ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಹಾನಗಲ್ ಮತ್ತು ಸಿಂಧಗಿ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಹಾನಗಲ್‌ನಲ್ಲಿ ಕಾಂಗ್ರೆಸ್ ಜಯಗಳಿಸಿದ್ದರೆ, ಸಿಂಧಗಿ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದೆ.
ಹಾನಗಲ್‌ನಲ್ಲಿ ನಿರೀಕ್ಷೆಯಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿ ನಡೆಯಿತು. ಬಹುತೇಕ ಪ್ರತಿ ಸುತ್ತಿನಲ್ಲಿ ಐದರಿಂದ ಹತ್ತು ಸಾವಿರ ಆಸುಪಾಸಿನಲ್ಲಿ ಇಬ್ಬರೂ ಅಭ್ಯರ್ಥಿಗಳ ನಡುವಿನ ಮತಗಳಿಕೆಯ ಅಂತರ ಸಾಕಷ್ಟು ಕುತೂಹಲ ಮೂಡಿಸಿತ್ತು. ಆದರೆ, ಅಂತಿಮವಾಗಿ ಕಾಂಗ್ರೆಸ್ಸಿನ ಶ್ರೀನಿವಾಸ ಮಾನೆ 7,598 ಮತಗಳ ಅಂತರದಿಂದ ಜಯ ದಾಖಲಿಸಿದರು. ಆ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತವರು ಜಿಲ್ಲೆಯಲ್ಲಿಯೇ ಭಾರೀ ಮುಖಭಂಗ ಎದುರಾಯಿತು.
ಆದರೆ ಸಿಂದಗಿಯಲ್ಲಿ ಬಿಜೆಪಿಯ ಅಭ್ಯರ್ಥಿ ರಮೇಶ್ ಭೂಸನೂರ ಮೊದಲ ಸುತ್ತಿನಿಂದಲೇ ಮುನ್ನಡೆ ಕಾಯ್ದುಕೊಂಡರು. ಕಾಂಗ್ರೆಸ್ಸಿನ ಅಶೋಕ್ ಮುನಗೂಳಿ ಭಾರೀ ಪೈಪೋಟಿ ನೀಡಬಹುದು ಎಂಬ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ, ಅಂತಿಮವಾಗಿ ಅವರು 31,088 ಮತಗಳ ಅಂತರದ ಭರ್ಜರಿ ಜಯ ಪಡೆದರು.
ಎರಡೂ ಕ್ಷೇತ್ರಗಳ ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟು ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿ, ಸ್ವತಃ ಎಚ್ ಡಿ ದೇವೇಗೌಡರು ಮತ್ತು ಎಚ್ ಡಿ ಕುಮಾರಸ್ವಾಮಿ ಅವರು ನಿರಂತರ ಪ್ರಚಾರ ನಡೆಸಿಯೂ ಜೆಡಿಎಸ್ ಎರಡೂ ಕಡೆ ಹೀನಾಯ ಸೋಲು ಕಂಡಿದೆ.
ಹಾನಗಲ್‌ನಲ್ಲಿ ಶಾಸಕರಾಗಿದ್ದ ಬಿ ಎಸ್ ಯಡಿಯೂರಪ್ಪ ಆಪ್ತ ಸಿ ಎಂ ಉದಾಸಿ ಅವರ ಅಕಾಲಿಕ ನಿಧನದಿಂದ ಮತ್ತು ಸಿಂಧಗಿಯಲ್ಲಿ ಶಾಸಕರಾಗಿದ್ದ ಜೆಡಿಎಸ್ ನ ಎಂ ಸಿ ಮುನಗೂಳಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಈ ಉಪ ಚುನಾವಣೆ ನಡೆದಿತ್ತು.
ಮುಖ್ಯವಾಗಿ ಈ ಉಪ ಚುನಾವಣೆ ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರದೇ ಇದ್ದರೂ, ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಅವರು ಎದುರಿಸಿದ ಮೊದಲ ಚುನಾವಣೆ ಎಂಬ ಕಾರಣಕ್ಕೆ ಸಾಕಷ್ಟು ಮಹತ್ವ ಪಡೆದಿತ್ತು. ಆದರೆ, ಬೊಮ್ಮಾಯಿ ಅವರ ತವರು ಜಿಲ್ಲೆಯ ಮತ್ತು ಅವರ ಪತ್ನಿಯ ತವರೂರಾದ ಹಾನಗಲ್ ನಲ್ಲಿಯೇ ಬಿಜೆಪಿ ಅಭ್ಯರ್ಥಿಗೆ ಸೋಲಾಗಿರುವುದು ಸಹಜವಾಗೇ ಅವರಿಗೆ ಇರಿಸುಮುರಿಸು ತರಿಸಿದೆ ಮತ್ತು ಮುಂದಿನ ದಿನಗಳಲ್ಲಿ ಪಕ್ಷದೊಳಗೆ ಹೆಚ್ಚಬಹುದಾಗಿದ್ದ ಅವರ ವರ್ಚಸ್ಸಿಗೆ ಹಿನ್ನಡೆ ತಂದಿದೆ ಎಂಬುದು ನಿರ್ವಿವಾದ.
ಆ ಹಿನ್ನೆಲೆಯಲ್ಲಿಯೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸುತ್ತಾ, “ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾನಗಲ್ ಪಕ್ಕದ ಕ್ಷೇತ್ರದವರು. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಬಿಜೆಪಿ ಸೋತಿದೆ. ಹಾನಗಲ್‌ನಲ್ಲಿ ಪ್ರಚಾರದ ವೇಳೆ ‘ನಾನು ಈ ಮಣ್ಣಿನಲ್ಲಿ ಹುಟ್ಟಿದ್ದೇನೆ, ಇಲ್ಲಿಯೇ ಮಣ್ಣಾಗುತ್ತೇನೆ, ನಾನು ಅಕ್ಕಿಆಲೂರಿನ ಅಳಿಯ’ ಎಂದೆಲ್ಲಾ ಭಾವನಾತ್ಮಕವಾಗಿ ಮಾತನಾಡಿದರೂ ಜನರು ಅವರ ಮಾತಿಗೆ ಮರುಳಾಗದೆ ನಮ್ಮ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿದ್ದಾರೆ” ಎಂದಿದ್ದಾರೆ. ಹಾಗೇ ದೇಶದಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿಯವರ ದುರಾಡಳಿತದಿಂದ ಜನ ಬೇಸತ್ತಿದ್ದಾರೆ ಎಂಬುದಕ್ಕೆ ಈ ಉಪ ಚುನಾವಣೆಯ ಫಲಿತಾಂಶ ನಿದರ್ಶನ ಮತ್ತು ಮುಂದಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಿಗೆ ಇದು ಒಂದು ಸಣ್ಣ ದಿಕ್ಸೂಚಿ ಎಂದೂ ಅವರು ವಿಶ್ಲೇಷಿಸಿದ್ದಾರೆ.
ಆದರೆ, ಸ್ವತಃ ಸಿಎಂ ಬೊಮ್ಮಾಯಿ ಅವರು ಉಪ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ, “ಹಾನಗಲ್ನಲ್ಲಿ ನಿರೀಕ್ಷಿಸಿದಷ್ಟು ಮತಗಳು ಬಂದಿಲ್ಲ. ಹೀಗಾಗಿಯೇ ನಮಗೆ ಹಿನ್ನಡೆ ಆಗಿದೆ. ದಿವಂಗತ ಸಿ.ಎಂ. ಉದಾಸಿಗೆ ಸಲ್ಲಬೇಕಿದ್ದ ಮತ ಪಡೆಯಲು ಆಗಿಲ್ಲ. ನಮ್ಮ ಪಕ್ಷದ ಹಿರಿಯರು ಮತ್ತು ಕಾರ್ಯಕರ್ತರು ಕಷ್ಟಪಟ್ಟು ಕೆಲಸ ಮಾಡಿದ್ದರು. ಉಪ ಚುನಾವಣೆಯಲ್ಲಿ ಕೆಲಸ ಮಾಡಿದವರಿಗೆ ಧನ್ಯವಾದ” ಎಂದು ಹೇಳಿದ್ದಾರೆ.
ಹಾನಗಲ್ ಕ್ಷೇತ್ರದಲ್ಲಿ ಭಾರೀ ಪ್ರಭಾವ ಹೊಂದಿದ್ದರೂ ಮತ್ತು ನಿರಂತರ ತಾವು ಮತ್ತು ತಮ್ಮ ಪುತ್ರ ವಿಜಯೇಂದ್ರ ಭಾರೀ ಪ್ರಚಾರ ಸಭೆಗಳನ್ನು ನಡೆಸಿದ್ದರೂ, ಪಕ್ಷದ ಅಭ್ಯರ್ಥಿ ಅಲ್ಲಿ ಗೆಲ್ಲಲಾಗಿಲ್ಲ ಎಂಬ ವಾಸ್ತವಾಂಶದ ಹೊರತಾಗಿಯೂ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, “ಸಿಂದಗಿ ಉಪಚುನಾವಣೆಯಲ್ಲಿ ಉತ್ತಮ ಅಂತರದಲ್ಲಿ ವಿಜಯ ಸಾಧಿಸಿದ ಪಕ್ಷದ ಅಭ್ಯರ್ಥಿ ರಮೇಶ್ ಭೂಸನೂರ್ ಅವರಿಗೆ ಅಭಿನಂದನೆಗಳು. ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ರಾಜ್ಯ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಜನ ಮೆಚ್ಚಿದ್ದಾರೆ ಎನ್ನುವುದಕ್ಕೆ ಈ ಕ್ಷೇತ್ರದಲ್ಲಿ ಪಕ್ಷದ ಗೆಲುವು ಸಂಕೇತವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಈ ನಡುವೆ, ಎರಡೂ ಕ್ಷೇತ್ರಗಳಲ್ಲಿ ಬೀಡುಬಿಟ್ಟು ನಿರಂತರ ಪ್ರಚಾರ ನಡೆಸಿಯೂ ಎರಡೂ ಕಡೆ ನಾಲ್ಕೂವರೆ ಸಾವಿರಕ್ಕಿಂತ ಹೆಚ್ಚು ಮತ ಪಡೆಯುವುದು ಸಾಧ್ಯವಾಗಿಲ್ಲ ಎಂಬುದು ಜೆಡಿಎಸ್ ಪಾಲಿಗೆ ತೀರಾ ಹೀನಾಯ ಸೋಲಾಗಿ ಕಾಡಲಿದೆ. ಆದರೆ, “ಜೆಡಿಎಸ್ ಪಕ್ಷವು ಬಿಜೆಪಿ ಬಿ ಟೀಮ್ ಎಂದು ಕಾಂಗ್ರೆಸ್ ಪಕ್ಷದ ನಾಯಕರು ನಡೆಸಿದ ದುರುದ್ದೇಶಪೂರಿತ ಅಪಪ್ರಚಾರಕ್ಕೆ ಉಪ ಚುನಾವಣೆ ಫಲಿತಾಂಶವೇ ಉತ್ತರವಾಗಿದೆ. ನಾವು ವಾಸ್ತವವಾಗಿ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೆವು” ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಒಟ್ಟಾರೆ ನಾಯಕರ ಸಮರ್ಥನೆ, ಹೆಚ್ಚುಗಾರಿಕೆ ಮತ್ತು ವಿಶ್ಲೇಷಣೆಯ ಮಾತುಗಳು ಏನೇ ಇರಲಿ, ಮೂರೂ ಪಕ್ಷಗಳಿಗೆ ಈ ಉಪ ಚುನಾವಣೆ ಸ್ಪಷ್ಟ ಸಂದೇಶ ನೀಡಿದೆ. ಆಡಳಿತರೂಢ ಬಿಜೆಪಿಗೆ, ಅದು ತಾನು ಎಲ್ಲಿ ಪ್ರಬಲ ಎಂದುಕೊಂಡಿತ್ತೋ, ಯಾವ ಕ್ಷೇತ್ರದ ಗೆಲುವನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳಾದಿಯಾಗಿ ಇಡೀ ಆಡಳಿತ ಯಂತ್ರವೇ ಬೀಡುಬಿಟ್ಟು ಪ್ರಚಾರ ನಡೆಸಿತ್ತೋ ಆ ಹಾನಗಲ್ ಕ್ಷೇತ್ರದಲ್ಲಿ ಲೆಕ್ಕಾಚಾರಗಳು ತಿರುವುಮುರುವಾಗಿವೆ. ಆ ಮೂಲಕ ಮತದಾರ ಅಬ್ಬರದ ಪ್ರಚಾರ ಮಾತ್ರವೇ ಚುನಾವಣೆ ಗೆಲ್ಲಲು ಸಾಲದು, ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸುವುದು ಕೂಡ ಮುಖ್ಯ ಎಂಬುದನ್ನು ಹಾನಗಲ್ ಮತದಾರರು ಸಂದೇಶ ನೀಡಿದ್ದಾರೆ.
ಹಾಗೇ ಕಾಂಗ್ರೆಸ್ಸಿಗೆ ಕೂಡ, ಜೆಡಿಎಸ್ ನಾಯಕರನ್ನು ಸೆಳೆದು ಟಿಕೆಟ್ ನೀಡಿ ಕ್ಷೇತ್ರದಲ್ಲಿ ಜಯ ದಾಖಲಿಸಬಹುದು ಎಂಬುದು ಸುಳ್ಳು. ಪಕ್ಷದ ತಳಮಟ್ಟದ ಕಾರ್ಯಕರ್ತರ ಪಡೆಯೇ ಇಲ್ಲದೆ, ಚುನಾವಣೆಯ ಪ್ರಚಾರ ಮತ್ತು ತಂತ್ರಗಾರಿಕೆಯಿಂದಲೇ ಜಯ ದಾಖಲಿಸಲಾಗದು ಎಂಬ ಸಂದೇಶವನ್ನು ಸಿಂಧಗಿಯ ಮತದಾರರು ರವಾನಿಸಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಜೆಡಿಎಸ್ ನ ಮಾಜಿ ಪ್ರಧಾನಿ ಮತ್ತು ಮಾಜಿ ಮುಖ್ಯಮಂತ್ರಿಗಳಿಗೂ ಖಾರವಾದ ಸಂದೇಶವನ್ನು ಈ ಉಪ ಚುನಾವಣೆ ರವಾನಿಸಿದೆ. ಕೇವಲ ಓಲೈಕೆ ರಾಜಕಾರಣದಿಂದಲೇ ಮತದಾರರನ್ನು ಮರಳು ಮಾಡುವುದು ಸಾಧ್ಯವಿಲ್ಲ ಎಂಬುದು ಆ ಸಂದೇಶ.
ಒಟ್ಟಾರೆ, ಉಪ ಚುನಾವಣೆಯ ಕಣ, ಬಿಜೆಪಿಯ ಪಾಲಿಗೆ ಸಂಖ್ಯೆಯ ಲೆಕ್ಕದಲ್ಲಿ ನಷ್ಟವೂ ಇಲ್ಲ, ಲಾಭವೂ ಇಲ್ಲ ಎಂಬಂತಾಗಿದ್ದರೆ, ವರ್ಚಸ್ಸು ಮತ್ತು ಭವಿಷ್ಯದ ಲೆಕ್ಕಾಚಾರದ ವಿಷಯದಲ್ಲಿ ಆಡಳಿತ ಪಕ್ಷಕ್ಕೆ ಹಿನ್ನಡೆಯೇ ಆಗಿದೆ. ಹಾಗೆ ನೋಡಿದರೆ, ಕಾಂಗ್ರೆಸ್ಸಿಗೆ ಒಂದು ಸ್ಥಾನ ದಕ್ಕಿದ್ದರೂ, ಅದು ಪ್ರತಿಷ್ಠಿತ ಕಣವಾಗಿತ್ತು ಮತ್ತು ಬಿಜೆಪಿಯ ಪ್ರಭಾವದ ಕ್ಷೇತ್ರವಾಗಿತ್ತು ಎಂಬ ಹಿನ್ನೆಲೆಯಲ್ಲಿ ಆ ಲಾಭ ದೊಡ್ಡ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ಆ ಪಕ್ಷಕ್ಕೆ ಅನುಕೂಲಕರವಾಗುವ ಸಾಧ್ಯತೆ ಇದೆ. ಆದರೆ, ಜೆಡಿಎಸ್ ಪಾಲಿಗೆ ಇದು ಸಂಪೂರ್ಣ ನಷ್ಟದ ಬಾಬ್ತಿನ ಚುನಾವಣೆಯೇ ಎಂಬುದು ತಳ್ಳಿಹಾಕಲಾಗದ ಸಂಗತಿ.