ಅತಿಯಾಗಿ ವಾಹನಗಳು ಉಗುಳುವ ಹೊಗೆ, ಕಿವಿಗೆ ಕಿರಿಕಿರಿ ಎನ್ನುವಷ್ಟರ ಮಟ್ಟಿಗೆ ಆ ವಾಹನಗಳ ಶಬ್ದ, ಇವೆಲ್ಲವೂ ನೀವು ಬೆಂಗಳೂರಿನಲ್ಲಿದ್ದರೆ ನಿಮಗೆ ಸಾಕಪ್ಪಾ ಸಾಕು ಈ ಕಿರಿಕಿರಿ ಅನ್ನಿಸದೆ ಇರದು. ಆದರೆ ಬೆಂಗಳೂರಿನ ಜನರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಅದೇನಪ್ಪಾ ಅಂದ್ರೆ, ಇಂದು ಬೆಂಗಳೂರಿನ ಮೊದಲ ಎಲೆಕ್ಟ್ರಿಕ್ ಬಸ್ ಲೋಕಾರ್ಪಣೆಗೊಳ್ಳುತ್ತಿದ್ದು, ಅದನ್ನು ಕೆಂಗೇರಿ ಮೆಟ್ರೊ ನಿಲ್ದಾಣದಲ್ಲಿ ನಿಯೋಜಿಸಲಾಗಿದೆ. ಎನ್ಟಿಪಿಸಿ ಮತ್ತು ಜೆಬಿಎಂ ಆಟೋ ಕಂಪನಿಗಳು ಜಂಟಿಯಾಗಿ 9 ಮೀಟರ್ ಉದ್ದದ 90 ನಾನ್ ಎಸಿ ಎಲೆಕ್ಟ್ರಿಕ್ ಬಸ್ (Non AC Electric bus) ಗಳನ್ನು ಒದಗಿಸುವ ಕೆಲಸವನ್ನು ವಹಿಸಿಕೊಂಡಿವೆ.
ಈ ಮೂಲಕ ಬಿಎಂಟಿಸಿ ಹಲವು ದಿನಗಳ ಕನಸು ನನಸಾಗಿದೆ. ಇಂದಿನಿಂದ ಬೆಂಗಳೂರಿನಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗಳು ರಸ್ತೆಗಿಳಿಯುತ್ತಿದೆ. ಇಂದು 10.30ಕ್ಕೆ ಎಲೆಕ್ಟ್ರಿಕ್ ಬಸ್ ಸೇವೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಸಾರಿಗೆ ಸಚಿವ ಶ್ರೀರಾಮುಲು ಕೆಂಗೇರಿ ಬಸ್ ನಿಲ್ದಾಣದಲ್ಲಿ ಎಲೆಕ್ಟ್ರಿಕ್ ಬಸ್ಗಳಿಗೆ ಹಸಿರು ನಿಶಾನೆ ತೋರಿದ್ದಾರೆ. ಉದ್ಘಾಟನೆ ಬಳಿಕ ಸಚಿವರು ಎಲೆಕ್ಟ್ರಿಕ್ ಬಸ್ನಲ್ಲಿ ನಗರ ಪ್ರದಕ್ಷಿಣೆ ಮಾಡಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಮೊದಲ ಬಸ್ಗೆ ಇಂದು ಚಾಲನೆ ದೊರೆತಿದೆ. ಮೊದಲ ಹಂತದಲ್ಲಿ 300 ಎಲೆಕ್ಟ್ರಿಕ್ ಬಸ್ಗಳಿಗೆ ಬಿಎಂಟಿಸಿ ಗುತ್ತಿಗೆ ನೀಡಿದೆ.
45 ನಿಮಿಷ ಚಾರ್ಜ್ ಮಾಡಿದರೆ 120 ಕಿ.ಮೀ ಸಂಚಾರ !
ಸ್ಮಾರ್ಟ್ಸಿಟಿ ಯೋಜನೆಯಡಿಯಲ್ಲಿ 90 ಬಸ್ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು 2020ರ ಫೆಬ್ರುವರಿಯಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಎಲೆಕ್ಟ್ರಿಕ್ ಬಸ್ನಲ್ಲಿ ಸುಮಾರು 30 – 35 ಪ್ರಯಾಣಿಕರು ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಈ ಎಲೆಕ್ಟ್ರಿಕ್ ಬಸ್ಗಳನ್ನು ಮುಖ್ಯವಾಗಿ ಈ ಮೆಟ್ರೋ ನಿಲ್ದಾಣಗಳಲ್ಲಿ ಬರುವಂತಹ ಪ್ರಯಾಣಿಕರಿಗೆ ಬೇರೆ ಏರಿಯಾಗಳಿಗೆ ಪ್ರಯಾಣಿಸಲು ಅನುಕೂಲವಾಗಲು ಬಳಸಿಕೊಳ್ಳಲಾಗುತ್ತದೆ. ಈ ಎಲೆಕ್ಟ್ರಿಕ್ ಬಸ್ ಅನ್ನು 45 ನಿಮಿಷ ಚಾರ್ಜ್ ಮಾಡಿದರೆ 120 ಕಿ.ಮೀ ಸಂಚಾರ ಮಾಡಲಿದೆ.
ಮೈಸೂರು ರಸ್ತೆ, ಬೈಯಪ್ಪನಹಳ್ಳಿ, ಬನಶಂಕರಿ ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳಲ್ಲಿ ಈ ಎಲೆಕ್ಟ್ರಿಕ್ ಬಸ್ಗಳನ್ನು ನಿಯೋಜಿಸುವ ಯೋಜನೆ ಹೊಂದಿದ್ದಾರೆ. ಇಂದು ಬರಲಿರುವ ಮೊದಲ ಎಲೆಕ್ಟ್ರಿಕ್ ಬಸ್ ಅನ್ನು ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಸೌಲಭ್ಯಕ್ಕಾಗಿ ನಿಯೋಜಿಸಲಾಗುವುದು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೊದಲ ಎಲೆಕ್ಟ್ರಿಕ್ ಬಸ್ ಉತ್ತರ ಪ್ರದೇಶದ ಮಥುರಾ ಬಳಿಯಿರುವಂತಹ ಕೋಸಿಯಲ್ಲಿರುವ ಜೆಬಿಎಂ ಬಸ್ ಪ್ಲ್ಯಾಂಟ್ನಿಂದ ತರಿಸಲಾಗಿದೆ. ಕಳೆದ ದಿನವಷ್ಟೇ ಅಲ್ಲಿಂದ ಬಸ್ ತರಿಸಲಾಗಿದ್ದು, ಬೆಂಗಳೂರು ತಲುಪಿದ ಒಂದೇ ದಿನದಲ್ಲಿ ಉದ್ಘಾಟನೆಗೊಂಡು ರಸ್ತೆಗಿಳಿಯುತ್ತಿದೆ.
ಜೂನ್ ನಲ್ಲೇ ಉದ್ಘಾಟನೆಗೊಂಡು ರಸ್ತೆಗೆ ಇಳಿಯಬೇಕಿದ್ದ ಎಲೆಕ್ಟ್ರಿಕ್ ಬಸ್ !
ಈ ಎಲೆಕ್ಟ್ರಿಕ್ ಬಸ್ಗಳನ್ನು ಜೂನ್ 2021ರಿಂದಲೇ ಹಂತ ಹಂತವಾಗಿ ಮೆಟ್ರೋ ನಿಲ್ದಾಣಗಳಲ್ಲಿ ನಿಯೋಜಿಸಬೇಕಿತ್ತು, ಆದರೆ ಕಾರಣಾಂತರಗಳಿಂದ ಎನ್ಟಿಪಿಸಿ ಮತ್ತು ಜೆಬಿಎಂ ನೀಡಿದಂತಹ ಅವಧಿಯನ್ನು ಮೀರಿದ್ದು, ಡಿಸೆಂಬರ್ 15ರೊಳಗೆ ಉಳಿದಂತಹ 89 ಎಲೆಕ್ಟ್ರಿಕ್ ಬಸ್ಗಳನ್ನು ಹಂತ ಹಂತವಾಗಿ ರಸ್ತೆಗೆ ಇಳಿಸಲಿದೆ. ಮೊದಲಿಗೆ ಈ ಎಲೆಕ್ಟ್ರಿಕ್ ಬಸ್ಗಳಲ್ಲಿ ನಿರ್ವಾಹಕರಿಲ್ಲದೆ ಕೇವಲ ಚಾಲಕರನ್ನು ಮಾತ್ರ ಇದರಲ್ಲಿ ನಿಯೋಜಿಸಬೇಕು ಎಂದುಕೊಂಡಿದ್ದರು. ಆದರೆ, ಈಗ ಈ ಬಸ್ಗಳಲ್ಲಿ ನಿರ್ವಾಹಕರಿದ್ದು ಮತ್ತು ಚಾಲಕರನ್ನು ಎನ್ಟಿಪಿಸಿ ಮತ್ತು ಜೆಬಿಎಂ ಅವರೇ ನಿಯೋಜಿಸಲಿದ್ದು, ಈ ಬಸ್ಗಳ ನಿರ್ವಹಣೆಯನ್ನೂ ಇವರೇ ಮಾಡಲಿದ್ದಾರೆ. ಈ ಬಸ್ಗಳನ್ನು 12 ವರ್ಷಗಳ ಕಾಲ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿದ್ದು, ಬಿಎಂಟಿಸಿ ಪ್ರತಿ ಕಿಲೋ ಮೀಟರ್ ಆಧರಿಸಿ ಅವರಿಗೆ ಹಣ ನೀಡಲಿದ್ದಾರೆಂದು ಹೇಳಲಾಗುತ್ತಿದೆ. ಎಲೆಕ್ಟ್ರಿಕ್ ಬಸ್ನಿಂದಾಗಿ ವಾಯುಮಾಲಿನ್ಯ ಕಡಿಮೆಯಾಗಲಿದೆ. ಜತೆಗೆ ಶಬ್ಧ ಮಾಲಿನ್ಯ ಕೂಡ ಕಡಿಮೆಯಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಮುಂಬರುವ ವರ್ಷಗಳಲ್ಲಿ, ಎಲ್ಲಾ ವಾಹನಗಳೂ ಎಲೆಕ್ಟ್ರಿಕ್ ವಾಹನಗಳಾಗಿ ಬದಲಾದಲ್ಲಿ ಆಶ್ಚರ್ಯವಿಲ್ಲ.