2022 ರಲ್ಲಿ ಯುದ್ಧ-ಹಾನಿಗೊಳಗಾದ ಉಕ್ರೇನ್‌ನ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) 45.1 ಪ್ರತಿಶತದಷ್ಟು ಕುಗ್ಗಲಿದೆ ಎಂದು ವಿಶ್ವ ಬ್ಯಾಂಕ್ ಏಪ್ರಿಲ್ 10 ರ ಭಾನುವಾರ ಘೋಷಿಸಿದೆ. ರಷ್ಯಾದ ಆರ್ಥಿಕತೆಯು 11.2 ಪ್ರತಿಶತದಷ್ಟು ಕುಗ್ಗಲಿದೆ ಎಂದು ಸಹ ವಿಶ್ವ ಬ್ಯಾಂಕ್ ಊಹಿಸಿದೆ.
ಅಲ್ಲದೆ ಯುದ್ಧವು ಮಾನವ ಜೀವನದ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರುತ್ತಿದೆ ಮತ್ತು ಎರಡೂ ದೇಶಗಳಲ್ಲಿ ಆರ್ಥಿಕ ವಿನಾಶವನ್ನು ಉಂಟುಮಾಡುತ್ತದೆ ಹಾಗೂ ಯುರೋಪ್ ಮತ್ತು ಮಧ್ಯ ಏಷ್ಯಾ ಮತ್ತು ಪ್ರಪಂಚದ ಉಳಿದ ಭಾಗಗಳಲ್ಲಿ ಗಮನಾರ್ಹ ಆರ್ಥಿಕ ನಷ್ಟಗಳಿಗೆ ಕಾರಣವಾಗುತ್ತಿದೆ ಎಂದೂ ವಿಶ್ವಬ್ಯಾಂಕ್ ವರದಿ ಹೇಳಿದೆ.
ರಷ್ಯಾದ GDP ಯಲ್ಲಿ 20 ಪ್ರತಿಶತದಷ್ಟು ಸಂಕೋಚನ ಮತ್ತು ಉಕ್ರೇನ್‌ನ GDP ಯಲ್ಲಿ 75 ಪ್ರತಿಶತದಷ್ಟು ಸಂಕೋಚನವನ್ನು ಹೊಂದಲಿದೆ ಎಂದು ವರದಿ ಹೇಳಿದೆ. ಅಲ್ಲದೆ ಯುದ್ಧ ಪ್ರದೇಶದ ಸಮೀಪದಲ್ಲಿರುವ ಹಲವಾರು ದೇಶಗಳಲ್ಲೂತೀವ್ರ ಆರ್ಥಿಕ ಹಿಂಜರಿತ ದಾಖಲಾಗುವ ಬಗ್ಗೆಯೂ ವರದಿ ಎಚ್ಚರಿಸಿದೆ.
ಯುರೋಪಿನ ಬ್ರೆಡ್ ಬಾಸ್ಕೆಟ್ ಉಕ್ರೇನ್‌ನ ಆರ್ಥಿಕತೆಯು ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಯುರೋಪಿನ ಸುಮಾರು 33 ಪ್ರತಿಶತದಷ್ಟು ಕೃಷಿಯೋಗ್ಯ ಭೂಮಿಯನ್ನು ಉಕ್ರೇನ್ ಹೊಂದಿದೆ. ಆ ಕಾರಣಕ್ಕಾಗಿಯೇ ಉಕ್ರೇನನ್ನು ಯುರೋಪಿನ ಬ್ರೆಡ್ ಬಾಸ್ಕೆಟ್ ಎನ್ನಲಾಗುತ್ತಿದೆ. ಕೃಷಿ ಸರಕುಗಳ ನಿವ್ವಳ ರಫ್ತುದಾರರಾಗಿರುವುದರಿಂದ, ಉಕ್ರೇನ್‌ನ ಕೃಷಿ ವಲಯವು ಜಾಗತಿಕ ಪೂರೈಕೆ ಸರಪಳಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಯುಕ್ರೇನ್ ಸೂರ್ಯಕಾಂತಿ ಎಣ್ಣೆಯ ಅತಿದೊಡ್ಡ ರಫ್ತುದಾರ ದೇಶವಾಗಿದ್ದು ಜೋಳದ ನಾಲ್ಕನೇ ಅತಿದೊಡ್ಡ ರಫ್ತುದಾರ ಮತ್ತು ವಿಶ್ವದ ಐದನೇ ಅತಿದೊಡ್ಡ ಗೋಧಿ ರಫ್ತುದಾರ ದೇಶವಾಗಿದೆ. ಬಂದರುಗಳು ಉಕ್ರೇನ್‌ನ ರಫ್ತಿನ 90 ಪ್ರತಿಶತವನ್ನು ಹೊಂದಿವೆ ಮತ್ತು ರಷ್ಯಾದ ಮಿಲಿಟರಿ ದೇಶದ ಪ್ರಮುಖ ಬಂದರುಗಳನ್ನು ಸಂಪೂರ್ಣ ದಿಗ್ಬಂಧನಕ್ಕೆ ಒಳಪಡಿಸಿದೆ. ಸಹಜವಾಗಿಯೇ ರಫ್ತುಗಳು ಕುಸಿದಂತೆ, ಉಕ್ರೇನ್‌ನ ಆರ್ಥಿಕತೆಯೂ ಕುಸಿಯುತ್ತದೆ.
ಆಕ್ರಮಣಕಾರಿ ರಷ್ಯಾದ ಪಡೆಗಳು ಕಪ್ಪು ಸಮುದ್ರದ ಮೇಲೆ ಮತ್ತಷ್ಟು ಹಿಡಿತ ಸಾಧಿಸಿದರೆ ದೇಶದ ಕೃಷಿ ವಲಯವು ಯುದ್ಧದಿಂದ ಇನ್ನಷ್ಟು ಘಾಸಿಗೊಳ್ಳಲಿದೆ ಎಂದು ವಿಶ್ವ ಬ್ಯಾಂಕ್ ವರದಿ ಹೇಳಿದೆ.
ಉಕ್ರೇನ್‌ಗೆ ಒಳ್ಳೆಯ ಸುದ್ದಿ ಏನೆಂದರೆ, ರಫ್ತು ಮುಂದುವರಿಕೆಗಾಗಿ ಭೂ ಮಾರ್ಗವನ್ನು ಬಳಸಿಕೊಳ್ಳುವುದನನ್ನು ಖಚಿತಪಡಿಸಿಕೊಳ್ಳಲು ಅಲ್ಲಿನ ಸರ್ಕಾರವು ಯುರೋಪಿಯನ್ ಒಕ್ಕೂಟದೊಂದಿಗೆ ಕೆಲಸ ಮಾಡುತ್ತಿದೆ. ಆದ್ದರಿಂದ 80 ರಷ್ಟು ರಫ್ತುಗಳು ಇನ್ನೂ ಸಾಧ್ಯವಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಆರ್ಥಿಕತೆಯನ್ನು ಪುನರ್ನಿರ್ಮಿಸುವುದು
‘ವಿರ್ಟ್‌ಶಾಫ್ಟ್ಸ್‌ವಂಡರ್'(ಆರ್ಥಿಕ ಪವಾಡ) ಎಂಬುವುದು ಎರಡನೆಯ ಮಹಾಯುದ್ಧದ ನಂತರ ಪಶ್ಚಿಮ ಜರ್ಮನಿಯ ಆರ್ಥಿಕ ಪುನರ್ನಿರ್ಮಾಣಕ್ಕಾಗಿ ಬಳಸಲಾದ ನುಡಿಗಟ್ಟಾಗಿದ್ದು, ಅನೇಕ ಅರ್ಥಶಾಸ್ತ್ರಜ್ಞರನ್ನು ಹೊಂದಿರುವ, ಲಾಭೋದ್ದೇಶವಿಲ್ಲದ ಸಂಸ್ಥೆಯಾದ ‘ಸೆಂಟರ್ ಫಾರ್ ಎಕನಾಮಿಕ್ ಪಾಲಿಸಿ ರಿಸರ್ಚ್’ (CEPR) ಗಾಗಿ ಕೆಲಸ ಮಾಡುವ ವಿದ್ವಾಂಸರು, ಉಕ್ರೇನ್ ಮರುನಿರ್ಮಾಣದ ಒಟ್ಟು ವೆಚ್ಚವು $ 220 ಶತಕೋಟಿ ಮತ್ತು $ 540 ಶತಕೋಟಿ ನಡುವೆ ಇರುತ್ತದೆ ಎಂದು ಅಂದಾಜಿಸಿದ್ದಾರೆ. ಅದೇ ರೀತಿ ‘ದಿ ಎಕನಾಮಿಸ್ಟ್’ನ ವಿಶ್ಲೇಷಣೆಯು ಯುದ್ಧದ ನಂತರ ಉಕ್ರೇನ್ ಅನ್ನು ಮರುನಿರ್ಮಾಣ ಮಾಡುವ ಬಗ್ಗೆ ಮೂರು ಪ್ರಮುಖ ಅಂಶಗಳನ್ನು ಮುಂದಿಟ್ಟಿವೆ. ಅವೆಂದರೆ
- ಲ್ಯಾಂಡ್‌ಮೈನ್‌ಗಳು ಮತ್ತು ಇತರ ಸ್ಫೋಟಕಗಳಿಂದ ಹಾನಿಗೊಳಗಾದ ಪ್ರದೇಶಗಳನ್ನು ತೆರವುಗೊಳಿಸುವುದು
- ದೇಶದಲ್ಲಿ ಉಳಿದಿರುವವರಿಗೆ ಆಹಾರ ಮತ್ತು ವಸತಿ ಖಾತ್ರಿಪಡಿಸುವುದು
- ಧ್ವಂಸಗೊಂಡ ಮೂಲಸೌಕರ್ಯ ಮತ್ತು ಕೈಗಾರಿಕಾ ಸೌಲಭ್ಯಗಳನ್ನು ಪುನರ್ನಿರ್ಮಿಸುವುದು
ಇತರ ಮೂಲಸೌಕರ್ಯಗಳೊಂದಿಗೆ ವಿದ್ಯುತ್ ಸ್ಥಾವರಗಳು, ಕಾರ್ಖಾನೆಗಳು, ಸೇತುವೆಗಳು ಮತ್ತು ರಸ್ತೆಗಳಿಗೆ ಉಂಟಾದ ವಿನಾಶವು ಸರಿಸುಮಾರು $50 ಶತಕೋಟಿ ಮೌಲ್ಯದ್ದಾಗಿದೆ ಎಂದು ಕೈವ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂದಾಜಿಸಿದೆ.
ಯುಕ್ರೇನಿನ ಆರ್ಥಿಕತೆ ಪುನರುಜ್ಜೀವನ ಗೊಳ್ಳಬೇಕಾದರೆ US (ಇದು ಈಗಾಗಲೇ $7 ಶತಕೋಟಿ ಒದಗಿಸಿದೆ), UK ಮತ್ತು EU ನಂತಹ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಂದ ಅಗತ್ಯವಾಗಿ ಹಣ ಬರಬೇಕಾಗುತ್ತದೆ. ಅಲ್ಲದೆ ಯುದ್ಧಾನಂತರದ ಆರ್ಥಿಕತೆಯನ್ನು ಉನ್ನತ ಮಟ್ಟದ ವ್ಯಾಪಾರ ಮತ್ತು ಹೂಡಿಕೆಗಳೊಂದಿಗೆ ಉತ್ತೇಜಿಸಬೇಕಾಗಿದೆ.
ಪೂರ್ವ ಮತ್ತು ಮಧ್ಯ ಯುರೋಪ್ ಮೇಲೆ ಪರಿಣಾಮ
ಯುದ್ಧದ ಆರ್ಥಿಕ ಪರಿಣಾಮಗಳಿಂದಾಗಿ, ಪೂರ್ವ ಯುರೋಪಿನ GDP 30.7 ಪ್ರತಿಶತದಷ್ಟು ಕುಸಿಯಬಹುದು. ಈ ಕುಸಿತವು ಜಾಗತಿಕ ದೃಷ್ಟಿಕೋನದಿಂದ ಅತ್ಯಂತ ಗಮನಾರ್ಹವಾಗಿದೆ, ಏಕೆಂದರೆ ಫೆಬ್ರವರಿ 24 ರಂದು ಆಕ್ರಮಣವು ಪ್ರಾರಂಭವಾಗುವ ಮೊದಲು ಈ ಪ್ರದೇಶದ ಜಿ.ಡಿ.ಪಿ ಯು 1.4 ಪ್ರತಿಶತದಷ್ಟು ಬೆಳೆಯುತ್ತದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿತ್ತು. ಬೆಲಾರಸ್, ಕಿರ್ಗಿಜ್ ರಿಪಬ್ಲಿಕ್, ಮೊಲ್ಡೊವಾ ಮತ್ತು ತಜಿಕಿಸ್ತಾನ್‌ಗಳು ಹೆಚ್ಚಿನ ಅಪಾಯದಲ್ಲಿರುವ ದೇಶಗಳಾಗಿವೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪ್ರಮುಖ ಮಿತ್ರ ಅಲೆಕ್ಸಾಂಡರ್ ಲುಕಾಶೆಂಕೊ ನೇತೃತ್ವದ ಬೆಲಾರಸ್ ಮೇಲಿನ ನಿರ್ಬಂಧಗಳು ಈ ಪ್ರದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತವೆ. ಆದರೆ ಭೌಗೋಳಿಕತೆಯ ಕಾರಣದಿಂದಾಗಿ ಮೊಲ್ಡೊವಾ ಉಕ್ರೇನ್‌ನನ್ನು ಹೊರತು ಪಡಿಸಿ ಹೆಚ್ಚು ಬಾಧಿತ ದೇಶವಾಗಲಿದೆ. ಏಕೆಂದರೆ ಆ ದೇಶದ ಸಣ್ಣ ಆರ್ಥಿಕತೆಯು ಎರಡೂ ರಾಷ್ಟ್ರಗಳ ಆರ್ಥಿಕತೆಗಳೊಂದಿಗೆ ನಿಕಟ ಸಂಬಂಧ ಹೊಂದಿದೆ.
ಬಲ್ಗೇರಿಯಾ, ಕ್ರೊಯೇಷಿಯಾ, ಹಂಗೇರಿ, ಪೋಲೆಂಡ್ ಮತ್ತು ರೊಮೇನಿಯಾದಂತಹ ದೇಶಗಳನ್ನು ಒಳಗೊಂಡಿರುವ ಮಧ್ಯ ಯುರೋಪ್‌ಗೆ ಸಂಬಂಧಿಸಿದಂತೆ, ನಿರಾಶ್ರಿತರ ಬಿಕ್ಕಟ್ಟು, ಹಣದುಬ್ಬರ ಮತ್ತು ಕುಸಿತದ ಬೇಡಿಕೆಯಿಂದಾಗಿ ಆರ್ಥಿಕ ಬೆಳವಣಿಗೆಯು ಹಿಂದೆ ಯೋಜಿತವಾದ 4.7 ಪ್ರತಿಶತದಿಂದ 3.5 ಪ್ರತಿಶತಕ್ಕೆ ಇಳಿಯುತ್ತದೆ ಎಂದು ಅಂದಾಜಿಸಲಾಗಿದೆ.






