ಬೀದರ್ ಜಿಲ್ಲೆಯ ಔರಾದ್ ನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಹೇಳಿಕೆ

ಎರಡನೇ ಹಂತದ ಪ್ರಜಾಧ್ವನಿ ಯಾತ್ರೆಯನ್ನು ನಿನ್ನೆಯಿಂದ ಆರಂಭ ಮಾಡಿದ್ದೇನೆ. ಚುನಾವಣೆಗೆ ಹೆಚ್ಚು ಸಮಯ ಉಳಿದಿಲ್ಲ ಎಂಬ ಕಾರಣಕ್ಕೆ ಪಕ್ಷದ ನಾಯಕರು ಎರಡು ತಂಡಗಳಾಗಿ ಮಾಡಿಕೊಂಡು ಯಾತ್ರೆಯನ್ನು ಮಾಡುತ್ತಿದ್ದೇವೆ. ಮೊದಲ ಹಂತದ ಯಾತ್ರೆಗೆ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂದು ಕೂಡ ಔರಾದ್ ನಲ್ಲಿ ಜನ ನಾವು ನಿಮ್ಮೊಂದಿಗೆ ನಾವು ಇರುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಇದರರ್ಥ ಜನ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಬೇಕು ಎಂಬ ತೀರ್ಮಾನ ಮಾಡಿದಂತಿದೆ.
ಬಿಜೆಪಿ ಸರ್ಕಾರದ ಪಶುಸಂಗೋಪನಾ ಸಚಿವರಾದ ಪ್ರಭು ಚೌಹಾನ್ ಅವರಿಗೆ ಮೇಕೆ, ದನಗಳು ಎಂದರೆ ಯಾವು ಎಂಬುದೇ ಗೊತ್ತಿಲ್ಲ. ಸದನದಲ್ಲಿ ನನ್ನ ಪ್ರಶ್ನೆಗೆ ಕೂಡ ತಪ್ಪು ತಪ್ಪಾಗಿ ಲಿಖಿತ ಉತ್ತರ ನೀಡಿದ್ದರು. ಅವರ ವಿರುದ್ಧ ಸದನದ ಹಕ್ಕು ಚ್ಯುತಿ ಮಂಡಿಸಬಹುದಿತ್ತು ಆದರೆ ನೀನು ಪೆದ್ದ ಆಗಿರುವ ಕಾರಣಕ್ಕೆ ನಿನ್ನ ವಿರುದ್ಧ ಯಾವುದೇ ನೋಟಿಸ್ ನೀಡುವುದಿಲ್ಲ ಎಂದಿದ್ದೆ. ಒಂದೇ ಪ್ರಶ್ನೆಗೆ ನೀಡಿರುವ ಎರಡು ಉತ್ತರದಲ್ಲಿ 15 ಲಕ್ಷ ಜಾನುವಾರುಗಳ ಸಂಖ್ಯೆಯಲ್ಲಿ ವ್ಯತ್ಯಾಸ ಇತ್ತು, ಇಷ್ಟು ಜಾನುವಾರುಗಳನ್ನು ನೀನೇ ತಿಂದ್ಯನಪ್ಪಾ ಎಂದು ಕೇಳಿದ್ದೆ. ಚರ್ಮಗಂಟು ರೋಗ ಬಂದಿದೆ, ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿದ್ದೀರ ಎಂದು ಪ್ರಶ್ನೆ ಕೇಳಿದ್ದಕ್ಕೆ ಜನವರಿ 15ರೊಳಗೆ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿಸುತ್ತೇವೆ ಎಂದು ಹೇಳಿದ್ದರು, ಆದರೆ ಇನ್ನೂ 10 ರಿಂದ 15 ಲಕ್ಷ ಜಾನುವಾರಿಗಳಿಗೆ ಲಸಿಕೆ ಹಾಕಿಲ್ಲ. ಇಂಥಾ ಹಸಿ ಸುಳ್ಳು ಹೇಳೋರು ನಿಮ್ಮ ಶಾಸಕರಾಗಬೇಕ?

ಔರಾದ್ ನಿಂದ 27 ಜನ ಅರ್ಜಿ ಹಾಕಿದ್ದಾರೆ. ಎಲ್ಲರಿಗೂ ಟಿಕೇಟ್ ನೀಡಲು ಸಾಧ್ಯವಿಲ್ಲ. ಒಬ್ಬರಿಗೆ ಮಾತ್ರ ಟಿಕೇಟ್ ನೀಡಬಹುದು, ಟಿಕೇಟ್ ಸಿಗದೆ ಉಳಿದ 26 ಜನರು ಒಂದಾಗಿ ಕೆಲಸ ಮಾಡಿ ಪ್ರಭು ಚೌಹಾನ್ ಅವರನ್ನು ಸೋಲಿಸುವ ಕೆಲಸ ಮಾಡಬೇಕು. ಈ ಸಂಕಲ್ಪವನ್ನು ಇಂದಿನ ಸಮಾವೇಶದಲ್ಲಿ ಟಿಕೇಟ್ ಆಕಾಂಕ್ಷಿಗಳು ಮಾಡಬೇಕು.
ಬಿಜೆಪಿ ಪಕ್ಷ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿದ್ದಲ್ಲ, 113 ಸ್ಥಾನಗಳಲ್ಲಿ ಗೆದ್ದರೆ ಮಾತ್ರ ಆ ಸರ್ಕಾರಕ್ಕೆ ಜನಾಶೀರ್ವಾದ ಇದೆ ಎಂದರ್ಥ. ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು 104, ಜೆಡಿಎಸ್ 37 ಮತ್ತು ಕಾಂಗ್ರೆಸ್ 80 ಸ್ಥಾನಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್ ಪಕ್ಷ 38.18% ಮತ, ಬಿಜೆಪಿ 36.42% ಮತಗಳನ್ನು ಪಡೆದಿತ್ತು. ಬಿಜೆಪಿ ನಮಗಿಂತ ಕಡಿಮೆ ಪ್ರಮಾಣದ ಮತಗಳನ್ನು ಪಡೆದಿದ್ದರೂ ಹೆಚ್ಚು ಸ್ಥಾನಗಳಲ್ಲಿ ಗೆದ್ದಿತ್ತು. ಇದೇ ಪ್ರಜಾಪ್ರಭುತ್ವದ ವೈಶಿಷ್ಟ್ಯ. ಸರ್ಕಾರ ರಚನೆಗೆ ಯಡಿಯೂರಪ್ಪ ಅವರನ್ನು ಆಹ್ವಾನಿಸಿದ ರಾಜ್ಯಪಾಲರು, ಬಹುಮತ ಸಾಬೀತು ಮಾಡುವಂತೆ ತಿಳಿಸಿದರು. ಆದರೆ ಬಹುಮತ ಸಾಬೀತು ಮಾಡಲು ಸಾಧ್ಯವಾಗದ್ದರಿಂದ ಅವರ ಸರ್ಕಾರ ಬಿದ್ದುಹೋಯಿತು. ನಂತರ ನಾವು ಸರ್ಕಾರ ರಚನೆ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿ, ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಕುಮಾರಸ್ವಾಮಿ ಸರ್ಕಾರ 1 ವರ್ಷ 2 ತಿಂಗಳಿಗೆ ಬಿದ್ದುಹೋಯಿತು. ಇದಕ್ಕೆ ಕಾರಣ ಕುಮಾರಸ್ವಾಮಿ ವೆಸ್ಟೆಂಡ್ ಹೋಟೆಲ್ ನಲ್ಲಿ ಉಳಿದುಕೊಂಡು ಶಾಸಕರು, ಸಚಿವರ ಭೇಟಿಗೆ ಅವಕಾಶ ನೀಡದಿರುವುದು.
ನಾಯಿ ಕಾದಿತ್ತು, ಅನ್ನ ಹಳಸಿತ್ತು ಎಂಬ ಗಾಧೆ ಮಾತಿನಂತೆ ಈ ಸಂದರ್ಭವನ್ನು ಕಾಯುತ್ತಿದ್ದ ಬಿಜೆಪಿಯವರು ಒಬ್ಬೊಬ್ಬ ಶಾಸಕರಿಗೆ 15 ರಿಂದ 20 ಕೋಟಿ ಹಣ ನೀಡಿ ಖರೀದಿಸಿ, ಯಡಿಯೂರಪ್ಪ ಅವರ ನೇತೃತ್ವದಲ್ಲಿ ಆಪರೇಷನ್ ಕಮಲದ ಮೂಲಕ ಸರ್ಕಾರ ರಚನೆ ಮಾಡಿದರು. ಕೋಮುವಾದಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕೆ ನಾವು ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿದ್ದೆವು. ಸಮ್ಮಿಶ್ರ ಸರ್ಕಾರವನ್ನು ಕುಮಾರಸ್ವಾಮಿ ಅವರಿಂದ ಉಳಿಸಿಕೊಳ್ಳಲಾಗಲಿಲ್ಲ. ಅಲ್ಲಮಪ್ರಭು ಅವರ ಮಾತಿನಂತೆ ಕೊಟ್ಟ ಕುದುರೆಯನ್ನು ಏರದವ ವೀರನೂ ಅಲ್ಲ, ಶೂರನೂ ಅಲ್ಲ, ಹೀಗೆ ಕುಮಾರಸ್ವಾಮಿಗೆ ಕೊಟ್ಟ ಅಧಿಕಾರವನ್ನು ಉಳಿಸಿಕೊಳ್ಳಲಾಗಲಿಲ್ಲ. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿ ಪೂರ್ಣ 5 ವರ್ಷಗಳ ಕಾಲ ಆಡಳಿತ ನಡೆಸಿದ್ದೆ, ದೇವರಾಜ ಅರಸು ಅವರನ್ನು ಬಿಟ್ಟರೆ ಪೂರ್ಣಾವಧಿಗೆ ಆಡಳಿತ ನಡೆಸಿದ್ದು ನಾನು ಮಾತ್ರ.

ನಾನು ಮುಖ್ಯಮಂತ್ರಿಯಾಗಿರುವಾಗ 22 ಲಕ್ಷದ 27 ಸಾವಿರ ರೈತರು ಸಹಕಾರಿ ಬ್ಯಾಂಕುಗಳಲ್ಲಿ ಮಾಡಿದ್ದ 50,000 ವರೆಗಿನ ಒಟ್ಟು 8,165 ಕೋಟಿ ರೂ. ಸಾಲ ಮನ್ನಾ ಮಾಡಿದ್ದೆ. ಬೊಮ್ಮಾಯಿ, ಯಡಿಯೂರಪ್ಪ, ಮೋದಿ ಯಾರಾದರೂ ರೈತರ ಸಾಲ ಮನ್ನಾ ಮಾಡಿದ್ದಾರ? ಈ ಬಿಜೆಪಿ ಸರ್ಕಾರ ಬರೀ ಲೂಟಿ ಮಾಡುತ್ತಿದೆ. ನಾವು ಬಾಲ್ಯದಲ್ಲಿ ಓದಿದ್ದ ಕಥೆ ಅಲಿಬಾಬಾ ಮತ್ತು 40 ಮಂದಿ ಕಳ್ಳರ ತಂಡಕ್ಕೆ ಈ ಸರ್ಕಾರವನ್ನು ಹೋಲಿಸಬಹುದು. 40% ಕಮಿಷನ್ ನೀಡಲಾಗದೆ 3 ಜನ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು. ಇಂದು ವಿಧಾನಸೌಧದ ಗೋಡೆಗಳು ಲಂಚ, ಲಂಚ, ಲಂಚ ಎಂದು ಪಿಸುಗುಟ್ಟಲು ಆರಂಭ ಮಾಡಿದೆ.
ಈಶ್ವರಪ್ಪ ಮೊದಮೊದಲು ರಾಜೀನಾಮೆ ನೀಡಲು ಒಪ್ಪಿಲ್ಲ, ನಾವು ವಿಧಾನಸೌಧದ ಮುಂಭಾಗ ರಾತ್ರಿ ಹಗಲು ಪ್ರತಿಭಟನೆ ಮಾಡಿದ ಮೇಲೆ ಬೇರೆ ದಾರಿಯಿಲ್ಲದೆ ರಾಜೀನಾಮೆ ನೀಡಿದರು. ಈಗ ಮತ್ತೆ ಮಂತ್ರಿ ಆಗಬೇಕು ಎಂದು ಬಹಳಾ ಪ್ರಯತ್ನ ಮಾಡಿದ್ರು, ಆದರೆ ಅವರ ಹೈಕಮಾಂಡ್ ಒಪ್ಪಿಲ್ಲ ಎಂದು ಕಾಣುತ್ತೆ. ಕಾಮಗಾರಿಗೆ ಅನುಮೋದನೆ ನೀಡಲು, ಬಡ್ತಿ, ನೇಮಕಾತಿ, ವರ್ಗಾವಣೆ ಹೀಗೆ ಎಲ್ಲಾ ಕಡೆ ಲಂಚದಿಂದ ತುಂಬಿ ಹೋಗಿದೆ. ನಾನು 12 ವರ್ಷ ಹಣಕಾಸು ಸಚಿವನಾಗಿ ಕೆಲಸ ಮಾಡಿದ್ದೇನೆ. ಎನ್‌ಒಸಿ ಕೊಡಲು ನಾನು 5 ಪೈಸೆ ಲಂಚ ಪಡೆದಿದ್ದೆ ಎಂದು ಯಾರಾದರೂ ಹೇಳಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ.
ಈಗ ಅತ್ಯಂತ ಕೆಟ್ಟ, ಭ್ರಷ್ಟ ಸರ್ಕಾರ ರಾಜ್ಯದಲ್ಲಿದೆ. ಇದನ್ನು ನೀವು ಇಷ್ಟು ಕಾಲ ಸಹಿಸಿಕೊಂಡಿದ್ದೀರಿ. ಮುಂದೆ ಮೇ ತಿಂಗಳಿನಲ್ಲಿ ಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಬೇರು ಸಹಿತ ಕಿತ್ತು, ಕಾಂಗ್ರೆಸ್ ಪಕ್ಷವನ್ನು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರಿಸುವ ಕೆಲಸ ಮಾಡಬೇಕು ಎಂದು ತಮ್ಮಲ್ಲಿ ಕೈಮುಗಿದು ಮನವಿ ಮಾಡುತ್ತೇನೆ.