2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ನಡೆಸಿದ ಹೋರಾಟಗಳು ಒಂದೆರಡಲ್ಲ. ರಾಜ್ಯ ರಾಜಧಾನಿಯಲ್ಲೂ ಬೃಹತ್ ಹೋರಾಟ ಮಾಡಿದ್ದ ಪಂಚಮಸಾಲಿ ಸಮುದಾಯ ಒಂದು ಅವಧಿಯಲ್ಲಿ ಸರ್ಕಾರದ ನಿದ್ದೆಯನ್ನೇ ಕೆಡಿಸಿತ್ತು. ಆದರೂ ಪ್ರಯತ್ನ ಬಿಡದ ಪಂಚಮಸಾಲಿ ಸಮುದಾಯ ತನ್ನ ಹೋರಾಟವನ್ನು ಇನ್ನೂ ಮುಂದುವರೆಸಿದೆ. ಈ ಬೆಳವಣಿಗೆಯನ್ನು ಹೀಗೆ ನಿರ್ಲಕ್ಷಿಸಿದರೆ ಬರುವ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಪಕ್ಷಕ್ಕೆ ಮುಳುವಾಗುವ ಸಾಧ್ಯತೆ ಹೆಚ್ಚು ಎಂಬುದನ್ನು ಅರಿತ ಸರ್ಕಾರ ಪಂಚಮಸಾಲಿ ಸಮಾಜದ ಮನವೊಲಿಕೆಗೆ ಮುಂದಾದಂತೆ ಕಾಣುತ್ತಿದೆ.ಲಿಂಗಾಯತ ಸಮುದಾಯದಲ್ಲೇ ಪಂಚಮಸಾಲಿ ದೊಡ್ಡ ಸಮುದಾಯವಾಗಿದ್ದು, 2ಎ ಮೀಸಲಾತಿ ಕೊಡಿ ಎಂಬ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಗೃಹಮಂತ್ರಿಯಾಗಿದ್ದಾಗ 2ಎ ಮೀಸಲಾತಿ ನೀಡಲು ಕ್ರಮ ಕೈಗೊಳ್ಳುವುದಾಗಿಯೂ ಭರವಸೆ ನೀಡಿದ್ದರು. ಆ ಭರವಸೆ ಇನ್ನೂ ಈಡೇರಿಲ್ಲ. ಸದ್ಯ ಬೊಮ್ಮಾಯಿ ಅವರೇ ಸಿಎಂ ಆಗಿರುವುದರಿಂದ ಈ ಮೀಸಲಾತಿ ಹೋರಾಟಕ್ಕೆ ತಾರ್ಕಿಕ ಅಂತ್ಯ ಹಾಡಲು ಹಲವು ಸೂತ್ರ ಹೆಣೆದಿದ್ದಾರೆ. ಈ ಮೂಲಕ ಬಲಿಷ್ಠ ಲಿಂಗಾಯತ ನಾಯಕರಾಗಿ ಹೊರಹೊಮ್ಮುವ ಯೋಜಿತ ಚಿಂತನೆ ಇದರ ಹಿಂದೆ ಇದ್ದಂತೆ ತೋರುತ್ತಿದೆ.
ಸರ್ಕಾರದ ಚಿಂತನೆಗಳೇನು?
ಪಂಚಮಸಾಲಿ ಸಮುದಾಯಕ್ಕೆ 2ಎ ಸವಲತ್ತನ್ನು 3ಬಿಯಲ್ಲೇ ನೀಡುವ ಯೋಚನೆ ಸಿಎಂ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಪಂಚಮಸಾಲಿಗೆ 2ಎ ಮೀಸಲಾತಿ ಕಲ್ಪಿಸಿದರೆ ಇದರಿಂದ ಇತರೆ ಹಿಂದುಳಿದ ವರ್ಗಗಳ ಸಿಟ್ಟಿಗೆ ಇದು ಗುರಿಯಾಗಬಹುದು. ಇದನ್ನು ಮನಗಂಡು 2ಎ ಸೌಲಭ್ಯವನ್ನು 3ಬಿಯಲ್ಲಿ ಒದಗಿಸಲು ಚಿಂತನೆ ನಡೆದಿದೆ. 3ಬಿಯಲ್ಲಿ ಶಿಕ್ಷಣ, ಉದ್ಯೋಗದಲ್ಲಿ ಯಾವ ಅನುಪಾತದಲ್ಲಿ ಮೀಸಲಾತಿ ನೀಡುತ್ತಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
2013 ರಲ್ಲಿ ಜಗದೀಶ್ ಶೆಟ್ಟರ್ ಸರ್ಕಾರವಿದ್ದಾಗ ಬಣಜಿಗ ಲಿಂಗಾಯತರಿಗೆ ಶಿಕ್ಷಣಕ್ಕೆ ಮಾತ್ರ ಮೀಸಲಾತಿ ಒದಗಿಸಲಾಗಿದೆ. ಉದ್ಯೋಗದಲ್ಲಿ ಈವರೆಗೂ ಮೀಸಲಾತಿ ಸಿಕ್ಕಿಲ್ಲ.
2ಎ ಮೀಸಲಾತಿ ಲಾಭ – ನಷ್ಟ
ಪಂಚಮಸಾಲಿಗೆ 2ಎ ಮೀಸಲಾತಿ ಕೊಟ್ಟರೆ ಬೊಮ್ಮಾಯಿ ಅವರು ಲಿಂಗಾಯತ ಸಮಾಜದ ದೊಡ್ಡ ನಾಯಕ ಎಂಬ ಖ್ಯಾತಿಗೆ ಪಾತ್ರರಾಗಬಹುದು. ಯಡಿಯೂರಪ್ಪ ಅವರು ಮಾಡದ ಕೆಲಸ ನಾನು ಮಾಡಿದೆ ಎಂಬ ಹೆಗ್ಗಳಿಕೆ ಬೊಮ್ಮಾಯಿ ಪಾಲಾಗಿ, ಇದರಿಂದ ಲಿಂಗಾಯತ ಮತ ಬ್ಯಾಂಕ್ ಬಿಜೆಪಿಗೆ ಹೊರಳಬಹುದೆಂಬ ಲೆಕ್ಕಚಾರವೂ ಇದೆ. ಜೊತೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಕ್ಷೇತ್ರಗಳ ಗೆಲವು ವಿಸ್ತರಣೆಯಾಗಬಹುದು. ಇದರ ಜೊತೆಜೊತೆಗೆ 2ಎ ನಲ್ಲಿರುವ ಇತರೆ ಸಮಾಜದ ಸವಲತ್ತು ಬೇರೆಯವರಿಗೆ ಕೊಟ್ಟ ಅಪಕೀರ್ತಿಗೂ ಬೊಮ್ಮಾಯಿ ಪಾತ್ರರಾಗಬಹುದು. ಸಹಜವಾಗಿ ಹಿಂದುಳಿದ ವರ್ಗಗಳು ಮುಖ್ಯಮಂತ್ರಿ ಹಾಗೂ ಸರ್ಕಾರದ ವಿರುದ್ಧ ಸಿಡಿದೇಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇತ್ತ ವಿಪಕ್ಷಗಳು ಇದೇ ವಿಚಾರವನ್ನು ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ.
ಮೀಸಲಾತಿ ಕೊಡದಿದ್ದರೆ…?
2ಎ ಮೀಸಲಾತಿಯನ್ನು ಪಂಚಮಸಾಲಿಗೆ ಕೊಡದಿದ್ದರೆ ಆ ಸಮುದಾಯದ ಕೆಂಗಣ್ಣಿಗೆ ಸರ್ಕಾರ ಗುರಿಯಾಗಬಹುದು. ಸಿಎಂ ತವರು ಶಿಗ್ಗಾಂವಿಯಲ್ಲಿ ಪಂಚಮಸಾಲಿ ಸದೊಡ್ಡ ಸಮುದಾಯವಾಗಿದ್ದು, ಇದರಿಂದ ಶಿಗ್ಗಾಂವಿಯಲ್ಲೂ ಬೊಮ್ಮಾಯಿಗೆ ಹಿನ್ನಡೆಯಾಗಬಹುದು. ಈಗ ಹಾನಗಲ್ ಮಿನಿ ಸಮರದಲ್ಲಿ ಪಂಚಮಸಾಲಿಗೆ ಟಿಕೆಟ್ ಕೊಡದ ಬೇಸರ ಇನ್ನು ಹಾಗೇ ಇದೆ. ರಾಜ್ಯ ಬಿಜೆಪಿಯ ಕೋರ್ ಕಮಿಟಿಯಲ್ಲೂ ಸಮಾಜಕ್ಕೆ ಸ್ಥಾನಮಾನವಿಲ್ಲ. ಇತ್ತ ವಿಧಾನ ಪರಿಷತ್ ಚುನಾವಣೆಯಲ್ಲೂ ಸಮಾಜಕ್ಕೆ ಸ್ಥಾನಮಾನ ದೊರಕಿಲ್ಲ. ಇದರಿಂದಾಗಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಪಂಚಮಸಾಲಿ ಮತ ಬ್ಯಾಂಕ್ ಬಿಜೆಪಿಯಿಂದ ದೂರಗಬಹುದು.
ಒಟ್ಟಾರೆ ಮುಖ್ಯಮಂತ್ರಿ ಅವರು ಪಂಚಮಸಾಲಿಯನ್ನು 2ಎ ಗೆ ಸೇರಿಸದೆ ಸೌಲಭ್ಯ ನೀಡುವ ಈ ಪ್ಲಾನ್ ಎಷ್ಟರ ಮಟ್ಟಿಗೆ ಸಫಲವಾಗಲಿದೆ? ಆ ಸಮುದಾಯದ ನಾಯಕರು ಇದನ್ನು ಒಪ್ಪುತ್ತಾರಾ? ಬೊಮ್ಮಾಯಿ ಅವರು ಪಂಚಮಸಾಲಿ ಸಮಾಜದವರ ಮನವೊಲಿಸುವಲ್ಲಿ ಸಕ್ಸಸ್ ಕಾಣುತ್ತಾರಾ ಎಂಬುದು ಇನ್ನಷ್ಟೇ ಕಾದು ನೋಡಬೇಕು.