12 ದಿನದ ಅಂತರದಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಎರಡು ಬಿಎಂಟಿಸಿ (Banglore Metropolitan Transport Corporation) ಬಸ್ಸುಗಳು ಪ್ರಯಾಣಿಕರನ್ನ ಹೊತ್ತು ಸಾಗುವಾಗಲೇ ನಡು ರಸ್ತೆಯಲ್ಲೇ ಬೆಂಕಿಗೆ (Fire Accident) ಆಹುತಿಯಾಗಿದ್ದವು. ಇದರಿಂದ ಸಹಜವಾಗೇ ಜನರಿಗೆ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣ ಮಾಡುವ ಬಗ್ಗೆ ಯೋಚನೆ ಮಾಡುವಂತಾಗಿತ್ತು. ಇದೀಗ ಬಿಎಂಟಿಸಿ ಈ ಘಟನೆ ಯಿಂದ ಎಚ್ಚೆತ್ತುಕೊಂಡು ತನಿಖೆಗೆ ಆದೇಶ ಮಾಡಿದ್ದು, ಕೆಲವು ಕ್ರಮಕ್ಕೂ ಮುಂದಾಗಿದೆ.
ಜನವರಿ 21 ರಂದು ಚಾಮರಾಜಪೇಟೆಯ ಮಕ್ಕಳ ಕೂಟ ಸರ್ಕಲ್ ಬಳಿ, ಫೆಬ್ರವರಿ 1 ರಂದು ಜಯನಗರ ಸೌತ್ ಎಂಡ್ ಸರ್ಕಲ್ ಮೆಟ್ರೋ ಸ್ಟೇಷನ್ (South End Circle Metro Station) ರಸ್ತೆಯಲ್ಲಿ ಎರಡು ಬಿಎಂಟಿಸಿ ಬಸ್ಗಳು ಪ್ರಯಾಣಿಕರನ್ನ ಹೊತ್ತು ಸಾಗುತ್ತಿರುವಾಗಲೇ ಧಗಧಗ ಹೊತ್ತಿ ಉರಿದಿತ್ತು. ಬಸ್ಸಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ನಡುರಸ್ತೆಯಲ್ಲೇ ಬಸ್ಸುಗಳು ಹೊತ್ತಿ ಉರಿದಿದ್ದವು. ಚಾಲಕ ಮತ್ತು ನಿರ್ವಾಹಕರ, ಸಾರ್ವಜನಿಕರ ಸಮಯ ಪ್ರಜ್ಞೆ ಯಿಂದ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಲಿಲ್ಲ. ಬಸ್ಸುಗಳಿಗೆ ಮಾತ್ರ ಬೆಂಕಿ ಕೆನ್ನಾಲಿಗೆಗೆ ಉರಿದು ಸುಟ್ಟು ಕರಕಲಾಯಿತು. 11 ದಿನದ ಅಂತರದಲ್ಲೇ ಈ ಎರಡು ಘಟನೆಗಳು ಸಂಭವಿಸಿದ ಹಿನ್ನೆಲೆ ಸಹಜವಾಗೇ ಬಿಎಂಟಿಸಿ (BMTC) ಪ್ರಯಾಣಿಕರಲ್ಲಿ ಬಸ್ಸಿನಲ್ಲಿ ಪ್ರಯಾಣ ಮಾಡುವ ಬಗ್ಗೆ ಆತಂಕ ಮೂಡಿಸಿತ್ತು.
ಜನರ ಸುರಕ್ಷತೆ ನಮ್ಮ ಹೊಣೆ : BMTC MD
ಇದೀಗ ಜನರಲ್ಲಿ ಮೂಡಿರುವ ಆತಂಕದ ಬಗ್ಗೆ ಸ್ವತಃ ಬಿಎಂಸಿಟಿಯ ಕಾರ್ಯನಿರ್ವಾಹಕ ನಿರ್ದೇಶಕ (Managing Director) ಅನ್ಬು ಕುಮಾರ್, ಬಿಎಂಟಿಸಿ ಎಂದಿಗಿಂತಲೂ ಸುರಕ್ಷಿತವಾಗಿದೆ. ಜನರು ಆ ಬಗ್ಗೆ ಭಯ ಬೀಳುವ ಅಗತ್ಯವಿಲ್ಲ. ಜನರ ಸುರಕ್ಷತೆ (Safety) ನಮ್ಮ ಹೊಣೆ. ಬಸ್ಸುಗಳ ಬಗ್ಗೆ ಯಾವುದೇ ಅನುಮಾನ ಬೇಡ ಎಂದಿನಂತೆ ಪ್ರಯಾಣ ಮಾಡಿ ಎಂದು ತಿಳಿಸಿದ್ದಾರೆ. ಮುಂದುವರೆದು ಮಾತನಾಡಿದ ಅವರು, ನಾನು ಕೂಡ ಬಸ್ಸುಗಳಲ್ಲಿ ಪ್ರಯಾಣ ಮಾಡಿ ಪ್ರಯಾಣಿಕರಿಂದ, ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದೇನೆ. ಚಾಲಕ ನಿರ್ವಾಹಕರ ಸಮಯ ಪ್ರಜ್ಞೆ ಯಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಈ ಬಗ್ಗೆ ತನಿಖೆ ನಡೆಸಿ ಸಂಪೂರ್ಣ ವರದಿ ನೀಡಲು ಒಂದು ಸ್ಪೆಷಲ್ ಕಮಿಟಿ ರಚನೆ (Investigation Committee) ಮಾಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ಘಟನೆ ನಮಗೂ ಅಚ್ಚರಿ ಹಾಗೂ ಎಚ್ಚರಿಕೆ ಗಂಟೆ. ಪ್ರಯಾಣಿಕರ ಆದ್ಯತೆ, ರಕ್ಷಣೆಯೇ ನಮ್ಮ ಹೊಣೆ ಎಂದಿದ್ದಾರೆ ಬಿಎಂಟಿಸಿ (BMTC) ಎಂಡಿ ಅನ್ಬುಕುಮಾರ್.

ತಾಂತ್ರಿಕ ಪರಿಶೀಲನೆಗೆ ಇಂಜಿನಿಯರ್ಗಳ ತಂಡ ರಚನೆ
ಬೆಂಕಿಗೆ ತುತ್ತಾಗಿರುವ ಎರಡು ಬಸ್ಸುಗಳು ಅಶೋಕ್ ಲೈಲೆಂಡ್ (Ashok Leyland) ಕಂಪನಿಗೆ ಸೇರಿದ ಬಸ್ಸುಗಳಾಗಿವೆ. ಬಸ್ ಸ್ಟಾರ್ಟರ್ ನಲ್ಲಿ ಶಾರ್ಟ್ ಸರ್ಕ್ಯುಟ್ ಕಾಣಿಸಿಕೊಂಡಿರುವುದು ತಿಳಿದು ಬಂದಿದೆ. ಬಿಎಂಟಿಸಿ ಬಳಿ ಈ ಅಶೋಕ್ ಲೈಲೆಂಡ್ ಕಂಪನಿಗೆ ಸೇರಿದ ಒಟ್ಟು 186 ಬಸ್ಸುಗಳಿವೆ. ಘಟನೆ ಬಳಿಕ ಈ ಎಲ್ಲಾ ಬಸ್ಸುಗಳ ತಾಂತ್ರಿಕ ಪರಿಶೀಲನೆ ನಡೆಸಲಾಗುತ್ತಿದೆ. ಇದಕ್ಕೆ ಅಶೋಕ್ ಲೈಲೆಂಡ್ (Ashok Leyland) ಕಂಪನಿಯಿಂದ ಇಬ್ಬರು ತಜ್ಞರು ಹಾಗೂ ಬಿಎಂಟಿಸಿ (BMTC) ಸಂಸ್ಥೆಯ 8 ಇಂಜಿನಿಯರ್ಸ್ ಸೇರಿ ಎಲ್ಲಾ186 ಬಸ್ಸುಗಳ ಪರಿಶೀಲನೆ ನಡೆಸುತ್ತಿಸಲು ತಂಡ ರಚಿಸಲಾಗಿದೆ.
ಬಸ್ಸಿನಲ್ಲಿ ಅಗ್ನಿನಂದಕ (Fire Extinguisher) ಉಪಕರಣಗಳು ಇದ್ದರು ಅದನ್ನ ಸಿಬ್ಬಂದಿ ಬಳಕೆ ಮಾಡಿಲ್ಲ. ಬಳಕೆ ಮಾಡಿದ್ದರೆ ಇಷ್ಟು ದೊಡ್ಡಮಟ್ಟದ ಬೆಂಕಿ ಅನಾಹುತ ಆ ಆಗುತ್ತಿರಲಿಲ್ಲ. ಸಿಬ್ಬಂದಿ ಯಾಕೆ ಬಳಕೆ ಮಾಡಿಲ್ಲ ಎಂಬ ಬಗ್ಗೆ ತನಿಖೆ ಯಿಂದ ಮಾಹಿತಿ ತಿಳಿಯಲಿದೆ. ಇನ್ನು ಘಟನೆಗೆ ತುತ್ತಾಗಿರುವ ಬಸ್ಸುಗಳು ಹಳೆಯ ಬಸ್ಸುಗಳಾಗಿರಲಿಲ್ಲ. ಕೇವಲ 5 ರಿಂದ 6 ವರ್ಷದ ಹಳತನವಿರುವ ಬಸ್ಸುಗಳು. ನಗರದಲ್ಲಿ ನಿತ್ಯ 5,500 ಬಸ್ ಗಳು ಸಂಚಾರ ಮಾಡುತ್ತಿವೆ. ನಿತ್ಯ 50 ಸಾವಿರ ಟ್ರಿಪ್ ಕಾರ್ಯಾಚರಣೆ ಬಸ್ಸುಗಳು ಮಾಡುತ್ತಿದೆ.