ರಾಜ್ಯದಲ್ಲಿ ಇತ್ತೀಚೆಗೆ ಬಿಟ್ ಕಾಯನ್ ಹಗರಣದ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೊದಲಿಗೆ ಬಿಟ್ ಕಾಯನ್ ಹಗರಣದ ಬಗ್ಗೆ ಪ್ರಸ್ತಾಪಿಸಿದರು. ಈಗ ಇಡೀ ಕಾಂಗ್ರೆಸ್ ಪಕ್ಷವೇ ಬಿಟ್ ಕಾಯನ್ ಬಗ್ಗೆ ತನಿಖೆಯಾಗಲಿ ಎಂದು ಒತ್ತಾಯಿಸುತ್ತಿದೆ. ಇನ್ನೊಂದು ವಿಶೇಷ ಎಂದರೆ ‘ಸಮರ್ಥನೆಯ ನೆಪದಲ್ಲಿ’ ಕೆಲ ಬಿಜೆಪಿ ನಾಯಕರು ಕೂಡ ಪ್ರತಿನಿತ್ಯ ಬಿಟ್ ಕಾಯನ್ ವಿಷಯ ಚರ್ಚೆಯಲ್ಲಿ ಇರುವಂತೆ ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಬಿಟ್ ಕಾಯನ್ ಹಗರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವತಃ ಭಾಗಿಯಾಗಿದ್ದಾರೆ (ಹಿಂದೆ ಗೃಹ ಸಚಿವರಾಗಿದ್ದಾಗ) ಎಂಬ ಬಗ್ಗೆ ಚರ್ಚೆ ಆಗುತ್ತಿದೆ. ಕೆಲವರು ‘ಈ ಹಗರಣದಲ್ಲಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಪಾತ್ರ ಇದೆ’ ಎಂದು ಚರ್ಚಿಸುತ್ತಿದ್ದಾರೆ. ಇದೆಲ್ಲದರ ಪರಿಣಾಮ ಬಸವರಾಜ ಬೊಮ್ಮಾಯಿ ಅವರಿಂದ ರಾಜೀನಾಮೆ ಪಡೆಯಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ದೆಹಲಿಗೆ ದೌಡಾಯಿಸಿದ್ದಾರೆ. ‘ಟೈಮ್ಸ್’ ಸಮೂಹದ ಕಾನ್ ಕ್ಲೇವ್ ನಲ್ಲಿ ಭಾಗವಹಿಸುವುದು ಮತ್ತು ಕೇಂದ್ರ ಸಚಿವರ ಭೇಟಿ ಮಾಡುವುದು ಎಂಬುದು ಅವರ ‘ಟೂರ್ ಪ್ರೋಗ್ರ್ಯಾಮ್’ನಲ್ಲಿ ಉಲ್ಲೇಖಿಸಿರುವ ಸಂಗತಿ. ಆದರೆ ಇದಕ್ಕಿಂತಲೂ ಮುಖ್ಯವಾಗಿ ಮುಖ್ಯಮಂತ್ರಿಗಳು ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರೆ, ಅದೇ ಕಾರಣಕ್ಕೆ ಬೆಂಗಳೂರಿಗೆ ವಾಪಸ್ ಬರುವ ಬಗ್ಗೆ ಸಮಯ ನಿಗಧಿ ಮಾಡಿಲ್ಲ ಎಂದು ಹೇಳಲಾಗುತ್ತಿದೆ.
ಹೈಕಮಾಂಡ್ ಭೇಟಿಗೆ ನಿರಂತರ ಪ್ರಯತ್ನ
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಹೊಸದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿಗೆ ಅವಕಾಶ ಕೊಟ್ಟು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದರು. ಅದೇ ರೀತಿ ಅಮಿತ್ ಶಾ ಕೂಡ ಬೊಮ್ಮಾಯಿ ಅವರನ್ನು ಆದರದಿಂದ ಬರಮಾಡಿಕೊಂಡಿದ್ದರಲ್ಲದೆ ಕರ್ನಾಟಕಕ್ಕೆ ಬಂದಾಗ ‘2023ರ ರಾಜ್ಯ ವಿಧಾನಸಭಾ ಚುನಾವಣೆಯನ್ನು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಎದುರಿಸುತ್ತೇವೆ’ ಎಂದು ಹೇಳಿ ಹುರಿದುಂಬಿಸಿದ್ದರು. ಇದಾದ ಮೇಲೆ ಏನಾಯಿತು ಎಂಬುದು ನಿಗೂಡ. ಮೋದಿ ಮತ್ತು ಅಮಿತ್ ಶಾ ಇನ್ನೆಂದೂ ಬಸವರಾಜ ಬೊಮ್ಮಾಯಿಗೆ ಭೇಟಿಯ ಅವಕಾಶವನ್ನೇ ನೀಡಲಿಲ್ಲ. ಮೂರ್ನಾಲ್ಕು ಬಾರಿ ದೆಹಲಿಗೆ ಬಂದು ದಿನವಿಡೀ ಕಾದು ಕುಳಿತರೂ ಮೋದಿ-ಶಾ ಭೇಟಿ ಬೊಮ್ಮಾಯಿಗೆ ಸಾಧ್ಯವಾಗಲೇ ಇಲ್ಲ. ಮೋದಿ-ಶಾ ಇರಲಿ, ಜೆ.ಪಿ. ನಡ್ಡ ಕೂಡ ಭೇಟಿಗೆ ಅವಕಾಶ ಕೊಡಲಿಲ್ಲ.
‘ಹೊರಗಿನ’ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ ಮೂಲತಃ ಬಿಜೆಪಿಯವರಲ್ಲ; ಜೆಡಿಯುನಿಂದ ಬಿಜೆಪಿಗೆ ಬಂದವರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೂಲಕ ಬಿಜೆಪಿಗೆ ಬಂದ ಬಸವರಾಜ ಬೊಮ್ಮಾಯಿ ಆನಂತರವೂ ಬಿಜೆಪಿ ಬದಲಿಗೆ ಯಡಿಯೂರಪ್ಪ ಬಗ್ಗೆಯೇ ಹೆಚ್ಚು ನಿಷ್ಠೆ ಇಟ್ಟುಕೊಂಡಿದ್ದರು. ಆದರೀಗ ಅನಿವಾರ್ಯ ಕಾರಣಗಳಿಂದಾಗಿ ‘ಹೊರಗಿನ’ ಬೊಮ್ಮಾಯಿಗೆ ಮುಖ್ಯಮಂತ್ರಿ ಮಣೆ ಹಾಕಿರುವುದರಿಂದ ಮೂಲ ಬಿಜೆಪಿಯವರು, ಆರ್ ಎಸ್ ಎಸ್ ಹಿನ್ನೆಲೆಯವರು ಬಸವರಾಜ ಬೊಮ್ಮಾಯಿ ಅವರನ್ನು ಈಗಲೂ ‘ತಮ್ಮ ಮುಖ್ಯಮಂತ್ರಿ’ ಎಂದು ಒಪ್ಪಿಕೊಂಡಿಲ್ಲ. ಮೊದಲೇ ಹೊರಗಿನವನೆಂದು ಮೂಗು ಮುರಿಯುತ್ತಿದ್ದವರಿಗೆ ಈಗ ‘ಬಿಟ್ ಕಾಯನ್ ಹಗರಣದಲ್ಲಿ ಸಿಲುಕಿದ್ದಾರೆ’ ಎಂಬ ಮತ್ತೊಂದು ಸಕಾರಣ ಸಿಕ್ಕಿದೆ.
‘ಹೊರಗಿನವ’ ಮತ್ತು ‘ಹಗರಣಕ್ಕೆ ಸಿಲುಕಿಕೊಂಡವ’ ಎಂಬ ಹಣೆಪಟ್ಟಿಗಳ ಪರಿಣಾಮ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದರೂ ಮೊದಲಿನಷ್ಟು ಕಂಫರ್ಟ್ ಆಗಿ ಇಲ್ಲ. ಮೂಲ ಮತ್ತು ಹಿರಿಯ ಸಚಿವರೇ ಮುಖ್ಯಮಂತ್ರಿ ಬಳಿ ಹೋಗುತ್ತಿಲ್ಲ. ಇದೇ ಕಾರಣಕ್ಕೆ ಬಸವರಾಜ ಬೊಮ್ಮಾಯಿ ಧಾರವಾಡ ಬಳಿ ನಡೆದ ಆರ್ ಎಸ್ ಎಸ್ ಬೈಠಕ್ ವೇಳೆ ಆರ್ ಎಸ್ ಎಸ್ ನಾಯಕರನ್ನು ಭೇಟಿ ಮಾಡಲು ಯತ್ನಿಸಿದರು. ಒಂದಿಡೀ ದಿನ ಹುಬ್ಬಳ್ಳಿಯಲ್ಲಿ ಕಾದು ಕುಳಿತಿದ್ದರು. ಆದರೂ ಆರ್ ಎಸ್ ಎಸ್ ನಾಯಕರ ಭೇಟಿಗೆ ಅವಕಾಶ ಸಿಗಲಿಲ್ಲ. ಇದಾದ ಮೇಲೆ ಮೊನ್ನೆ ಆರ್ ಎಸ್ ಎಸ್ ನಾಯಕ ಮುಕುಂದ್ ಬಂದು ‘ಕೊಡಬೇಕಾದ ಸಂದೇಶ ಕೊಟ್ಟು ಹೋಗಿದ್ದಾರೆ.
ಇದಾದ ಮೇಲೆ ಬಸವರಾಜ ಬೊಮ್ಮಾಯಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿದ್ದಾರೆ. ಈ ಮೂವರ ಜೊತೆಗಿನ ಭೇಟಿಯ ಸಂದರ್ಭದಲ್ಲಿ ಬಿಟ್ ಕಾಯನ್ ಹಗರಣದ ಬಗ್ಗೆಯೇ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸದ್ಯ ಹೈಕಮಾಂಡ್ ಬಸವರಾಜ ಬೊಮ್ಮಾಯಿ ಅವರಿಂದ ಬಿಟ್ ಕಾಯನ್ ಹಗರಣದ ಬಗ್ಗೆ ಸ್ಪಷ್ಟೀಕರಣವನ್ನು ಬಯಸುತ್ತಿದೆಯೋ ಅಥವಾ ರಾಜೀನಾಮೆಯನ್ನು ನಿರೀಕ್ಷಿಸುತ್ತಿದೆಯೋ ಎಂಬುದು ಯಾರಿಗೂ ಗೊತ್ತಿಲ್ಲ. ಇದೇ ವಿಷಯವಾಗಿ ಹೈಕಮಾಂಡ್ ನಾಯಕರ ಭೇಟಿಗೆ ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಮಾತ್ರ ಖಾತರಿಯಾಗಿದೆ. ಆದರೆ ಈ ಬಾರಿಯೂ ಹೈಕಮಾಂಡ್ ನಾಯಕರ ಭೇಟಿಗೆ ಅವಕಾಶ ಸಿಗುತ್ತೋ ಅಥವಾ ಇಲ್ಲವೋ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.