
ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಥಾಣೆ ಕೋರ್ಟ್ ನೀಡಿರುವ ಆದೇಶಕ್ಕೆ ಬಾಂಬೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದ್ದಾರೆ. ಬದ್ಲಾಪುರ ಎನ್‌ಕೌಂಟರ್ ನಕಲಿ ಎಂದಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪಿಗೆ ಥಾಣೆ ಕೋರ್ಟ್ ತಡೆ ನೀಡಿದೆ. ಆರೋಪಿಯ ಪೋಷಕರು ತಮ್ಮ ಮಗನನ್ನು ನಕಲಿ ಎನ್ಕೌಂಟರ್ನಲ್ಲಿ ಕೊಲ್ಲಲಾಗಿದೆ ಎಂದು ಆರೋಪಿಸಿದ್ದರು. ಪೋಷಕರ ಆರೋಪದಲ್ಲಿ ಸತ್ಯವಿದೆ ಎಂದು ಥಾಣೆ ಸೆಷನ್ಸ್ ನ್ಯಾಯಾಲಯ ಆದೇಶ ಮಾಡಿದ್ದು, ಈ ಆದೇಶ ನೀಡಿದ ನ್ಯಾಯಾಧೀಶರ ಬಗ್ಗೆ ಬಾಂಬೆ ಹೈಕೋರ್ಟ್ ಗುರುವಾರ ಆಘಾತ ವ್ಯಕ್ತಪಡಿಸಿದೆ.

ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಮತ್ತು ಡಾ. ನೀಲಾ ಗೋಖಲೆ ಅವರ ವಿಭಾಗೀಯ ಪೀಠವು, ಈಗಾಗಲೇ ಈ ವಿಚಾರ ಹೈಕೋರ್ಟ್ ಮುಂದೆ ಬಾಕಿ ಇರುವಾಗ ಇಂತಹ ಆದೇಶವನ್ನು ಹೇಗೆ ಹೊರಡಿಸಬಹುದು ಎಂದು ಪ್ರಶ್ನಿಸಿದೆ. ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೊಂದ ಆರೋಪ ಹೊತ್ತಿರುವ ಐವರು ಪೊಲೀಸರು, ಥಾಣೆಯ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿ ಮ್ಯಾಜಿಸ್ಟ್ರೇಟ್ ವಿಚಾರಣೆಯ ಫಲಿತಾಂಶಗಳಿಗೆ ತಡೆ ನೀಡಬೇಕೆಂದು ಕೋರಿದ್ದರು. ಎನ್‌ಕೌಂಟರ್ ನಡೆದ ದಿನ ಪೊಲೀಸರು ಆರೋಪಿಯ ಮೇಲೆ ಬಲಪ್ರಯೋಗ ನಡೆಸಿದ್ದು ಸರಿಯಲ್ಲ, ಎನ್‌ಕೌಂಟರ್ ನಕಲಿ ಎಂದು ಕೋರ್ಟ್ ತೀರ್ಮಾನಿಸಿದೆ.

ಫೆಬ್ರವರಿ 21ರ ಸೆಷನ್ಸ್ ನ್ಯಾಯಾಲಯದ ಆದೇಶದಿಂದ ಆಘಾತಕ್ಕೊಳಗಾದ ನ್ಯಾಯಮೂರ್ತಿಗಳು ಈ ಆದೇಶದಿಂದ ನಾವು ಆಘಾತಕ್ಕೊಳಗಾಗಿದ್ದೇವೆ. ಸೆಷನ್ಸ್ ನ್ಯಾಯಾಧೀಶರು ಇಂತಹ ಆದೇಶವನ್ನು ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ನಾವು ಈಗಾಗಲೇ ಈ ವಿಚಾರದಲ್ಲಿ ವಿಚಾರಣೆ ಮಾಡುತ್ತಿದ್ದೇವೆ. ಪ್ರತಿ ಎರಡು ವಾರಗಳಿಗೊಮ್ಮೆ ಈ ವಿಚಾರದ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರಿಗೆ ತಿಳಿದಿಲ್ಲವೇ..? ಇದು ನ್ಯಾಯಾಂಗ ಘನತೆಗೆ ತಕ್ಕದಾದ ವಿಚಾರವೇ..? ಈ ಆದೇಶ ಹೇಗೆ ಸರಿ..? ಈ ಆದೇಶ ನೀಡುವುದಕ್ಕೂ ಮೊದಲು ಈ ವಿಷಯವು ನಮ್ಮ ಮುಂದೆ ಬಾಕಿ ಇದ್ದರೂ ಪರಿಷ್ಕರಣಾ ಅರ್ಜಿಯನ್ನು ಹೇಗೆ ನಿರ್ವಹಿಸಬಹುದು? ಎಂದು ಪ್ರಶ್ನಿಸಿದೆ.

ನ್ಯಾಯಾಂಗ ಆಯೋಗವು ಈಗಾಗಲೇ ಪ್ರಕರಣದ ತನಿಖೆ ನಡೆಸುತ್ತಿದೆ ಮತ್ತು ರಾಜ್ಯ ಸಿಐಡಿ ಕೂಡ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಸರ್ಕಾರದ ಪರ ವಾದಿಸಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ಸಾಧ್ಯವೇ ಅಥವಾ ಈ ಆಯೋಗದ ಸ್ಥಾಪನೆ ಅಥವಾ ಸಿಐಡಿ ವಿಚಾರಣೆಯು ಪೊಲೀಸರಿಗೆ ಎಫ್‌ಐಆರ್ ದಾಖಲಿಸಲು ಅಡ್ಡಿಯಾಗುತ್ತದೆಯೇ ಎಂದು ನೀವು ನಮಗೆ ತಿಳಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ತಿಳಿಸಿದರು. ಜೊತೆಗೆ ವಿಚಾರಣೆಯನ್ನು ಮಾರ್ಚ್ 5ಕ್ಕೆ ಮುಂದೂಡಿತು.

ಡಿಸೆಂಬರ್ 19, 2024 ರಂದು, ಮೃತ ಆರೋಪಿಗಳ ಪೋಷಕರು ನ್ಯಾಯಾಲಯಕ್ಕೆ ಹಾಜರಾಗಿ, ಯಾರೂ ತಮಗೆ ಯಾವುದೇ ಕೆಲಸ ನೀಡದ ಕಾರಣ ನಾವು ಬೀದಿಗಳಲ್ಲಿ ಭಿಕ್ಷೆ ಬೇಡುವ ಮೂಲಕ ಬದುಕುಳಿದಿದ್ದೇವೆ. ತಮ್ಮ ಸ್ವಂತ ಮನೆಯನ್ನು ತೊರೆದು ಪಾದಚಾರಿ ಮಾರ್ಗಗಳಲ್ಲಿ ವಾಸಿಸುವಂತೆ ಒತ್ತಾಯಿಸಲಾಗಿದೆ ಎಂದು ಹೇಳಿದ್ದರು.