ವಂಚನೆ ಪ್ರಕರಣದಡಿ ‘ಬಿಟಿವಿ’ ಮಾಧ್ಯಮದ ವ್ಯವಸ್ಥಾಪಕ ನಿರ್ದೇಶಕ ಜಿ.ಎಂ. ಕುಮಾರ್ ಅವರನ್ನು ಶನಿವಾರ ವಿಜಯನಗರ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಜಾಮೀನು ರಹಿತ ವಾರಂಟ್ ಜಾರಿಯಾಗಿದ್ದು, ಕುಮಾರ್ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಅಶ್ವಿನ್ ಮಹೇಂದ್ರ ಹಾಗೂ ಕುಮಾರ್ ಇಬ್ಬರೂ ಪಾಲುದಾರಿಕೆಯಲ್ಲಿ ‘ಈಗಲ್ ಸೈಟ್ ಮೀಡಿಯಾ ಕಂಪೆನಿ’ ಎಂಬ ಸಂಸ್ಥೆಯನ್ನು ಆರಂಭಿಸಿದ್ದು, ಇಬ್ಬರೂ ಅದರ ನಿರ್ದೇಶಕರಾಗಿದ್ದರು. ಆದರೆ ಅಶ್ವಿನ್ ಅವರ ದಾಖಲಾತಿಗಳನ್ನು ಆರೋಪಿ ಕುಮಾರ್ ದುರ್ಬಳಕೆ ಮಾಡಿಕೊಂಡು ಬ್ಯಾಂಕ್ಗಳಲ್ಲಿ ಖಾತೆ ತೆರೆದು ಕೋಟಿ ಕೋಟಿ ಹಣ ವಹಿವಾಟು ನಡೆಸಿದ್ದಾರೆ ಎಂದು 2022ರಲ್ಲಿ ವಿಜಯನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದರು ಎಂದು ಪೊಲೀಸರು ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಲಯ, ಇತ್ತೀಚೆಗೆ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು.