ಧರ್ಮ ಕೀರ್ತಿರಾಜ್ ನಾಯಕರಾಗಿ ನಟಿಸುತ್ತಿರುವ, ಸತ್ಯಜಿತ್ ನಿರ್ಮಿಸಿ, ನಿರ್ದೇಶಿಸುತ್ತಿರುವ “ಬುಲೆಟ್” ಚಿತ್ರದ ಮುಹೂರ್ತ ಸಮಾರಂಭ ಆರ್ ಟಿ ನಗರದ ವಿನಾಯಕನ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು.
ಚಿತ್ರದ ಮೊದಲ ದೃಶ್ಯಕ್ಕೆ ಶಾಸಕ ಭೈರತಿ ಸುರೇಶ್ , ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಆರಂಭ ಫಲಕ ತೋರಿದರು. ಮಹಿಮ್ ಕ್ಯಾಮರಾಗೆ ಚಾಲನೆ ನೀಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಈ ಕುರಿತು ಮಾತನಾಡಿರುವ ನಿರ್ಮಾಪಕ, ನಿರ್ದೇಶಕ ಸತ್ಯಜಿತ್ ವಿನಾಯಕನ ಸನ್ನಿಧಿಯಲ್ಲಿ ಮುಹೂರ್ತ ಮಾಡಿದ್ದೇವೆ. ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಬೆಂಗಳೂರು, ಗೋವಾ, ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರ ಕ್ರೈಮ್ ಥ್ರಿಲ್ಲರ್ ಹಾಗೂ ಫ್ಯಾಮಿಲಿ ಸೆಂಟಿಮೆಂಟ್ ಕಥೆ ಆಧರಿಸಿದೆ ಎಂದು ಚಿತ್ರದ ಕುರಿತು ಮಾಹಿತಿ ನೀಡಿದ್ದಾರೆ.

ಚಿತ್ರದ ಕುರಿತು ಮಾತನಾಡಿರುವ ನಾಯಕನಾಟ ಧರ್ಮ ಕೀರ್ತಿರಾಜ್ ಸತ್ಯಜಿತ್ ಅವರು ಹಿಂದಿ, ತಮಿಳಿನಲ್ಲಿ ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಅವರೆ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಕಥೆ ತುಂಬಾ ಚೆನ್ನಾಗಿದೆ. ಅಪ್ಪ, ಮಗನ ಸೆಂಟಿಮೆಂಟ್ ಸನ್ನಿವೇಶಗಳು ಜನರಿಗೆ ಹತ್ತಿರವಾಗಲಿದೆ. ಎರಡು ಶೇಡ್ ಗಳಲ್ಲಿ ನನ್ನ ಪಾತ್ರವಿರುತ್ತದೆ. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡುತ್ತಿರುವ ಖುಷಿಯಿದೆ. ನಮ್ಮ ತಂಡಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದು ಹೇಳಿದ್ದಾರೆ.
ಚಿತ್ರದಲ್ಲಿ ಧರ್ಮ ಕೀರ್ತಿರಾಜ್‌ಗೆ ಜೋಡಿಯಾಗಿ ಮುಂಬೈನ ಶ್ರೀಯಾ ಶುಕ್ಲಾ ಹಾಗೂ ಅಜಿತಾ ಜಾ ನಟಿಸುತ್ತಿದ್ದಾರೆ. ಛಾಯಾಗ್ರಹಕರಾಗಿ ಪಿ.ವಿ.ಆರ್ ಸ್ವಾಮಿ ಕೆಲಸ ಮಾಡುತ್ತಿದ್ದು, ಸಂಗೀತ ನಿರ್ದೇಶಕ ರಾಜ್ ಭಾಸ್ಕರ್ ಕಾರ್ಯ ನಿರ್ವಹಿಸಲಿದ್ದಾರೆ.










