ದಿನಂಪ್ರತಿ ಸಾವಿರಾರು ಪ್ರವಾಸಿಗರನ್ನು ದೇಶಕ್ಕೆ ಆಕರ್ಷಿಸುವ, ಹತ್ತಾರು ಐತಿಹಾಸಿಕ ಸ್ಮಾರಕ, ಕಟ್ಟಡಗಳಿರುವ, ದೇಶದ ಆಡಳಿತ ಕೇಂದ್ರವೂ ಆಗಿರುವ ದೆಹಲಿ ಒಂದು ಕಡೆಯಿಂದ ಅತ್ಯಂತ ಸಂಪದ್ಭರಿತ ಪ್ರದೇಶವಾಗಿ ಕಂಡರೆ, ಇನ್ನೊಂದು ಭಾಗದಲ್ಲಿ ನೂರಾರು ಸ್ಲಂಗಳನ್ನು ಕಾಣಬಹುದು. ಅಭಿವೃದ್ಧಿಯ ಮಾದರಿಯಾಗಿ ದೆಹಲಿಯನ್ನು ಈಗಾಗಲೇ ಬಿಂಬಿಸಲಾಗಿದೆ. ವಿಪರ್ಯಾಸವೆಂದರೆ ಈ ಸ್ಲಂಗಳ ನಿವಾಸಿಗಳು ನೀರು, ರಸ್ತೆ, ವಿದ್ಯುತ್ ಮುಂತಾದ ಅತ್ಯಂತ ಮೂಲಭೂತ ಅಗತ್ಯಗಳಿಂದಲೇ ವಂಚಿತರಾಗಿ ಜೀವನ ಸಾಗಿಸುತ್ತಿದ್ದಾರೆ. ಇದು ಈಗಾಗಲೇ ದುರ್ಬಲ ಅನ್ನಿಸಿಕೊಂಡಿರುವ ಮಹಿಳೆಯರನ್ನು ಮತ್ತಷ್ಟು ದುರ್ಬಲಗೊಳಿದೇ ಇರದು.
ಅತಿ ಹೆಚ್ಚು ಅನಧಿಕೃತ ಕಾಲೊನಿಗಳನ್ನು ಹೊಂದಿರುವ ಸಂಗಮ್ ವಿಹಾರ್ ಅಂಥ ಸ್ಲಂಗಳಲ್ಲಿ ಒಂದು. ಅಲ್ಲಿ ವಾಸಿಸುವ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿದೆ. ಅದರಲ್ಲೂ ಕೋವಿಡ್ ಮತ್ತು ಲಾಕ್ಡೌನ್ ಈ ಜನರ ಬದುಕಿನಲ್ಲಿ ಸೃಷ್ಟಿಸಿರುವ ಏರುಪೇರಿನ ನಂತರ ಮಹಿಳೆಯರ ಸುರಕ್ಷತೆಯೇ ಈ ಪ್ರದೇಶದ ಅತ್ಯಂತ ದೊಡ್ಡ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ‘ಬ್ರೇಕ್ಥ್ರೂ ಇಂಡಿಯಾ’ ಎಂಬ ಸಂಸ್ಥೆ ಆಯೋಜಿಸಿರುವ ಯುವಕರ ತಂಡವು ದೊಡ್ಡ ಮತ್ತು ಸಣ್ಣ ಉಪಕ್ರಮಗಳೊಂದಿಗೆ ಇಲ್ಲಿ ಬದಲಾವಣೆಯ ಗಾಳಿ ಬೀಸುವ ಪ್ರಯತ್ನದಲ್ಲಿದೆ.
ಬ್ರೇಕ್ ಥ್ರೂ ಎನ್ನುವುದು ಸಾಂಸ್ಕೃತಿಕ ಬದಲಾವಣೆಯನ್ನು ಸೃಷ್ಟಿಸಲು ಕೆಲಸ ಮಾಡುವ ಸಂಸ್ಥೆಯಾಗಿದೆ ಮತ್ತು ಹುಡುಗಿಯರು ಹಾಗೂ ಮಹಿಳೆಯರ ವಿರುದ್ಧ ತಾರತಮ್ಯ ಮತ್ತು ಹಿಂಸೆ ಸರ್ವಥಾ ಸ್ವೀಕಾರಾರ್ಹವಲ್ಲ ಎನ್ನುವ ಧ್ಯೇಯದೊಂದಿಗೆ ಕೆಲಸ ಮಾಡುವ ಸಂಸ್ಥೆ. ಇದನ್ನು 2000 ದಲ್ಲಿ ಮಲ್ಲಿಕಾ ದತ್ ಎಂಬವರು ಸ್ಥಾಪಿಸಿದರು. ಈ ಸಂಸ್ಥೆಯು ‘ಮನ್ ಕೆ ಮಂಜೀರೆ: ಆನ್ ಆಲ್ಬಮ್ ಆಫ್ ವುಮೆನ್ಸ್ ಡ್ರೀಮ್’ ಬಿಡುಗಡೆಯೊಂದಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿತ್ತು. ಇದು ಆಲ್ಬಮ್ ಮತ್ತು ಮ್ಯೂಸಿಕ್ ವೀಡಿಯೋ ಮೂಲಕ ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡುವ, ಲಿಂಗ ಆಧಾರಿತ ಹಿಂಸೆಯ ಬಗ್ಗೆ ಜಾಗೃತಿ ಮೂಡಿಸಲು ಪಾಪ್ ಸಂಸ್ಕೃತಿಯನ್ನು ಬಳಸುವ ಮತ್ತು ಕಾರ್ಯಕ್ರಮಗಳ ಮೂಲಕ ಸಾಮಾಜಿಕ ನ್ಯಾಯ ಪ್ರಕ್ರಿಯೆಯನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿತ್ತು.
ಈ ಸಂಸ್ಥೆಯು ನೂರಾರು ಸ್ವಯಂಸೇವಕರನ್ನು ಹೊಂದಿದ್ದು ಸಂಗಮ ವಿಹಾರ್ ನಿವಾಸಿ 18 ವರ್ಷದ ನರ್ಗೀಸ್ ಅವರಲ್ಲೊಬ್ಬರು. ಅವರು ಕಳೆದ ಮೂರು ವರ್ಷಗಳಿಂದ ಯುವ ಸ್ವಯಂಸೇವಕರಾಗಿ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ.
ಅವರು ಬ್ರೇಕ್ಥ್ರೂನ ‘ದಖಲ್ ದೋ’ ಎನ್ನುವ ಕಾರ್ಯಕ್ರಮದ ಭಾಗವಾಗಿದ್ದು, ಇದು ಯುವಜನರಿಗೆ, ವಿಶೇಷವಾಗಿ 19 ರಿಂದ 25 ವರ್ಷ ವಯಸ್ಸಿನವರಿಗೆ, ಮಹಿಳೆಯರು ಮತ್ತು ಹುಡುಗಿಯರ ಮೇಲೆ ದೌರ್ಜನ್ಯವಾಗುತ್ತಿರುವಾಗ ಮಧ್ಯಪ್ರವೇಶಿಸಿಸುವುದನ್ನು ಮತ್ತು ತಡೆಯುವುದನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮದ ಪ್ರಮುಖ ಸಂದೇಶವೆಂದರೆ ಹಿಂಸಾಚಾರವು ‘ಖಾಸಗಿ ವಿಷಯ’ ಅಲ್ಲವಾಗಿದ್ದು ತುರ್ತು ಗಮನದ ಅಗತ್ಯವಿರುವ ಸಾಮಾಜಿಕ ಸಮಸ್ಯೆಯಾಗಿದೆ ಎನ್ನುವುದಾಗಿದೆ. ರಾಜ್ಕುಮಾರ್ ರಾವ್ ಅವರು ಬ್ರಾಂಡ್ ಅಂಬಾಸಿಡರ್ ಆಗಿರುವ ಈ ಅಭಿಯಾನವು ಮಹಿಳೆಯರ ಮೇಲಿನ ದೌರ್ಜನ್ಯ, ಅದರ ಪರಿಣಾಮಗಳು, ಮಧ್ಯಪ್ರವೇಶಿಸುವ ವಿಧಾನಗಳು ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತದೆ.
ಲಾಕ್ಡೌನ್ ಸಂದರ್ಭದಲ್ಲಿ ಹೆಚ್ಚಿನ ಪುರುಷರು ಮನೆಯಲ್ಲಿಯೇ ಇರಬೇಕಾಗಿ ಬಂದು ದೇಶದಲ್ಲಿ ಕೌಟುಂಬಿಕ ದೌರ್ಜನ್ಯದ ಪ್ರಕರಣದಲ್ಲಿ ಭಾರಿ ಹೆಚ್ಚಳ ಕಂಡುಬಂದಿತ್ತು. ಅಲ್ಲದೆ ಆರ್ಥಿಕ ಕುಸಿತದ ಭಾರಿ ಹೊರೆ ಮೊದಲು ವರ್ಗಾವಣೆಯಾದದ್ದೇ ಮಹಿಳೆಯ ಮೇಲೆ ಎಂದು ಅರ್ಥ ಮಾಡಿಕೊಂಡ ನರ್ಗಿಸ್ ಸ್ವತಃ ತಾವೇ ಈ ದೌರ್ಜನ್ಯದ ವಿರುದ್ಧ ನಿಲ್ಲಲು ನಿರ್ಧರಿಸಿದರು.
ಈ ಬಗ್ಗೆ ‘ದಿ ಬೆಟರ್ ಇಂಡಿಯಾ’ ಜೊತೆ ಮಾತನಾಡುತ್ತಾ ನರ್ಗಿಸ್ “ಸಾಂಕ್ರಾಮಿಕ ರೋಗದಿಂದಾಗಿ ಮಹಿಳೆಯರು ತಮ್ಮ ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಅನೇಕ ಜನರು ತಮ್ಮ ಜೀವನೋಪಾಯವನ್ನು ಕಳೆದುಕೊಂಡರು ಮತ್ತು ಆರ್ಥಿಕ ಸಂಕಷ್ಟಗಳು ಮನೆಯಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದವು” ಎಂದು ಹೇಳಿದ್ದಾರೆ.
ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಎರಡು ಮತ್ತು ಮೂರು ವರ್ಷದ ಇಬ್ಬರು ಪುಟ್ಟ ಮಕ್ಕಳಿರುವ ಮನೆಯಲ್ಲಿ ನಿತ್ಯವೂ ಜಗಳವಾಗುತ್ತಿದ್ದುದು ನರ್ಗಿಸ್ ಅವರ ಗಮನಕ್ಕೆ ಬಂದಿತ್ತು. ಆ ಕುಟುಂಬವು ಯಾವುದೇ ಕೆಲಸವನ್ನು ಹುಡುಕಲು ಸಾಧ್ಯವಾಗಿರಲಿಲ್ಲ. ಎಲ್ಲರಿಗೂ ಆಹಾರ ಒದಗಿಸುವ ಒತ್ತಡ ಹೆಚ್ಚಿತ್ತು. ಹಾಗಾಗಿ ಪತಿ ತನ್ನ ಪತ್ನಿಗೆ ಪೋಷಕರ ಮನೆಯಿಂದ ಹಣಕಾಸಿನ ನೆರವು ಪಡೆಯಲು ಒತ್ತಡ ಹೇರುತ್ತಿದ್ದರು.
ಒಂದು ದಿನ ಆ ಮನೆಯಿಂದ ನರ್ಗೀಸ್ ಅವರಿಗೆ ಜಗಳದ ಧ್ವನಿ ಕೇಳಿಬಂತು. ಏನಾಯಿತು ಎಂದು ವಿಚಾರಿಸಲು ಮುಂದಾದಾಗ ಆರ್ಥಿಕ ಮುಗ್ಗಟ್ಟಿನಿಂದ ಪತಿ ಮಹಿಳೆಗೆ ದೈಹಿಕ ಕಿರುಕುಳ ನೀಡುತ್ತಿದ್ದುದು ತಿಳಿದು ಬಂತು. ಕುಟುಂಬದ ನೆರವಿಗೆ ನಿಂತ ನರ್ಗಿಸ್ ಮತ್ತವರ ತಂಡ ಆ ಕುಟುಂಬಕ್ಕಾಗಿ ಪಡಿತರ ಮತ್ತು ಸ್ವಲ್ಪ ಹಣವನ್ನು ಸಂಗ್ರಹಿಸಿ ಕೊಟ್ಟಿತು.
ಇನ್ನೊಂದು ಸನ್ನಿವೇಶದಲ್ಲಿ ಕೋವಿಡ್ ಪತಿಯ ಉದ್ಯೋಗವನ್ನು ಕಿತ್ತುಕೊಂಡಿತ್ತು. ಯಾವುದೇ ಜೀವನೋಪಾಯದ ಮೂಲವಿಲ್ಲದೆ ಕುಟುಂಬವು ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿತ್ತು. ಇದರಿಂದ ಮನೆಗೆಲಸ ಮಾತ್ರ ಮಾಡುತ್ತಿದ್ದ ಮಹಿಳೆ ನಿತ್ಯ ದೈಹಿಕ ಕಿರುಕುಳ ಹಾಗೂ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಳು. ಇದನ್ನು ಅರಿತ ನರ್ಗಿಸ್ ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ಮಹಿಳೆಯ ಬಳಿ ಬಂದು ಆಕೆ ಬಯಸಿದರೆ ಗಂಡನ ವಿರುದ್ಧ ಪ್ರಕರಣ ದಾಖಲಿಸಬಹುದು ಎಂದು ಹೇಳಿ, ಲಭ್ಯವಿರುವ ಮಹಿಳಾ ಸಹಾಯವಾಣಿ ನಂಬರನ್ನೂ ಒದಗಿಸುತ್ತಾರೆ. ನರ್ಗಿಸ್ ಅವರ ತಂಡದ ಜೊತೆ ಮಾತನಾಡಿದ ಮಹಿಳೆ “ಅವನು ತನ್ನನ್ನು ತುಂಬಾ ಕೆಟ್ಟದಾಗಿ ಥಳಿಸುತ್ತಾನೆ ಮತ್ತು ತನಗೆ ಆರು ಜನ ಅವಿವಾಹಿತ ಸಹೋದರಿಯರಿದ್ದು ಅತ್ಯಂತ ಬಡ ಕುಟುಂಬಕ್ಕೆ ತಾನು ಸೇರಿದವಳಾಗಿದ್ದರೂ ವರದಕ್ಷಿಣೆ ತರುವಂತೆ ಒತ್ತಡ ಹೇರುತ್ತಿದ್ದಾನೆ” ಎಂದಿದ್ದಾರೆ. ನರ್ಗಿಸ್ ಮಹಿಳೆಯ ಬೆಂಬಲಕ್ಕೆ ನಿಲ್ಲುತ್ತಾರೆ ಅಂತಾದಾಗ ಅವರ ಪತಿ ಇದು ತಮ್ಮ ವೈಯಕ್ತಿಕ ವಿಷಯವಾಗಿದ್ದು ಯಾವುದೇ ಎನ್ಜಿಒಗೂ ತಮ್ಮ ವೈಯಕ್ತಿಕ ಬದುಕಿನಲ್ಲಿ ಪ್ರವೇಶಿಸುವ ಹಕ್ಕಿಲ್ಲ ಎನ್ನುತ್ತಾರೆ. ಆದರೆ ದೌರ್ಜನ್ಯ ಯಾವತ್ತೂ ವೈಯಕ್ತಿಕ ವಿಚಾರವಲ್ಲ, ಸಮಾಜದ ಸ್ವಾಸ್ಥ್ಯಕ್ಕೆ ಸಂಬಂಧಪಟ್ಟದ್ದು ಎನ್ನುವುದನ್ನು ಬಲವಾಗಿ ನಂಬುವ ನರ್ಗಿಸ್ ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ದರಿರುವುದಿಲ್ಲ.
ನರ್ಗೀಸ್ರ ಬಲವಾದ ಬೆಂಬಲದಿಂದ ಧೈರ್ಯಗೊಂಡ ಮಹಿಳೆ, ತನ್ನ ಮೇಲೆ ಕೈ ಎತ್ತುವುದು ಬಿಡಿ ಬೆರಳು ಎತ್ತಿದರೂ ಪೊಲೀಸರಿಗೆ ವಿಷಯ ತಿಳಿಸಬೇಕಾಗುತ್ತದೆ ಎಂದಾಗ ಹಿಂದೆ ಸರಿದ ಪತಿ ಆಕೆ ಸುರಕ್ಷಿತವಾಗಿ ತವರು ಸೇರಲು ಅನುವು ಮಾಡಿಕೊಡುತ್ತಾನೆ.
ದೌರ್ಜನ್ಯ ಮಾವತ್ತೂ ವೈಯಕ್ತಿಕ ವಿಚಾರ ಅಲ್ಲವೆನ್ನುವ ನರ್ಗಿಸ್ ಈ ಬಗ್ಗೆ ಬ್ರೇಕ್ ಥ್ರೂ ತಮಗೆ ತರಬೇತಿ ನೀಡಿದೆ ಎನ್ನುತ್ತಾರೆ. ಬ್ರೇಕ್ ಥ್ರೂ ಸೇರುವ ಮೊದಲು ಪತ್ನಿಗೆ ಹೊಡೆಯುವುದು, ಬಡಿಯುವುದೆಲ್ಲ ವೈಯಕ್ತಿಕ ವಿಚಾರ ಎಂದು ತಾನೂ ತಿಳಿದುಕೊಂಡಿದ್ದೆ, ಆದರೆ ಬ್ರೇಕ್ ಥ್ರೂ ತನ್ನ ವಿಚಾರಧಾರೆಯನ್ನೇ ಬದಲಿಸಿತು ಎಂದು ಹೆಮ್ಮೆಯಿಂದ ಹೇಳುತ್ತಾರೆ. “ಅಗತ್ಯವಿರುವವರಿಗೆ ಸಹಾಯ ಮಾಡಲು ನಾನು ಮುಂದಾಗದಿದ್ದರೆ, ಒಂದು ದಿನ, ನನಗೆ ಸಹಾಯ ಬೇಕಾದಾಗ ನಾನು ಏಕಾಂಗಿಯಾಗಬಹುದು ಎಂದು ಅರ್ಥಮಾಡಿಕೊಳ್ಳಲು ಸಂಸ್ಥೆಯು ನನಗೆ ತರಬೇತಿ ನೀಡಿದೆ. ಸಮಾಜವನ್ನು ಬದಲಾಯಿಸುವ ಮೊದಲು ನಾವು ಬದಲಾವಣೆಯನ್ನು ನಮ್ಮಿಂದಲೇ ಪ್ರಾರಂಭಿಸಬೇಕು” ಎನ್ನುತ್ತಾರೆ ನರ್ಗಿಸ್.
ಬ್ರೇಕ್ಥ್ರೂ ಅಧ್ಯಕ್ಷೆ ಮತ್ತು ಸಿಇಒ ಸೋಹಿನಿ ಭಟ್ಟಾಚಾರ್ಯ “ಬ್ರೇಕ್ಥ್ರೂನಲ್ಲಿ, ಲಿಂಗ ತಾರತಮ್ಯದ ನಡವಳಿಕೆಗಳನ್ನು ಮತ್ತು ಸಮಾಜದ ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ಸಾಮರ್ಥ್ಯದ ಮೇಲೆ ಅವುಗಳ ಋಣಾತ್ಮಕ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ನಾವು ವಿವಿಧ ರೀತಿಯ ತರಬೇತಿ ಕಾರ್ಯಕ್ರಮಗಳು ಮತ್ತು ಕಾರ್ಯಾಗಾರಗಳನ್ನು ನಡೆಸುತ್ತೇವೆ” ಎನ್ನುತ್ತಾರೆ.