ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ಗಳಿಗೆ ಪ್ರತಿಷ್ಠೆಯ ಕಣವಾಗಿರುವ ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಇನ್ನೇನು ಕೆಲವೇ ಗಂಟೆಗಳಲ್ಲಿ ಹೊರಬೀಳಲಿದೆ.
ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಸರಿಸುಮಾರು ಮಧ್ಯಾಹ್ನದ ಹೊತ್ತಿಗೆ ಎರಡೂ ಕ್ಷೇತ್ರಗಳ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ. ಮೊನ್ನೆ, ಅ.30ರಂದು ಎರಡೂ ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಸಿಂಧಗಿ ಕ್ಷೇತ್ರದಲ್ಲಿ ಶೇ.69.41ರಷ್ಟು ಮತ್ತು ಹಾನಗಲ್ ಕ್ಷೇತ್ರದಲ್ಲಿ ಶೇ.83.72ರಷ್ಟು ಮತದಾನವಾಗಿದೆ.
ಮುಖ್ಯವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ನಡೆದ ಮೊಟ್ಟಮೊದಲ ಚುನಾವಣೆ ಇದು. ಅದರಲ್ಲೂ ಅವರ ತವರು ಜಿಲ್ಲೆ ಹಾವೇರಿಯ ಬಿಜೆಪಿಯ ಭದ್ರಕೋಟೆ ಹಾನಗಲ್ ನಲ್ಲಿ ಪ್ರಭಾವಿ ನಾಯಕ ಸಿ ಎಂ ಉದಾಸಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆಯುತ್ತಿರುವ ಉಪ ಚುನಾವಣೆ ಇದು. ಹಾಗಾಗಿ ಹಾನಗಲ್ ಕ್ಷೇತ್ರ ಆಡಳಿತ ಪಕ್ಷದ ಪಾಲಿಗಷ್ಟೇ ಅಲ್ಲದೆ, ಸ್ವತಃ ಸಿಎಂ ಬೊಮ್ಮಾಯಿ ಪಾಲಿಗೂ ಅತ್ಯಂತ ಪ್ರತಿಷ್ಠೆಯ ಕ್ಷೇತ್ರವಾಗಿದೆ.
ಆದರೆ, ಸದ್ಯದ ವರದಿಗಳ ಪ್ರಕಾರ ಹಾನಗಲ್ ನಲ್ಲಿ ಬಹಳ ಕಠಿಣ ಪೈಪೋಟಿ ಇದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳು, ಬೆಲೆ ಏರಿಕೆ, ಕೋವಿಡ್ ನಿರ್ವಹಣೆ ವೈಫಲ್ಯ, ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ವಿರುದ್ಧ ಸಕ್ಕರೆ ಕಾರ್ಖಾನೆ ಭ್ರಷ್ಟಾಚಾರ ವಿಷಯ ಸೇರಿದಂತೆ ಹಲವು ಸಂಗತಿಗಳು ಕಣದಲ್ಲಿ ವ್ಯತಿರಿಕ್ತ ಪರಿಸ್ಥಿತಿ ನಿರ್ಮಾಣಮಾಡಿವೆ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆಗೆ ಗೆಲುವಿನ ಅವಕಾಶವಿದೆ. ಆದರೆ, ಜೆಡಿಎಸ್ ನಿಂದ ಕಣಕ್ಕಿಳಿದಿರುವ ಮುಸ್ಲಿಂ ಅಭ್ಯರ್ಥಿ ನಿಯಾಜ್ ಶೇಖ್ ಎಷ್ಟು ಮತಗಳನ್ನು ಪಡೆಯಲಿದ್ದಾರೆ ಮತ್ತು ಅವು ಕಾಂಗ್ರೆಸ್ ಮತಬುಟ್ಟಿಯಿಂದ ಬಾಚಿದ ಮತಗಳೇ ಅಥವಾ ಅಲ್ಲವೇ ಎಂಬುದರ ಮೇಲೆ ಚುನಾವಣಾ ಫಲಿತಾಂಶ ನಿಂತಿದೆ.
ಅದೇನೇ ಇದ್ದರೂ, ಈ ಕ್ಷೇತ್ರದಲ್ಲಿ ಗೆದ್ದರೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಸ್ಥಾನ ಭದ್ರವಾಗಲಿದೆ ಮತ್ತು ಪಕ್ಷದಲ್ಲೂ ಅವರು ಗಟ್ಟಿಯಾಗಲಿದ್ದಾರೆ. ಗೆಲ್ಲದೇ ಹೋದರೆ, ಬಿ ಎಸ್ ಯಡಿಯೂರಪ್ಪ ನೇತೃತ್ವವಿಲ್ಲದೆ ಲಿಂಗಾಯತ ಸಮುದಾಯ ಬಿಜೆಪಿಯೊಂದಿಗೆ ನಿಲ್ಲುವುದಿಲ್ಲ ಮತ್ತು ಆ ಕಾರಣಕ್ಕೆ ಬಿಜೆಪಿಯ ನೆಲೆ ಕೂಡ ಅಭದ್ರ ಎಂಬ ಸಂದೇಶ ರವಾನೆಯಾಗುತ್ತದೆ.
ಇನ್ನು ಸಿಂಧಗಿ ಕ್ಷೇತ್ರದಲ್ಲಿ ಕೂಡ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ನೇರ ಹಣಾಹಣಿ ಇದೆ. ಅಲ್ಲಿನ ಜೆಡಿಎಸ್ ಶಾಸಕರಾಗಿದ್ದ ಎಂ ಸಿ ಮನಗೋಳಿ ಅವರ ನಿಧನದಿಂದಾಗಿ ಈ ಉಪ ಚುನಾವಣೆ ಎದುರಾಗಿದ್ದರೂ, ಮನಗೋಳಿ ಅವರ ಚುನಾವಣೆಗಳನ್ನು ನಡೆಸುತ್ತಿದ್ದ ಅವರ ಪುತ್ರ ಅಶೋಕ್ ಮನಗೋಳಿ ಅವರೇ ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದರಿಂದ ಜೆಡಿಎಸ್ ಪ್ರಭಾವಿಯಾಗಿ ಉಳಿದಿಲ್ಲ. ಜೊತೆಗೆ ಅಲ್ಲಿಯೂ ಕೂಡ ಆ ಪಕ್ಷ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯನ್ನು ಕಣಕ್ಕಿಳಿಸಿರುವುದರಿಂದ ಹಣಾಹಣಿಯಲ್ಲಿ ಅವರು ಹಿಂದೆಬಿದ್ದಿದ್ದಾರೆ. ಹಾಗಾಗಿ ಬಿಜೆಪಿಯ ರಮೇಶ್ ಭೂಸನೂರ ನಡುವೆಯೇ ನೇರ ಹಣಾಹಣಿ ಇದೆ.
ಆದರೆ, ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕರ ಪುತ್ರ ಮತ್ತು ಅವರ ಚುನಾವಣೆಗಳನ್ನು ನಿರ್ವಹಿಸುವ ಮೂಲಕ ಕ್ಷೇತ್ರದಾದ್ಯಂತ ಪ್ರಭಾವ ಹೊಂದಿದ್ದಾರೆ ಎಂಬ ಮಾತಿನ ಜೊತೆಗೇ ಬಿಜೆಪಿ ರಮೇಶ್ ಭೂಸನೂರ ಮತದಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದು ಬಿಜೆಪಿಗೆ ಅನುಕೂಲವಾಗಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಹಾಗೇ ಜಡಿಎಸ್ ಅಲ್ಪ ಸಮುದಾಯದ ಮಹಿಳೆ ನಾಜಿಯಾ ಅಂಗಡಿಯನ್ನು ಕಣಕ್ಕಿಳಿಸಿದ್ದರೂ ಆ ಪಕ್ಷಕ್ಕೆ ಅಲ್ಲಿ ಅಲ್ಪಸಂಖ್ಯಾತ ಮತಗಳಲ್ಲದೆ ಇತರೆ ಸಮುದಾಯಗಳ ಸಾಂಪ್ರದಾಯಿಕ ಮತಗಳಿವೆ. ಹಾಗಾಗಿ ಹಾನಗಲ್ ನಂತೆಯೇ ಅಲ್ಲಿಯೂ ಜೆಡಿಎಸ್ ಅಭ್ಯರ್ಥಿ ಎಷ್ಟು ಮತ ಪಡೆಯಲಿದ್ದಾರೆ ಮತ್ತು ಆ ಮತಗಳು ಎಲ್ಲಿಂದ ಬಂದಿವೆ ಎಂಬುದರ ಮೇಲೆ ಕಾಂಗ್ರೆಸ್ ಅಭ್ಯರ್ಥಿಯ ಭವಿಷ್ಯವೂ, ಚುನಾವಣಾ ಫಲಿತಾಂಶವೂ ನಿಂತಿದೆ.
ಒಟ್ಟಾರೆ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ ತುರುಸಿನ ಸ್ಪರ್ಧೆ ಇದೆ. ಎರಡು ಕ್ಷೇತ್ರಗಳ ಪೈಕಿ ಕಳೆದ ಬಾರಿ ಹಾನಗಲ್ ನಲ್ಲಿ ಬಿಜೆಪಿ ಮತ್ತು ಸಿಂಧಗಿಯಲ್ಲಿ ಜೆಡಿಎಸ್ ಜಯಗಳಿಸಿದ್ದವು ಎಂಬ ಹಿನ್ನೆಲೆಯಲ್ಲಿ ಆ ಪಕ್ಷಗಳಿಗೆ ಈ ಬಾರಿಯ ಅಲ್ಲಿನ ಸೋಲು ಗೆಲುವು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆದರೆ, ತನ್ನದಲ್ಲದೆ ಎರಡೂ ಕ್ಷೇತ್ರಗಳ ಪೈಕಿ ಎಲ್ಲೇ ಜಯಗಳಿಸಿದರೂ ಕಾಂಗ್ರೆಸ್ಸಿಗೆ ಅದು ದೊಡ್ಡ ವಿಶ್ವಾಸ ತುಂಬಲಿದೆ ಮತ್ತು ಸೋತರೆ ಅದು ತನ್ನ ಸೋಲಿಗೆ ಆ ಎರಡೂ ತನ್ನದಲ್ಲದ ಕ್ಷೇತ್ರಗಳು ಎಂದು ಒಂದೇ ಕಾರಣ ನೀಡಿ ಮುಜುಗರದಿಂದ ಪಾರಾಗಬಲ್ಲದು. ಆದರೆ, ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಪಾಲಿಗೆ ಎರಡೂ ಕ್ಷೇತ್ರಗಳಲ್ಲಿ ಗೆದ್ದರೆ ನಾಯಕತ್ವದ ಕಿರೀಟ, ಯಡಿಯೂರಪ್ಪ ಹೊರತಾಗಿಯೂ ಪಕ್ಷವನ್ನು ತಾವು ಮುಂದಿನ ಚುನಾವಣೆಗೆ ಮುನ್ನಡೆಸಬಲ್ಲೆ ಎಂಬ ಸಂದೇಶ ಹೈಕಮಾಂಡಿಗೆ ರವಾನೆ. ಇಲ್ಲವಾದಲ್ಲಿ ನಾಯಕತ್ವಕ್ಕೆ ಹಿನ್ನಡೆ, ಪರಿಸ್ಥಿತಿ ಕೈಮೀರಿದರೆ ಕುರ್ಚಿಗೂ ಕಂಟಕ!
ಹಾಗಾಗಿ ಈ ಉಪ ಚುನಾವಣೆಯ ಫಲಿತಾಂಶ ಬಿಜೆಪಿ ಮತ್ತು ಬೊಮ್ಮಾಯಿ ಪಾಲಿಗೆ ನಿಜಕ್ಕೂ ಪ್ರತಿಷ್ಠೆಯ ಸಂಗತಿಯೇ! ಆ ಪ್ರತಿಷ್ಠೆಗೆ ಗರಿ ಮೂಡುವುದೇ ಅಥವಾ ನೆಲಕಚ್ಚುವುದೇ ಎಂಬುದನ್ನು ಮತದಾರ ಪ್ರಭು ಈಗಾಗಲೇ ನಿರ್ಧರಿಸಿದ್ದು, ಆತನ/ ಆಕೆಯ ತೀರ್ಮಾನ ಏನು ಎಂಬುದು ಬಹಿರಂಗಗೊಳ್ಳುವುದಷ್ಟೇ ಈಗ ಬಾಕಿ..!














