ಭಾರತೀಯ ಜನತಾ ಪಕ್ಷದ ರಾಜ್ಯ ನಾಯಕತ್ವದ ಬದಲಾವಣೆಯ ಜೊತೆ ಪ್ರಶ್ನಾತೀತ ನಾಯಕ ಎಂಬ ಪಟ್ಟದಿಂದ ಬಿ ಎಸ್ ಯಡಿಯೂರಪ್ಪ ಬದಿಗೆ ಸರಿದ ಬಳಿಕ, ಪಕ್ಷದ ಪ್ರಭಾವಿ ಹೈಕಮಾಂಡ್ ಕೈಗೆ ಇಡೀ ಪಕ್ಷ ಮತ್ತು ಪಕ್ಷದ ಸರ್ಕಾರದ ಜುಟ್ಟು ಸಂಪೂರ್ಣವಾಗಿ ಸಿಗಲಿದೆ. ಹಾಗಾಗಿ, ಇನ್ನೇನು ಪಕ್ಷದ ಗುಂಪುಗಾರಿಕೆ, ಗೊಂದಲಗಳಿಗೆಲ್ಲಾ ತೆರೆ ಬಿದ್ದೇ ಹೋಯಿತು ಎಂದೇ ಭಾವಿಸಲಾಗಿತ್ತು.
ಆದರೆ, ಯಡಿಯೂರಪ್ಪ ಉತ್ತರಾಧಿಕಾರಿಯಾಗಿ ಅವರ ಪರಮಾಪ್ತ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಗಾದಿಗೆ ಏರಿದ ಬಳಿಕ ಬಿಜೆಪಿಯ ಆ ಗೊಂದಲಗಳು, ಹಗ್ಗಜಗ್ಗಾಟಗಳು ಇನ್ನೂ ಮುಗಿದಿಲ್ಲ ಎಂಬುದು ಮನವರಿಕೆಯಾಗಲು ಹೆಚ್ಚು ದಿನ ಬೇಕಾಗಲಿಲ್ಲ.
ಭಿನ್ನಮತೀಯರ ಷಢ್ಯಂತ್ರ, ಬಂಡಾಯ ಮತ್ತು ಅಂತಹ ಚಟುವಟಿಕೆಗಳಿಗೆ ಪಕ್ಷದ ಹೈಕಮಾಂಡಿನ ಪರೋಕ್ಷ ಕುಮ್ಮಕ್ಕುಗಳ ಕಾರಣದಿಂದಾಗಿ ಸುದೀರ್ಘ ಹಗ್ಗಜಗ್ಗಾಟದ ಬಳಿಕ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕಾರ ತ್ಯಾಗ ಮಾಡಿದ್ದರು. ಸಾರ್ವಜನಿಕವಾಗಿ ಅದು ಸ್ವಯಂಪ್ರೇರಿತ ಅಧಿಕಾರ ತ್ಯಾಗ ಎಂದು ಬಿಜೆಪಿ ಬಿಂಬಿಸಿದರೂ, ಆ ಹಿಂದಿನ ನಾಯಕತ್ವ ಬದಲಾವಣೆಯ ಹೋರಾಟಗಳು ಮತ್ತು ಆ ವೇಳೆ ಯಡಿಯೂರಪ್ಪ ಹಾಕಿದ ಕಣ್ಣೀರು ಸಾರಿ ಹೇಳಿದ್ದು ಬೇರೆಯೇ. ಯಡಿಯೂರಪ್ಪ ವಾಸ್ತವವಾಗಿ ಪದಚ್ಯುತರಾಗಿದ್ದರು. ಬಿಜೆಪಿ ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಅಧಿಕಾರ ಬಿಟ್ಟುಕೊಟ್ಟಿದ್ದರು ಎಂಬುದು ಮುಚ್ಚಿಡಲಾಗದ ಸತ್ಯ.
ನಾಯಕತ್ವ ಬದಲಾವಣೆಯನ್ನು ಬಿಜೆಪಿ ಬಿಂಬಿಸಿದ ರೀತಿಗೂ ಮತ್ತು ವಾಸ್ತವವಾಗಿ ಅದು ನಡೆದ ರೀತಿಗೂ ಇರುವ ಆ ವ್ಯತ್ಯಾಸವೇ ಇದೀಗ ಬಿಜೆಪಿಯಲ್ಲಿ ಮತ್ತೊಂದು ಸುತ್ತಿನ ಬೇಗುದಿಗೆ ಕಾರಣವಾಗಿದೆ. ತಾವು ಅಧಿಕಾರ ತ್ಯಜಿಸುವ ವೇಳೆ ಘೋಷಿಸಿದಂತೆ ಯಡಿಯೂರಪ್ಪ, ತಮ್ಮದೇ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಸಿ ಬರೋಬ್ಬರಿ 150 ಸ್ಥಾನ ಗಳಿಸಲು ತಯಾರಿ ಆರಂಭಿಸಿದ್ದಾರೆ. ಅದರ ಅಂಗವಾಗಿ ಗಣೇಶ ಹಬ್ಬದ ಬಳಿಕ ರಾಜ್ಯ ಪ್ರವಾಸ ಮಾಡಲು ತೀರ್ಮಾನಿಸಿದ್ದಾರೆ. ಪ್ರಭಾವಿ ಲಿಂಗಾಯತ ಸಮುದಾಯದ ನಾಯಕರಾಗಿ, ಆ ಸಮುದಾಯದ ಬಲದ ಮೇಲೆಯೇ ಪಕ್ಷ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಕಾರಣರಾದ ಯಡಿಯೂರಪ್ಪ ಹೀಗೆ ರಾಜ್ಯ ಪ್ರವಾಸ ಹೊರಡುತ್ತಾರೆ ಎನ್ನುತ್ತಲೇ ಬಿಜೆಪಿ ರಾಜ್ಯ ಮತ್ತು ದೆಹಲಿ ನಾಯಕರ ಪಾಲಿಗೆ ಗಂಟಲಲ್ಲಿ ಬಿಸಿ ತುಪ್ಪ ಸಿಕ್ಕಿಕೊಂಡಂತಾಗಿದೆ.
ಯಡಿಯೂರಪ್ಪ ಅವರ ಅಂತಹ ರಾಜ್ಯ ಪ್ರವಾಸವನ್ನು ಮತ್ತು ಮುಂದಿನ ಚುನಾವಣೆಯ ನೇತೃತ್ವವನ್ನು ತಪ್ಪಿಸಲೆಂದೇ ಈಗಾಗಲೇ ಪಕ್ಷದ ನಾಯಕರು ಹಲವು ತಂತ್ರ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ನೇತೃತ್ವದಲ್ಲೇ ಮುಂದಿನ ಚುನಾವಣೆಗೆ ಹೋಗುವುದಾಗಿ ಈಗಾಗಲೇ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ಸೇರಿದಂತೆ ಹಲವರು ಹೇಳಿಕೆ ನೀಡಿದ್ದಾರೆ. ಆ ಮೂಲಕ ಯಡಿಯೂರಪ್ಪ ನಾಯಕತ್ವದಲ್ಲಿ ಪಕ್ಷ ಮುಂದುವರಿಯುವುದಿಲ್ಲ ಎಂಬುದನ್ನು ಪರೋಕ್ಷವಾಗಿ ಬಿಜೆಪಿಯ ಸಂಘ-ಪರಿವಾರ ನಿಷ್ಠರು ಸಾರಿ ಹೇಳತೊಡಗಿದ್ದಾರೆ.
ಅಂತಹ ಹೇಳಿಕೆಗಳ ನಡುವೆಯೂ ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಮುಹೂರ್ತ ಫಿಕ್ಸ್ ಮಾಡಿರುವುದೇ ಅಲ್ಲದೆ, ಭಾರೀ ಬಹುಮತದೊಂದಿಗೆ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಸ್ವತಃ ತಾವೇ ಮುಂದಿನ ಚುನಾವಣೆಯ ನೇತೃತ್ವ ವಹಿಸುವುದಾಗಿಯೂ ಹೇಳಿದ್ದಾರೆ. ಯಡಿಯೂರಪ್ಪ ಹೀಗೆ ಹಠಕ್ಕೆ ಬಿದ್ದಂತೆ ರಾಜ್ಯ ಪ್ರವಾಸಕ್ಕೆ ಮುಂದಾಗುತ್ತಲೇ ಎಚ್ಚೆತ್ತ ಹೈಕಮಾಂಡ್, ಅದರಿಂದಾಗಿ ಪಕ್ಷದಲ್ಲಿ ಈಗಾಗಲೇ ಮುಖ್ಯಮಂತ್ರಿಯಾಗಿ ನಾಯಕತ್ವ ವಹಿಸಿರುವ ಬೊಮ್ಮಾಯಿ ವರ್ಚಸ್ಸಿಗೆ ಹೊಡೆತ ಬೇಳಲಿದೆ ಜೊತೆಗೆ ಪಕ್ಷದಲ್ಲಿ ಅನಗತ್ಯ ಗೊಂದಲಕ್ಕೆ ಎಡೆಮಾಡಿಕೊಡಲಿದೆ. ಇನ್ನೂ ಚುನಾವಣೆ ಒಂದೂಮುಕ್ಕಾಲು ವರ್ಷ ಇರುವಾಗಲೇ ಹೀಗೆ ಚುನಾವಣೆ ಮುಂದಿಟ್ಟುಕೊಂಡು ಪ್ರವಾಸ ಮಾಡುವುದು ಮತದಾರರಲ್ಲಿ ಕೂಡ, ಹಾಲಿ ಸರ್ಕಾರದ ಸ್ಥಿರತೆಯ ಕುರಿತು ಅನುಮಾನಗಳಿಗೆ ಕಾರಣವಾಗಲಿದೆ. ಹಾಗಾಗಿ ಯಡಿಯೂರಪ್ಪ ತಮ್ಮ ಪ್ರವಾಸ ಕೈಬಿಡಬೇಕು ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮೂಲಕ ಒತ್ತಡ ಹೇರಿದೆ.
ಮುಂದಿನ ಜನವರಿ ಹೊತ್ತಿಗೆ ಜಿಪಂ ಮತ್ತು ತಾಪಂ ಚುನಾವಣೆ ವೇಳೆ ಸಹಜವಾಗೇ ಪಕ್ಷದ ನಾಯಕರ ಚುನಾವಣಾ ಪ್ರವಾಸಗಳು ಆರಂಭವಾಗಲಿವೆ. ಅದಕ್ಕೂ ಮುನ್ನ ಈಗ ಯಾವುದೇ ವಿಷಯವಿಲ್ಲದೆ, ವಿಧಾನಸಭಾ ಚುನಾವಣೆ ಮುಂದಿಟ್ಟುಕೊಂಡು ರಾಜ್ಯ ಪ್ರವಾಸ ಮಾಡುವುದು ಸರಿಯಲ್ಲ ಎಂಬುದು ಹೈಕಮಾಂಡ್ ಸಮಜಾಯಿಷಿ.
ಆದರೆ, ವಾಸ್ತವವಾಗಿ, ಯಡಿಯೂರಪ್ಪ ರಾಜ್ಯಪ್ರವಾಸದ ಉದ್ದೇಶ ಮತ್ತು ಆ ಪ್ರವಾಸದ ಕುರಿತ ಪಕ್ಷದ ನಾಯಕರ ಭೀತಿಗೆ ಕಾರಣಗಳು ಬೇರೆಯೇ ಇವೆ. ತಾವೇ ಸ್ವತಃ ಆಪರೇಷನ್ ಕಮಲದ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತಂದು, ಮುಖ್ಯಮಂತ್ರಿಯಾಗಿದ್ದರೂ, ತಮ್ಮ ಅವಧಿಗೆ ಮುನ್ನವೇ ತಮ್ಮ ವಿರೋಧಿಗಳ ಷಢ್ಯಂತ್ರಕ್ಕೆ ಕುಮ್ಮಕ್ಕು ಕೊಟ್ಟು ಪದಚ್ಯುತಿಗೊಳಿಸಿದ ಬಿಜೆಪಿಯ ಹೈಕಮಾಂಡ್ ಗೆ ರಾಜ್ಯದಲ್ಲಿ ತಮ್ಮ ಪ್ರಭಾವ ಎಷ್ಟು? ಶಕ್ತಿ ಏನು? ಎಂಬುದನ್ನು ತೋರಿಸಲು ಯಡಿಯೂರಪ್ಪ ಈ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದಾರೆ. ಅದೇ ವೇಳೆ ಒಂದು ವೇಳೆ ತಮ್ಮ ಪುತ್ರ ವಿಜಯೇಂದ್ರ ಅವರಿಗೆ ತಾವು ಕೇಳಿರುವ ಸ್ಥಾನಮಾನ, ಅವಕಾಶಗಳನ್ನು ಕೊಡದೇ ಇದ್ದಲ್ಲಿ, ಮುಂದಿನ ಚುನಾವಣೆಗೆ ಮುನ್ನ ಯಾವ ತೀರ್ಮಾನ ಕೈಗೊಳ್ಳಬೇಕು ಎಂಬುದನ್ನು ಕೂಡ ನಿರ್ಧರಿಸಲು ಯಡಿಯೂರಪ್ಪ ಈ ರಾಜ್ಯ ಪ್ರವಾಸವನ್ನು ಒಂದು ಪ್ರಯೋಗವಾಗಿ ಬಳಸಿಕೊಳ್ಳಲಿದ್ದಾರೆ. ಹಾಗಾಗಿಯೇ ಅವರು ಪಕ್ಷದ ಇತರೆ ಮುಖಂಡರನ್ನು ಹೊರತುಪಡಿಸಿ ತಮ್ಮ ಪುತ್ರ ವಿಜಯೇಂದ್ರ ಜೊತೆಗೂಡಿಯೇ ಈ ಪ್ರವಾಸ ಮಾಡಲು ಯೋಜಿಸಿದ್ದಾರೆ!
ಈ ಸತ್ಯ ಪಕ್ಷದ ಹೈಕಮಾಂಡಿಗೆ ಗೊತ್ತಿದೆ. ಹಾಗಾಗಿಯೇ ಅವರು ಈಗಾಗಲೇ ಪ್ರವಾಸ ಕೈಬಿಡುವಂತೆ ಯಡಿಯೂರಪ್ಪ ಮೇಲೆ ಒತ್ತಡ ಹಾಕತೊಡಗಿದ್ದಾರೆ. ಅಲ್ಲದೆ, ಪ್ರಮುಖ ರಾಜ್ಯವೊಂದರ ರಾಜ್ಯಪಾಲರಾಗಿ ನೇಮಕ ಮಾಡುತ್ತೇವೆ. ರಾಜ್ಯ ರಾಜಕಾರಣದಿಂದ ದೂರವಿರಿ ಎಂಬ ಆಫರನ್ನು ಕೂಡ ಮತ್ತೊಮ್ಮೆ ಮುಂದಿಟ್ಟಿದ್ದಾರೆ. ಆ ಆಫರ್ ಒಪ್ಪಿಕೊಂಡರೆ ನಿಮ್ಮ ಪುತ್ರ ವಿಜಯೇಂದ್ರಗೆ ಶಿಕಾರಿಪುರದಲ್ಲಿ ಕಣಕ್ಕಿಳಿಯಲು ಮುಂದಿನ ಚುನಾವಣೆಗೆ ಟಿಕೆಟ್ ನೀಡುತ್ತೇವೆ ಎಂಬ ಷರತ್ತನ್ನೂ ಹೈಕಮಾಂಡ್ ಇಟ್ಟಿದೆ ಎನ್ನಲಾಗುತ್ತಿದೆ. ಆದರೆ, ಯಡಿಯೂರಪ್ಪ ಆ ಯಾವ ಆಫರ್, ಷರತ್ತುಗಳಿಗೂ ತಲೆಗಾಗಿಲ್ಲ. ಅಲ್ಲದೆ, ತಮ್ಮ ಪುತ್ರನಿಗೆ ಪ್ರಮುಖ ಸಚಿವ ಸ್ಥಾನ, ವರುಣಾ ಕ್ಷೇತ್ರದಿಂದ ಟಿಕೆಟ್ ಸೇರಿದಂತೆ ತಮ್ಮ ಬೇಡಿಕೆಗಳಿಗೆ ಹೈಕಮಾಂಡ್ ಸ್ಪಂದಿಸುತ್ತಿಲ್ಲ ಎಂಬುದು ಬಿಎಸ್ ವೈ ರೊಚ್ಚಿಗೆಬ್ಬಿಸಿದೆ.
ಈ ನಡುವೆ, ಪರಿಸ್ಥಿತಿ ಕೈಮೀರುತ್ತಿರುವ ಸೂಚನೆ ಅರಿತಿರುವ ಪಕ್ಷದ ಹೈಕಮಾಂಡ್ ಹಾಗೂ ಗೃಹ ಸಚಿವ ಅಮಿತ್ ಶಾ, ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಯೇ ಮುಂದಿನ ಚುನಾವಣೆಗೆ ಹೋಗುವುದಾಗಿ ಘೋಷಿಸಿದ್ದಾರೆ. ಈ ಹೇಳಿಕೆಯ ಹಿಂದೆ ಯಡಿಯೂರಪ್ಪ ಅವರನ್ನು ಸಮಾಧಾನಪಡಿಸುವ ಉದ್ದೇಶಕ್ಕಿಂತ, ಯಡಿಯೂರಪ್ಪಗೆ ಪರ್ಯಾಯ ನಾಯಕರಾಗಿ ಬೊಮ್ಮಾಯಿ ಇದ್ದಾರೆ ಎಂಬುದನ್ನು ಸಾರುವ ಉದ್ದೇಶವೇ ಹೆಚ್ಚಾಗಿರುವಂತಿದೆ. ಅದರಲ್ಲೂ ವೀರಶೈವ ಲಿಂಗಾಯತ ವಲಯದಲ್ಲಿಯೇ ನಿಮಗೆ ಯಡಿಯೂರಪ್ಪ ಮಾತ್ರ ನಾಯಕರಲ್ಲ; ಇದೀಗ ಬಿಜೆಪಿ ನಿಮಗೊಬ್ಬ ಪರ್ಯಾಯ ನಾಯಕನನ್ನು ಹುಟ್ಟುಹಾಕಿದೆ ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಅಂದರೆ; ಯಡಿಯೂರಪ್ಪ ಪದಚ್ಯುತಿಯ ಬಳಿಕ ನಳೀನ್ ಕುಮಾರ್ ಕಟೀಲ್ ಹೆಗಲಿಗೆ ಪಕ್ಷವನ್ನು ಮುನ್ನಡೆಸುವ ಹೊಣೆ ಹೊರಿಸುವ ಲೆಕ್ಕಾಚಾರಗಳು ಸಂಘದ ಮಟ್ಟದಲ್ಲಿ ನಡೆದಿದ್ದವು. ಆದರೆ, ಈ ಎರಡು ತಿಂಗಳಲ್ಲಿ ಅಂತಹ ಪ್ರಸ್ತಾಪಗಳಿಗೆ ಪಕ್ಷದ ಒಳಹೊರಗೆ ನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿಲ್ಲ. ಹಾಗಾಗಿ ಇದೀಗ ತಮ್ಮ ಭಿನ್ನ ಆಡಳಿತ ಶೈಲಿಯ ಮೂಲಕ ಗಮನ ಸೆಳೆಯುತ್ತಿರುವ ಬೊಮ್ಮಾಯಿ ಅವರ ಜನಪ್ರಿಯತೆಯನ್ನೇ ನೆಚ್ಚಿ ಪಕ್ಷವನ್ನು ಮುನ್ನಡೆಸುವ ಹೊಣೆಗಾರಿಕೆಯನ್ನು ಅವರ ಹೆಗಲಿಗೆ ದಾಟಿಸಲು ಪಕ್ಷ ಚಿಂತಿಸಿದೆ. ಆ ಮೂಲಕ ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ಲೆಕ್ಕಾಚಾರ ಪಕ್ಷದ ನಾಯಕರದ್ದು. ಒಂದು ಕಡೆ ಪಕ್ಷಕ್ಕೆ ಇರುವುದರಲ್ಲೇ ಒಂದಿಟ್ಟು ವರ್ಚಸ್ಸು ಇರುವ ವ್ಯಕ್ತಿಯ ನಾಯಕತ್ವ ನೀಡುವುದು, ಮತ್ತೊಂದು ಕಡೆಗೆ ತಮ್ಮ ದೊಡ್ಡ ಮತಬ್ಯಾಂಕ್ ಆಗಿರುವ ಪ್ರಭಾವಿ ಲಿಂಗಾಯತ ಸಮುದಾಯವನ್ನು ಯಡಿಯೂರಪ್ಪ ಹೊರತಾಗಿಯೂ ಪಕ್ಷದೊಂದಿಗೆ ಹಿಡಿದಿಟ್ಟುಕೊಳ್ಳುವುದು ಹೈಕಮಾಂಡ್ ನಡೆಯ ಹಿಂದಿನ ಲೆಕ್ಕಾಚಾರ.
ಈ ಮೊದಲು ಕೆ ಎಸ್ ಈಶ್ವರಪ್ಪ ಪದೇಪದೇ ನಳೀನ್ ಕುಮಾರ್ ನೇತೃತ್ವದಲ್ಲೇ ಪಕ್ಷ ಮುಂದಿನ ಚುನಾವಣೆ ಎದುರಿಸಲಿದೆ ಎಂದು ಹೇಳಿದಾಗ, ಆ ಬಗ್ಗೆ ಬಹಿರಂಗವಾಗಿ ಯಾವುದೇ ನೇರ ಪ್ರತಿಕ್ರಿಯೆ ನೀಡದೆ, ತಮ್ಮದೇ ನೇತೃತ್ವದಲ್ಲಿ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿಯೂ, ಅದಕ್ಕಾಗಿ ರಾಜ್ಯದ ಮೂಲೆಮೂಲೆ ಸುತ್ತುವುದಾಗಿಯೂ ಹೇಳಿ ಯಡಿಯೂರಪ್ಪ ಪರೋಕ್ಷ ತಿರುಗೇಟು ನೀಡಿದ್ದರು. ಆದರೆ, ಈ ಬಾರಿ ಸ್ವತಃ ಪಕ್ಷದ ಹೈಕಮಾಂಡ್ ಅಮಿತ್ ಶಾ ಅವರೇ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗುವುದಾಗಿ ಹೇಳಿದ್ದಾರೆ. ಈಗ ಯಡಿಯೂರಪ್ಪ ಶಾ ಹೇಳಿಕೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ? ಎಂಬುದರ ಮೇಲೆ ಬಿಜೆಪಿಯ ಆಂತರಿಕ ಬಿಕ್ಕಟ್ಟಿನ ಮುಂದಿನ ಸ್ವರೂಪ ನಿಂತಿದೆ!