ಭಾರತದಲ್ಲಿ ನೂರು ಕೋಟಿ ಡೋಸ್ ವ್ಯಾಕ್ಸಿನ್ ನೀಡಲಾಗಿದೆ ಎಂದು ಸರ್ಕಾರ ಒಂದು ಕಡೆ ತನ್ನ ಬೆನ್ನು ತಟ್ಟಿಕೊಳ್ಳುತ್ತಿದೆಯಾದರೆ ವಿರೋಧ ಪಕ್ಷಗಳು ಕೇವಲ ಇಪ್ಪತ್ತೊಂದು ಶೇಕಡಾ ಜನರಿಗೆ ಮಾತ್ರ ಎರಡನೇ ಡೋಸ್ ಲಸಿಕೆ ನೀಡಲಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿವೆ. ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆಯೂ ಭಾರತೀಯ ಲಸಿಕೆ ಕೋವ್ಯಾಕ್ಸಿನ್ಗೆ ತುರ್ತು ಬಳಕೆಗೆ ಅನುಮತಿ ನೀಡಿ ಕೋವ್ಯಾಕ್ಸಿನ್ ಪಡೆದುಕೊಂಡವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಈ ನಡುವೆ 68 ಶೇಕಡಾದಷ್ಟು ಜನರು ಪೂರ್ಣ ಪ್ರಮಾಣದ ಲಸಿಕೆ ಪಡೆದುಕೊಂಡಿರುವ ಬ್ರಿಟನ್ನಿಂದ ಹೊಸ ಸುದ್ದಿ ಬಂದಿದ್ದು ಅಲ್ಲಿನ ಔಷಧ ನಿಯಂತ್ರಣ ಮಂಡಳಿ ಕೋವಿಡ್19 ಗೆ ಆ್ಯಂಟಿ ವೈರಲ್ ಆಗಿ ಕಾರ್ಯ ನಿರ್ವಹಿಸುವ ಮೌಖಿಕ ಮಾತ್ರೆಗೆ ಗುರುವಾರ ಅನುಮೋದನೆ ನೀಡಿದೆ. ಈ ಮೂಲಕ ಬ್ರಿಟನ್ ಕೋವಿಡ್ ಗೆ ಸಂಬಂಧಿಸಿದಂತೆ ಮಾತ್ರೆಗೆ ಅನುಮೋದನೆ ನೀಡಿದ ಮೊದಲ ದೇಶವಾಗಿ ದಾಖಲೆ ಮಾಡಿತು.
ಬ್ರಿಟನ್ನಿನ ಮೆಡಿಸಿನ್ಸ್ ಮತ್ತು ಹೆಲ್ತ್ಕೇರ್ ಪ್ರಾಡಕ್ಟ್ ರೆಗ್ಯುಲೇಟರಿ ಏಜೆನ್ಸಿಯು (MHRA) molnupiravir ಎಂಬ ಔಷಧವನ್ನು ಕೋವಿಡ್-19 ಪಾಸಿಟಿವ್ ಫಲಿತಾಂಶ ಬಂದ ನಂತರ ಮತ್ತು ರೋಗಲಕ್ಷಣಗಳು ಪ್ರಾರಂಭವಾದ ಐದು ದಿನಗಳಲ್ಲಿ ಬಳಸಿದರೆ ವೈರಸ್ ನಿಯಂತ್ರಣಕ್ಕೆ ಬರುತ್ತದೆ ಎಂದು ಶಿಫಾರಸು ಮಾಡಿದೆ.
Molnupiravir ಅಮೆರಿಕದಲ್ಲೂ ಸಂಚಲನ ಸೃಷ್ಟಿಸಿದ್ದು ಇದನ್ನು ಅಧಿಕೃತಗೊಳಿಸಬೇಕೆ ಎಂಬುದರ ಕುರಿತು ಮತ ಚಲಾಯಿಸಲು US ಸಲಹೆಗಾರರು ಈ ತಿಂಗಳು ಸಭೆ ಸೇರಲಿದ್ದಾರೆ. ಮೆರ್ಕ್ (Merck) ಎಂಬ ಬ್ರಿಟನ್ನಿನ ಔಷಧ ಉತ್ಪಾದನಾ ಕಂಪೆನಿಯು ತಯಾರಿಸಿರುವ ಮಾತ್ರೆಗಳು ಇದಾಗಿದ್ದು ಅಲ್ಲಿನ ಆರೋಗ್ಯ ತಜ್ಞರು ನಿರಂತರವಾಗಿ ಇದರ ಕ್ಲಿನಿಕಲ್ ಪ್ರಯೋಗಗಳನ್ನು ಪರಿಶೀಲಿಸಿದ್ದು ಕೋವಿಡ್ -19 ನಿಂದ ಸಾಯುವ ಅಥವಾ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಗಳನ್ನು ಅರ್ಧದಷ್ಟು ಕಡಿಮೆಗೊಳಿಸಬಹುದು ಎಂದಿದ್ದಾರೆ.

ಈ ವರ್ಷದ ಅಂತ್ಯದ ವೇಳೆಗೆ 10 ಮಿಲಿಯನ್ ಮಾತ್ರೆಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ ಎಂದು ಹೇಳಿರುವ ಮೆರ್ಕ್ ಕಂಪೆನಿಯು 2020ರಲ್ಲಿ ಕನಿಷ್ಠ 20 ಮಿಲಿಯನ್ ಪಿಲ್ಸ್ಗಳನ್ನು ಉತ್ಪಾದಿಸಲಾಗುವುದು ಎಂದು ಆಶಾವಾದ ವ್ಯಕ್ತಪಡಿಸಿದೆ. ಕೋವಿಡ್-19 ಗಾಗಿ ಸುಲಭವಾಗಿ ನಿರ್ವಹಿಸಬಹುದಾದ ಆಂಟಿವೈರಲ್ ಮಾತ್ರೆಗಳನ್ನು ಅಭಿವೃದ್ಧಿಪಡಿಸಲು Pfizer ಮತ್ತು Roche ಸಹ ಅಧ್ಯಯನಗಳನ್ನು ನಡೆಸುತ್ತಿವೆ. ಈಗಾಗಲೇ Pfizer COVID-19 ತಡೆಗಟ್ಟುವಿಕೆಗಾಗಿ ತನ್ನ ಮೌಖಿಕ ಆಂಟಿವೈರಲ್ ಔಷಧದ ದೊಡ್ಡ ಅಧ್ಯಯನವನ್ನು ಪ್ರಾರಂಭಿಸಿದ್ದು ಫಲಿತಾಂಶದ ನಿರೀಕ್ಷೆಯಲ್ಲಿದೆ.
ಜಗತ್ತಿನಾದ್ಯಂತ 5.2 ಮಿಲಿಯನ್ಗಿಂತಲೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ಕೋವಿಡ್ ನಿಯಂತ್ರಣಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯನ್ನೂ ಒಳಗೊಂಡು ಇಡೀ ವಿಶ್ವ ಇಲ್ಲಿಯವರೆಗೂ ಲಸಿಕೆಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿತ್ತು. ಇದೀಗ ಮೌಖಿಕ ಮಾತ್ರೆಯ ಉತ್ಪಾದನೆ ಆರಂಭಗೊಂಡಿದ್ದು ಇನ್ನಾದರೂ ಜನ ಕೋವಿಡ್ ಭಯದಿಂದ ಮುಕ್ತರಾಗಿ ಮೊದಲಿನಂತೆ ಸಹಜ ಸ್ಥಿತಿ ನೆಲೆಗೊಳ್ಳಬಹುದು ಎಂಬುವುದು ಸದ್ಯಕ್ಕಿರುವ ಆಶಾವಾದವಾಗಿದೆ.