ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಪಾಡು ಹೇಳತೀರದ್ದಾಗಿದೆ. ಒಂದೆಡೆ ಬಿಬಿಎಂಪಿ, ಪೊಲೀಸ್ ಇಲಾಖೆ, ಸರ್ಕಾರಿ ಅಧೀನದ ಕಚೇರಿಗಳು ನೀರಿನ ಬಿಲ್ ಪಾವತಿಗೆ ಮೀನಾಮೇಷ ಎಣಿಸುತ್ತಿದ್ದರೆ ಇತ್ತ ಜಲಮಂಡಳಿಗೆ ಕೈಗಾರಿಕಾದಾರರು ಹಾಗೂ ಇತರೆ ಖಾಸಗಿ ಸಂಸ್ಥೆಗಳೂ ಕೂಡ ಇತರೆ ಮಾದರಿಯ ಶುಲ್ಕ ಪಾವತಿ ಮಾಡದೆ ನಿರ್ಲಕ್ಷ್ಯ ತೋರುತ್ತಿದ್ದೆ. ಇದರಿಂದ BWSSB ಬೊಕ್ಕಸಕ್ಕೆ ಭಾರೀ ದೊಡ್ಡ ಹೊಡೆತ ನೀಡುತ್ತಿದೆ. ಹೌದು, BWSSB ಗೆ ಕೋಟಿ ಕೋಟಿ ಪ್ರೋರೇಟಾ ಶುಲ್ಕವನ್ನು ಕೈಗಾರಿಕಾದಾರರು ಹಾಗೂ ರಾಜಾಜಿನಗರದ ಖಾಸಗಿ ಶಾಲೆಯೊಂದು ಬಾಕಿ ಉಳಿಸಿಕೊಂಡಿದೆ. ಪೀಣ್ಯ ಇಂಡಸ್ಟ್ರಿಯಲ್ ಏರಿಯಾದ 980 ಕೈಗಾರಿಕಾ ಕೇಂದ್ರಗಳಿಂದ ಜಲ ಮಂಡಳಿಗೆ ಪ್ರೊರೇಟಾ ಶುಲ್ಕ ಬಾಕಿ ಉಳಿಸಿಕೊಳ್ಳಲಾಗಿದೆ. ಅಂದಾಜು 65-70 ಕೋಟಿಯಷ್ಟು ಪ್ರೊರೇಟಾ ಶುಲ್ಕ ಬಾಕಿ ಉಳಿಸಿಕೊಳ್ಳಲಾಗಿದೆ.
ಪೀಣ್ಯ ಕೈಗಾರಿಕಾ ಪ್ರದೇಶದ 980 ಕೈಗಾರಿಕಾ ಕೇಂದ್ರಗಳಿಂದ ಶುಲ್ಕ ಕಟ್ಟಲು ಹಿಂದೇಟು!
ಕೈಗಾರಿಕಾ ಸ್ಥಾಪಿಸಿದ ಬಳಿಕ ನೀರಿನ ಸಂಪರ್ಕಕ್ಕಾಗಿ ಮೀಟರ್ ಅಳವಡಿಸಲಾಗುತ್ತೆ. ಈ ವೇಳೆ ಜಲಮಂಡಳಿಯಿಂದ ಮೀಟರ್ ಕನೆಕ್ಷನ್ ಗೆ ಪ್ರೊರೇಟಾ ಶುಲ್ಕ ಪಡೆಯಲಾಗುತ್ತೆ. ಕೈಗಾರಿಕಾ ಪ್ರದೇಶಗಳಿಗೆ ವಾಣಿಜ್ಯ ಉದ್ದಿಮೆಗಳ ಅಡಿಯಲ್ಲಿ ಪ್ರೊರೇಟಾ ಶುಲ್ಕವನ್ನುಜಲ ಮಂಡಳಿ ಪಡೆಯುತ್ತದೆ. ಇದೀಗ ಪ್ರೊರೆಟಾ ಶುಲ್ಕ ಪಾವತಿಸಲು ಕಂಪನಿಗಳು ಹಿಂದೇಟು ಹಾಕುತ್ತಿದೆ. ಈ ಹಿನ್ನೆಲೆ ವಾಯುವ್ಯ ಉಪವಿಭಾಗದಲ್ಲಿ 980 ಕೈಗಾರಿಕೆಗಳಿಗೆ ನೋಟಿಸ್ ಅನ್ನು BWSSB ಅಧಿಕಾರಿಗಳು ನೀಡಿದ್ದಾರೆ.
ಪೀಣ್ಯದಲ್ಲಿನ ಕೈಗಾರಿಕಾ ಕೇಂದ್ರಗಳು ಹಲವು ವರ್ಷಗಳಿಂದ ಪ್ರೊರೇಟಾ ಶುಲ್ಕ ಪಾವತಿಸದೆ ನೀರಿನ ಸೇವೆ ಪಡೆಯುತ್ತಿದೆ. ಇದರಿಂದ ಮಂಡಳಿಗೆ ವಾರ್ಷಿಕವಾಗಿ ಬಡ್ಡಿ ಸೇರಿದಂತೆ ಸುಮಾರು 65-70 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಪ್ರೊರೇಟಾ ಶುಲ್ಕ ಪಾವತಿಸದ ಕೈಗಾರಿಕೆಗಳಿಗೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ಗಳಿಂದ ಆಗಾಗ್ಗೆ ನೋಟೀಸ್ ಅನ್ನೂ ನೀಡುತ್ತಿದ್ದಾರೆ. ಎಷ್ಟೇ ಬಾರಿ ನೋಟೀಸ್ ನೀಡಿದರೂ ಪ್ರೋರೇಟಾ ಶುಲ್ಕ ಕಟ್ಟದೆ ಪೀಣ್ಯದಲ್ಲಿನ ಕೈಗಾರಿಕಾ ಕೇಂದ್ರಗಳು ನಿರ್ಲಕ್ಷ್ಯವಹಿಸುತ್ತಿದೆ.

7 ವರ್ಷದಿಂದ ಶುಲ್ಕ ಕಟ್ಟದೆ 3 ಕೋಟಿ ಬಾಕಿ !
ಇದರ ಜೊತೆಯಲ್ಲೇ 7 ವರ್ಷದಿಂದ ಪ್ರೊರೆಟಾ ಶುಲ್ಕ ಪಾವತಿಸದೆ ಖಾಸಗಿ ಶಾಲೆಯೊಂದು ಜಲ ಮಂಡಳಿಗೆ ಟೋಪಿ ಹಾಕುತ್ತಿದೆ. ರಾಜಾಜಿನಗರ ವ್ಯಾಪ್ತಿಯ ನ್ಯಾಷನಲ್ ಪಬ್ಲಿಕ್ ಶಾಲೆಯಿಂದ ಜಲಮಂಡಳಿಗೆ ಪ್ರೋರೇಟಾ ಶುಲ್ಕ ಕಟ್ಟದೆ ನಿರ್ಲಕ್ಷ್ಯವಹಿಸಲಾಗಿದೆ. ಕಳೆದ 2014 ರಿಂದ ನೀರಿನ ಸಂಪರ್ಕ ಪಡೆದುಕೊಂಡಿದ್ದರೂ ಈವರೆಗೂ ಕೂಡ ನ್ಯಾಷನಲ್ ಪಬ್ಲಿಕ್ ಶಾಲೆ ಪ್ರೊರೇಟಾ ಫೀಸ್ ಕಟ್ಟಿಲ್ಲ. 2014ರಲ್ಲಿ ಎರಡು ಬಾರಿ, 2016 ಮತ್ತು 2017ರಲ್ಲಿ ಹಾಗೂ 2022ರ ಜನವರಿ 11 ರಂದು ಸೇರಿ 5 ಬಾರಿ ಪ್ರೊರೇಟಾ ಶುಲ್ಕ ಪಾವತಿಗೆ ಈ ಸಂಸ್ಥೆಗೆ ನೋಟಿಸ್ ನೀಡಲಾಗಿತ್ತಾದರೂ. ಶಾಲೆಯ ಆಡಳಿತ ಮಂಡಳಿಯು ನೋಟಿಸ್ಗೆ ಜಗ್ಗದೇ ತನ್ನ ನಿರ್ಲಕ್ಷ್ಯ ಮುಂದುವರಿಸುತ್ತಿದೆ. ಬಡ್ಡಿ ಸೇರಿದಂತೆ ಅಂದಾಜು 3 ಕೋಟಿಯಷ್ಟು ಜಲಮಂಡಳಿಗೆ ಪ್ರೋರೇಟಾ ಫೀಸ್ ಅನ್ನು ನ್ಯಾಷನಲ್ ಪಬ್ಲಿಕ್ ಸ್ಕೂಲ್ ಕಟ್ಟಬೇಕಿದೆ.
ಜಲ ಮಂಡಳಿಯಿಂದ ಕಾನೂನು ಕ್ರಮದ ಎಚ್ಚರಿಕೆ!
ಈ ಬಗ್ಗೆ ಪ್ರತಿಕ್ರಿಯಿಸಿರುವ BWSSBನ ಅಡೀಷ್ನಲ್ ಚೀಫ್ ಇಂಜಿನಿಯರ್ ದೇವರಾಜು, ಈಗಾಗಲೇ ಎಲ್ಲಾ ಕೈಗಾರಿಕಾ ಸಂಸ್ಥೆಗಳಿಗೆ ಹಾಗೂ ಖಾಸಗಿ ಶಾಲೆಗೆ ಪ್ರೊರೇಟಾ ಶುಲ್ಕ ಪಾವತಿಸುವಂತೆ ನೋಟೀಸ್ ನೀಡಲಾಗದೆ. ಸದ್ಯ ಐದಾರು ಬಾರಿ ನೋಟೀಸ್ ನೀಡಿ ವಿಷಯಕ್ಕೆ ಗಮನಕ್ಕೆ ತರಲಾಗಿದೆ. ಇದನ್ನೂ ಮೀರಿ ಪ್ರೋರೇಟಾ ಶುಲ್ಕ ಕಟ್ಟದಿದ್ದರೆ ಕಾನೂನಾತ್ಮಕ ರೀತಿಯಲ್ಲಿ ನಾವು ಕೆಲಸ ಮುಂದುವರೆಸಲಿದ್ದೇವೆ ಎಂದಿದ್ದಾರೆ.













