“ಕೆಂಪೇಗೌಡ ಅವರು ಹಾಕಿಕೊಟ್ಟ ಅಡಿಪಾಯದ ಮೇಲೆ ನಾವು ಬ್ರ್ಯಾಂಡ್ ಬೆಂಗಳೂರು ಮಾಡುವ ಪರಿಕಲ್ಪನೆ ಇದೆ. ನಾವೆಲ್ಲರೂ ಸೇರಿ, ಬಲಿಷ್ಠ ಬೆಂಗಳೂರು, ಶಾಂತಿಯ ಬೆಂಗಳೂರು, ಗ್ರೀನ್ ಬೆಂಗಳೂರು, ಸುರಕ್ಷಿತ ಬೆಂಗಳೂರು ನಿರ್ಮಿಸೋಣ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಅವರು ತಿಳಿಸಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (BBMP)ದ ಡಾ.ರಾಜಕುಮಾರ್ ಸಭಾಂಗಣದಲ್ಲಿ ಶುಕ್ರವಾರ ನಡೆದ ನಾಡಪ್ರಭು ಕೆಂಪೇಗೌಡರ 516ನೇ ಜಯಂತೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಅವರು ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ನೀಡಿ ಮಾತನಾಡಿದರು.
“ಬೆಂಗಳೂರಿಗೆ ಸೇವೆ ಮಾಡಿದ ಗಣ್ಯರನ್ನು ಗುರುತಿಸಿ ಅವರಿಗೆ ಅಭಿನಂದನೆ ಸಲ್ಲಿಸಿದ್ದೇವೆ. ಮನುಷ್ಯನ ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ, ಜನನ ಉಚಿತ ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಬಹಳ ಮುಖ್ಯ” ಎಂದು ಹೇಳಿದರು.
“ಕೆಂಪೇಗೌಡರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಿದ್ದೇವೆ. ಅವರು ಎಲ್ಲಾ ವರ್ಗದವರಿಗೆ ಆದ್ಯತೆ ನೀಡಿ ಅನೇಕ ಪೇಟೆ ರಚಿಸಿದರು. ಇದು ಅವರ ದೂರದೃಷ್ಟಿಗೆ ಸಾಕ್ಷಿ. ರಾಜ್ಯ, ದೇಶ, ವಿದೇಶದ ಜನ ಈ ನಗರದಲ್ಲಿ ಈಗ ವಾಸಿಸುತ್ತಿದ್ದಾರೆ.” ಎಂದು ತಿಳಿಸಿದರು.

“ಬೆಂಗಳೂರನ್ನು ಸ್ವಚ್ಛ ಮಾಡುವವರಿಂದ ಹಿಡಿದು ಈ ನಗರಕ್ಕೆ ಸೇವೆ ಸಲ್ಲಿಸಿದ ಅನೇಕ ಹಿರಿಯರಿಗೆ ಕೆಂಪೇಗೌಡರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದೇವೆ. ಕಲೆ, ಮಾಧ್ಯಮ, ವೈದ್ಯಕೀಯ, ವಿಜ್ಞಾನ, ಕೈಗಾರಿಕೆ ಸೇರಿದಂತೆ ಎಲ್ಲಾ ರಂಗದ ಸಾಧಕರಿಗೆ ಈ ಪ್ರಶಸ್ತಿ ನೀಡಿದ್ದೇವೆ” ಎಂದು ತಿಳಿಸಿದರು.
“ನಾವು ಎಷ್ಟು ದಿನ ಇರುತ್ತೇವೆ ಎಂಬುದು ಮುಖ್ಯವಲ್ಲ. ನಾವು ಅಧಿಕಾರದಲ್ಲಿ ಇದ್ದಾಗ ಏನು ಮಾಡುತ್ತೇವೆ ಎಂಬುದು ಮುಖ್ಯ. ನಾವು ಗ್ರೇಟರ್ ಬೆಂಗಳೂರು ಮಾಡಲು ಮುಂದಾಗಿದ್ದು, ಮುಂದಿನ ಒಂದು ತಿಂಗಳಲ್ಲಿ ಎಷ್ಟು ಪಾಲಿಕೆ ಮಾಡಬೇಕು ಎಂದು ತೀರ್ಮಾನ ಮಾಡಲಾಗುವುದು” ಎಂದು ತಿಳಿಸಿದರು.
“ಬೆಂಗಳೂರು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಎಲ್ಲಾ ವರ್ಗದ ಜನ ಈ ನಗರದಲ್ಲಿ ವಾಸಿಸಲು ಬಯಸುತ್ತಾರೆ. ಎಲ್ಲರನ್ನು ಗೌರವದಿಂದ ನೋಡಿಕೊಳ್ಳಲು ನಮ್ಮ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ” ಎಂದರು.

“ಜನ ನಮಗೆ 140 ಸಂಖ್ಯಾಬಲದ ಸರ್ಕಾರ ನೀಡಿದ್ದಾರೆ. ಜನರಿಗಾಗಿ ಪ್ರಾಮಾಣಿಕ ಸೇವೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಸುರಂಗ ರಸ್ತೆಗೆ 37 ಸಾವಿರ ಕೋಟಿ, ಮೇಲ್ಸೇತುವೆಗೆ 17 ಸಾವಿರ ಕೋಟಿ, ಸ್ವಚ್ಛತೆಗೆ 15 ಸಾವಿರ ಕೋಟಿ ಸೇರಿದಂತೆ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 1 ಲಕ್ಷ ಕೋಟಿ ಮೊತ್ತದ ಯೋಜನೆ ರೂಪಿಸಿದ್ದೇವೆ. ಇದೇ ವೇಳೆ ಪ್ರವಾಸೋದ್ಯಮ ಆಕರ್ಷಿಸಲು ಸ್ಕೈಡೆಕ್ ನಿರ್ಮಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ತಾಂತ್ರಿಕವಾಗಿ ಸಾಧ್ಯತೆ ನೋಡಿಕೊಂಡು ಇದರ ಜಾಗ ಅಂತಿಮಗೊಳಿಸಲಾಗುವುದು” ಎಂದು ತಿಳಿಸಿದರು.
“ಜನರ ಪ್ರೀತಿ ಮರ ಅಥವಾ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಜನರ ಹೃದಯದಲ್ಲಿ ಮಾತ್ರ ಸಿಗುತ್ತದೆ. ನಮ್ಮ ಜನ ನಮ್ಮ ಕೆಲಸಗಳನ್ನು ಜನರು ಕಣ್ಣಾರೆ ಕಾಣುವಂತೆ ಮಾಡುತ್ತೇವೆ” ಎಂದು ತಿಳಿಸಿದರು.
“ಯೋಗಿ ಎಂದು ಕರೆಸಿಕೊಳ್ಳುವುದಕ್ಕಿಂತ, ಉಪಯೋಗಿ ಎಂದು ಕರೆಸಿಕೊಳ್ಳುವುದು ಲೇಸು. ನಾವು ಯಾರನ್ನು ಮೆಚ್ಚಿಸದಿದ್ದರೂ ನಮ್ಮ ಆತ್ಮಸಾಕ್ಷಿ ಮೆಚ್ಚುವಂತಹ ಕೆಲಸ ಮಾಡಿದರೆ ಸಾಕು. ಇಲ್ಲಿ ಪ್ರಶಸ್ತಿಗೆ ಭಾಜನರಾದ ಎಲ್ಲರಿಗೂ ಅಭಿನಂದನೆಗಳು. ಪ್ರಶಸ್ತಿ ಪುರಸ್ಕೃತರು ಹಾಗೂ ಅವರ ಕುಟುಂಬದವರ ಮುಖದಲ್ಲಿ ನಾನು ಬಹಳ ಸಂತೋಷ ಕಂಡಿದ್ದೇನೆ. ನೀವು ಸದಾ ನಗುತ್ತಾ ಇರಿ. ನಿಮ್ಮ ಸೇವೆಯನ್ನು ನಾವು ಎಂದೂ ಮರೆಯುವುದಿಲ್ಲ. ಈ ಪ್ರಶಸ್ತಿಗೆ ಅರ್ಹರಾಗಿರುವ ಅನೇಕ ಸಾಧಕರು ಇದ್ದಾರೆ. ಆದರೆ ನಾನು ಈ ಪ್ರಶಸ್ತಿ ನೀಡುವ ಸಂಖ್ಯೆಯನ್ನು 50ಕ್ಕೆ ಮೀಸಲುಗೊಳಿಸಿದೆ” ಎಂದು ತಿಳಿಸಿದರು.

“ನಾವು ಕೆಲವು ತಪ್ಪು ಮಾಡಬಹುದು, ಮಾಧ್ಯಮಗಳು ನಮ್ಮನ್ನು ಟೀಕೆ ಮಾಡಿದರೂ ಅವುಗಳನ್ನು ಸಂತೋಷದಿಂದ ಸ್ವೀಕರಿಸಿ, ನಮ್ಮ ಕೆಲಸ ಮುಂದುವರಿಸಿಕೊಂಡು ಹೋಗುತ್ತೇವೆ” ಎಂದು ತಿಳಿಸಿದರು.
ಸ್ಕೈ ಡೆಕ್ ನಿರ್ಮಾಣ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಮಾಡಲು ತೀರ್ಮಾನಿಸಲಾಗಿತ್ತು ಎಂದು ಮಾಧ್ಯಮಗಳು ಕೇಳಿದಾಗ, “ಈ ವಿಚಾರದಲ್ಲಿ ತಾಂತ್ರಿಕ ಅಂಶಗಳಿವೆ. ಇದರ ನಿರ್ಮಾಣಕ್ಕೆ ವಿಮಾನ ನಿಲ್ದಾಣ ಅಧಿಕಾರಿಗಳು ಒಪ್ಪಿಗೆ ನೀಡಬೇಕು. ವಿಮಾನ ನಿಲ್ದಾಣದಿಂದ 20 ಕಿ.ಮೀ ದೂರದಲ್ಲಿ ಇದನ್ನು ನಿರ್ಮಾಣ ಮಾಡಬೇಕಿದೆ. ಮೆಟ್ರೋಗೆ ಸಮೀಪವಿರುವ ಜಾಗವನ್ನು ಹುಡುಕುತ್ತಿದ್ದು, ಬಿಡಿಎ (BDA) ಜೊತೆ ಚರ್ಚೆ ಮಾಡಿ ಆದಷ್ಟು ಬೇಗ ಜಾಗ ಅಂತಿಮಗೊಳಿಸುತ್ತೇವೆ” ಎಂದು ತಿಳಿಸಿದರು.