ಕನ್ನಡದ ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯಾ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಸೌಜನ್ಯಾ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
ಡೆತ್ನೋಟನ್ನು ಮೂರು ದಿನಗಳ ಹಿಂದೆಯೇ ಬರೆದಿದ್ದ ಸೌಜನ್ಯ, ಇಂದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯಾ ಪತ್ರದಲ್ಲಿ, ತಂದೆ ತಾಯಿ ಬಳಿ ಕ್ಷಮೆ ಕೇಳಿರುವ ಸೌಜನ್ಯಾ, ಸಾಯಲು ಇಷ್ಟವಿಲ್ಲದಿದ್ದರೂ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿರುವುದಾಗಿ ಬರೆದಿದ್ದಾರೆ.
ದೊಡ್ಡಬೆಲೆ ಗ್ರಾಮದ ಕುಂಬಳಗೋಡು ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ನಟಿ ಸೌಜನ್ಯ ತನ್ನ ಪಿಎಯನ್ನು ಹೊರಕ್ಕೆ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸೌಜನ್ಯ ಮೂಲತಃ ಕೊಡಗು ಜಿಲ್ಲೆಯ ಕುಶಾಲನಗರದವರಾಗಿದ್ದು, ಕನ್ನಡದ ಚೌಕಟ್ಟು, ಫನ್ ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಗೂ ಕಿರುತೆರೆಯ ನಟನೆಯಲ್ಲೂ ತೊಡಗಿಸಿಕೊಂಡಿದ್ದರು. ಕೋವಿಡ್ 19 ನಂತರ ಚಿತ್ರರಂಗದ ಚಟುವಟಿಕೆ ಸ್ಥಗಿತಗೊಂಡಿದ್ದು, ಅವಕಾಶ ಸಿಗದ ಕಾರಣ ಖಿನ್ನತೆಗೆ ಒಳಗಾಗಿ ಸೌಜನ್ಯ ಆತ್ಮಹತ್ಯೆಗೆ ಶರಣಾರಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.