ಎರಡು ಬಾರಿಯ ಪ್ಯಾರಾಲಿಂಪಿಕ್ ಪದಕ ವಿಜೇತ ಭಾರತದ ನಿಶಾದ್ ಕುಮಾರ್ (Nishad Kumar), 2026ರ ಏಷ್ಯನ್ ಪ್ಯಾರಾ ಗೇಮ್ಸ್ನ (Asian Para Games) ಎರಡನೇ ದಿನದಂದು ಅದ್ಭುತ ಪ್ರದರ್ಶನ ನೀಡಿ ಪುರುಷರ ಹೈಜಂಪ್ ಟಿ47 ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 2.04 ಮೀಟರ್ ಎತ್ತರ ಜಿಗಿಯುವ ಮೂಲಕ ಕೂಟ ದಾಖಲೆಯನ್ನು ಬರೆದ ಅವರು, ಸ್ಪರ್ಧೆಯಲ್ಲಿ ಅಗ್ರಸ್ಥಾನ ಪಡೆದುಕೊಂಡರು. ಹಿಂದಿನ ದಿನವಷ್ಟೇ ಲಾಂಗ್ ಜಂಪ್ನಲ್ಲಿ ಚಿನ್ನ ಗೆದ್ದಿದ್ದ ನಿಶಾದ್ ಅವರಿಗೆ ಇದು ಈ ಕೂಟದ ಎರಡನೇ ಚಿನ್ನದ ಪದಕವಾಗಿದೆ.
ದಾಖಲೆಯ ಜಿಗಿತದೊಂದಿಗೆ ಮಿಂಚಿದ ಭಾರತದ ತಾರೆ
ಮಿಜುಹೋ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆದ ಈ ಹಣಾಹಣಿಯಲ್ಲಿ ಹಿಮಾಚಲ ಪ್ರದೇಶ ಮೂಲದ ನಿಶಾದ್ ಅತ್ಯುತ್ತಮ ಲಯ ಪ್ರದರ್ಶಿಸಿದರು. ಆರಂಭಿಕ ಪ್ರಯತ್ನಗಳಲ್ಲಿಯೇ 1.88 ಮೀ, 1.94 ಮೀ ಮತ್ತು 1.98 ಮೀಟರ್ಗಳನ್ನು ಯಶಸ್ವಿಯಾಗಿ ದಾಟಿದ ಅವರು, ಬಳಿಕ 2.02 ಮೀಟರ್ ಎತ್ತರಕ್ಕೆ ಜಿಗಿದು ಚಿನ್ನದ ಪದಕವನ್ನು ಬಹುತೇಕ ಖಚಿತಪಡಿಸಿಕೊಂಡರು. ನಂತರ ಬಾರ್ ಅನ್ನು 2.04 ಮೀಟರ್ಗೆ ಏರಿಸಿ ಮೊದಲ ಪ್ರಯತ್ನದಲ್ಲೇ ಅದನ್ನು ದಾಟಿ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಹೊಸ ದಾಖಲೆ ನಿರ್ಮಿಸಿದರು. ಆ ಬಳಿಕ ತಮ್ಮದೇ ದಾಖಲೆಯನ್ನು ವಿಸ್ತರಿಸಲು 2.06 ಮೀಟರ್ಗೆ ಪ್ರಯತ್ನಿಸಿದರಾದರೂ, ಅದರಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ.
ಬೆಳ್ಳಿ ಮತ್ತು ಕಂಚು ಗೆದ್ದ ಇತರ ಸ್ಪರ್ಧಿಗಳು
ಉಜ್ಬೇಕಿಸ್ತಾನದ ಮುಹಮ್ಮದ್ಅಬ್ದುಲ್ಲಾ ತುರ್ಸುಂಜೊನೊವ್ 1.94 ಮೀಟರ್ ಜಿಗಿದು ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಬೆಳ್ಳಿ ಪದಕ ಪಡೆದರು. ನಿಶಾದ್ಗೆ ಪೈಪೋಟಿ ನೀಡಲು ಅವರು 1.96 ಮೀಟರ್ಗೆ ಪ್ರಯತ್ನಿಸಿದರಾದರೂ ಫೌಲ್ ಆದ ಕಾರಣ ಭಾರತೀಯ ಕ್ರೀಡಾಪಟುವಿನ ಗೆಲುವು ಖಚಿತವಾಯಿತು. ಇನ್ನು ಥೈಲ್ಯಾಂಡ್ನ ಅಂಗ್ಕರ್ನ್ ಚನಬೂನ್ 1.75 ಮೀಟರ್ ಜಿಗಿದು ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಕಳೆದ 24 ಗಂಟೆಗಳಲ್ಲಿ ನಿಶಾದ್ ಪಾಲಿಗೆ ಇದೊಂದು ಐತಿಹಾಸಿಕ ಸಾಧನೆಯಾಗಿ ಪರಿಣಮಿಸಿದೆ. ಸೋಮವಾರ ನಡೆದ ಪುರುಷರ ಲಾಂಗ್ ಜಂಪ್ ಟಿ47 ಸ್ಪರ್ಧೆಯಲ್ಲಿ 7.11 ಮೀಟರ್ ದೂರ ಜಿಗಿದು ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದ ಅವರು, ಮರುದಿನವೇ ಹೈಜಂಪ್ನಲ್ಲೂ ಚಿನ್ನ ಬಾಚಿಕೊಂಡರು. ಟೋಕಿಯೊ 2020 ಮತ್ತು ಪ್ಯಾರಿಸ್ 2024ರ ಪ್ಯಾರಾಲಿಂಪಿಕ್ಸ್ನಲ್ಲಿ ಹೈಜಂಪ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ನಿಶಾದ್, ಈ ಬಾರಿ ಐಚಿ-ನಗೋಯಾದಲ್ಲಿ ಡಬಲ್ ಚಿನ್ನ ಗೆಲ್ಲುವ ಮೂಲಕ ವಿಶ್ವದ ಅತ್ಯುನ್ನತ ಪ್ಯಾರಾ ಅಥ್ಲೀಟ್ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಇವರ ಈ ಗೆಲುವು ಭಾರತದ ಅಥ್ಲೆಟಿಕ್ಸ್ ತಂಡಕ್ಕೆ ಬಲ ತಂದಿದ್ದು, ಇದೇ ವೇಳೆ ಭಾರತೀಯ ಅಥ್ಲೀಟ್ಗಳು ಪುರುಷರ ಡಿಸ್ಕಸ್ ಥ್ರೋ ಫೈನಲ್ನಲ್ಲಿಯೂ ಎಲ್ಲಾ ಮೂರು ಪದಕಗಳನ್ನು ಕ್ಲೀನ್ ಸ್ವೀಪ್ ಮಾಡಿ ಇತಿಹಾಸ ನಿರ್ಮಿಸಿದ್ದಾರೆ.
ಲಂಚ ಕೇಳುವ ಸರ್ಕಾರಿ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ನಿಂದ ಬಿಗ್ ಶಾಕ್ : ತನಿಖೆಗೆ ಪೂರ್ವಾನುಮತಿ ಕಡ್ಡಾಯವಲ್ಲ!





