ಅಸ್ಸಾಂ ರಾಜ್ಯದ ಸಿಲ್ಚಾರ್ನಲ್ಲಿರುವ ಭಾರತೀಯ ಜನತಾ ಪಕ್ಷದ ಸಂಸದ ರಾಜದೀಪ್ ರಾಯ್ ಅವರ ನಿವಾಸದಲ್ಲಿ 10 ವರ್ಷದ ಬಾಲಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಭಾನುವಾರ (ಆಗಸ್ಟ್ 27) ವರದಿಯಾಗಿದೆ.
ಶನಿವಾರ (ಆಗಸ್ಟ್ 26) ಬಾಲಕನ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (SMCH) ರವಾನಿಸಿದ್ದಾರೆ. 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಕೆಲವು ವರ್ಷಗಳಿಂದ ತನ್ನ ತಾಯಿ ಮತ್ತು ಅಕ್ಕನೊಂದಿಗೆ ಬಿಜೆಪಿ ಸಂಸದ ರಾಜದೀಪ್ ರಾಯ್ ಅವರ ಮನೆಯಲ್ಲಿ ವಾಸಿಸುತ್ತಿದ್ದನು.
ಕ್ಯಾಚಾರ್ ಜಿಲ್ಲೆಯ ಪಲೋಂಗ್ ಘಾಟ್ ಪ್ರದೇಶದವರಾದ ಬಾಲಕನ ತಾಯಿ ಅಸ್ಸಾಂ ಬಿಜೆಪಿ ಸಂಸದ ರಾಜದೀಪ್ ರಾಯ್ ಅವರ ನಿವಾಸದಲ್ಲಿ ಮನೆ ಕೆಲಸ ಮಾಡಿಕೊಂಡು ಇದ್ದರು. ಈ ಮಹಿಳೆ ಶಿಕ್ಷಣಕ್ಕಾಗಿ ಮಕ್ಕಳನ್ನು ಕೂಡ ಸಿಲ್ಚಾರ್ಗೆ ಕರೆತಂದಿದ್ದರು. ತಾಯಿ-ಇಬ್ಬರ ಮಕ್ಕಳ ಈ ಕುಟುಂಬ ಸಂಸದರ ಮನೆಯಲ್ಲಿಯೇ ವಾಸವಾಗಿದ್ದರು ಎಂದು ಸಂಬಂಧಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬಾಲಕ ನೇಣು ಬಿಗಿದುಕೊಂಡ ಕೋಣೆ ಒಳಗಿನಿಂದ ಲಾಕ್ ಆಗಿತ್ತು. ಪೊಲೀಸರು ಬಾಗಿಕು ಮುರಿದು ಒಳಹೋದಾಗ ಹುಡುಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದನು. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದನು. ಪ್ರಾಥಮಿಕ ವರದಿ ಪ್ರಕಾರ ಇದು ಆತ್ಮಹತ್ಯೆ ಎಂದು ತೋರುತ್ತದೆ. ವಿಡಿಯೋ ಗೇಮ್ ಆಡಲು ಮೊಬೈಲ್ ಫೋನ್ ಕೊಡದಿದ್ದಕ್ಕಾಗಿ ತಾಯಿಯ ಮೇಲೆ ಕೋಪಗೊಂಡಿದ್ದ ಎಂದು ಅವರ ಕುಟುಂಬ ಸದಸ್ಯರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ರಾಜದೀಪ್ ರಾಯ್, ಬಾಲಕನ ತಾಯಿ ತನ್ನ ಮಗಳೊಂದಿಗೆ ದಿನಸಿ ಖರೀದಿಸಲು ಹೋಗಿದ್ದರು. ಅದಕ್ಕೂ ಮೊದಲು, ಬಾಲಕ ಆಕೆಗೆ ಮೊಬೈಲ್ ಫೋನ್ ನೀಡುವಂತೆ ಕೇಳಿದ್ದು, ತಾಯಿ ನಿರಾಕರಿಸಿದ್ದರು. ಪ್ರಾಥಮಿಕ ತನಿಖೆಗಳು ಇದು ಆತ್ಮಹತ್ಯೆಯ ಪ್ರಕರಣ ಎಂದು ಸೂಚಿಸುತ್ತಿದ್ದರೂ, ಅದರ ಬಗ್ಗೆ ನನಗೆ ಖಚಿತವಿಲ್ಲ. ನಾನು ಜಿಲ್ಲೆಯ ಉನ್ನತ ಪೊಲೀಸರೊಂದಿಗೆ ಮಾತನಾಡಿದ್ದೇನೆ ಮತ್ತು ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡುವಂತೆ ಕೇಳಿದ್ದೇನೆ. ಆ ಬಾಲಕನಿಗೆ ಉತ್ತಮ ಜ್ಞಾನವಿತ್ತು. ಈ ಸಾವಿನಿಂದ ನನ್ನ ಕುಟುಂಬವೂ ಆಘಾತಕ್ಕೊಳಗಾಗಿದೆ ಎಂದರು.













