ಇರಾನ್, ಇಸ್ರೇಲ್ ಮತ್ತು ಅಮೆರಿಕಾ ನಡುವಿನ ಉದ್ವಿಗ್ನತೆ ಇನ್ನೂ ಶಮನವಾಗದ ಹಿನ್ನೆಲೆಯಲ್ಲಿ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಆತಂಕ ಮುಂದುವರಿದಿದೆ. ಹಾರ್ಮುಜ್ ಜಲಸಂಧಿಯ ಭದ್ರತೆ ಹಾಗೂ ಸಾಗಣೆ ಸ್ಥಿತಿಗತಿ ಕುರಿತು ಯುಕೆ ನೇತೃತ್ವದಲ್ಲಿ ನಡೆದ ಬಹುಪಕ್ಷೀಯ ವರ್ಚುವಲ್ ಸಭೆಯಲ್ಲಿ ಭಾರತ ಸಹ ಭಾಗವಹಿಸಿ ತನ್ನ ಆತಂಕಗಳನ್ನು ವ್ಯಕ್ತಪಡಿಸಿದೆ.

ಈ ಸಭೆಯಲ್ಲಿ 60ಕ್ಕೂ ಹೆಚ್ಚು ದೇಶಗಳು ಪಾಲ್ಗೊಂಡಿದ್ದು, ಭಾರತದ ಪರವಾಗಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಉಪಸ್ಥಿತರಿದ್ದರು. ಸಭೆಯಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ ನಾಗರಿಕರನ್ನು ಕಳೆದುಕೊಂಡ ಏಕೈಕ ದೇಶ ಭಾರತ ಎಂಬ ವಿಷಯವನ್ನು ಅವರು ಒತ್ತಿ ಹೇಳಿದ್ದಾರೆ. ಇತ್ತೀಚಿನ ದಾಳಿಗಳಲ್ಲಿ ಕನಿಷ್ಠ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿರುವುದು ಉಲ್ಲೇಖಿಸಲಾಗಿದೆ.

ಸಭೆಯಲ್ಲಿ ಭಾರತ ಸಂಘರ್ಷಪೀಡಿತ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯ ಅಗತ್ಯತೆಯನ್ನು ಪುನರುಚ್ಚರಿಸಿದೆ. ರಾಜತಾಂತ್ರಿಕ ಸಂವಾದದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ನಿಲುವನ್ನು ಮಿಶ್ರಿ ಸ್ಪಷ್ಟಪಡಿಸಿದರು. ಹಾರ್ಮುಜ್ ಜಲಸಂಧಿ ಭಾರತದ ಇಂಧನ ಸಾಗಣೆಗೆ ಅತ್ಯಂತ ಪ್ರಮುಖ ಮಾರ್ಗವಾಗಿರುವುದರಿಂದ, ಇಲ್ಲಿ ನಡೆಯುತ್ತಿರುವ ಅಶಾಂತಿ ದೇಶದ ಇಂಧನ ಭದ್ರತೆಗೆ ಧಕ್ಕೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ನಡುವೆ, ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಭಾರತೀಯ ಹಡಗುಗಳ ಸುರಕ್ಷಿತ ಸಾಗಣೆಗೆ ಇರಾನ್ ಸೇರಿದಂತೆ ಸಂಬಂಧಿತ ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆರು ಭಾರತೀಯ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿರುವುದಾಗಿ ಮಾಹಿತಿ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತುಕತೆ ನಡೆಸಿ, ಇಂಧನ ಮೂಲಸೌಕರ್ಯಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಲು ಭಾರತ ರಾಜತಾಂತ್ರಿಕ ಪ್ರಯತ್ನಗಳನ್ನು ಮುಂದುವರಿಸುತ್ತಿದೆ.

ಜಗತ್ತಿನ ತೈಲ ಸಾಗಣೆಯ ಮಹತ್ತರ ಭಾಗ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವುದರಿಂದ, ಇಲ್ಲಿ ನಡೆಯುತ್ತಿರುವ ಸಂಘರ್ಷವು ಜಾಗತಿಕ ತೈಲ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆ, ಭಾರತ ತನ್ನ ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಎಲ್ಲಾ ಪಕ್ಷಗಳೊಂದಿಗೆ ಸಂವಾದ ನಡೆಸುತ್ತಿದೆ. ಬಹುಪಕ್ಷೀಯ ಸಭೆಯಲ್ಲಿ ಭಾರತ ತನ್ನ ಸ್ಪಷ್ಟ ನಿಲುವು ಪ್ರದರ್ಶಿಸಿದ್ದು, ಶಾಂತಿ, ಸುರಕ್ಷಿತ ಸಾಗಣೆ ಮತ್ತು ರಾಜತಾಂತ್ರಿಕತೆಗೇ ಹೆಚ್ಚಿನ ಮಹತ್ವ ನೀಡಿದೆ.






