ಹಾಗೆ ನೋಡಿದರೆ ಬೆಂಗಳೂರು ಬರೀ ಬೆಂಗಳೂರಲ್ಲ. ಬ್ರ್ಯಾಂಡ್ ಬೆಂಗಳೂರು. ವಿಶ್ವದಲ್ಲೇ ತಂತ್ರಜ್ಞಾನದಲ್ಲಿ ತನ್ನದೇ ಬ್ರ್ಯಾಂಡ್ ಹೊಂದಿರುವ ಬ್ರ್ಯಾಂಡ್ ಬೆಂಗಳೂರು. ಅಂಥಾ ಬೆಂಗಳೂರು ಒಂದೇ ಮಳೆಗೆ ಈಗ ಅನಾವರಣವಾಗಿ ನಿಂತಿದೆ. ಎಲ್ಲೆಡೆಗೆ ಈಗ ಬೆಂಗಳೂರಿನ ಮಾನ ಹಾರಜಾಗುವಂತೆ ಮಾಡಲಾಗಿದೆ. ಹೌದು, ಮಳೆ ಶುರುವಾಗಿದ್ದೇ ಶುರು. ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ದೇಶದ ಐಟಿ ಕಾರಿಡಾರ್ ಎಂದೇ ಪ್ರಖ್ಯಾತಿ ಹೊಂದಿದ್ದ ಬೆಂಗಳೂರು ಈಗ ಎಲ್ಲೆಡೆ ಲೇವಡಿಗೆ ತುತ್ತಾಗುತ್ತಿದೆ. ಇದಕ್ಕೆಲ್ಲ ಕಾರಣ ಸತತವಾಗಿ ನಗರದಲ್ಲಿ ಬೀಳುತ್ತಿರುವ ರಣ ಮಳೆ. ಈ ಮಳೆಗೆ ನಗರದ ಮಹಾದೇವಪುರ, ಬೊಮ್ಮನಹಳ್ಳಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಎಲ್ಲೆಂದರಲ್ಲಿ ನದಿಯಂತೆ ನೀರು ಹರಿಯುತ್ತಿದೆ. ಕೆರೆಯಂತೆ ನೀರು ನಿಂತಿದೆ. ಹಲವೆಡೆ ರಸ್ತೆ, ಕೆಲವಡೆ ಮನೆ ಜಲಾವೃತಗೊಂಡು ಜನರೂ ರೋಸಿ ಹೋಗಿದ್ದಾರೆ. ಈ ಬಗ್ಗೆ ಮಳೆಗಾಲದ ಆರಂಭದಲ್ಲೇ ಐಟಿ ದಿಗ್ಗಜ ಮೋಹನ್ ದಾಸ್ ಪೈ ಟ್ವೀಟ್ ಮಾಡಿ ಪ್ರಧಾನಿ ಮೋದಿಗೆ ಟ್ಯಾಗ್ ಮಾಡಿದ್ದು ಎಲ್ಲರ ಗಮನ ಸೆಳೆದಿತ್ತು. ಇದು ಬಹಳ ಚರ್ಚೆಗೂ ದಾರಿ ಮಾಡಿತ್ತು.
ಬಿಬಿಎಂಪಿ ಅಧಿಕಾರಿಗಳ ಅಸಡ್ಡೆಗೆ ತೇಲಿದ ಐಟಿ ಟೆಕ್ ಪಾರ್ಕ್ ಗಳು
ಇನ್ನೇನು ಎರಡು ತಿಂಗಳ ಬಳಿಕ ಬೆಂಗಳೂರು ಗ್ಲೋಬಲ್ ಸಮ್ಮಿಟ್ ಗೆ ಸಾಕ್ಷಿಯಾಗಲಿದೆ. ವಿಶ್ವದ ಮೂಲೆ ಮೂಲೆಯಿಂದ ಬಂಡವಾಳ ಹೂಡಿಕೆದಾರರು ಬೆಂಗಳೂರು ಬರಲಿದ್ದಾರೆ. ಅದಕ್ಕೂ ಮೊದಲೇ ಇಂಥಾ ಘಟನೆಗಳು ಘಟಿಸಿರುವುದು ಬೆಂಗಳೂರು ಮುಂದೆ ಸಾಗಬಲ್ಲ ಹಾದಿಯನ್ನು ನಿಚ್ಚಳಗೊಳಿಸುತ್ತಿದೆ. ಮಳೆಯ ರಣ ಅವತಾರಕ್ಕೆ ಟೆಕ್ ಕಾರಿಡಾರ್ ಗಳು ತತ್ತರಿಸಿ ಹೋಗಿವೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರಾಜಕಾಲುವೆ ಹೊರ ಹರಿವು ಕಂಡು ನೀರೆಲ್ಲಾ ಟೆಕ್ ಹಬ್ ಗೆ ನುಗ್ಗಿ ಕೋಟ್ಯಾಂತರ ರೂಪಾಯಿ ನಷ್ಟವನ್ನುಂಟು ಮಾಡಿದೆ. ಟೆಕ್ಕಿಗಳೇ ಹೇಳಿದ ಹಾಗೆ ಒಟ್ಟಾರೆ 225 ಕೋಟಿ ರೂಪಾಯಿ ಈ ಮಳೆಯಿಂದಾಗಿ ನಷ್ಟ ಆಗಿದೆಯಂತೆ.

ಐಟಿ ಬಿಟಿ ಹೆಗ್ಗಳಿಕೆಯ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ
ಅಂದಹಾಗೆ ಮಹಾದೇವಪುರ ಹಾಗೂ ಬೊಮ್ಮನಹಳ್ಳಿ ವಲಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲು ಕಾರಣ ಏನು ಎಂದರೆ ರಾಜಕಾಲುವೆ ಹಾಗೂ ಕೆರೆ ಒತ್ತುವರಿ. ಈಗ ರಾಜಕಾಲುವೆ ಒತ್ತುವರಿ ತೆರವು ಅಂತಿರೋ ಬಿಬಿಎಂಪಿ ಅಧಿಕಾರಿಗಳೇ ಒಂದಾನೊಂದು ಕಾಲದಲ್ಲಿ ಈ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಟ್ಟವರು. ಇದೀಗ ನೆರೆಬಂದು ನಗರ ತೇಲುವಾಗ ಒತ್ತುವರಿ ತೆರವು ಮಾಡ್ತೀವಿ ಅಂತ ಕೋಲು ಹಿಡಿದು ಬೀದಿ ಸುತ್ತುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸರ್ಕಾರ ಕೂಡ ನಾ ಹೊಡ್ದಂಗ್ ಮಾಡ್ತೀನಿ ನೀ ಅತ್ತಂಗ್ ಮಾಡು ಅಂತ ಕಠಿಣ ಕ್ರಮ ಅಂತ ಅಧಿಕಾರಿಗಳಿಗೆ ಎಚ್ಚರಿಕೆಯ ನಾಟಕ ಆಡ್ತಿದ್ದಾರೆ.
ಒಟ್ಟಾರೆ ಬೆಂಗಳೂರಿನ ಐಟಿ ಪಾರ್ಕ್ ಗಳು ಮಳೆ ನೀರಿನ ಮೇಲೆ ತೇಲಿ ನಿಂತಿದೆ. ಅಧಿಕಾರಿಗಳು ಹಾಗೂ ಸರ್ಕಾರ ಜಂಟಿಯಾಗಿ ಇದಕ್ಕೊಂದು ಪರಿಹಾರ ಕಂಡುಹುಡುಕದೇ ಹೋದರೆ ಐಟಿ ಹಕ್ಕಿಗಳೆಲ್ಲಾ ಹಾರಿ ಹೋಗಲಿದೆ. ಈ ಮೂಲಕ ರಾಜ್ಯಕ್ಕೆ ಲಕ್ಷ ಕೋಟಿಯಷ್ಟು ರೂಪಾಯಿ ತೆರಿಗೆಗೆ ಕತ್ತರಿ ಬೀಳಲಿದೆ. ಇನ್ನಾದರೂ ದಪ್ಪ ಚರ್ಮದ ಅಧಿಕಾರಿಗಳು, ನಿದ್ದೆಯಲ್ಲಿರುವ ಸರ್ಕಾರ ಎಚ್ಚೆತ್ತುಕೊಳ್ಳದೆ ಹೋದರೆ ಬ್ರ್ಯಾಂಡ್ ಬೆಂಗಳೂರು ಹೋಗಿ ವೀಕ್ ಬೆಂಗಳೂರು ಆಗಲಿದೆ ಎನ್ನುವುದು ಮಾತ್ರ ಖಚಿತ.