ಜಿ 20 ಶೃಂಗಸಭೆಗಾಗಿ ಎರಡು ದಿನ ದೆಹಲಿಗೆ ಆಗಮಿಸಿರುವ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಎರಡನೇ ದಿನವಾದ ಭಾನುವಾರ (ಸೆಪ್ಟೆಂಬರ್ 10) ಮುಂಜಾನೆ ಸಭೆ ಆರಂಭಕ್ಕೂ ಮುನ್ನ ಪತ್ನಿ ಅಕ್ಷತಾ ಮೂರ್ತಿ ಜೊತೆ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ದೇವಾಲಯದಲ್ಲಿ ಪ್ರಾರ್ಥನೆ, ಪೂಜೆ ಸಲ್ಲಿಸಿದ ನಂತರ ರಾಜ್ಘಾಟ್ಗೆ ತೆರಳಿ ಮಹಾತ್ಮ ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಿದರು. ಸುನಕ್ ಅವರ ಭೇಟಿಯ ಹಿನ್ನೆಲೆಯಲ್ಲಿ ವಿಸ್ತಾರವಾದ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.

ಎರಡು ದಿನಗಳ ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸುನಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಭಾರತಕ್ಕೆ ಬಂದಿದ್ದಾರೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಇಂಗ್ಲೆಂಡ್ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ರಿಷಿ ಸುನಕ್ ಅವರು ಭಾರತಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ.

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ ಕುರಿತು ಅಕ್ಷರಧಾಮ ದೇವಾಲಯದ ನಿರ್ದೇಶಕ ಜ್ಯೋತಿಂದ್ರ ದವೆ ಸುದ್ದಿಗಾರರೊಂದಿಗೆ ಮಾತನಾಡಿ, ಅವರ ಅನುಭವ ಅಸಾಧಾರಣವಾಗಿತ್ತು. ಅವರು ಬಹಳ ನಂಬಿಕೆಯಿಂದ ಪೂಜೆ ಮತ್ತು ಆರತಿಯನ್ನು ಮಾಡಿದರು. ನಾವು ಅವರಿಗೆ ದೇವಾಲಯವನ್ನು ತೋರಿಸಿದ್ದೇವೆ. ನಂತರ ದೇವಸ್ಥಾನದ ಮಾದರಿಯನ್ನು ಉಡುಗೊರೆಯಾಗಿ ನೀಡಿದೆವು. ಅವರು ಇಲ್ಲಿ ಪ್ರತಿ ನಿಮಿಷವನ್ನು ಆನಂದಿಸಿದರು. ಅವರ ಪತ್ನಿ ಅಕ್ಷತಾ ಮೂರ್ತಿ ಸಹ ಖುಷಿಪಟ್ಟರು ಎಂದರು.

ಜಿ 20 ಶೃಂಸಭೆಗೂ ಮುನ್ನ, ರಿಷಿ ಸುನಕ್ ಅವರು ಜಿ 20 ಶೃಂಗಸಭೆಗೆ ಭಾರತಕ್ಕೆ ಬಂದಿಳಿದ ಸಂದರ್ಭದಲ್ಲಿ, ನಾನೊಬ್ಬ ಹೆಮ್ಮೆಯ ಹಿಂದೂ. ನಾನು ಹೇಗೆ ಬೆಳೆದೆ, ನಾನು ಹಾಗೇ ಇದ್ದೇನೆ. ಮುಂದಿನ ಒಂದೆರಡು ದಿನ ಇಲ್ಲಿರುವಾಗ ಮಂದಿರಕ್ಕೆ ಭೇಟಿ ನೀಡಬೇಕೆಂದಿದ್ದೇನೆ. ನಾವು ರಕ್ಷಾಬಂಧನವನ್ನು ಆಚರಿಸುತ್ತೇವೆ. ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸುತ್ತೇವೆ. ಆದರೆ ಈ ಬಾರಿ ಕೆಲಸದ ಒತ್ತಡದಿಂದ ಆಚರಿಸಲು ಸಾಧ್ಯವಾಗಲಿಲ್ಲ, ಹೀಗಾಗಿ ದೇವಾಲಯಕ್ಕೆ ಭೇಟಿ ನೀಡಿ ಸರಿದೂಗಿಸುತ್ತೇವೆ ಎಂದಿದ್ದರು.












