ವಿಚಾರ. ಕರ್ನಾಟಕದ ಬಂಡೀಪುರ, ನಾಗರಹೊಳೆ, ಬಿಳಿಗಿರಿ ರಂಗನಾಥ ಸ್ವಾಮಿ, ಭದ್ರಾ ಹಾಗೂ ದಾಂಡೇಲಿಯಲ್ಲಿ ಹುಲಿ ಅಭಯಾರಣ್ಯಗಳಿವೆ. 2020ರ ಸಮೀಕ್ಷೆಯ ಅನುಸಾರ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಶೇ 30ರಷ್ಟು ಹೆಚ್ಚಳ ಕಂಡಿದೆ. ನಾಗರಹೊಳೆಯಿಂದ ಕೇರಳದ ವಯನಾಡ್ ಮತ್ತು ತಮಿಳುನಾಡಿನ ಸತ್ಯಮಂಗಲಂವರೆಗೆ ವಿಸ್ತರಿಸಿರುವ ಸಂರಕ್ಷಿತ ಅಭಯಾರಣ್ಯದಲ್ಲಿ 724 ಹುಲಿಗಳಿವೆ. ಸಹ್ಯಾದ್ರಿ ಘಾಟ್‌ನ ಕುದುರೆಮುಖ ಹಾಗೂ ಕೊಲ್ಲೂರು ಪ್ರಾಂತ್ಯದಲ್ಲಿ 150 ಹುಲಿಗಳಿರುವುದಾಗಿ ವರದಿಯಾಗಿದೆ. ರಾಜ್ಯದಲ್ಲಿರುವ 700 ಹುಲಿಗಳ ಪೈಕಿ 403 ಹುಲಿಗಳು ಅಭಯಾರಣ್ಯಗಳಲ್ಲಿವೆ ಎಂದು 2020ರ ವರದಿಯಲ್ಲಿ ಹೇಳಲಾಗಿದೆ.
ಹುಲಿ ಸಂರಕ್ಷಣೆಯ ಹಾದಿ
ಭಾರತದಲ್ಲಿ ಹುಲಿ ಸಂತತಿಯ ಹೆಚ್ಚಳ ಹಾಗೂ ಉತ್ತಮ ಸಂರಕ್ಷಣಾ ಕಾರ್ಯಗಳ ಹಿಂದೆ 50 ವರ್ಷಗಳ ಚರಿತ್ರೆಯೂ ಇದೆ. ಈ ಚರಿತ್ರೆಯ ನಡಿಗೆಯಲ್ಲಿ ಮುಖ್ಯವಾಗಿ ನಮಗೆ ಕಾಣುವುದು ಇತ್ತೀಚೆಗೆ ತಮ್ಮ 94ನೆಯ ವಯಸಿನಲ್ಲಿ ನಿಧನರಾದ ಅನ್ನಿ ಲಯಾರ್ಡ್ ರೈಟ್ ಎಂಬ ವನ್ಯಜೀವಿ ಪ್ರಚಾರಕಿ ಹಾಗೂ ಕಾರ್ಯಕರ್ತೆ. “ ವನ್ಯಜೀವಿ ಪ್ರಚಾರಕಿ-ಕಾರ್ಯಕರ್ತೆ , ಹುಲಿ ಸಂತತಿಯ ಉತ್ಸಾಹಿ, ಅಶ್ವ ಪ್ರೇಮಿ ಮತ್ತು ಪಾಲಕಿ, ಸಾಮಾಜಿಕ ಕಾರ್ಯಕರ್ತೆ “ ಹೀಗೆ ಹಲವು ಹೆಸರುಗಳಿಂದ ಖ್ಯಾತಿ ಪಡೆದಿದ್ದ, ಬ್ರಿಟೀಷರು 1947ರಲ್ಲಿ ಭಾರತದಿಂದ ನಿರ್ಗಮಿಸಿದ ನಂತರವೂ ಇಲ್ಲಿಯೇ ಉಳಿದು ಭಾರತದ ವನ್ಯಜೀವಿ ಆಂದೋಲನಗಳಿಗೆ-ಹುಲಿ ಸಂರಕ್ಷಣೆಗೆ ಒಂದು ಸ್ಫೂರ್ತಿಯಾಗಿ ತಮ್ಮ ಸಾರ್ಥಕ ಬದುಕು ಸವೆಸಿದ ಅನ್ನಿ ಲಯಾರ್ಡ್ ರೈಟ್ ತಮ್ಮ 94ನೆಯ ವಯಸ್ಸಿನಲ್ಲಿ ಮಧ್ಯಪ್ರದೇಶದ ಕನ್ಹಾ ರಾಷ್ಟ್ರೀಯ ಉದ್ಯಾನದಲ್ಲಿರುವ ಅವರ ಕುಟುಂಬದ ಕಿಪ್ಲಿಂಗ್ ಕ್ಯಾಂಪ್ ಜಂಗಲ್ ರೆಸಾರ್ಟ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ. 1929ರಲ್ಲಿ ಭಾರತದ ನಾಗರಿಕ ಸೇವೆಯಲ್ಲಿ ಅಧಿಕಾರಿಯಾಗಿದ್ದ ಆಸ್ಟನ್ ಹಾವ್ಲಾಕ್ ಲಯಾರ್ಡ್ ದಂಪತಿಗಳಿಗೆ ಜನಿಸಿದ ಅನ್ನಿ ರೈಟ್ ತಮ್ಮ ಬಾಲ್ಯಾವಸ್ಥೆಯಿಂದಲೇ ವನ್ಯಜೀವಿ ತಾಣಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಸ್ವಾತಂತ್ರ್ಯಾನಂತರವೂ ಭಾರತದಲ್ಲೇ ಉಳಿದ ಅನ್ನಿ ರೈಟ್ 1991ರಲ್ಲಿ ಭಾರತದ ಪೌರತ್ವವನ್ನೂ ಪಡೆದಿದ್ದರು.
ತಮ್ಮ ಐದನೆಯ ವಯಸ್ಸಿನಲ್ಲೇ ತಂದೆಯೊಡನೆ ಮಧ್ಯ ಭಾರತದ ವನ್ಯಜೀವಿ ತಾಣಗಳಿಗೆ ಭೇಟಿ ನೀಡಿದ್ದ ಅನ್ನಿ ರೈಟ್ ಜನಿಸಿದ್ದು ಹ್ಯಾಂಪ್‌ಷೈರ್‌ನಲ್ಲಿ ಜೂನ್ 10 1929ರಂದು. ಎರಡು ಶತಮಾನಗಳ ಕಾಲ ಭಾರತ ಮತ್ತು ಶ್ರೀಲಂಕಾದ ನಾಗರಿಕ ಸೇವೆಯಲ್ಲಿ ತೊಡಗಿದ್ದ ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದ ಅನ್ನಿ ರೈಟ್ 1947ರಲ್ಲಿ ಆಕೆಯ ತಂದೆ ದೆಹಲಿಯ ಯುನೈಟೆಡ್ ಕಿಂಗ್‌ಡಮ್ ಹೈಕಮಿಷನ್‌ನಲ್ಲಿ ಸಲಹೆಗಾರರಾಗಿ ನೇಮಕಗೊಂಡ ನಂತರ ಭಾರತದಲ್ಲೇ ನೆಲೆಸಲು ನಿರ್ಧರಿಸಿದ್ದರು. ಈ ಸಂದರ್ಭದಲ್ಲೇ ಆಕೆಗೆ ಮೌಂಟ್‌ಬ್ಯಾಟನ್ ಅವರ ಪುತ್ರಿ ಪಮೇಲಾ ಅವರ ಒಡನಾಟವೂ ಬೆಳೆದಿತ್ತು. ಮದುವೆಯಾದ ನಂತರ ಕೊಲ್ಕತ್ತಾ ನಗರದಲ್ಲೇ ನೆಲೆ ಮಾಡಿದ ಅನ್ನಿ ರೈಟ್ ತಮ್ಮ ಪತಿಯನ್ನು 2005ರಲ್ಲಿ ಕಳೆದುಕೊಂಡ ನಂತರವೂ ಅಲ್ಲಿನ ಐಷಾರಾಮಿ ಪ್ರದೇಶ ಎಂದೇ ಹೆಸರಾದ ಬಲ್ಲಿಗಂಜ್‌ನಲ್ಲೇ ವಾಸಿಸುತ್ತಾ ತಮ್ಮ ವನ್ಯಜೀವಿ ಸಂರಕ್ಷಣೆಯ ಹಾದಿಯನ್ನು ಕಂಡುಕೊಂಡಿದ್ದರು.
ತನ್ನ ಪತಿ ರಾಬರ್ಟ್ ಹ್ಯಾಮಿಲ್ಟನ್ ರೈಟ್ (ಬಾಬ್) ಅವರೊಡನೆ 1972ರಿಂದಲೇ ವನ್ಯಜೀವಿ ವಲಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅನ್ನಿ ರೈಟ್ ಉಳಿದ ಕುಲೀನರಂತೆ ಬೇಟೆಯಾಡಲು ಹೋಗುತ್ತಿದ್ದರೂ, ಕ್ರಮೇಣ ತಮ್ಮ ಬಂದೂಕುಗಳನ್ನು ಕೆಳಗಿಳಿಸಿ ವನ್ಯಜೀವಿ ಸಂರಕ್ಷಣೆಗಾಗಿ ಟೊಂಕಕಟ್ಟಿ ನಿಂತಿದ್ದರು. 1970ರ ದಶಕದಲ್ಲೇ ಅನ್ನಿ ರೈಟ್ ದಂಪತಿಗಳು ಅನಾಥ ಹುಲಿ ಮರಿ ಮತ್ತು ಚಿರತೆಯನ್ನು ಮನೆಯಲ್ಲೇ ಸಾಕುತ್ತಿದ್ದರು. ಆಕೆಯ ಪುತ್ರಿ ಬೆಲಿಂಡಾ ರೈಟ್ ಈಗಲೂ ವನ್ಯಜೀವಿ ಸಂರಕ್ಷಣೆಯಲ್ಲಿ ಸಕ್ರಿಯವಾಗಿದ್ದು ಅಂತರರಾಷ್ಟ್ರೀಯ ಖ್ಯಾತಿ ಪಡೆದಿದ್ದಾರೆ. ಭಾರತೀಯ ವನ್ಯಜೀವಿ ಸಂರಕ್ಷಣಾ ಸಂಘ ( Wildlife Protection Society of India) ಸಂಸ್ಥಾಪಕಿಯಾಗಿ ಬೆಲಿಂಡಾ ಹುಲಿ ಸಂರಕ್ಷಣೆಯ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದಾರೆ. ಅನ್ನಿ ರೈಟ್ ಅವರಿಗೆ Most Excellent Order of British Empire ಪ್ರಶಸ್ತಿಯೂ ಲಭಿಸಿದೆ.
1969ರಲ್ಲಿ ವಿಶ್ವ ವನ್ಯಜೀವಿ ಫೌಂಡೇಷನ್ (WWF) ಸಂಸ್ಥೆಯನ್ನು ಭಾರತದಲ್ಲಿ ಸ್ಥಾಪಿಸಿದ ಅನ್ನಿ ರೈಟ್ 1970ರಲ್ಲಿ ತಮ್ಮ ವನ್ಯಜೀವಿ ಪ್ರಚಾರಕ ಕಾರ್ಯವನ್ನು ಆರಂಭಿಸಿ ಅದೇ ವರ್ಷಲ್ಲಿ ಕೊಲ್ಕತ್ತಾ ಮಾರುಕಟ್ಟೆಯಲ್ಲಿ ಹುಲಿ ಚರ್ಮದ ಅಕ್ರಮ ಮಾರಾಟ ನಡೆಯುತ್ತಿದ್ದ ಬಗ್ಗೆ ಸ್ಫೋಟಕ ಲೇಖನವನ್ನು ಬರೆದಿದ್ದರು. ಭಾರತದಲ್ಲಿ ನಡೆಯುತ್ತಿದ್ದ ಚಿರತೆ ಮತ್ತು ಹುಲಿಗಳ ವ್ಯಾಪಕ ಹತ್ಯೆ ಮತ್ತು ಚರ್ಮದ ಅಕ್ರಮ ವ್ಯಾಪಾರದ ಬಗ್ಗೆ ದತ್ತಾಂಶಗಳೊಡನೆ ಮಂಡಿಸಿದ ಪ್ರಪ್ರಥಮ ದಸ್ತಾವೇಜು ಇದಾಗಿತ್ತು. ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾದ ನಂತರ ಈ ಲೇಖನವನ್ನು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲೂ ಪ್ರಕಟಿಸಲಾಗಿತ್ತು. ಇದು ಭಾರತದಲ್ಲಿ ಹುಲಿ-ಚಿರತೆ ಸಂತತಿಯ ಸಂರಕ್ಷಣೆಗಾಗಿ ಸುಧಾರಣೆಗಳನ್ನು ಜಾರಿಗೊಳಿಸಲು ನಾಂದಿ ಹಾಡಿತ್ತು. ಅನ್ನಿ ರೈಟ್ ಅವರ ಈ ಆರಂಭದ ಹೆಜ್ಜೆಗಳನ್ನು ಗುರುತಿಸಿದ ಪ್ರಧಾನಿ ಇಂದಿರಾಗಾಂಧಿ ಅನ್ನಿ ರೈಟ್ ಅವರನ್ನು ಹುಲಿ ಸಂರಕ್ಷಣಾ ಕಾರ್ಯಪಡೆಯ ಸದಸ್ಯೆಯಾಗಿ ನೇಮಕ ಮಾಡಿದ್ದರು.
“ ಹುಲಿ ಯೋಜನೆ – ಭಾರತದಲ್ಲಿ ಹುಲಿ ಸಂತತಿ ಸಂರಕ್ಷಣಾ ಪ್ರಸ್ತಾವನೆಯ ಯೋಜನೆ ” ಎಂಬ ದಸ್ತಾವೇಜನ್ನು ಈ ಸಮಿತಿ ಸರ್ಕಾರಕ್ಕೆ ಸಲ್ಲಿಸಿತ್ತು. ಈ ವರದಿಯನ್ನು ಅಧರಿಸಿ ಮರುವರ್ಷವೇ ಭಾರತದಲ್ಲಿ ಒಂಬತ್ತು ಹುಲಿ ಅಭಯಾರಣ್ಯಗಳನ್ನು ಸ್ಥಾಪಿಸಲಾಯಿತು. ಇದು ದೇಶದ ಹುಲಿ ಸಂರಕ್ಷಣಾ ಅಭಿಯಾನಕ್ಕೆ ನಾಂದಿ ಹಾಡಿತ್ತು. ಅಂದಿನ ಪ್ರಧಾನಿ ಇಂದಿರಾಗಾಂಧಿ ಅನ್ನಿ ರೈಟ್ ಅವರನ್ನು ಹುಲಿ ಸಂರಕ್ಷಣಾ ಕಾರ್ಯಪಡೆಗೆ ಆಯ್ಕೆ ಮಾಡಿದ್ದರು. 1972ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972 ರೂಪಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಅನ್ನಿ ರೈಟ್ ವೈಯುಕ್ತಿಕವಾಗಿ ಶ್ರಮವಹಿಸಿ ಹಲವು ಸಂರಕ್ಷಿತ ಪ್ರದೇಶಗಳನ್ನು ಸ್ಥಾಪಿಸಿದ್ದರು. ಹಲವು ದಶಕಗಳ ಕಾಲ ಭಾರತದ ವನ್ಯಜೀವಿ ಸಂರಕ್ಷಣಾ ಆಂದೋಲನದಲ್ಲಿ ತೊಡಗಿಸಿಕೊಂಡಿದ್ದ ಅನ್ನಿ ರೈಟ್ 19 ವರ್ಷಗಳ ಕಾಲ ಭಾರತೀಯ ವನ್ಯಜೀವಿ ಮಂಡಲಿ ಮತ್ತು ಏಳು ರಾಜ್ಯಗಳ ಮಂಡಲಿಗಳಲ್ಲಿ ತಮ್ಮ ಸಕ್ರಿಯ ಸೇವೆ ಸಲ್ಲಿಸಿದ್ದಾರೆ.
ಸಾಧನೆಯ ಹಾದಿಯಲ್ಲಿ
“ಭಾರತದಲ್ಲಿ ಓರ್ವ ಮಹಿಳೆಯಾಗಿ ವನ್ಯಜೀವಿ ಸಂರಕ್ಷಣಾ ಕಾರ್ಯದಲ್ಲಿ ಸಕ್ರಿಯವಾಗಿರುವುದು ಒಂದು ಕಠಿಣ ಹಾದಿಯೇ ಆಗಿದ್ದರೂ ಅನ್ನಿ ರೈಟ್ ಅದನ್ನು ಸಮರ್ಥವಾಗಿ ನಿಭಾಯಿಸಿದ್ದರು, ಹಾಗೆಯೇ ಕಾನೂನುಗಳನ್ನು ರೂಪಿಸುವಲ್ಲಿ, ಅಕ್ರಮಗಳನ್ನು ಹಾಗೂ ಕಳ್ಳಬೇಟೆಯನ್ನು ತಡೆಗಟ್ಟುವಲ್ಲಿ ದಿಟ್ಟತನದಿಂದ ಕಾರ್ಯನಿರ್ವಹಿಸಿದ್ದರು ” ಎಂದು ಪರಿಸರವಾದಿಯೊಬ್ಬರು ತಮ್ಮ ಟ್ವಿಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪರಿಶ್ರಮಕ್ಕಾಗಿಯೇ ಅನ್ನಿ ರೈಟ್ ಅವರು 2013ರಲ್ಲಿ Sanctuary Asia Lifetime Service Award ಗೆ ಭಾಜನರಾಗಿದ್ದರು. ವನ್ಯಜೀವಿ ಸಂರಕ್ಷಣೆ ಅನ್ನಿ ರೈಟ್ ಅವರ ಮೊದಲ ಆದ್ಯತೆಯಾಗಿದ್ದರೆ, ಕುದುರೆಗಳ ಪಾಲನೆ, ಪೋಷಣೆ ಮತ್ತು ಕುದುರೆ ಸವಾರಿ ಅವರ ಹವ್ಯಾಸವಾಗಿತ್ತು. ಸಾಮಾನ್ಯವಾಗಿ ಪೋಲೋ ಆಡುತ್ತಿದ್ದ ಅನ್ನಿ ರೈಟ್ ದೆಹಲಿಯ ಹೊರವಲಯದಲ್ಲಿದ್ದ ತಮ್ಮ ಸ್ಟಡ್ ಫಾರ್ಮ್‌ನಲ್ಲಿ ಕುದುರೆಗಳನ್ನು ಪೋಷಿಸುತ್ತಿದ್ದರು.
ಅನ್ನಿ ತಮ್ಮ ಕೊನೆಯ ದಿನಗಳಲ್ಲಿ ವಾಸಿಸುತ್ತಿದ್ದ ಕಿಪ್ಲಿಂಗ್ ಕ್ಯಾಂಪ್ ಒಂದು ಖಾಸಗಿ ವನ್ಯಜೀವಿ ರೆಸಾರ್ಟ್ ಆಗಿದ್ದು ಇದನ್ನು 1981ರಲ್ಲಿ ರೈಟ್ ದಂಪತಿಗಳೇ ಆರಂಭಿಸಿದ್ದರು. ಕಾದಂಬರಿಕಾರ ರುಡ್ಯಾರ್ಡ್ ಕಿಪ್ಲಿಂಗ್ ಈ ಪ್ರದೇಶವನ್ನು ತಮ್ಮ ಜಂಗಲ್ ಬುಕ್ಸ್ ಕತೆಗಳಲ್ಲಿ ಉಲ್ಲೇಖಿಸಿದ್ದ ಕಾರಣ ಅವರ ಹೆಸರನ್ನೇ ಇಡಲಾಗಿತ್ತು. ಇದೇ ಕ್ಯಾಂಪ್‌ನಲ್ಲೇ 35 ವರ್ಷಗಳಿಂದಲೂ ತಾರಾ ಹೆಸರಿನ ಆನೆಯೊಂದನ್ನೂ ಅನ್ನಿ ರೈಟ್ ಸಲಹುತ್ತಿದ್ದರು. ತಮ್ಮ ಪತಿ ನಿಧನರಾದ ನಂತರ ಅನ್ನಿ ರೈಟ್ ದೆಹಲಿಯಲ್ಲೇ ಹೆಚ್ಚು ವಾಸಿಸುತ್ತಿದ್ದರು. 1948ರಲ್ಲಿ ಮಹಾತ್ಮ ಗಾಂಧಿ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಲಾರ್ಡ್ ಮೌಂಟ್‌ಬ್ಯಾಟನ್ ಅವರ ಕುಟುಂಬದೊಡನೆ ಉಪಸ್ಥಿತರಿದ್ದ ಅನ್ನಿ ರೈಟ್ ತಾವು ಅಪಾರ ಜನಸ್ತೋಮವನ್ನು ಕಂಡು ಬೆರಗಾಗಿದ್ದೆ ಎಂದು ಹೇಳಿಕೊಂಡಿದ್ದಾರೆ.
ವನ್ಯಜೀವಿ ಸಂರಕ್ಷಣೆಯಲ್ಲಿ ಬದ್ಧತೆಯೊಂದಿಗೆ ಅಹರ್ನಿಶಿ ದುಡಿಯುತ್ತಿದ್ದ ಅನ್ನಿ ರೈಟ್ ಇತರ ಪ್ರಾಣಿ-ಪಕ್ಷಿ ಸಂಕುಲಗಳ ರಕ್ಷಣೆಯ ಬಗ್ಗೆಯೂ ಅಪಾರ ಕಾಳಜಿ ವಹಿಸುತ್ತಿದ್ದರು. 1983ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಇಂದಿರಾಗಾಂಧಿಗೆ ಪತ್ರ ಬರೆದಿದ್ದ ಅನ್ನಿ ರೈಟ್ ಭಾರತಕ್ಕೆ ಅಪಾರ ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದ ಸೈಬೀರಿಯಾದ ಕೊಕ್ಕರೆಗಳನ್ನು ರಕ್ಷಿಸುವ ಸಲುವಾಗಿ ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಸರ್ಕಾರದೊಡನೆ ಮಾತುಕತೆ ನಡೆಸುವಂತೆ ಒತ್ತಾಯಿಸಿದ್ದರು. ಈ ವಿಚಾರದಲ್ಲಿ ಕೊಂಚ ಹಿಂಜರಿಕೆ ಇದ್ದರೂ ಪ್ರಧಾನಿ ಇಂದಿರಾಗಾಂಧಿ ಅನ್ನಿ ರೈಟ್ ಅವರ ಸಲಹೆಯಂತೆ ಎರಡೂ ದೇಶಗಳೊಡನೆ ಸಮಾಲೋಚನೆ ನಡೆಸಿ, ಸೈಬೀರಿಯಾ ಕೊಕ್ಕರೆಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಂಡಿದ್ದರು.
1980ರಲ್ಲಿಭೂತಾನ್‌ನ ಮೂಲೆಯಲ್ಲಿದ್ದ ಫೋಬ್ಜಿಖಾ ಕಣಿವೆಯಲ್ಲಿ ಕಪ್ಪು ಕೊರಳಿನ ಕೊಕ್ಕರೆಗಳ ಸಂತತಿಗೆ ಬೀಜದ ಆಲೂಗಡ್ಡೆಯ ವಾಣಿಜ್ಯ ಬೆಳೆಯಿಂದ ಅಪಾಯ ಉಂಟಾಗುತ್ತಿದ್ದಾಗ ಭೂತಾನ್‌ನ ಅಂದಿನ ದೊರೆ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಅವರ ಸಲಹೆಗಾರನಾಗಿದ್ದ ಡಾಶೋ ಬೆನ್‌ಜಿ ಡೋರ್ಜಿ, ಖುದ್ದಾಗಿ ಅನ್ನಿ ರೈಟ್ ಅವರನ್ನು ಸಂಪರ್ಕಿಸಿ ಅವರ ಮಾರ್ಗದರ್ಶನದಲ್ಲೇ ಈ ಸಮಸ್ಯೆಯನ್ನು ನಿವಾರಿಸಿದ್ದರು. “ ಕೊಲ್ಕತ್ತಾ ಸುತ್ತಮುತ್ತಲಿನ ವನ್ಯಜೀವಿ ತಾಣಗಳಲ್ಲಿ ವನ್ಯಜೀವಿ ಪ್ರಾಣಿಗಳ ಅವಯವಗಳ ವ್ಯಾಪಾರದಲ್ಲಿ ತೊಡಗಿರುತ್ತಿದ್ದ ವ್ಯಾಪಾರಿಗಳಲ್ಲಿ ಅನ್ನಿ ರೈಟ್ ಅವರ ಬಗ್ಗೆ ಭಯ ಸದಾ ಇರುತ್ತಿತ್ತು “ ಎನ್ನುತ್ತಾರೆ ಡೋರ್ಜಿ. ಅಂತಹ ಪ್ರಸಂಗಗಳಲ್ಲಿ ಅನ್ನಿ ರೈಟ್ ಪೊಲೀಸ್‌ಗೆ ದೂರು ಸಲ್ಲಿಸಿ ಅಕ್ರಮ ವಹಿವಾಟುಗಳನ್ನು ನಿಯಂತ್ರಿಸುತ್ತಿದ್ದುದಾಗಿ ಡೋರ್ಜಿ ಹೇಳುತ್ತಾರೆ.
ನಿಶ್ಚಿತವಾಗಿ ಮುಂದಿನ ದಿನಗಳಲ್ಲಿ ಅನ್ನಿ ರೈಟ್ ಅವರ ಸ್ಮರಣಾರ್ಥ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ವಿಚಾರ ಸಂಕಿರಣಗಳು ನಡೆಯುತ್ತವೆ ಸ್ಮಾರಕಗಳನ್ನೂ ನಿರ್ಮಿಸುವ ಸಾಧ್ಯತೆಗಳಿವೆ. ಆದರೆ ಅಕ್ಟೋಬರ್ 4 ರಂದು ಅನ್ನಿ ರೈಟ್ ತಮ್ಮ ಕಿಪ್ಲಿಂಗ್ ಕ್ಯಾಂಪ್‌ನಲ್ಲಿ ಕೊನೆಯುಸಿರೆಳೆದಾಗ ಕ್ರೈಸ್ತ ಸಂಪ್ರದಾಯಗಳ ಅನುಸಾರ ಅಂತ್ಯಕ್ರಿಯೆಯನ್ನು ಅರಣ್ಯದೊಳಗಿದ್ದ ಮುಕ್ತ ಗ್ರಾಮದಲ್ಲೇ ನಡೆಸಲಾಯಿತು. ಆಕೆಯ ಪುತ್ರಿ ಬೆಲಿಂಡಾ ಹೇಳಿದಂತೆ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಹಾಜರಿದ್ದವರು ಕಿಪ್ಲಿಂಗ್ ಕ್ಯಾಂಪ್ ರೆಸಾರ್ಟ್‌ನ ಕೆಲವು ಹಾಲಿ ಮತ್ತು ಮಾಜಿ ಸಿಬ್ಬಂದಿ, ಸ್ಥಳೀಯ ಸ್ನೇಹಿತರು, ಆಕೆಯ ಒಡನಾಟದಲ್ಲಿದ್ದ ಕೆಲವು ಗ್ರಾಮಸ್ಥರು ಮತ್ತು ಆಕೆಯೇ ಸಲಹಿದ್ದ ಎರಡು ನಾಯಿಗಳು. ಅಂತ್ಯಕ್ರಿಯೆಯನ್ನು ಪೂರೈಸಿ ನಿರ್ಗಮಿಸುವಾಗ ಸುತ್ತಲೂ ನೆರೆದಿದ್ದ ಚೀತಾಲ್ ಜಿಂಕೆಗಳ ಸಮೂಹದ ಕೂಗು, ತಮ್ಮ ಇಡೀ ಜೀವನವನ್ನು ವನ್ಯಜೀವಿ ಸಂರಕ್ಷಣೆಗಾಗಿ ಮುಡಿಪಾಗಿಟ್ಟ ಅನ್ನಿ ರೈಟ್ ಅವರಿಗೆ ಸೂಕ್ತ ಬೀಳ್ಕೊಡುಗೆ ನೀಡಿದ್ದವು ಎನ್ನುತ್ತಾರೆ ಆಕೆಯ ಪುತ್ರಿ ಬೆಲಿಂಡಾ. ಅನ್ನಿ ರೈಟ್ ಅವರ ನಿಧನದೊಂದಿಗೆ ವನ್ಯಜೀವಿ ಸಂರಕ್ಷಣೆಯ ದೀರ್ಘ ನಡಿಗೆಯಲ್ಲಿ ಒಂದು ಯುಗಾಂತ್ಯವಾಗಿದೆ ಎಂದರೆ ಅತಿಶಯೋಕ್ತಿಯೇನಲ್ಲ.
-೦-೦-೦-೦-