ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಕುಸ್ತಿ ಪಟುಗಳ ವಿರುದ್ದ ತಮ್ಮ ನಾಲಿಗೆ ಹರಿಬಿಡುವ ವಿಕೃತಿಯನ್ನ ಮೆರೆದಿದ್ದಾರೆ. ಅದರಲ್ಲೂ ಕ್ರೀಡಾಪಟುಗಳ ದೇಶ ಸೇವೆಯನ್ನ ಕಡೆಗಣಿಸಿ ಟೀಕೆ ಮಾಡಿರುವುದು ಜನರ ಆಕ್ರೋಶಕ್ಕೆ ಕೂಡ ಕಾರಣವಾಗಿದೆ.
ಹೌದು ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ, ತಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಕುಸ್ತಿಪಟುಗಳನ್ನ ಟೀಕಿಸುವ ಭರದಲ್ಲಿ, ಅವರು ದೇಶಕ್ಕಾಗಿ ಗೆದ್ದ ಪದಕಗಳ ಬಗ್ಗೆ ಹಗುರವಾಗಿ ಮಾತನಾಡಿ, ವಿವಾದವನ್ನು ಸೃಷ್ಟಿಸಿದ್ದಾರೆ.
ಉತ್ತರ ಪ್ರದೇಶದ ಸ್ಥಳೀಯ ಸುದ್ದಿವಾಹಿನಿಯ ಪತ್ರಕರ್ತ ಒಂದಷ್ಟು ಪ್ರಶ್ನೆಯನ್ನ ಕೇಳಿದ್ದಾನೆ. ಇದಕ್ಕೆ ಸಿಟ್ಟಾದ ಬ್ರಿಜ್ ಭೂಷಣ್ ಕುಸ್ತಿಪಟುಗಳು ಪದಕಗಳನ್ನ ವಾಪಸ್ ಕೊಡುವುದರ ಜೊತೆಗೆ, ಇಷ್ಟು ವರ್ಷ ಪಡೆದಿರುವ ಬಹುಮಾನದ ಹಣವನ್ನು ವಾಪಸ್ ಕೊಡಲಿ, ಪದಕಗಳ ಮೌಲ್ಯ 15 ಲಕ್ಷ ರೂಪಾಯಿ ಮಾತ್ರ ಎಂದು ಕೊಂಕುಮಾತುಗಳನ್ನಾಡಿದ್ದಾರೆ.

ಬ್ರಿಜ್ ಭೂಷಣ್ ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾ ನಿರತ ಕುಸ್ತಿಪಟುಗಳು “ಕ್ರೀಡಾಪಟುಗಳನ್ನ ಭೂಷಣ್ ಎಷ್ಟು ಕೀಳಾಗಿ ನೋಡುತ್ತಾರೆ ಎನ್ನುವುದನ್ನ ಅವರ ಮಾತುಗಳೇ ತೋರಿಸುತ್ತವೆ. ನಮ್ಮ ಇಷ್ಟು ವರ್ಷಗಳ ಪರಿಶ್ರಮದ ಹಾಗೂ ಅದರ ಮೌಲ್ಯ ಕೇವಲ ಹದಿನೈದು ಲಕ್ಷ ರೂಪಾಯಿ ಎನ್ನುವ ಮೂಲಕ ಕುಸ್ತಿಪಟುಗಳ ದೇಶ ಸೇವೆಯನ್ನ ಕೀಳಾಗಿ ಕಂಡಿದ್ದಾರೆ. ಎಂದು ಬೇಸರವನ್ನ ವ್ಯಕ್ತಪಡಿಸಿದ್ದಾರೆ .
ಇನ್ನು ಪ್ರತಿಭಟನಾ ನಿರತ ಕುಸ್ತಿಪಟುಗಳನ್ನ ಕಾಂಗ್ರೆಸ್ ನಾಯಕರಾದ ರಣದೀಪ ಸುರ್ಜೆವಾಲ, ಸಚಿನ್ ಪೈಲೆಟ್ ಭೇಟಿ ಮಾಡಿದ್ದು, ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ. ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಸುರ್ಜೇವಾಲ ಕುಸ್ತಿಪಟುಗಳಿಗೆ ನ್ಯಾಯ ಸಿಗುವುದಾದರೆ ರಕ್ತಹರಿಸಲು ಸಿದ್ಧ ಎಂದಿದ್ದಾರೆ. ಇದೇ ವೇಳೆ ಸಮೀಪಿಸುತ್ತಿದ್ದಂತೆ ಜಂತರ್ ಮಂತರ್ ಹಾಗೂ ದೆಹಲಿ ಹೊರವಲಯಗಳಲ್ಲಿ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಪಂಜಾಬ್ ಹರಿಯಾಣ ಉತ್ತರಪ್ರದೇಶಗಳಿಂದ ಸಾವಿರಾರು ರೈತರು ಆಗಮಿಸುವ ನಿರೀಕ್ಷೆ ಇದೆ. ಹಲವು ಸ್ಥಳಗಳಲ್ಲಿ ಈಗಾಗಲೇ ಸಿಸಿಟಿವಿಗಳನ್ನ ಅಳವಡಿಸಲಾಗಿದೆ. ಒಟ್ಟಾರೆಯಾಗಿ ಈಗಾಗಲೇ ವಿವಾದಕ್ಕೆ ಸಿಲುಕಿಕೊಂಡಿರುವ ಬ್ರಿಜ್ ಭೂಷಣ್ ಸಿಂಗ್ ಇದೀಗ ಮತ್ತೊಂದು ವಿವಾದವನ್ನ ತಮ್ಮ ಅಲ್ಪ ಜ್ಞಾನದಿಂದ ಹರಿ ಬಿಟ್ಟಿರುವುದು ಅವರಿಗೆ ಇನ್ನಷ್ಟು ಸಂಕಷ್ಟಗಳನ್ನು ತಂದೊಡ್ಡಿದೆ.