ರೋಹಿತ್ ಚಕ್ರತೀರ್ಥ ನೇತೃತ್ವದ ಶಾಲಾ ಪಠ್ಯ ಪರಿಷ್ಕರಣೆ ವಿವಾದ ಕೊಂಚ ತಣ್ಣಗಾಯ್ತು ಅನ್ನುವಷ್ಟರಲ್ಲೇ ಈಗ ಮತ್ತೊಂದು ವಿಷಯ ಸಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ವೀರ ಸಾವರ್ಕರ್ ಕುರಿತ 8ನೇ ತರಗತಿ ಪಾಠದಲ್ಲಿ ಸೇರಿಸಿದ್ದು ಸಾವರ್ಕರ್ ದೇಶಭಕ್ತಿಯನ್ನು ವರ್ಣಿಸುವ ಭರದಲ್ಲಿ ‘ಬ್ರಿಟಿಷರು ಅವರನ್ನು ಬಂಧಿಸಿಟ್ಟಿದ್ದ ಅಂಡಮಾನ್ ಜೈಲಿನ ಕೋಣೆಗೆ ಬುಲ್ಬುಲ್ ಹಕ್ಕಿಗಳು ಬರುತ್ತಿದ್ದವು. ಅವುಗಳ ರೆಕ್ಕೆಗಳ ಮೇಲೆ ಕುಳಿತು ಸಾವರ್ಕರ್ ಪ್ರತಿ ದಿನ ತಾಯ್ನಾಡಿನ ನೆಲವನ್ನು ಸಂಪರ್ಕಿಸಿ ಬರುತ್ತಿದ್ದರು’ ಎಂಬ ಸಾಲುಗಳನ್ನು ಸೇರಿಸಿರುವುದು ಈಗ ಅಪಹಾಸ್ಯಕ್ಕೆ ಕಾರಣವಾಗಿದೆ.
8ನೇ ತರಗತಿ ಕನ್ನಡ ಪಠ್ಯದಲ್ಲಿ ಈ ಮೊದಲು ಇದ್ದ ವಿಜಯಮಾಲಾ ರಂಗನಾಥ ಅವರ ಬ್ಲಡ್ ಗ್ರೂಪ್ ಎಂಬ ಪಾಠವನ್ನು ಕೈಬಿಟ್ಟು ಇದರ ಬದಲು ಕೆ.ಟಿ.ಗಟ್ಟಿಅವರು ಸಾವರ್ಕರ್ ಅವರನ್ನು ಬಂಧಿಸಿಟ್ಟಿದ್ದ ಅಂಡಮಾನ್ ಜೈಲಿಗೆ ಭೇಟಿ ನೀಡಿದ್ದರ ಬಗ್ಗೆ ಬರೆದಿರುವ ಪ್ರವಾಸ ಕಥನ ಆಧಾರಿತ ‘ಕಾಲವನ್ನು ಗೆದ್ದವರು’ ಪಾಠವನ್ನು ಸೇರಿಸಲಾಗಿದೆ. ಈ ಪಾಠದ ಪುಟಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಚರ್ಚೆಯ ವಸ್ತುವಾಗಿವೆ.
ಪಾಠದಲ್ಲೇನಿದೆ?: ಲೇಖಕರು ತಾವು ಅಂಡಮಾನ್ ಜೈಲಿಗೆ ಬೇಟಿ ನೀಡಿದಾಗ ಅಲ್ಲಿ ಸಾವರ್ಕರ್ ಅವರನ್ನು ಕೂಡಿಟ್ಟಿದ್ದ ಕೋಣೆಯ ಚಿತ್ರಣ, ಅಲ್ಲಿರುವ ಬರಹ ಮತ್ತಿತರ ಅಂಶಗಳನ್ನು ದಾಖಲಿಸಿದ್ದಾರೆ. ‘ಕೋಣೆಯೊಂದರಲ್ಲಿ ಹಿಂಬದಿ ಗೋಡೆಯಲ್ಲಿ ಎತ್ತರದಲ್ಲಿ ಆಕಾಶ ಕೂಡ ಕಾಣಿಸದ ಕಿಂಡಿ. ಸಾವರ್ಕರ್ ಕೋಣೆಯಲ್ಲಿ ಆ ಕಿಂಡಿ ಕೂಡ ಇಲ್ಲ. ಆದರೂ, ಎಲ್ಲಿಂದಲೋ ಬುಲ್ಬುಲ್ ಹಕ್ಕಿಗಳು ಹಾರಿ ಸೆಲ್ನೊಳಗೆ ಬರುತ್ತಿದ್ದವು. ಅವುಗಳ ರೆಕ್ಕೆಯ ಮೇಲೆ ಕುಳಿತು ಸಾವರ್ಕರ್ ಪ್ರತಿದಿನ ತಾಯ್ನಾಡಿನ ನೆಲವನ್ನು ಸಂಪರ್ಕಿಸಿ ಬರುತ್ತಿದ್ದರು’ ಎಂಬ ಸಾಲುಗಳು ಪಠ್ಯದಲಿವೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಆದರೆ, ಶಿಕ್ಷಣ ಇಲಾಖೆಯ ಪಠ್ಯ ಪುಸ್ತಕ ಸೊಸೈಟಿ ಅಧಿಕಾರಿಗಳು ‘ಇದರಲ್ಲಿ ಹೊಸದಾಗಿ ಯಾವುದನ್ನೂ ಸೇರಿಸಿಲ್ಲ, ಲೇಖಕರ ಸಾಲುಗಳನ್ನಷ್ಟೇ ಸೇರಿಸಲಾಗಿದೆ’ ಎಂದು ಹೇಳುತ್ತಿದ್ದಾರೆ.
ಈ ಕುರಿತು ಸಾಮಜಿಕ ಜಾಲತಾಣದಲ್ಲಿ ಟೀಕಿಸಿರುವ ಸಾಮಾಜಿಕ ಹೋರಾಟಗಾರ, ಪತ್ರಕರ್ತ ದಿನೇಶ್ ಕ ಉಮಾರ್ ಎಸ್ ಸಿ ಅವರು, ಒಂದು ಸಣ್ಣ ಕಿಂಡಿಯೂ ಇರಲಿಲ್ಲವಂತೆ. ಆದರೂ ಎಲ್ಲಿಂದಲೋ ಬುಲ್ ಬುಲ್ ಹಕ್ಕಿಗಳು ಸೆಲ್ ಒಳಗೆ ಬರುತ್ತಿದ್ದವಂತೆ. ಅವುಗಳ ರೆಕ್ಕೆ ಮೇಲೆ ಕೂತು ಆಯಪ್ಪ ತಾಯ್ನಾಡಿನ ನೆಲ ಸಂದರ್ಶಿಸಿ ಬರುತ್ತಿದ್ದನಂತೆ. ಕ್ಷಮಾಪಣೆ ಭಿಕ್ಷೆ ಬೇಡುವ ಬದಲು ಬುಲ್ ಬುಲ್ ಹಕ್ಕಿಗಳ ಕುಂಡಿ ಮೇಲೆ ಕುಳಿತು, ಹಾರಿ ಹೊರಗೆ ಬಂದು ತಪ್ಪಿಸಿಕೊಳ್ಳಬಹುದಿತ್ತಲ್ವಾ? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಕರ್ತ ರಾ ಚಿಂತನ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದು, ಕಿಂಡಿಯೇ ಇರಲಿಲ್ಲ ಅಂದಮೇಲೆ ಬುಲ್ ಬುಲ್ ಹಕ್ಕಿ ಮತ್ತೆಲ್ಲಿಂದ ಬ್ಯಾಕಿನ ಕಿಂಡಿಯಿಂದ ಬಂದಿದ್ದಾ? ಜೊತೆಗೆ ಅದರ ರೆಕ್ಕೆ ಮೇಲೆ ಕುಂತು ಪ್ರತಿದಿನ ತಾಯ್ನೆಲ ಸ್ಪರ್ಶಿಸಿ ಬರುತ್ತಿದ್ದರಂತೆ ಸಾವರ್ಕರ್. ಇದು ಎಂಟನೇ ತರಗತಿ ಪುಸ್ತಕದಲ್ಲಿರುವ ಸಾವರ್ಕರ್ ಕುರಿತಾದ ಪಠ್ಯ. ಒಂದ್ ಸಲ ಕಣ್ಣಿಗ್ ಎಣ್ಣೆ ಬಿಟ್ಕಂಡ್, ಹೃದಯ ಗಟ್ಟಿ ಮಾಡ್ಕೊಂಡು ಓದಿ. ಅಂದಹಾಗೇ ವಿ ಡಿ ಸಾವರ್ಕರ್ ಅವರ ಅಣ್ಣನ ಹೆಸರೂ ಗೊತ್ತಿಲ್ಲದ ಈ ಕೊಳಕಾ ಅವರ ಅಪ್ಪ ದಾಮೋದರ್ ಸಾವರ್ಕರ್ ಅವರನ್ನೇ ಅಣ್ಣ ಮಾಡಿ ಜೈಲಿನಲ್ಲಿ ಕೊಳೆಸಿಬಿಟ್ಟಿದ್ದಾನೆ. ಇದನ್ನು ನಮ್ಮ ಮಕ್ಕಳು ಓದಬೇಕು! ಸಾವರ್ಕರ್ ನೇಪಥ್ಯಕ್ಕೆ ಸರಿಯಲು ಇಂಥ ಅತಿರೇಕಗಳೇ ಸಾಕು! ಎಂದಿದ್ದಾರೆ.