ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು 8 ಮಂದಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಲೋಕಾಯುಕ್ತ ಮುಖ್ಯ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್, ಉಪ ಲೋಕಾಯುಕ್ತರಾದ ಕೆ ಎನ್ ಫಣೀಂದ್ರ, ಬಿ. ವೀರಪ್ಪ ಭೇಟಿ ನೀಡಿದ್ದಾರೆ. ಘಟನೆ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಪಡೆದಿದ್ದಾರೆ ಲೋಕಾಯುಕ್ತ ನ್ಯಾಯಮೂರ್ತಿಗಳು.

ನಿರ್ಮಾಣ ಹಂತದ ಕಟ್ಟಡ ಕುಸಿದ ಸ್ಥಳ ಪರಿಶೀಲನೆ ನಡೆಸಿರೋ ಲೋಕಾಯುಕ್ತರು, ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ಘಟನೆಗೆ ಕಾರಣರಾದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳ ಹೆಸರು ಬರೆದುಕೊಂಡಿರುವ ಲೋಕಾಯುಕ್ತರು, ಘಟನೆಗೆ ನಿಖರ ಕಾರಣ ಏನು..? ಎಂದು ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಕಟ್ಟಡ ಪರಿಶೀಲನೆ ಬಳಿಕ ಮುಖ್ಯ ಲೋಕಾಯುಕ್ತ ಬಿ.ಎಸ್.ಪಾಟೀಲ್ ಮಾತನಾಡಿ, ಇದೊಂದು ದುರ್ಘಟನೆ ಜರುಗಿದೆ. 8 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣ ಯಾರು, ಆಗಿದ್ದೇಗೆ ಅನ್ನೋದರ ತನಿಖೆ ಆಗಬೇಕು. ನಾವು ಘಟನೆ ಬಗ್ಗೆ ಸುಮೊಟೋ ಕೇಸ್ ದಾಖಲಿಸಿದ್ದೀವಿ. ಕಟ್ಟಡಕ್ಕೆ ಲೈಸೆನ್ಸ್ ಇಲ್ಲ, ಪ್ಲಾನ್ ಇಲ್ಲ, ಅಕ್ರಮವಾಗಿ ಬಿಲ್ಡಿಂಗ್ ಕಟ್ಟಿದ್ದಾರೆ. ಎರಡು ವರ್ಷದಿಂದ ಕಟ್ಟುತ್ತಿದ್ದರೂ ಬಿಬಿಎಂಪಿ ಸ್ಟಾಪ್ ಮಾಡಿಲ್ಲ ಎಂದಿದ್ದಾರೆ.

ನಾಲ್ಕು ಫ್ಲೋರ್ ಕಟ್ಟಡ ಕಟ್ಟುವರೆಗೂ ನೋಟಿಸ್ ಕೊಟ್ಟಿಲ್ಲ. ಬಿಬಿಎಂಪಿ ಅಧಿಕಾರಿಗಳನ್ನ ವಿಚಾರಣೆ ಮಾಡ್ತಿವಿ. ಅಧಿಕಾರಿಗಳ ಲೋಪ ಕಂಡುಬಂದಿದೆ, ನೋಟಿಸ್ ಕೊಡ್ತಿವಿ. ಅಕ್ರಮವಾಗಿ ಕಟ್ಟಡಗಳನ್ನ ಕಟ್ಟಬಾರದು. ಅಧಿಕಾರಿಗಳು ಎಚ್ವರಿಕೆ ವಹಿಸಬೇಕು. ಅಧಿಕಾರಿಗಳು ನೋಟಿಸ್ ನಾಟಕ ಬಿಡಬೇಕು. ಕೂಡಲೇ ಎಲ್ಲಾ ಕಡೆ ಕ್ರಮ ತೆಗದುಕೊಳ್ಳಬೇಕು. ಇಂತ ಅಕ್ರಮಗಳ ಬಗ್ಗೆ ಪೊಲೀಸ್ ಕಂಪ್ಲೆಂಟ್ ಕೊಡ ಬೇಕಿತ್ತು. ಯಾವುದನ್ನು ಮಾಡದೆ, ಅಕ್ರಮ ಮಾಡುವವರ ಜೊತೆ ಕೈಜೋಡಿಸಿ ಇಂತ ಕೆಲಸ ಮಾಡಿದ್ದಾರೆ. ನಾವು ಘಟನೆ ಬಗ್ಗೆ ಕ್ರಮ ತೆಗದುಕೊಳ್ತೇವೆ ಎಂದಿದ್ದಾರೆ.