ಅಂತೂ ಇಂತೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದೆ. ಮೈತ್ರಿ ಸರ್ಕಾರ ಉರುಳಿಸಿ ಅನರ್ಹಗೊಂಡು ನಂತರ ಬಿಜೆಪಿ ಸೇರಿ ಅರ್ಹರಾದ 11 ಶಾಸಕರ ಪೈಕಿ 10 ಮಂದಿ ಸಚಿವರಾಗಿ ಪದಗ್ರಹಣ ಮಾಡಿದ್ದಾರೆ. ಆದರೆ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಉದ್ಭವವಾದ ಕಗ್ಗಂಟು ಮೂಲ ಬಿಜೆಪಿ ಶಾಸಕರಿಗೆ ಸಚಿವರಾಗುವ ಬಾಗ್ಯವನ್ನು ತಪ್ಪಿಸಿದೆ. ಸಚಿವಾಕಾಂಕ್ಷಿಗಳು ಇನ್ನಷ್ಟು ದಿನ ಕಾಯಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಗುರುವಾರ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜಪಾಲ ವಜುಭಾಯಿ ಆರ್.ವಾಲಾ ಅವರು ಎಸ್.ಟಿ.ಸೋಮಶೇಖರ್, ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್, ಡಾ.ಕೆ.ಸುಧಾಕರ್, ಬಿ.ಎ.ಬಸವರಾಜು (ಭೈರತಿ ಬಸವರಾಜು), ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಕೆ.ಗೋಪಾಲಯ್ಯ, ನಾರಾಯಣಗೌಡ, ಶ್ರೀಮಂತ ಪಾಟೀಲ್ ಅವರಿಗೆ ಸಚಿವರಾಗಿ ಪ್ರಮಾಣವಚನ ಬೋಧಿಸಿದ್ದಾರೆ. ಈ ಮೂಲಕ ಸಂಪುಟ ವಿಸ್ತರಣೆಯ ಹಂತ ಮುಗಿದಿದ್ದು, ಇನ್ನೇನಿದ್ದರೂ ಖಾತೆ ಹಂಚಿಕೆಯ ಗೊಂದಲವಷ್ಟೇ ಉಳಿದುಕೊಂಡಿದೆ. ನೂತನವಾಗಿ ಸಚಿವ ಸಂಪುಟ ಸೇರಿರುವವರು ಅಧಿಕಾರ ಸ್ವೀಕರಿಸುವ ಮುನ್ನವೇ ಪ್ರಮುಖ ಖಾತೆಗಳಿಗಾಗಿ ಲಾಬಿ ಆರಂಭಿಸಿದ್ದು, ಈ ಸಮಸ್ಯೆಯನ್ನು ಮುಖ್ಯಮಂತ್ರಿಗಳು ಯಾವ ರೀತಿ ಬಗೆಹರಿಸುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
ಇನ್ನು ಖಾತೆ ಹಂಚಿಕೆ ಕಗ್ಗಂಟು
ಸದ್ಯ ಜಲಸಂಪನ್ಮೂಲ, ಲೋಕೋಪಯೋಗಿ, ಇಂಧನ, ಬೆಂಗಳೂರು ನಗರಾಭಿವೃದ್ಧಿ ಖಾತೆಗಳಿಗೆ ತೀವ್ರ ಪೈಪೋಟಿ ಇದೆ. ಹಾಲಿ ಗೃಹ ಸಚಿವರಾಗಿರುವ ಬಸವರಾಜ ಬೊಮ್ಮಾಯಿ ಅವರು ಜಲ ಸಂಪನ್ಮೂಲ ಖಾತೆ ಮೇಲೆ ಕಣ್ಣಿಟ್ಟಿದ್ದರೆ, ನೂತನವಾಗಿ ಸಚಿವರಾಗಿರುವ ರಮೇಶ್ ಜಾರಕಿಹೊಳಿ ಕೂಡ ಇದೇ ಖಾತೆ ತಮಗೆ ಬೇಕೆಂದು ಒತ್ತಡ ತಂದಿದ್ದಾರೆ. ಬಸವರಾಜ ಬೊಮ್ಮಾಯಿ ಬಳಿ ಇರುವ ಗೃಹ ಖಾತೆ ಮೇಲೆ ಆಸಕ್ತಿ ತೋರಿಸಿದ್ದು, ಈಗಾಗಲೇ ಮುಖ್ಯಮಂತ್ರಿಗಳ ಮುಂದೆ ತಮ್ಮ ಬೇಡಿಕೆ ಇಟ್ಟಿದ್ದಾರೆ. ಇನ್ನು ಬೆಂಗಳೂರು ನಗರಾಭಿವೃದ್ಧಿ ಖಾತೆ ಬಗ್ಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್.ಅಶೋಕ ಅವರು ಮಂತ್ರಿಗಳಾದಾಗಿನಿಂದಲೂ ಸತತ ಪ್ರಯತ್ನ ಮಾಡುತ್ತಿದ್ದಾರೆ. ಇವರೊಂದಿಗೆ ನೂತನವಾಗಿ ಪ್ರಮಾಣವಸನ ಸ್ವೀಕರಿಸಿರುವ ಭೈರತಿ ಬಸವರಾಜು ಮತ್ತು ಎಸ್.ಟಿ.ಸೋಮಶೇಖರ್ ಕೂಡ ಇದೇ ಖಾತೆ ಮೇಲೆ ಕಣ್ಣಿಟ್ಟು ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿದ್ದಾರೆ.
ಅರ್ಹ 10 ಶಾಸಕರ ಜತೆಗೆ ಮೂಲ ಬಿಜೆಪಿಯಿಂದ ಮೂವರು ಶಾಸಕರೂ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರೆ ಖಾತೆ ಹಂಚಿಕೆ ಸ್ವಲ್ಪ ಮಟ್ಟಿಗೆ ಸುಲಭವಾಗುತ್ತಿತ್ತು. ಅಂದರೆ, ಮೂವಲ ಬಿಜೆಪಿಯಿಂದ ಬಂದವರಿಗೂ ಪ್ರಮುಖ ಖಾತೆಗಳನ್ನು ಹಂಚಿಕೆ ಮಾಡಲು ಸಾಧ್ಯವಾಗುತ್ತಿತ್ತು. ಆದರೆ, ಇದೀಗ 10 ಮಂದಿ ಮಾತ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿರುವುದರಿಂದ ಬಾಕಿ ಇರುವ ಇಂಧನ, ಲೋಕೋಪಯೋಗಿ, ಹಿಂದುಳಿದ ವರ್ಗಗಳ ಕಲ್ಯಾಣ, ಆಹಾರ ಮತ್ತು ನಾಗರಿಕ ಪೂರೈಕೆ ಮುಂತಾದ ಪ್ರಬಲ ಖಾತೆಗಳಿಗಾಗಿ ಈ 10 ಮಂದಿಯೇ ಹೆಚ್ಚು ಒತ್ತಡವನ್ನು ಮುಖ್ಯಮಂತ್ರಿಗಳ ಮೇಲೆ ಹೇರಲಿದ್ದು, ಇದನ್ನು ಮುಖ್ಯಮಂತ್ರಿಗಳು ಯಾವ ರೀತಿ ಎದುರಿಸುತ್ತಾರೆ ಎಂಬುದೇ ಸಮಸ್ಯೆಯಾಗಿದೆ.
ಏಕೆಂದರೆ, ಸತತ ಒಂದೂವರೆ ತಿಂಗಳಿಗೂ ಹೆಚ್ಚು ಅವಧಿಯ ಪ್ರಯತ್ನದ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರು 10+3 (10 ಮಂದಿ ನೂತನವಾಗಿ ಗೆದ್ದವರು, ಮೂವರು ಹಳೇ ಬಿಜೆಪಿ) ಮಾನದಂಡದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಯೋಚಿಸಿದ್ದರಾದರೂ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಉದ್ಭವವಾದ ವಿವಾದ ಮೂವರು ಮೂಲ ಬಿಜೆಪಿಗರಿಗೆ ಸಚಿವ ಸ್ಥಾನ ತಪ್ಪಿಸಿದೆ. ತಮ್ಮ ಆಪ್ತರೇ ಈ ವಿಚಾರದಲ್ಲಿ ಅಪಸ್ವರ ಎತ್ತಿದರೂ ಅವರನ್ನು ಸಮಾಧಾನಪಡಿಸಲು ಯಡಿಯೂರಪ್ಪ ಅವರಿಗೆ ಸಾಧ್ಯವಾಗಲಿಲ್ಲ. ಹೈಕಮಾಂಡ್ ನಾಯಕರು ಮಧ್ಯೆ ಪ್ರವೇಶಿಸಿದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಖಾತೆಗಳ ಹಂಚಿಕೆಯೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಗ್ಗಂಟಾಗಲಿದೆ.
ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತರು ಎಂಬ ಕಾರಣಕ್ಕೆ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಲು ಒಪ್ಪದೆ ಬಂಡಾಯದ ಬಾವುಟ ಹಾರಿಸಿರುವವರು ಪ್ರಮುಖ ಖಾತೆಗಳೆಲ್ಲವನ್ನೂ ಅರ್ಹ ಹತ್ತು ಶಾಸಕರಿಗೆ ನೀಡಲು ಒಪ್ಪಲಿಕ್ಕಿಲ್ಲ. ಅಲ್ಲದೆ, ಈ ಬಾರಿ 10 ಮಂದಿಯೊಂದಿಗೆ ಪ್ರಮಾಣವಚನ ಸ್ವೀಕರಿಸಬೇಕಾಗಿದ್ದ ಅರವಿಂದ ಲಿಂಬಾವಳಿ ಮತ್ತು ಉಮೇಶ್ ಕತ್ತಿ ಅವರು ಹಿರಿಯರಾಗಿದ್ದು, ಪ್ರಮುಖ ಖಾತೆಗಳ ಮೇಲೆ ಕಣ್ಣಿಟ್ಟಿದ್ದರು. ಈಗ ಅಲ್ಲದೇ ಇದ್ದರೂ ಮುಂದೆ ಅವರು ಸಚಿವರಾಗುವುದು ಖಚಿತ. ಹೀಗಾಗಿ ಕನಿಷ್ಠ ಎರಡು ಪ್ರಮುಖ ಖಾತೆಗಳನ್ನು ಅವರಿಗಾಗಿ ಮೀಸಲಿಡಬೇಕಾಗುತ್ತದೆ. ಆದರೆ, ಈಗ ಅಧಿಕಾರ ಸ್ವೀಕರಿಸಿರುವ 10 ಮಂದಿಯೂ ಪ್ರಮುಖ ಖಾತೆಗಳಿಗಾಗಿಯೇ ತಮ್ಮ ಪಟ್ಟು ಮುಂದುವರಿಸಲಿದ್ದಾರೆ. ಇದು ಕೂಡ ಯಡಿಯೂರಪ್ಪ ಅವರಿಗೆ ಸ್ವಲ್ಪ ಮಟ್ಟಿಗೆ ಕಿರಿಕಿರಿಯ ಸಂಗತಿಯೇ ಆಗಲಿದೆ.
ಖಾತೆ ಹಂಚಿಕೆ ವಿಳಂಬವಾಗುವುದೇ?
ಸದ್ಯ ಬಜೆಟ್ ಸಿದ್ಧತೆ ಮೇಲೆ ಗಮನ ಕೇಂದ್ರೀಕರಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಲಾಖಾವಾರು ಸಭೆಗಳನ್ನು ನಡೆಸಿ ಪ್ರಸ್ತಾವನೆಗಳನ್ನು ಸ್ವೀಕರಿಸುತ್ತಿದ್ದಾರೆ. ಮಾರ್ಚ್ 5ರಂದು ಮುಖ್ಯಮಂತ್ರಿಗಳು ಬಜೆಟ್ ಮಂಡಿಸಲಿದ್ದು, ಬಹುತೇಕ ಇಲಾಖೆಗಳಲ್ಲಿ ಪ್ರಸ್ತಾವನೆಗಳು ಸಿದ್ಧವಾಗಿವೆ. ಹಲವು ಇಲಾಖೆಗಳ ಪ್ರಸ್ತಾವನೆಗಳು ಮುಖ್ಯಮಂತ್ರಿಗಳಿಗೆ ಸಲ್ಲಿಕೆಯಾಗಿದೆ. ಬಜೆಟ್ ಸಿದ್ಧಪಡಿಸಲು ಇನ್ನು ಕೆಲವೇ ದಿನಗಳಿರುವುದರಿಂದ ಹೊಸದಾಗಿ ಪ್ರಮಾಣವಚನ ಸ್ವೀಕರಿಸಿರುವವರು ಖಾತೆಗಳ ಜವಾಬ್ದಾರಿ ವಹಿಸಿಕೊಂಡು ಇಲಾಖಾ ಸಭೆಗಳನ್ನು ನಡೆಸಿ ಹೊಸದಾಗಿ ಪ್ರಸ್ತಾವನೆಗಳನ್ನು ಸಿದ್ಧಪಡಿಸಲು ಸಮಯದ ಅಭಾವವಿದೆ. ಹೀಗಿರುವಾಗ ಈಗಲೇ ಖಾತೆಗಳನ್ನು ಹಂಚಿಕೆ ಮಾಡಿದರೆ ಸಚಿವರು ತಮಗೆ ಬೇಕಾದ ಕಾರ್ಯಕ್ರಮಗಳನ್ನು ಹೊಸದಾಗಿ ಸೇರಿಸಲು ಒತ್ತಡ ಹೇರಿದರೆ ಮತ್ತೆ ಸಮಸ್ಯೆಯಾಗುತ್ತದೆ. ಹೀಗಾಗಿ ಬಜೆಟ್ ಕುರಿತ ಇಲಾಖಾವಾರು ಸಭೆಗಳು ಮುಗಿದ ಬಳಿಕವಷ್ಟೇ ನೂತನ ಸಚಿವರಿಗೆ ಖಾತೆಗಳ ಹಂಚಿಕೆಯಾಗಬಹುದು ಎಂದು ಹೇಳಲಾಗುತ್ತಿದೆ.
ಸೋತವರು ಶಾಸನ ಸಭೆಗೆ ಆಯ್ಕೆಯಾಗದೆ ಸಚಿವರಾಗಲು ಸಾಧ್ಯವಿಲ್ಲ
ಈ ಮಧ್ಯೆ ಉಪ ಚುನಾವಣೆಯಲ್ಲಿ ಗೆದ್ದರೂ ಅಥಣಿ ಶಾಸಕ ಮಹೇಶ್ ಕುಮುಟಳ್ಳಿ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಆ ಕ್ಷೇತ್ರದಿಂದ ಲಕ್ಷ್ಮಣ ಸವದಿ ಅವರು ಈಗಾಗಲೇ ಉಪಮುಖ್ಯಮಂತ್ರಿಯಾಗಿದ್ದು, ಒಂದು ಕ್ಷೇತ್ರದಿಂದ ಇಬ್ಬರಿಗೆ ಸಚಿವ ಸ್ಥಾನ ಸಾಧ್ಯವಿಲ್ಲ ಎಂಬ ಮಾನಂದಡದ ಕಾರಣ ಮಹೇಶ್ ಕುಮುಟಳ್ಳಿ ಸಚಿವ ಸ್ಥಾನದಿಂದ ದೂರ ಉಳಿಯುವಂತಾಗಿದೆ. ಇದರೊಂದಿಗೆ ಸೋತ ಇಬ್ಬರು ಮತ್ತು ಚುನಾವಣೆಗೆ ಸ್ಪರ್ಧಿಸದ ಒಬ್ಬ ಅನರ್ಹ ಶಾಸಕರಿಕೆ ಸಚಿವ ಸ್ಥಾನ ಸಿಕ್ಕಿಲ್ಲ. ಇದಕ್ಕೆ ಕಾರಣ ಅವರು ಹಿಂದಿನ ಅವಧಿಯಲ್ಲಿ ಅನರ್ಹಗೊಂಡಿದ್ದು. ಒಂದು ಬಾರಿ ಅನರ್ಹಗೊಂಡವರು ಮತ್ತೆ ಶಾಸನಸಭೆ ಪ್ರವೇಶಿಸಿದರೆ ಮಾತ್ರ ಅರ್ಹರಾಗುತ್ತಾರೆ. ಅದು ಉಪ ಚುನಾವಣೆ ಮೂಲಕ ಗೆದ್ದು ಅರ್ಹರಾಗಬಹುದು ಇಲ್ಲವೇ ವಿಧಾನ ಪರಿಷತ್ ಪ್ರವೇಶಿಸಿ ಅರ್ಹರಾಗಬಹುದು. ಆದರೆ, ಅರ್ಹರಾಗುವವರೆಗೆ ಸಚಿವರಾಗಲು ಸಾಧ್ಯವಿಲ್ಲ. ಒಂದೊಮ್ಮೆ ಅವರನ್ನು ಸಚಿವರನ್ನಾಗಿ ಮಾಡಿದರೂ ಕಾನೂನು ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಕಾರಣಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಎಲ್ಲರಿಗೂ ಸಚಿವ ಸ್ಥಾನ ಎಂಬುದು ಸದ್ಯಕ್ಕೆ ಸಾಧ್ಯವಿಲ್ಲ.